ಶಿವಮೊಗ್ಗ : ಸಂಸದ ಬಿ.ವೈ.ರಾಘವೇಂದ್ರರವರು ಶಿಷ್ಟಚಾರವನ್ನು ಉಲಂಘಿಸಿ ಬೈಪಾಸ್ ರಸ್ತೆಯ ಸೇತುವೆಯನ್ನು ಉದ್ಘಾಟಿಸಿದ್ದಾರೆ ಎಂದು ಕೆ.ಪಿ.ಸಿ.ಸಿ. ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕಾಮಗಾರಿ ಮುಗಿಯುವ ಮೊದಲೇ ಅಧಿಕಾರಿಗಳ ಪ್ರಮಾಣಪತ್ರವಿಲ್ಲದೇ ಗಡಿಬಿಡಿಯಲ್ಲಿ ಟೇಪು ಕಟ್ಟು ಮಾಡುತ್ತಿದ್ದಾರೆ. ಇದು ಸರ್ಕಾರಿ ಕಾರ್ಯಕ್ರಮವಾಗದೆ ಬಿಜೆಪಿ ಕಾರ್ಯಕ್ರಮವಾಗಿದೆ ಎಂದು ದೂರಿದರು.
ಕಾಮಗಾರಿ ಮುಗಿಯುವ ಮೊದಲೇ ಮುಗಿದಿದೆ ಎಂದು ಅಧಿಕಾರಿಗಳ ಗಮನಕ್ಕೆ ತರದೇ ಸಂಸದ ರಾಘವೇಂದ್ರ ಅವರು ಉದ್ಘಾಟನೆ ಮಾಡುತ್ತಿದ್ದಾರೆ.ಅಧಿಕಾರಿಗಳ ಬಳಿ ಮಾಹಿತಿ ಕೇಳಿದರೇ ಸರಿಯಾದ ಉತ್ತರ ನೀಡಿಲ್ಲ. ಕೆಲವು ಬಿಜೆಪಿ ಮುಖಂಡರನ್ನು ಹಿಂಬಾಲಕರನ್ನು ಕರೆದುಕೊಂಡುಹೋಗಿ ಉದ್ಘಾಟನೆ ಮಾಡುವ ಈ ಪರಿಅತ್ಯಂತ ಕೆಟ್ಟ ಸಂಸ್ಕೃತಿ ಯಾಗಿದೆ ಎಂದು ಟೀಕಿಸಿದರು.
ಭಾನುವಾರ ಬೈಪಾಸ್ ರಸ್ತೆ ಸೇತುವೆ ಕಾಮಗಾರಿಯನ್ನು ಸಂಸದರು ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬಿಜೆಪಿಯ ಶಾಸಕರುಗಳಾದ ರುದ್ರೇಗೌಡರಾಗಲಿ, ಅರುಣ್‌ರವರಾಗಲಿ, ಚೆನ್ನಬಸಪ್ಪನವರಾಗಲಿಕರೆದಿಲ್ಲ. ಅಧಿಕಾರಿಗಳನ್ನು ಕೇಳಿದರೆ, ನಮಗೆ ಗೊತ್ತೇ ಇಲ್ಲ ಎನ್ನುತ್ತಾರೆ. ಇದು ಸರ್ಕಾರದ ಕಾರ್ಯಕ್ರಮವಲ್ಲವೇ, ಅಧಿಕಾರಿಗಳು ಈ ಕಾರ್ಯಕ್ರಮವನ್ನು ರೂಪಿಸಬೇಕು. ಅದನ್ನು ಬಿಟ್ಟು ಕೇವಲ ಕೆಲವು ಬಿಜೆಪಿ ಮುಖಂಡರನ್ನು ಇಟ್ಟುಕೊಂಡು ಈ ರೀತಿ ಉದ್ಘಾಟನೆಗಳನ್ನು ಚುನಾವಣೆಯ ಹಿನ್ನೆಲೆಯಲ್ಲಿ ಮಾಡುತ್ತಾ ಹೊರಟಿರುವುದು ಸರಿಯಲ್ಲ ಎಂದರು.
