Malenadu Mitra
ರಾಜ್ಯ ಶಿವಮೊಗ್ಗ

ಅಮ್ಮ.. ನಮ್ಮನ್ನು ಕೊಂದು ಬಿಟ್ಟೆಯಾ ?..

ಅಮ್ಮ ಅಂದು ಮನೆಯಿಂದ ಹೊರಡುವಾಗ ಅದೆಷ್ಟು ಸಂಭ್ರಮವಿತ್ತು. ಗಾಂಧಿ ಪಾರ್ಕು, ಅಲ್ಲಿನ ಜಾರುಬಂಡಿ, ಚಿಕುಬುಕು ರೈಲು…ಹಸಿರು ಹಾಸು.. ನೀ ಅಲ್ಲಿಗೆ ಕರೆದುಕೊಂಡು ಹೋಗುವಾಗಲೇ ನಾನು ಮತ್ತು ತಂಗಿ ಇಬ್ಬರೂ ಕುಣಿದು ಕುಪ್ಪಳಿಸಿದ್ದೆವು ಗೊತ್ತಾ? ಆ ಸಂಭ್ರಮದಲ್ಲಿ ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬಂದದ್ದೇ ತಿಳಿಯಲಿಲ್ಲ. ಪಾಪ ನಿನ್ನೊಡಲೊಳಗೆ ಅದೆಂತಾ ಸಂಕಟವಿತ್ತೊ ಗೊತ್ತಿಲ್ಲ. ಮುಗುಮ್ಮಾಗಿದ್ದಿ, ಸಂಜೆ ತನಕ ನಮಗೆ ತಿನ್ನಲು ಬೇಕಾದ್ದು ಕೊಡಿಸಿದೆ… ಆದರೆ ಸಂಜೆ ನೀ ಕುಡಿಸಿದ ಜ್ಯೂಸ್.. ಅದೇ ಕೊನೆಯಾಗುತ್ತೆ ಎಂದು ಯಾರಿಗೆ ಗೊತ್ತಿತ್ತು ?. ಅಮ್ಮಾ… ಹೆತ್ತವಳು ಕುಡಿಸಿದ್ದೆಲ್ಲಾ ಅಮೃತ ಅಂತೆ ನಾವು ಕುಡಿದೇ ಬಿಟ್ಟೆವು… ನೀ ಕೊಟ್ಟ ಅದೇ ಅಮೃತ ನಮ್ಮ ಜೀವ ತೆಗೆದು ಬಿಟ್ಟಿತು.
ಇರಲಿ ಬಿಡು ಅಮ್ಮಾ… ನಮ್ಮ ಬದುಕು ಇಷ್ಟೇ ಆಗಿತ್ತೇನೊ.. ಆದರೆ ಮುಂದಿನದು ಹೇಳಲು ದುಃಖ ಉಮ್ಮಳಿಸಿ ಬರುತ್ತಿದೆ. ನಾವು ಕೇಳಿ ನಿನ್ನ ಬಸುರಲ್ಲಿ ಜೀವ ಪಡೆದಿದ್ದಲ್ಲ ಅಲ್ವಾ ಅಮ್ಮಾ…, ನಿನಗೆ ಎಂತ ಹೇಳುವುದು ಹೇಳು. ಹಣೆಬರಹ ಬರೆವ ಆ ವಿಧಿ ನಾವಿನ್ನೂ ನೆಲ ಬಿಟ್ಟು ನಿಲ್ಲುವ ಮುನ್ನವೇ ಅಪ್ಪನನ್ನು ಕರೆಸಿಕೊಂಡ. ಅಪ್ಪ ಇದ್ದಿದ್ದರೆ ಬಹುಷಃ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲವೇನೊ. ಆದರೂ ನೀನು ನಮಗೆ ಯಾವ ವಂಚನೆ ಇಲ್ಲದೆ ಸಾಕಿ ಸಲಹಿದೆ. ಎಳೆ ವಯಸ್ಸಿನಲ್ಲಿಯೇ ನಿನಗೆ ವೈದವ್ಯ ಕೊಟ್ಟ ಆ ದೇವರನ್ನು ಖಂಡಿತಾ ನಾವು ನಿಂದಿಸುತ್ತೇವೆ ಅಮ್ಮಾ..
ಇಬ್ಬರು ಮಕ್ಕಳನ್ನು ಸಲಹಿ, ಎಲ್ಲರ ತುತ್ತಿನ ಚೀಲ ತುಂಬಿಸಿಕೊಳ್ಳಲು ನೀನು ಪಡುತ್ತಿದ್ದ ಶ್ರಮ ಸಣ್ಣದೇನಲ್ಲಾ.. ಆದರೆ ನಡುವೆ ನಿನಗೊಬ್ಬ ಸಖ ಸಿಕ್ಕ ಅಂತಾರೆ ನಾವಿನ್ನೂ ಹಸುಳೆಗಳು ನಮಗೇನು ಗೊತ್ತು ಅಮ್ಮ. ಆತನ ಇಚ್ಚೆಯೊ,, ನಮ್ಮ ದೌರ್ಭಾಗ್ಯವೊ ಗೊತ್ತಿಲ್ಲ. ಅಂದು ನೀನು ಕೊಟ್ಟ ಜ್ಯೂಸೇ ನಮಗೆ ವಿಷವಾಯಿತು ಅಂತ ಲೋಕವೇ ಮಾತಾಡಿಕೊಳ್ಳುತ್ತಿದೆ. ಆದರೆ ನಾವು ಅದನ್ನು ನಂಬುವುದಿಲ್ಲ ಅಮ್ಮಾ…ಕರುಳು ಕುಡಿಗಳಿಗೆ ನೀನು ಹಾಗೆ ಮಾಡುವವಳಲ್ಲ ಎಂಬ ಅಚಲ ನಂಬಿಕೆ ನಮ್ಮದು. ಆದರೂ… ಅಮ್ಮಾ ನೀನು ನಮ್ಮನ್ನು ಜತೆಗಿಟ್ಟುಕೊಂಡಿದ್ದರೆ ನೀನು ಮತ್ತು ನಿನಗೊಲಿದವನು ಇಬ್ಬರನ್ನೂ ನಾನೇ ಸಾಕುತಿದ್ದೆ, ಇರಲಿ ಇಲ್ಲಿಯೂ ವಿಧಿ ತನ್ನ ಆಟ ಆಡಿದ.

