ತೀರ್ಥಹಳ್ಳಿ: ಎಳ್ಳಮಾವಾಸ್ಯೆ ಜಾತ್ರೆ ಅಂಗವಾಗಿ ಪಟ್ಟಣದ ತುಂಗಾನದಿ ತೀರದಲ್ಲಿ ನಡೆದಿದ್ದ ಸಿಡಿಮದ್ದು ಪ್ರದರ್ಶನ ಈಗ ಬಾಲಕನ ಜೀವಕ್ಕೆ ಅಪಾಯ ತಂದಿಟ್ಟಿದೆ.
ಪಟ್ಟಣದ ತುಂಗಾನದಿ ತೀರದಲ್ಲಿ ಸಿಡಿಮದ್ದು ಸ್ಫೋಟಗೊಂಡಿದ್ದು, ಬಾಲಕನೊರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ತೀರ್ಥಹಳ್ಳಿ ಪಟ್ಟಣದ ತೇಜು(9) ಸ್ಫೋಟದಿಂದ ಗಾಯಗೊಂಡ ಬಾಲಕ.
ಜನವರಿ 1 ರಂದು ತೆಪ್ಪೋತ್ಸವ ಮುಕ್ತಾಯದ ನಂತರ ಎರಡೂವರೆ ಗಂಟೆ ಸಿಡಿಮದ್ದು ಪ್ರದರ್ಶನ ಕಾರ್ಯಕ್ರಮ ನಡೆದಿತ್ತು. ಜ.5 ರ ಭಾನುವಾರ ಸಂಜೆ ನದಿ ತೀರದಲ್ಲಿ ಸಿಡಿಯದೇ ಅರ್ಧಂಬರ್ಧ ಉಳಿದಿದ್ದ ಪಟಾಕಿಗಳನ್ನು 3 ಬಾಲಕರು ಒಟ್ಟುಗೂಡಿಸುವ ಪ್ರಯತ್ನದಲ್ಲಿದ್ದಾಗ ಏಕಾಏಕಿ ಪಟಾಕಿ ಸಿಡಿದ ಪರಿಣಾಮ ಬಾಲಕ ತೇಜು ತೀವ್ರವಾಗಿ ಗಾಯಗೊಂಡಿದ್ದು, ಇಬ್ಬರು ಪಾರಾಗಿದ್ದಾರೆ.
ಗಾಯಗೊಂಡ ಬಾಲಕನಿಗೆ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ಮೈಕೈ, ಮುಖ ಸುಟ್ಟು ತೀವ್ರ ತರಹದ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಸಿಡಿಮದ್ದು ಪ್ರದರ್ಶನ ಕಾರ್ಯಕ್ರಮ ನಡೆದು, 4 ದಿನ ಕಳೆದರೂ ಸುತ್ತಲಿನ ಪ್ರದೇಶ ಸ್ವಚ್ಚಗೊಳಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಸ್ಥಳೀಯ ಆಡಳಿತದ ವಿರುಧ್ಧ ಬಾಲಕನ ಪೋಷಕರು ಹಾಗೂ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.