ರಾಜ್ಯದಲ್ಲಿ ಶಾಲೆಗಳು ಆರಂಭವಾಗದಿದ್ದರೇನಂತೆ ನಮ್ಮ ಶಿಕ್ಷಕರು ತುಂಬಾ ಬ್ಯುಸಿ ಕಣ್ರಿ. ಯಾಕೆ ಅಂತೀರಾ ?.. ರಾಜ್ಯಾದ್ಯಂತ ಈಗ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ನಡೀತಿದೆ. ನೀವ್ ನಮ್ ಮೇಷ್ಟ್ರುಗಳ ಮತರಾಜಕಾರಣ ನೋಡಿದ್ರೆ ಬೇಸ್ತು ಬೀಳ್ತಿರಿ!
ಇದೇ ಮಂಗಳವಾರ ಅಂದರೆ ಡಿಸೆಂಬರ್ 15 ರಂದು ಬೆಳಗ್ಗೆ ಏಳೂವರೆಯಿಂದ ಸಂಜೆ ನಾಲ್ಕರ ತನಕ ಚುನಾವಣೆ ನಡೆಯಲಿದೆ. ಅಂದೇ ಫಲಿತಾಂಶವೂ ಪ್ರಕಟವಾಗಲಿದೆ. ಪ್ರತಿ 50 ಶಿಕ್ಷಕರಿಗೆ ಒಬ್ಬರಂತೆ ಪ್ರತಿನಿಧಿಗಳ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಶೇ.33 ಮಹಿಳಾ ಮೀಸಲಾತಿ ಇದೆ. ಈ ಬಾರಿ ಚುನಾವಣೆಯಂತೂ ಯಾವ ಎಮ್ಮೆಲ್ಸಿ ಚುನಾವಣೆಗೂ ಕಡಿಮೆ ಇಲ್ಲದಂತೆ ನಡೀತಿದೆ ಅಂದ್ರೆ ನೀವು ಆಶ್ಚರ್ಯ ಪಡ್ತೀರಿ.
ನೌಕರರ ಸಂಘದ ಅಧ್ಯಕ್ಷರದ್ದೇ ಹವಾ:
ಈ ಬಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರ ಹವಾ ಜೋರಾಗಿಯೇ ಇದೆ. ಸರಕಾರಿ ನೌಕರರ ಸಂಘದಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಹೆಸರಾಗಿರುವ ಷಡಾಕ್ಷರಿ ಅವರ ಪ್ರಭಾವಳಿಯ ಸುತ್ತಲೇ ಶಿಕ್ಷಕರ ಚುನಾವಣೆ ಗಿರಕಿ ಹೊಡೀತಿದೆ.. ಪ್ರತಿ ತಾಲೂಕಿನಲ್ಲಿ ಎರಡು ಸಿಂಡಿಕೇಟ್‍ಗಳು ರಚನೆಯಾಗಿವೆ. ಅದರಲ್ಲಿ ಒಂದು ಷಡಾಕ್ಷರಿ ಬೆಂಬಲಿತ ಬಣವಾದರೆ ಮತ್ತೊಂದು ಅವರ ಪ್ರತಿಸ್ಪರ್ಧಿ ಬಣ. ಈ ಕಾರಣದಿಂದಲೇ ಶಿಕ್ಷಕರ ಚುನಾವಣೆಗೆ ಎಲ್ಲಿಲ್ಲದ ರಂಗು ಬಂದಿದೆ.
ಜಾತಿ…ಗೀತಿ….