ಇಡೀ ಶಿವಮೊಗ್ಗದಲ್ಲಿ ನಡೆಯುತ್ತಿರುವ ಕಾಮಗಾರಿಗಳೆಲ್ಲವೂ ಬಿಜೆಪಿ ನಾಯಕರ, ಮನೆಗಳ ಇಲ್ಲವೇ ಆಸ್ತಿಗಳ ಸುತ್ತ ತಿರುಗಿ ಅತ್ಯಂತ ಶೀಘ್ರವಾಗಿ ನಡೆಯುತ್ತವೆ. ರಿಂಗ್‌ರೋಡ್‌ಆಗಲಿ, ರಸ್ತೆಗಳಾಗಲಿ, ಬಿಜೆಪಿನಾಯಕರಿಗೆ ಅನುಕೂಲವಾಗುವಂತೆ ರೂಪುಗೊಳ್ಳುತ್ತವೆ ಎಂದು ಆರೋಪಿಸಿದ ಅವರು, ಈ ಕಾಮಗಾರಿಗಳು ಪೂರ್ಣ ಮುಗಿಯದೇ ಇದ್ದರೂ ಕೂಡ ಏಕೆ ಅವಸರದಿಂದ ಉದ್ಘಾಟನೆ ಮಾಡುತ್ತಾರೋ ಗೊತ್ತಿಲ್ಲ. ಕಾಟಾಚಾರಕ್ಕೆ ಯಾವುದು ಉದ್ದೇಶದಿಂದ ಶಿಷ್ಟಚಾರಗಳನ್ನು ಉಲ್ಲಂಘಿಸಿ ಮಾಡುವ ಇಂತಹ ಕೆಲಸಗಳು ಸಾರ್ವಜನಿಕರಿಗೆ ಸಂಶಯ ತರುತ್ತವೆ. ಇವರೇನು ತಮ್ಮ ಮನೆಯಿಂದ ದುಡ್ಡು ಹಾಕಿ ಕಾಮಗಾರಿಗಳನ್ನು ಮಾಡಿರುವುದಿಲ್ಲ. ಇದು ಜನರ ದುಡ್ಡು, ಜನರ ಪಾಲ್ಗೊಳ್ಳುವಿಕೆ ಮುಖ್ಯವಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ, ಸರ್ಕಾರಿಯ ಯಾವುದೇ ಅಧಿಕಾರಿಗಳನ್ನು ಇದರಲ್ಲಿ ಪಾಲ್ಗೊಳ್ಳುವಂತೆ ನಡೆದುಕೊಂಡಿಲ್ಲ ಎಂದರು.
ಸಿಗಂದೂರು ಸೇತುವೆಗೆ ಬಿಜೆಪಿಯ ರಾಷ್ಟ್ರೀಯ ನಾಯಕ ನಿತಿನ್ ಗಡ್ಕರಿರವರೇ ಶಂಕು ಸ್ಥಾಪನೆ ಮಾಡಿದ್ದರು. ಆ ಕೆಲಸ ಎಲ್ಲಿ ಆಗಿದೆ ಅಲ್ಲೇಕೆ ವೇಗವಾಗಿ ಮಾಡುತ್ತಿಲ್ಲ. ತಾಳಗೊಪ್ಪದಿಂದ ಲಯನ್ ಸಫಾರಿಯವರೆಗೆ ೪ ಪಥ ರಸ್ತೆಗೆ ೬೫೦ ಕೋಟಿ ಎಂದುಹೇಳಲಾಗುತ್ತಿದೆ. ಹಿಂದೆ ೬ ಸಾವಿರ ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಎಂದಿದ್ದರು. ಹೀಗೇ ಒಂದೊಂದು ಕಾಮಗಾರಿಗೆ ಪದೇ ಪದೇ ಪ್ರತ್ಯೇಕವಾಗಿ ಹೆಸರಿಸುತ್ತ ತಾವು ಬಹಳ ಸಂಖ್ಯೆಯಲ್ಲಿ ಕಾಮಗಾರಿಗಳನ್ನು ಮಾಡಿರುವೆಎಂದು ಸಂಸದರು ಹೇಳಲು ಹೊರಟಂತೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ವೈ.ಹೆಚ್.ನಾಗರಾಜ್ ಪ್ರಮುಖರಾದ ಹಿರಣ್ಣಯ್ಯ, ಜಿ.ಪದ್ಮನಾಬ್, ಶಿ.ಜು.ಪಾಶ, ಧೀರರಾಜ್ ಹೊನ್ನಾವಿಲೆ, ಲೋಕೇಶ್, ಆಯನೂರು ಸಂತೋಷ್, ಕೃಷ್ಣ, ಐಡಿಯಲ್ ಗೋಪಿ ಇದ್ದರು.