Malenadu Mitra
ರಾಜ್ಯ ಶಿವಮೊಗ್ಗ

ಮಗನಿಗೆ ಟಿಕೆಟ್ ಇಲ್ಲ, ಬೆಂಬಲಿಗರ ಸಭೆ ಕರೆದ ಈಶ್ವರಪ್ಪ, ಯಡಿಯೂರಪ್ಪರ ವಿರುಧ ಅಸಮಾಧಾನ ತೋಡಿಕೊಂಡ ಮಾಜಿ ಡಿಸಿಎಂ

ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟವಾಗಿದ್ದು, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಪಟ್ಟಿ ಪ್ರಕಟವಾಗುತ್ತಿದ್ದಂತೆ ತೀವ್ರ ಅಸಮಾಧಾನಗೊಂಡಿರುವ ಈಶ್ವರಪ್ಪ ಅವರು ರಾಷ್ಟ್ರ ಭಕ್ತರ ಬಳಗದ ಹೆಸರಿನಲ್ಲಿ ಬೆಂಬಲಿಗರ ಸಭೆ ಕರೆದಿದ್ದಾರೆ.
ಮಾ.೧೫ ರಂದು ಸಂಜೆ ೫ ಗಂಟೆಗೆ ಜಿಲ್ಲಾ ಬಂಜಾರ ಭವನದಲ್ಲಿ ಸಭೆ ಕರೆದಿದ್ದು, ಶಿವಮೊಗ್ಗ ಲೋಕಸಭೆ ಕ್ಷೇತ್ರದ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಸಭೆ ಆಯೋಜಿಸಿದ್ದು, ಈಶ್ವರಪ್ಪ ಅವರು ಭಾಗವಹಿಸುತ್ತಾರೆ ಎಂಬುದಾಗಿ ರಾಷ್ಟ್ರ ಭಕ್ತರ ಬಳಗದ ಆಹ್ವಾನ ಪತ್ರಿಕೆ ತಿಳಿಸಿದೆ. ಡಿಜಿಟಲ್ ಆಹ್ವಾನ ಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಈಶ್ವರಪ್ಪ ಅವರ ಭಾವಚಿತ್ರಗಳನ್ನು ಮಾತ್ರ ಮುದ್ರಿಸಲಾಗಿದೆ.


ಪುತ್ರ ಕಾಂತೇಶ್‌ಗೆ ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಟಿಕೆಟ್ ಕೇಳಿದ್ದ ಈಶ್ವರಪ್ಪ ಅವರು, ಟಿಕೆಟ್ ಸಿಗುವ ಲಕ್ಷಣಗಳು ಕ್ಷೀಣವಾಗುತ್ತಿದ್ದಂತೆ ಭಿನ್ನ ಸ್ವರ ತೆಗೆದಿದ್ದರು. ಶಿವಮೊಗ್ಗ ಕ್ಷೇತ್ರದಲ್ಲಿ ಬಂಡಾಯ ಸ್ಪರ್ಧೆ ಮಾಡಲಿದ್ದಾರೆ ಎಂಬ ಬಗ್ಗೆ ವದಂತಿಗಳು ಹರಡಿದ್ದವು. ಬುಧವಾರ ಬಿಜೆಪಿ ಪಟ್ಟಿ ಪ್ರಕಟವಾಗಿದ್ದು, ನಿರೀಕ್ಷೆಯಂತೆ ಕಾಂತೇಶ್ ಅವರಿಗೆ ಟಿಕೆಟ್ ನಿರಾಕರಿಸಿದ್ದು, ಆ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರು ಪ್ರಕಟಿಸಲಾಗಿದೆ.
ಪಟ್ಟಿ ಬಿಡುಗಡೆಯಾಗುವ ತನಕ ಮಗನಿಗೆ ಟಿಕೆಟ್ ಸಿಗುವ ಭರವಸೆ ವ್ಯಕ್ತಪಡಿಸಿದ್ದ ಈಶ್ವರಪ್ಪ ಅವರು, ಈಗ ಶಿವಮೊಗ್ಗ ಕ್ಷೇತ್ರದ ಬೆಳವಣಿಗೆಗಳು ಮತ್ತು ಬಂಡಾಯವಾಗಿ ಸ್ಪರ್ಧಿಸುವ ಬಗ್ಗೆ ಅಭಿಪ್ರಾಯ ಸಂಗ್ರಹ ಸಭೆ ಕರೆದಿದ್ದಾರೆ. ಪಕ್ಷ ಮತ್ತು ರಾಷ್ಟ್ರೀಯ ನಾಯಕರ ಬಗ್ಗೆ ಏನೂ ಮಾತನಾಡದ ಈಶ್ವರಪ್ಪ ಅವರು ರಾಷ್ಟ್ರಭಕ್ತರ ಬಳಗದ ಹೆಸರಲ್ಲಿ ಸಭೆಯನ್ನು ಆಯೋಜಿಸಿದ್ದಾರೆ.