ಪಾಠ ಮಾಡುವ ಶಿಕ್ಷಕರಿಗೆ ಜಾತಿಗೀತಿಯಿಲ್ಲ ಅಂತೀವಿ. ಆದರೆ ಈ ಚುನಾವಣೆಯಲ್ಲಿ ಜಾತಿ ಮತ್ತು ಪಕ್ಷ ರಾಜಕಾರಣದ ಛಾಯೆಯೂ ಇದೆ ಎನ್ನಲಾಗಿದೆ. ಶಿಕ್ಷಕರ ಜಾತಿ ಹುಡುಕಿ ಎಲ್ಲ ಸಿಂಡಿಕೇಟ್‍ಗಳೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಎರಡೂ ಸಿಂಡಿಕೇಟ್‍ಗಳಲ್ಲಿಯೂ ಎಲ್ಲ ಜಾತಿ ಧರ್ಮದ ಅಭ್ಯರ್ಥಿಗಳಿದ್ದಾರೆ. ಅತೀ ಕಡಿಮೆ ಅವಧಿ ಇರುವುದರಿಂದ ಎಲ್ಲ ಶಿಕ್ಷಕರೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಪ್ರಚಾರದಲ್ಲಿ ನಿರತರಾಗಿದ್ದಾರೆ.
ವಿಳಾಸ ಹುಡುಕಿ ಮತ ಬೇಟೆ:
ಕೊರೊನ ಕಾರಣದಿಂದ ಶಾಲೆಗಳು ಆರಂಭವಾಗಿಲ್ಲ. ಹಿಂದಾದರೆ ಶಾಲೆಗಳಿಗೆ ಹೋದರೆ ಎಲ್ಲ ಶಿಕ್ಷಕರು ಸಿಗುತ್ತಿದ್ದರು. ಅಲ್ಲಿ ಮತಪ್ರಚಾರವೂ ಸಲೀಸಾಗಿತ್ತು.ಆದರೆ ಈಗ ಇರುವ ಕಡಿಮೆ ಅವಧಿಯಲ್ಲಿಯೇ ಶಿಕ್ಷಕರ ಮನೆ ವಿಳಾಸಗಳನ್ನು ಹಡುಕಿಕೊಂಡು ಭೇಟಿ ಮಾಡುವ ಕೆಲಸ ಜೋರಾಗಿಯೇ ಇದೆ. ದೂರವಾಣಿ ಮೂಲಕವೂ ಭರ್ಜರಿಯಾಗಿ ಮತಪ್ರಚಾರ ನಡೆಯುತ್ತಿದೆ. ಎರಡೂ ಸಿಂಡಿಕೇಟ್‍ಗಳ ಸಹವಾಸ ಬೇಡ ಎಂದು ಕೆಲವರು ಸ್ವತಂತ್ರವಾಗಿಯೂ ಕಣಕ್ಕಿಳಿದಿದ್ದಾರೆ. ಈ ನಡುವೆ ಸಂಘ,ಚುನಾವಣೆ ಎಂದರೆ ರಗಳೆ ಅನ್ನೋರು ಅಭ್ಯರ್ಥಿಗಳ ಕಣ್ ತಪ್ಪಿಸಿ ಓಡಾಡುತ್ತಿದ್ದಾರೆ.
