ಭದ್ರಾವತಿ: ಮೈಸೂರು ಅರಸರ ಕಾಲದಲ್ಲಿ ಸ್ಥಾಪಿತವಾಗಿ ಶತಮಾನೋತ್ಸವ ಸಂಭ್ರಮ ಆಚರಿಕೊಳ್ಳುತ್ತಿರುವ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಮೈಸೂರು ಅರಮನೆ ಎಂದಿಗೂ ನಿಮ್ಮೊಂದಿಗಿರುತ್ತದೆ. ಕಾರ್ಖಾನೆ ಪುನಃ ಸುವರ್ಣ ಯುಗವನ್ನಾಗಿಸಲು ಬೆಂಬಲ ನೀಡುತ್ತದೆ ಎಂದು ಮೈಸೂರು ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಅವರು ಶನಿವಾರ ವಿಐಎಸ್‌ಎಲ್ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ತಾಯಿಯವರ ಆಶೀರ್ವಾದದಿಂದ ಕಾರ್ಖಾನೆ ಉಳಿಬೇಕೆಂದು ನೀವೆಲ್ಲಾ ಮಾಡುತ್ತಿರುವ ಹೋರಾಟಕ್ಕೆ ಮೈಸೂರು ಅರಮನೆ ಸಹಾ ನಿಮ್ಮೊಂದಿಗೆ ಇರುತ್ತದೆ. ಈ ಭಾಗದ ಸಮುದಾಯ ಮತ್ತು ಜಿಲ್ಲೆಯ ವಾತಾವರಣವು ಕೃತಜ್ಞತಾ ಪೂರಕವಾಗಿರುವುದರಿಂದ ಕಾರ್ಖಾನೆ ಪುನಃ ಸುವರ್ಣ ಯುಗ ಆಚರಿಸುವಂತಾಗಲು ನಾವೆಲ್ಲರೂ ಶ್ರಮಿಸೋಣ.
ನಾಡಿನ ಉದ್ದಗಲಕ್ಕೂ ಆಗಿರುವ ಕೆಲಸಗಳು ಅರಸರಿಂದಲೋ ಅಥವಾ ಸ್‌ಎಂವಿ ಅವರಿಂದಲೋ ಎಂದು ಕೇಳಿ ಬರುತ್ತದೆ. ಅದಕ್ಕೆ ಚಂದ್ರಗುಪ್ತರ ಕಾಲದಲ್ಲಿ ಕೌಟಿಲ್ಯ ಹೇಗೆ ದಿವಾನರಾಗಿದ್ದರೋ ಹಾಗೇ ನಾಲ್ವಡಿ ಕೃಷ್ಣರಾಜ ಅರಸರಿಗೆ ದಿವಾನ್ ವಿಶ್ವೇಶ್ವರಾಯ ಇದ್ದರು ಇವರಿಬ್ಬರಿಂದ ಎಂದಿಗೂ ಮರೆಯಲಾಗದಂತಹ ಕೆಲಸಗಳಾಗಿದೆ ಎಂದರು.
ಪ್ರಾಥಮಿಕ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿ ಮಧು ಬಂಗಾರಪ್ಪ ಮಾತನಾಡಿ, ಕಾರ್ಖಾನೆಗೆ ೧೦೦ ಸಂಭ್ರಮ. ಆದರೂ ಕಾರ್ಖಾನೆ ಸ್ಥಿತಿಯಿಂದಾಗಿ ಒಳಗಡೆ ಮುಜುಗರವಾಗಿದೆ. ಶಾಸಕ ಸಂಗಮೇಶ್ವರ್ ೨೦೧೬ ರಲ್ಲಿ ಕಬ್ಬಿಣದ ಅದಿರು ಗಣಿ ಕೊಡಿಸಿದರೂ ಕೇಂದ್ರವು ಬಂಡವಾಳ ತೊಡಗಿಸಿಲ್ಲ. ನಮ್ಮ ತಂದೆ ಮಾಜಿ ಸಿಎಂ ದಿ:ಎಸ್.ಬಂಗಾರಪ್ಪ, ಮಾಜಿ ಸಿಎಂ ಬಿಎಸ್‌ವೈ ಅವರೂ ಸಹಾ ಕಾರ್ಖಾನೆ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ವಿಐಎಸ್‌ಎಲ್ ಮುಚ್ಚಲು ಬಿಡಲ್ಲವೆಂದು ಎಲ್ಲರೂ ನಿಲ್ಲೋಣ. ಕಾರ್ಖಾನೆ ಕೇಂದ್ರ ಸರಕಾರಕ್ಕೆ ಸೇರಿರುವುದರಿಂದ ಬಿಎಸ್‌ವೈ, ಸಂಸದ ಬಿವೈಆರ್ ಜೊತೆ ಕೈಜೋಡಿಸೋಣವೆಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ ಕೇಂದ್ರವು ಬಂಡವಾಳ ಹಿಂತೆಗತ/ಖಾಸಗೀಕರಣಕ್ಕೆ ಮುಂದಾದಾಗ ಸಮಸ್ಯೆ ಎದುರಾಗಿದೆ. ಇಂದು ಮೈಸೂರು ಅರಸರು ವಿವಿಧ ಮಠಾಧಿಪತಿ ಸ್ವಾಮೀಜಿಗಳ ಭೂಮಿ ಸ್ಪರ್ಶದಿಂದ ಭಾವನಾತ್ಮಕ ಶಕ್ತಿ ನೀಡುವಂತಾಗಲಿ. ಕಾರ್ಖಾನೆ ಶಾಶ್ವತವಾಗಿ ಉಳಿಸಿಕೊಳ್ಳಲು ಪ್ರಯತ್ನಿಸೋಣವೆಂದರು.
