ಶಿವಮೊಗ್ಗ : ಎಂಎಲ್ಸಿ ಸಿ.ಟಿ.ರವಿ ಪ್ರಕರಣದ ತನಿಖೆಯನ್ನ ಸಿಐಡಿಗೆ ಕೊಟ್ಟಿದ್ದು ಸೂಕ್ತವಲ್ಲ. ಕೂಡಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಲಿ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಸಂಪೂರ್ಣ ವೈಫಲ್ಯವನ್ನು ಕಾಂಗ್ರೆಸ್ ಪಕ್ಷ ಸೇರಿದಂತೆ ಎಲ್ಲರೂ ಟೀಕೆ ಮಾಡುತ್ತಿದ್ದಾರೆ. ಸಿ.ಟಿ.ರವಿಯನ್ನು ಎಲ್ಲೆಲ್ಲೊ ಸುತ್ತಿಸಿದ್ದಾರೆ. ಕಾರಣ ಕೇಳಿದ್ರೆ ರಕ್ಷಣೆಯ ದೃಷ್ಟಿಯಿಂದ ಎಂಬ ಉತ್ತರ ನೀಡುತ್ತಿದ್ದಾರೆ. ಹಾಗಾದ್ರೇ ರಕ್ಷಣೆ ಬೇಕಾದ ಎಲ್ಲರನ್ನು ಕಾಡಿಗೆ ಕರೆದುಕೊಂಡು ಹೋಗಿಬಿಡಿ ಎಂದು ಟೀಕಿಸಿದ್ದಾರೆ.
ರವಿಯನ್ನ ಐದು ಜಿಲ್ಲೆಯಲ್ಲಿ ಸುತ್ತಾಡಿಸಿದ್ದಾರೆ ಎಂದರೆ ಸಿಐಡಿ ಹೇಗೆ ತನಿಖೆ ನಡೆಸುತ್ತದೆ. ಈ ನಡುವೆ ಗೃಹ ಸಚಿವ ಪರಮೇಶ್ವರ್ ನನಗೆ ಗೊತ್ತಿಲ್ಲ ಎಂದಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಇದನ್ನ ಮಾಡ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಮೇಲಿನ ಆತ್ಮೀಯತೆಯಿಂದ ಈ ರೀತಿ ಮಾಡಿಸಿದ್ದಾರೆ. ಒಂದು ವೇಳೆ ಸಿಐಡಿ ತನಿಖೆ ಆದರೇ, ಡಿಕೆಶಿ ಅವರನ್ನು ವಿಚಾರಣೆ ನಡೆಸುತ್ತಾರಾ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಸಭಾಪತಿ ಅವರು ನನ್ನ ಒಪ್ಪಿಗೆ ಇಲ್ಲದೆ ರವಿಯನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಆಡಿಯೋ, ವಿಡಿಯೋ ಇಲ್ಲ. ಇಲ್ಲಿಗೆ ಮುಗಿಸಿ ಎಂದು ಬಹಳಷ್ಟು ಜನ ಸಚಿವರು ಹೇಳುತ್ತಿದ್ದಾರೆ. ಆದರೆ, ಡಿಕೆಶಿ ಹಾಗೂ ಲಕ್ಷ್ಮೀ ಬಿಡಲ್ಲ ಎನ್ನುತ್ತಿದ್ದಾರೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು. ಗೂಂಡಾಗಳು ಸದನದ ಒಳಗೆ ಬರಲು ಕಾರಣ ಯಾರು..?ಪೊಲೀಸರಿಗೆ ಯಾರು ಸೂಚನೆ ನೀಡುತ್ತಿದ್ದರು ಎಂಬುದು ಹೊರಗೆ ಬರಲು ನ್ಯಾಯಾಧೀಶರ ತನಿಖೆ ಅಗತ್ಯ ಎಂದು ಈಶ್ವರಪ್ಪ ಹೇಳಿದ್ದಾರೆ.
previous post