Malenadu Mitra
ಮಲೆನಾಡು ಸ್ಪೆಷಲ್ರಾಜಕೀಯರಾಜ್ಯ

ಬಿಜೆಪಿ ಸಭೆಯೂ..ರಂಗಾದ ನಗರವೂ..

ರಾಜ್ಯ ಬಿಜೆಪಿಯ ವಿಶೇಷ  ಸಭೆ ಸಿಎಂ ತವರು ಶಿವಮೊಗ್ಗದಲ್ಲಿ ಜನವರಿ ೨ ಮತ್ತು ೩ ರಂದು ನಡೆಯಲಿದ್ದು, ಇಡೀ ನಗರವನ್ನು ಕೇಸರಿಮಯ ಮಾಡಲಾಗಿದೆ. ಕೊರೊನ ಕಾರಣಕ್ಕೆ ಗಣಪತಿ ಹಬ್ಬದಲ್ಲಿ ಅಲಂಕಾರ ಮಾಡುವುದನ್ನು ಮಿಸ್ ಮಾಡಿಕೊಂಡಿದ್ದ ಬಿಜೆಪಿ ಕಾರ್ಯಕರ್ತರು ಅತ್ಯಂತ ಉತ್ಸಾಹದಲ್ಲಿಯೇ ನಗರವನ್ನು ಅಲಂಕೃತಗೊಳಿಸಿದ್ದಾರೆ.
ಪಕ್ಷದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸಂಕ್ರಾಂತಿ ಬಳಿಕ ರಾಜ್ಯ ಸರಕಾರದಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂದು ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಇನ್ನೂ ಎರಡೂವರೆ ವರ್ಷ ನಾನೇ ಸಿಎಂ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ. ಮೊನ್ನೆ ತಾನೆ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಗ್ರಾಮೀಣ ಕರ್ನಾಟಕದಲ್ಲಿ ಪಕ್ಷಕ್ಕೆ ಅಭೂತ ಪೂರ್ವ ಬೆಂಬಲ ಸಿಕ್ಕಿದೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಈ ಹೊತ್ತಿನಲ್ಲಿಯೇ ಬಿಜೆಪಿ ವಿಶೇಷ ಸಭೆ ನಡೆಯುತ್ತಿರುವುದು ಮತ್ತಷ್ಟು ಮಹತ್ವ ಹೆಚ್ಚಾಗಲು ಕಾರಣವಾಗಿದೆ.
ಶಿವಮೊಗ್ಗದಲ್ಲಿ 25 ವರ್ಷಗಳ ಬಳಿಕ ನಡೆಯುವ ಈ ಸಭೆಯಲ್ಲಿ ರಾಮ, ರೈತ ಮತ್ತು ಗೋವಿನ ವಿಚಾರಗಳು ಪ್ರಮುಖವಾಗಿ ಚರ್ಚೆಯಾಗಲಿವೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ಈಗಾಗಲೇ ಘೋಷಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ನಡೆದಿರುವ ಅಲಂಕಾರಗಳೂ ಇದೇ ಪರಿಕಲ್ಪನೆಗೆ ಪೂರಕವಾಗಿವೆ. ಬಿ.ಹೆಚ್.ರಸ್ತೆಯುದ್ದಕ್ಕೂ ಹಾಕಿರುವ ಫ್ಲೆಕ್ಸ್‌ಗಳೂ ಇದನ್ನೇ ಸಾರುತ್ತಿವೆ.