ಕೊನೆಯದಾಗಿ ಒಮ್ಮೆ ನಮ್ಮನ್ನು ನೋಡಿ ಬಿಡು ಅಮ್ಮಾ..

ಅಮ್ಮಾ ಹೀಗ್ಯಾಕೆ ಮಾಡಿಕೊಂಡೆ ?
ಅಮ್ಮಾ ಈ ಭೂಮಿಯ ಮೇಲೆ ನನ್ನ ಮತ್ತು ತಂಗಿಯ ಋಣ ತೀರಿತು ಅಂದುಕೊಂಡಿದ್ದೆವು. ಯಾವುದನ್ನೋ ಪಡೆಯುವ ಸಲುವಾಗಿ ಇರುವ ಸಿರಿಯನ್ನು ಕಳೆದುಕೊಳ್ಳುವವಳಲ್ಲ ನೀನು. ನಿನ್ನ ಎದೆ ಹಾಲು ಕುಡಿದ ನಮಗೆ ಅದು ಗೊತ್ತಿಲ್ಲವೇ ಅಮ್ಮಾ. ಈಗ ಎಲ್ಲಾ ಬಿಟ್ಟು ನಮ್ಮ ಹಾದಿಯನ್ನೇ ನೀನೂ ಹಿಡಿದಿಯಂತೆ. ಹೀಗೆ ಮಾಡಿಕೊಳ್ಳಬಾರದಿತ್ತು ಅಮ್ಮಾ. ನಾವು ಚಿಗುರುವ ಮುನ್ನವೇ ಮುದುಡಿದೆವು ಆದರೆ, ನೀನು ಇನ್ನೂ ಬದುಕಿ ಬಾಳಬಹುದಿತ್ತು. ಪಾಪ ಹೆತ್ತ ಕರುಳು,, ಕಣ್ಣೆದುರೇ ಮಕ್ಕಳು ಸತ್ತಿರುವುದನ್ನು ನೋಡಿ ಅದೆಷ್ಟು ವೇದನೆಯಾಯಿತೊ ನಿನಗೆ.
ನಮ್ಮ ಅಗಲಿಕೆ ಬೆನ್ನಿಗೇ ಈ ಸಮಾಜ, ಮಾಧ್ಯಮಗಳು ಆಡಿಕೊಂಡಿದ್ದೆಷ್ಟು. ಗಂಡನ ಕಳೆದುಕೊಂಡು ಇರುವಷ್ಟು ದಿನ ಈ ಸಮಾಜ ನೋಡಿದ್ದ ರೀತಿಗೇ ಬೇಸತ್ತು ಹೋಗಿದ್ದ ನೀನು ಯಾವುದೂ ಬೇಡ ಎಂದು ನಮ್ಮನ್ನೇ ಹಿಂಬಾಲಿಸಿ ಬಂದು ಬಿಟ್ಟೆಯಾ ಅಮ್ಮಾ ?
ಅಮ್ಮಾ… ಈ ಸಮಾಜ ನೀನು ಮತ್ತು ನಮಗೆ ಯಾಕೆ ಈ ಪರಿಸ್ಥಿತಿ ಬಂದಿತು ಎಂದು ಯೋಚಿಸಲಿಲ್ಲ. ಬದಲಿಗೆ ನೂರು ಕತೆ ಕಟ್ಟಿಬಿಟ್ಟಿತು. ನೋಡು ಈಗ ನಿನಗೆ ಲೋ ಬಿಪಿ ಹಾಗಾಗಿ ಸತ್ತಳು ಎಂದು ಹೇಳುತ್ತಿದೆ. ಅಪ್ಪ ಸತ್ತಮೇಲೆ ನಾಲ್ಕು ವರ್ಷಗಳ ಕಾಲ ಚಿಕ್ಕ ಕೂಸುಗಳ ಪೊರೆದ ನಿನಗೆ ಎಂದೂ ಬಾರದ ಲೋ ಬಿಪಿ ಈಗ ಬಂದು ಬಿಟ್ಟಿತಾ ಅಮ್ಮಾ.. ಇಲ್ಲ ನಮಗನ್ನಿಸುತ್ತದೆ.. ನೀನು ಏನೊ ಅನಾಹುತ ಮಾಡಿಕೊಂಡಿರುವೆ.. ಹಾಗಾಗಿಯೇ ಸತ್ತಿರುವುದು. ಸಾವಿರ ಸತ್ಯಗಳನ್ನು ಮಣ್ಣಲ್ಲಿ ಹುಗಿದು ಹಾಕುವ ಈ ಸಮಾಜ ನಿನ್ನ ಸಾವಿನ ಹಿಂದಿನ ಸತ್ಯವನ್ನೂ ಮುಚ್ಚಿದೆ ಎಂಬ ಅನುಮಾನ ನಮಗಿದೆ.