ಶಾಸಕ ಬಿ.ಕೆ.ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿ ರಾಜ್ಯ ಸರಕಾರದಿಂದ ಶ್ರಮಪಟ್ಟು ಗಣಿ ಕೊಡಿಸಿದ್ದೇನೆ. ಕೇಂದ್ರ ಸರಕಾರವು ಬಂಡವಾಳ ತೊಡಗಿಸುವಂತೆ ಮಾಡಲು ಪ್ರಧಾನಿಗಳ ಬಳಿ ಮಾತನಾಡಲು ಬಿಎಸ್‌ವೈ ಅವರಿಂದ ಮಾತ್ರ ಸಾಧ್ಯವೆಂದರು. ವಿಧಾನ ಪರಿಷತ್ ಸದಸ್ಯ ಹಾಗೂ ಉದ್ಯಮಿ ವಿಜಯ ಸಂಕೇಶ್ವರ್, ಸರ್‌ಎಂವಿ ಮೊಮ್ಮಗ ಮೋಕ್ಷಗುಂಡಂ ಶೇಷಾದ್ರಿ ಮಾತನಾಡಿದರು. ಚಲನಚಿತ್ರ ನಟ ದೊಡ್ಡಣ್ಣ ಪ್ರಾಸ್ತ್ಥಾವಿಕ ನುಡಿಗಳನ್ನಾಡಿ ಯುವ ರಾಜರು ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ರವರ ಬಳಿ ಮಾತನಾಡಿ ಕಾರ್ಖಾನೆ ಉಳಿಸಿ ಎಂದು ಮನವಿ ಮಾಡಿದರು. ವೇದಿಕೆಯಲ್ಲಿ ಎಸ್.ಕುಮಾರ್, ಧರ್ಮಪ್ರಸಾದ್ ಮುಂತಾದವರಿದ್ದರು.
ಮೈಸೂರಿನ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳು, ಸಿದ್ದಗಂಗಾ ಶ್ರೀಗಳು, ಆದಿಚುಂಚನಗಿರಿ ಪೀಠಾಧೀಶರು, ಬೆಕ್ಕಿನ ಕಲ್ಮಠದ ಮಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಹಾಗೂ ಬಿಳಿಕಿ ರಾಚೋಟೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಗಣೇಶ್ ಪ್ರಾರ್ಥಿಸಿದರು. ರೇವಣ್ಣ ಸಿದ್ದಯ್ಯ ಸ್ವಾಗತಿಸಿದರು. ಶ್ರೀನಿವಾಸ್ ವಂದಿಸಿದರು. ದಿವ್ಯಾ ಆಲೂರು ನಿರೂಪಿಸಿದರು.
ಕಾರ್ಖಾನೆಗೆ ೧೦೦ ವರ್ಷ ತುಂಬಿದ ದೇಶದ ಮೊಟ್ಟ ಮೊದಲ ಸಾರ್ವಜನಿಕ ಉದ್ದಿಮೆ. ಸರ್.ಎಂ.ವಿ ರವರ ದೂರದೃಷ್ಟಿ ಹೊಂದಿ ಸ್ಥಾಪಿತವಾಗಿದ್ದ ಅತ್ಯಾಧುನಿಕ ಕಬ್ಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಅಂತಹ ಕಾರ್ಖಾನೆ ಇಂದು ದುಸ್ಥಿತಿಯಲ್ಲಿದ್ದರೂ ಶತಮಾನೋತ್ಸವ ಆಚರಣೆ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಉಳಿಸಿಕೊಳ್ಳಲು ದೊಡ್ಡ ಸವಾಲಾಗಿದೆ. ರಾಜ್ಯ ಸರಕಾರ ಅದಿರು ಗಣಿ ನೀಡಿದಾಗ ನಾವೆಲ್ಲಾ ಕೇಂದ್ರದ ಮೊರೆ ಹೊಕ್ಕು ಸಚಿವರುಗಳನ್ನೂ ಆಹ್ವಾನಿಸಿ ಬಂಡವಾಳ ಹೂಡಿಕೆ ಮಾಡಲು ಸಾಕಷ್ಟು ಶ್ರಮಿಸಿದ್ದೇವೆ. ಮುಂದೆಯೂ ವಿಐಎಸ್‌ಎಲ್‌ಗೆ ಜೀವ ತುಂಬಿ ಉಳಿಸಲು ಬೆಂಬಲವಾಗಿ ನಿಲ್ಲುತ್ತೇವೆ.
ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