ಶಿವಮೊಗ್ಗ : ರಾಜಕೀಯ ನೈತಿಕತೆಯ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ, ಮೂಡಾ ಹಗರಣದ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು. ಜೊತೆಗೆ ಮೂಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಆಗ್ರಹಿಸಿದೆ.
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ರಾಜ್ಯದಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಹಗರಣಗಳ ಸುಳಿಯಲ್ಲಿ ಸಿಲುಕಿ, ಅದರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ. ಜೊತೆಗೆ ವಿರೋಧ ಪಕ್ಷಗಳಿಗೆ ಧಮ್ಕಿ ಹಾಕುವ ಕೆಲಸ ಮಾಡಲಾಗ್ತಿದೆ. ನಮ್ಮ ಹಗರಣಗಳನ್ನ ಬಯಲಿಗೆ ತರಬೇಡಿ, ನಿಮ್ಮ ಮೇಲೆ ಕೇಸ್ ಹಾಕ್ತೇವೆ ಎಂದು ವಿರೋಧ ಪಕ್ಷಗಳನ್ನು ಬೆದರಿಸಿ, ಹತ್ತಿಕ್ಕಲಾಗುತ್ತಿದೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇಂತಹ ಕೆಟ್ಟ ಪ್ರವೃತ್ತಿ ಇರಲಿಲ್ಲ ಎಂದು ದೂರಿದ್ದಾರೆ.
ಮೂಡಾ ಹಗರಣಕ್ಕೆ ನಿನ್ನೆ ವಿಶೇಷ ತಿರುವು ಸಿಕ್ಕಿದೆ. 2-3 ಬಾರಿ ನೋಟಿಸ್ ಕೊಟ್ಟರೂ ರಾಜ್ಯ ಸರ್ಕಾರ ಹಾಗೂ ಮೂಡಾದ ಅಧಿಕಾರಿಗಳು ಉತ್ತರ ಕೊಡದಿದ್ದಾಗ ಇಡಿ ಅಧಿಕಾರಿಗಳು ದಾಳಿ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಿರುವುದು ಒಳ್ಳೆಯ ಬೆಳವಣಿಗೆ.
– ಬಿ.ವೈ.ರಾಘವೇಂದ್ರ – ಸಂಸದರು, ಶಿವಮೊಗ್ಗ
ಮೂಡಾ ಹಗರಣದ ಬಗ್ಗೆ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ದೂರಿನ ಮೇರೆಗೆ ರಾಜ್ಯಪಾಲರು ತನಿಖೆಗೆ ಆದೇಶಿಸಿದ್ದರು. ನಂತರ ಕೋರ್ಟ್ ಕೂಡ ಅನುಮತಿ ನೀಡಿದೆ. ಈ ಹಗರಣದ ವಿರುದ್ಧ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಪಾದಯಾತ್ರೆ ಕೂಡ ಮಾಡಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಮೂಡಾದಲ್ಲಿ ಹಗರಣವೇ ಆಗಿಲ್ಲ ಎಂದು ವಾದಿಸುತ್ತಲೇ, ನಗರಾಭಿವೃದ್ಧಿ ಸಚಿವರ ಮೂಲಕ ಹೆಲಿಕಾಪ್ಟರ್ ನಲ್ಲಿ ದಾಖಲೆಗಳನ್ನು ಶಿಫ್ಟ್ ಕೂಡ ಮಾಡಿಸಿದ್ರು..,
ಆರಂಭದಲ್ಲಿ ಸಿಎಂ ಸಿದ್ದರಾಮಯ್ಯ ನನ್ನ ಪತ್ನಿ ಸೈಟ್ ನೀಡುವಂತೆ ಮೂಡಾಗೆ ಯಾವುದೇ ಪತ್ರ ಬರೆದಿಲ್ಲ ಅಂದ್ರು.., ನಂತರ ಅಲ್ಲಿರುವ ದಾಖಲೆಗಳಿಗೆ ವೈಟ್ನರ್ ಹಚ್ಚೋ ಕಾರ್ಯ ಆಯ್ತು., ಇದೆಲ್ಲದರ ನಡುವೆಯೇ ಸಿಎಂ ಸಿದ್ದರಾಮಯ್ಯರ ಪತ್ನಿ ಮೂಡಾಗೆ ಸೈಟ್ ಗಳನ್ನು ಈಗಾಗಲೇ ವಾಪಸ್ ಕೊಟ್ಟಿದ್ದಾರೆ. ಕೇವಲ 14 ಸೈಟ್ ಗಳು ಮಾತ್ರವಲ್ಲದೇ ಮೂಡಾದ ಸಾವಿರಾರು ಸೈಟ್ ಗಳಲ್ಲಿ ಹಗರಣ ಆಗಿದೆ. ಸುಮಾರು 5 ಸಾವಿರ ಕೋಟಿ ಹಗರಣ ಆಗಿದೆ ಎಂದು ಆರೋಪಿಸಿದ್ದಾರೆ.
ಈ ಕೂಡಲೇ ಮೂಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಸಿಎಂ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವರ ವಿರುದ್ಧ ತನಿಖೆ ಮಾಡಬೇಕು ಎಂದು ಸಂಸದ ರಾಘವೇಂದ್ರ ಒತ್ತಾಯಿಸಿದ್ದಾರೆ.