ಪಕ್ಷ ನಿಷ್ಠೆಗೆ ಸಿಗದ ಮಾನ್ಯತೆ:


ಒಂದು ಕಾಲದಲ್ಲಿ ಬಿಜೆಪಿಯ ಫೈರ್ ಬ್ರಾಂಡ್ ಎಂದೇ ಗುರುತಿಸಿಕೊಂಡಿದ್ದ ಈಶ್ವರಪ್ಪ ಅವರು ಇಡೀ ರಾಜಕೀಯ ಜೀವನವನ್ನು ಬಿಜೆಪಿಗಾಗಿ ಮುಡಿಪಾಗಿಟ್ಟವರು. ಪಕ್ಷವನ್ನೇ ತಾಯಿ ಎಂದು ಹೇಳುವ ಅವರು, ಐದು ಬಾರಿ ಶಾಸಕರಾಗಿ, ಸಚಿವ, ಡಿಸಿಎಂ, ಮೇಲ್ಮನೆ ಪ್ರತಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕೆಲಸ ಮಾಡಿದವರು. ಹಿಂದಿನ ಬಿಜೆಪಿ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಅವರು ಗುತ್ತಿಗೆ ಕಾಮಗಾರಿಯಲ್ಲಿ ಶೇ.೪೦ ಕಮೀಷನ್ ಆರೋಪ ಕೇಳಿಬಂದಿದ್ದರಿಂದ ರಾಜೀನಾಮೆ ನೀಡಿದ್ದರು. ಗುತ್ತಿಗೆದಾರ ಸಂತೋಷ್ ಎನ್ನುವವರು ಈ ಆರೋಪ ಹೊರಿಸಿ ಉಡುಪಿಯ ವಸತಿಗೃಹವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ದೇಶವ್ಯಾಪಿ ಸುದ್ದಿಯಾಗಿದ್ದರಿಂದ ಈಶ್ವರಪ್ಪ ಅವರು ಸಚಿವಗಾದಿಗೆ ರಾಜೀನಾಮೆ ನೀಡಿದ್ದರು.

ಟಿಕೆಟ್ ವಂಚಿತರಾದರು:


ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡದ ಪಕ್ಷದ ವರಿಷ್ಠರು, ಒತ್ತಾಯ ಪೂರ್ವಕವಾಗಿ ಚುನಾವಣೆ ರಾಜಕಾರಣದಿಂದ ನಿವೃತ್ತಿ ಘೋಷಿಸುವಂತೆ ಮಾಡಿದ್ದರು. ಪಕ್ಷದ ಆದೇಶ ಪಾಲಿಸಿದ ಈಶ್ವರಪ್ಪ ಅವರು, ಪುತ್ರ ಕೆ.ಇ.ಕಾಂತೇಶ್‌ಗೆ ಟಿಕೆಟ್ ಕೇಳಿದ್ದರು. ಆದರೆ ಮಗನ ಬದಲು ಸೊಸೆಯನ್ನು ಚಿನಾವಣೆಗೆ ನಿಲ್ಲಿಸಿ ಎಂಬ ಸಂದೇಶವನ್ನು ಪಕ್ಷದ ವರಿಷ್ಠರು ನೀಡಿದ್ದರು. ಮನೆಯ ಹೆಣ್ಣು ಮಕ್ಕಳನ್ನು ರಾಜಕೀಯಕ್ಕೆ ತರುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದರು. ಈ ಕಾರಣದಿಂದ ಶಿವಮೊಗ್ಗ ಕ್ಷೇತ್ರ ಈಶ್ವರಪ್ಪರ ಕುಟುಂಬದ ಕೈ ತಪ್ಪಿತ್ತು.
ಪಕ್ಷದ ಹಿರಿಯ ನಾಯಕರಾದ ಈಶ್ವರಪ್ಪ ಅವರು, ಮಗನ ರಾಜಕೀಯ ಭವಿಷ್ಯಕ್ಕಾಗಿ ಹಾವೇರಿ ಲೋಕಸಭೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು, ಅಲ್ಲಿ ಸಾಕಷ್ಟು ಓಡಾಟ ನಡೆಸಿದ್ದರು. ಅನೇಕ ಮಠಾಧೀಶರನ್ನು ಭೇಟಿ ಮಾಡಿ ವಿಶ್ವಾಸ ಗಳಿಸಿಕೊಂಡಿದ್ದರು. ಕುರುಬ ಸಮಾಜದ ಮತಗಳು ಹೆಚ್ಚಿರುವ ಹಾವೇರಿಯಲ್ಲಿ ಮಗನಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡುವ ಈಶ್ವರಪ್ಪ ಅವರ ಆಸೆಗೆ ಪಕ್ಷದ ನಾಯಕತ್ವ ಮನ್ನಣೆ ನೀಡಿಲ್ಲ.