ಸಿಎಂ ಜಿಲ್ಲೆಯಲ್ಲಿ ಜೋರಾದ ಹವಾ:
ಶಿವಮೊಗ್ಗಜಿಲ್ಲೆಯಲ್ಲಿ ಶಿಕ್ಷಕರ ಚುನಾವಣೆ ರವಷ್ಟು ಜೋರಾಗಿಯೇ ಇದೆ. ಇದು ಸಿಎಂ ತವರು ಮಾತ್ರವಲ್ಲ ಅವರ ಆಪ್ತರಾಗಿರುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ತವರು ಜಿಲ್ಲೆಯೂ ಹೌದು. ಈ ಕಾರಣಕ್ಕಾಗಿಯೇ ಇಲ್ಲಿ ಚುನಾವಣೆ ಕಾವು ಕೊಂಚ ಹೆಚ್ಚಾಗಿಯೇ ಇದೆ. ಹೊಸನಗರ ತಾಲೂಕಿನಲ್ಲಿ ಎಲ್ಲ ನಿರ್ದೇಶಕರನ್ನೂ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಉಳಿದಂತೆ ಎಲ್ಲ ತಾಲೂಕುಗಳಲ್ಲಿಯೂ ಷಡಾಕ್ಷರಿ ಬೆಂಬಲಿತ ಮತ್ತು ಅದರ ವಿರುದ್ಧದ ಸಿಂಡಿಕೇಟ್ ನಡುವೆ ಹಣಾಹಣಿ ಏರ್ಪಟ್ಟಿದೆ. ಮಜಾ ಅಂದ್ರೆ ಭದ್ರಾವತಿ ತಾಲೂಕಿನಲ್ಲಿ ಒಂದು ಬಣ ಷಡಾಕ್ಷರಿ ಅವರ ಬೆಂಬಲಿತ ಬಣ ಎಂದು ಕರೆದುಕೊಂಡರೆ, ಮತ್ತೊಂದು ತಂಡ ಷಡಾಕ್ಷರಿ ಅಭಿಮಾನಿ ತಂಡ ಎಂಬ ಹಣೆಪಟ್ಟಿ ಹಚ್ಚಿಕೊಂಡು ಚುನಾವಣೆ ಎದುರಿಸುತ್ತಿದೆ.
ಗುಂಡಿನ ಗಮ್ಮತ್ತು:
ಚುನಾವಣೆ, ಓಡಾಟ, ಕಾರ್ಯಕರ್ತರು ಎಂದ ಮೇಲೆ ಗುಂಡಿನ ಗಮ್ಮತ್ತು ಇದ್ದೇ ಇರತ್ತೆ. ಶಿಕ್ಷಕರ ಚುನಾವಣೆಯಲ್ಲಿಯೂ ಎಣ್ಣೆ ಅಭ್ಯಾಸ ಇರುವವರಿಗೆ ನಿರ್ದಿಷ್ಟ ಹೋಟೆಲ್ , ತೋಟದ ಮನೆಗಳಲ್ಲಿ ಗುಂಡಿನ ಪಾರ್ಟಿಗಳು ನಡೆಯುತ್ತಿವೆ. ಮತದಾರರಿಗೆ ಹಣ, ಸೀರೆ ಕೊಡಲಾಗುತ್ತದೆ ಎಂಬ ರೂಮರ್ ಇತ್ತಾದರೂ, ನಿರ್ದೇಶಕರ ಆಯ್ಕೆ ಆಗಿದ್ದರಿಂದ ಆ ರೀತಿಯ ಆಮಿಷ ಇಲ್ಲ ಎಂದು “ಮಲೆನಾಡು ಮಿರರ್’ ಜತೆ ಮಾತಾಡಿದ ಶಿಕ್ಷಕರು ತಿಳಿಸಿದ್ದಾರೆ. ಇನ್ನೊಂದು ರಾತ್ರಿ ಬಾಕಿ ಇದೆ ಕತ್ತಲ ಕರಾಮತ್ತು ಏನಾಗುತ್ತೊ ಗೊತ್ತಿಲ್ಲ.
ಶಿಕ್ಷಕರೆಂದರೆ ಎಲ್ಲರಿಗೂ ಅಪಾರ ಗೌರವ, ಅವರ ಸಂಘದ ಚುನಾವಣೆಯೂ ಅಷ್ಟೆ ಗೌರವದಿಂದ ನಡೆಯಬೇಕೆಂಬ ಅಭಿಪ್ರಾಯ ಈ ಪಾರ್ಟಿಗೀರ್ಟಿ ಗೋಜಿಗೆ ಹೋಗದ ಶಿಸ್ತಿನ ಮೇಷ್ಟ್ರುಗಳ ಕಾಳಜಿಯಾಗಿದೆ. ಹೀಗೇ ಆಗಲಿ ಎಂಬುದು ನಮ್ಮ ಆಶಯ.