ಅಮ್ಮ, ನೀನೂ ಮನುಷ್ಯಳಲ್ಲವೆ, ನಿನಗೂ ಬಯಕೆಗಳಿದ್ದವಲ್ಲವೆ ?. ಅಂದು ಗಾಂಧಿ ಪಾರ್ಕಿನಲ್ಲಿ ಕುಡಿದ ಜ್ಯೂಸ್‌ನಲ್ಲಿ ನೀನೆ ವಿಷ ಹಾಕಿದ್ದೆಯೊ,,, ಅಥವಾ ಅದರಲ್ಲಿಯೇ ಇತ್ತೊ… ತನಿಖೆ ಇತ್ಯಾದಿ ನಡೆಯುತ್ತದೆಯಂತೆ… ಆದರೆ ಕೊಟ್ಟ ನೀನೂ ಇಲ್ಲ, ಕುಡಿದ ನಾವೂ ಇಲ್ಲ….. ನಮಗೆ ಸಾವಾಯಿತು… ಸತ್ಯಕ್ಕೂ ಸಾವಾಗುತ್ತೊ ಗೊತ್ತಿಲ್ಲ. ನಮ್ಮನ್ನು ಈ ಸಮಾಜ ಈ ಸ್ಥಿತಿಗೆ ನೂಕಿತೊ … ನಾವೇ ತಂದುಕೊಂಡೆವೊ ಗೊತ್ತಿಲ್ಲ. ನಿನ್ನ ಮೇಲೆ ನಮಗೆ ಯಾವುದೇ ಅನುಮಾನ ಇಲ್ಲ ಅಮ್ಮಾ.. ಆದರೆ ನಿನಗೆ ಯಾರಾದ್ರೂ ಮೋಸ ಮಾಡಿದ್ದರೆ.. ಅವರಿಗೆ ದೇವರು ಒಳ್ಳೆ ಬುದ್ದಿಕೊಡಲಿ.
ಅಮ್ಮ ನಮಗೂ ಒಂದು ಬಯಕೆ ಇದೆ.. ಏನು ಗೊತ್ತಾ… ಮರು ಜನ್ಮ ಅನ್ನೋದು ಇದ್ದರೆ,, ಮತ್ತೆ ನಾವು ನಿನ್ನ ಮಕ್ಕಳಾಗಿ…..ನಿನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು.
ಕ್ಷಮಿಸು ಅಮ್ಮಾ..

ಇತಿ ನಿನ್ನ ನಿರ್ಭಾಗ್ಯ ಮಕ್ಕಳು
– ಅಶ್ವಿನ್, ಆಕಾಂಕ್ಷಾ

Ad Widget

Related posts

ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ಬೇಡ

Malenadu Mirror Desk

ಹಣಗೆರೆಕಟ್ಟೆ ಲಾಜ್ ನಲ್ಲಿ ಮಹಿಳಾ ಪ್ರವಾಸಿ ಕೊಲೆ, ಮೃತದೇಹ ಪತ್ತೆ

Malenadu Mirror Desk

ಅಚ್ಚುಕಟ್ಟು ರಸ್ತೆಗಳ ಕಾಮಗಾರಿಗೆ ಚಾಲನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.