ಸಾಗರ: ರಂಗಭೂಮಿ,,ಕಿರುತೆರೆ,ಚಲನಚಿತ್ರ ನಟ ಯೇಸುಪ್ರಕಾಶ್(55) ಶನಿವಾರ ಮಂಗಳೂರು ಸಮೀಪದ ಖಾಸಗಿ ಆಸ್ಪತ್ರೆಯ ಲ್ಲಿ ನಿಧನರಾಗಿದ್ದಾರೆ.
ಅವರಿಗೆ ಪತ್ನಿ,ಇಬ್ಬರು ಪುತ್ರಿ,ಓರ್ವ ಪುತ್ರ ಇದ್ದಾರೆ.
ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದ ಕಾರಣ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆಎಂದು ಮೂಲಗಳು ತಿಳಿಸಿವೆ
ಕಾಲೇಜು ದಿನಗಳಿಂದಲೆ ನಾಟಕಗಳಲ್ಲಿಅಭಿನಯದ ಆಸಕ್ತಿ ಹೊಂದಿದ್ದ ಅವರು ನೀನಾಸಂ ಬಳಗ,ಕೆ.ವಿ.ಸುಬ್ಬಣ್ಣ ರಂಗಸಮೂಹ ಸೇರಿದಂತೆ ಹಲವು ರಂಗತಂಡಗಳಲ್ಲಿ ಅಭಿನಯಿಸಿದ್ದರು.
ಯಕ್ಷಗಾನದಲ್ಲೂ ತರಬೇತಿ ಪಡೆದಿದ್ದ ಅವರು ಕೆಲವು ಪ್ರಸಂಗಗಳಿಗೆ ಬಣ್ಣ ಹಚ್ಚಿದ್ದರು.
ಎಸ್.ನಾರಾಯಣ್ ನಿರ್ದೇಶನದ ವೀರು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿದ್ದ ಯೇಸುಪ್ರಕಾಶ್ ರಾಜಾಹುಲಿ,ಯಾರೇ ಕೂಗಾಡಲಿ,ಸಾರಥಿ,ಯೋಧ,ಕಲ್ಪನಾ-2 ಸೇರಿದಂತೆ 35 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಪುರಪ್ಪೆಮನೆ ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದ ಯೇಸುಪ್ರಕಾಶ್ ಬಟ್ಟೆಮಲ್ಲಪ್ಪದ ಸಾರಾ ಸಂಸ್ಥೆಯ ಮೂಲಕ ಕೆರೆಗಳ ಅಭಿವೃದ್ಧಿ, ನೀರಿಂಗಿಸುವಿಕೆಯಂತಹ ಪರಿಸರ ಸಂಬಂಧಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಏಸುಪ್ರಕಾಶ್ ನಿಧನಕ್ಕೆ ರಂಗಭೂಮಿ ಕಲಾವಿದರ ಬಳಗ ಕಂಬನಿ ಮಿಡಿದಿದೆ