ಮಲೆನಾಡಿನ ಆತಿಥ್ಯ:
ಮಲೆನಾಡಿನ ಹಳ್ಳಿಗಳಲ್ಲಿ ಮನೆಗೆ ಯಾರೇ ಬಂದರೂ ನೀರು-ಬೆಲ್ಲ ಕೊಡುವುದು ಸಂಪ್ರದಾಯ(ಈಗ ಮಾಯವಾಗುತ್ತಿದೆ) ಹೀಗೆ ಆತಿಥ್ಯಕ್ಕೆ ಹೆಸರಾಗಿರುವ ಮಲೆನಾಡಿನಲ್ಲಿ ಬಿಜೆಪಿ ವಿಶೇಷ ಸಭೆ ನಡೆಯುತ್ತಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆ ಮಾತ್ರವಲ್ಲದೆ ಬುಡದಿಂದ ತಲೆತನಕ ಎಲ್ಲಾ ಅಧಿಕಾರಗಳು ಪಕ್ಷದಲ್ಲಿಯೇ ಇವೆ. ಶಿವಮೊಗ್ಗದಲ್ಲಿ ಪಕ್ಷದ ಮಟ್ಟಿಗೆ ಇದು ಸುಭಿಕ್ಷಾ ಸಮಯ ಈ ಕಾರಣದಿಂದ ನಿಷ್ಟಾವಂತ ಬಿಜೆಪಿ ಕಾರ್ಯಕರ್ತರು ವಿಶೇಷ ಸಭೆ ಯಶಸ್ವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಅತಿಥಿಗಳ ಊಟ,ವಸತಿ ಸೇರಿದಂತೆ ಕೊರೊನ ಸಂದರ್ಭದಲ್ಲಿ ಅನುಸರಿಸಬೇಕಾದ ಎಲ್ಲ ಸುರಕ್ಷತಾ ಕ್ರಮಗಳನ್ನು ಕಾರ್ಯಕರ್ತರು ಪಾಲಿಸುತ್ತಿದ್ದಾರೆ.

ಯಾರೆಲ್ಲ ಬರುವರು:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಮತ್ತು ಭಾನುವಾರ ಶಿವಮೊಗ್ಗದಲ್ಲಿಯೇ ಇರುತ್ತಾರೆ. ಭಾನುವಾರದ ಸಭೆಗೆ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್, ಸಹ ಉಸ್ತುವಾರಿ ಶ್ರೀಮತಿ ಅರುಣ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರವನ್ನು ಪ್ರತಿನಿಧಿಸುವ ಸಚಿವರಾದ ಸದಾನಂದಗೌಡ, ಪ್ರಹ್ನಾದ್ ಜೋಷಿ, ವಿವಿಧ ಘಟಕಗಳ ಪ್ರಭಾರಿಗಳು, ಜಿಲ್ಲಾದ್ಯಕ್ಷರುಗಳು ಭಾಗವಹಿಸಲಿದ್ದಾರೆ
ಎಲ್ಲೆಲ್ಲೂ ಕೇಸರಿ:
ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಮಹತ್ವದ ಸಭೆಗೆ ಶಿವಮೊಗ್ಗದ ಪ್ರಮುಖ ವೃತ್ತಗಳು ಹಾಗೂ ಸಭಾಂಗಣಕ್ಕೆ ಹೋಗುವ ಬಿ.ಹೆಚ್.ರಸ್ತೆಯನ್ನು ಸಂಪೂರ್ಣ ಕೇಸರಿಮಯ ಮಾಡಲಾಗಿದೆ. ಹಾದಿಯುದ್ದಕ್ಕೂ ಸ್ವಾಗತ ಕೋರುವ ಪ್ಲೆಕ್ಸ್‌ಗಳನ್ನು ಅಳವಡಿಸಿದ್ದು, ನಾಯಕರು ಹಾಗೂ ಸ್ವಾಗತ ಕೋರುವ ಸ್ಥಳೀಯ ನಾಯಕರುಗಳ ಭಾವಚಿತ್ರಗಳು ರಾರಾಜಿಸುತ್ತಿವೆ. ಇತ್ತೀಚೆಗೆ ಸರಕಾರದ ವಿವಿಧ ನಿಗಮ ಮಂಡಳಿಗಳಿಗೆ ಸದಸ್ಯರುಗಳ ಹೆಸರೇ ಅಲ್ಲಿ ಮೇಲ್ಪಂಕ್ತಿಯಲ್ಲಿವೆ. ಸರಕಾರಿ ನೇಮಕದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಅಸಮಾಧಾನ ಜಿಲ್ಲಾ ಉಸ್ತುವಾರಿ ಸಚಿವರ ಬೆಂಬಲಿಗರಲ್ಲಿ ಇದೆಯಾದರೂ, ಅದನ್ನು ಬಹಿರಂಗಗೊಳಿಸಿಕೊಳ್ಳಲು ಆಗುತ್ತಿಲ್ಲ.