ಯಡಿಯೂರಪ್ಪ ವಿರುದ್ಧ ಅಸಮಾಧಾನ:


ಮಾಜಿ ಮುಖ್ಯಮಂತ್ರಿ ಮತ್ತು  ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನ ಹೊರಹಾಕಿರುವ ಈಶ್ವರಪ್ಪ ಅವರು, ಯಡಿಯೂರಪ್ಪ ಮನಸು ಮಾಡಿದ್ದರೆ, ತಮ್ಮ ಮಗನಿಗೆ ಟಿಕೆಟ್ ಕೊಡಿಸಬಹುದಿತ್ತು. ೪೦ ವರ್ಷಗಳಿಂದ ಪಕ್ಷ ಕಟ್ಟುವಲ್ಲಿ ಹೆಗಲುಕೊಟ್ಟ ತಮಗೆ ಅನ್ಯಾಯವಾಗಿದೆ ಎಂದು ಹೇಳಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯ ತ್ರಿಮೂರ್ತಿಗಳು ಎಂದೇ ಹೇಳುತಿದ್ದ ಯಡಿಯೂರಪ್ಪ ಮತ್ತು ಶಂಕರಮೂರ್ತಿ ಮಕ್ಕಳಿಗೆ ರಾಜಕೀಯ ಆಶ್ರಯ ಸಿಕ್ಕಿದ್ದು, ತಮ್ಮ ಮಗನಿಗೆ ಮಾತ್ರ ಅವಕಾಶ ತಪ್ಪಿಸಲಾಗಿದೆ ಎಂಬ  ಭಾವನೆಯಲ್ಲಿ ಮಾತನಾಡಿದ್ದಾರೆ.
ಸಂಘಪರಿವಾರದ ಕಟ್ಟಾಳು ಈಶ್ವರಪ್ಪ ಅವರು, ಶುಕ್ರವಾರ ಕರೆದಿರುವ ಸಭೆಗೆ ಯಾವ ಪ್ರತಿಕ್ರಿಯೆ ಬರುತ್ತದೆ ಮತ್ತು ಬೆಂಬಲಿಗರಿಂದ ಯಾವ ಸಲಹೆ ಬರುತ್ತದೆ ಎಂಬ ಬಗ್ಗೆ ಕುತೂಹಲವಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಾ.೧೮ ರಂದು ಶಿವಮೊಗ್ಗಕ್ಕೆ ಭೇಟಿ ನೀಡುತ್ತಿರುವ ಹೊತ್ತಿನಲ್ಲಿ ಬಿಜೆಪಿಯ ಬೇಗುದಿ ಬಹಿರಂಗವಾಗಿರುವುದು ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

Ad Widget

Related posts

ಮಾತೋಶ್ರೀ ಅಂಗಡಿ ಭಸ್ಮ: ಸಚಿವರ ಭೇಟಿ

Malenadu Mirror Desk

ಶಿವಮೊಗ್ಗಮಹಿಳಾ ವಸತಿ ಪಾಲಿಟೆಕ್ನಿಕ್ ಅಭಿವೃದ್ಧಿಗೆ ನೆರವು: ಸಂಸದ ಬಿ.ವೈ.ರಾಘವೇಂದ್ರ

Malenadu Mirror Desk

ಟೀಚರ್ಸ್ ಎಲೆಕ್ಷನ್ ಗಮ್ಮತ್ ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.