ಮಲೆನಾಡಿನ ಜನರ ನಿರೀಕ್ಷೆ:
ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಸಾಕಷ್ಟು ಕೆಲಸಗಳು ಆಗುತ್ತಿವೆಯಾದರೂ ಅವು ರಸ್ತೆ, ಚರಂಡಿ, ವಿಮಾನ ನಿಲ್ದಾಣ ಹಾಗೂ ಕಟ್ಟಡಗಳಿಗೆ ಸೀಮಿತವಾಗಿವೆ. ಆದರೆ ಇಲ್ಲಿನ  ಆರ್ಥಿಕ ಶಕ್ತಿಗಳಾದ ಭದ್ರಾವತಿಯ ವಿ.ಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳ ಪುನಶ್ಚೇತನ ಆಗಿಲ್ಲ. ಈ ವಿಚಾರ ಕಳೆದ ಹಲವು ಚುನಾವಣೆಯಲ್ಲಿ ಚರ್ಚೆಯಾಗುತ್ತಿದ್ದರೂ, ನಿರ್ಣಾಯಕ ಘಟ್ಟಕ್ಕೆ ಬಂದಿಲ್ಲ. ಮಲೆನಾಡನ್ನು ಕಾಡುವ ಕಸ್ತೂರಿ ರಂಗನ್ ವರದಿ ತೂಗುಗತ್ತಿ ಯಾವಾಗಲೂ ಆತಂಕ ಹುಟ್ಟಿಸುತ್ತಲೇ ಇದೆ. ಬಗರ್‌ಹುಕುಂ ಸಾಗುವಳಿ ಸಮಸ್ಯೆ ಕಳೆದ ಐದು ದಶಕಗಳಿಂದಲೂ ಜೀವಂತವಾಗಿಯೇ ಇದೆ. ಐವತ್ತರ ದಶಕದಲ್ಲಿ ನಾಡಿಗೆ ಬೆಳಕು ಕೊಡಲು ಕತ್ತಲಿಗೆ ತಳ್ಳಲ್ಪಟ್ಟ ಶರಾವತಿ ಸಂತ್ರಸ್ತರು ಇನ್ನೂ ಅತಂತ್ರರಾಗಿಯೇ ಇದ್ದಾರೆ. ಭೂಮಿಯ ಬೆಲೆ ಆಕಾಶಕ್ಕೆ ಹೋಗಿದ್ದರಿಂದ ಶಿವಮೊಗ್ಗ ನಗರದ ಬಡವರಿಗೆ ಆಶ್ರಯ ಮನೆ ಮತ್ತು ನಿವೇಶನ ಎಂಬುದು ಕನಸಾಗಿಯೇ ಉಳಿದಿವೆ.  ಆರೋಗ್ಯಕ್ಕೆ ಹಾನಿಕರ ಎಂಬ ಅಂಶ ಮುಂದಿಟ್ಟುಕೊಂಡು ಅಡಕೆ ಮಾನ ಕಳೆಯುತ್ತಿರುವುದನ್ನು ನಿಲ್ಲಿಸಲು ಯಾವ ಸರಕಾರಕ್ಕೂ ಆಗುತ್ತಿಲ್ಲ. ಈ ರೀತಿಯ ಪ್ರಮುಖ ಸಮಸ್ಯೆಗಳತ್ತ ಬಿಜೆಪಿಯ ವಿಶೇಷ ಸಭೆಯು ಗಮನ ಹರಿಸಬೇಕಾಗಿದೆ. ಪಕ್ಷ ಸಂಘಟನೆ, ಅಧಿಕಾರ, ಸೈದ್ಧಾಂತಿಕ ಸಂಗತಿಗಳೇ ಸಭೆಗೆ ಪ್ರಮುಖವಾಗಿದ್ದರೂ ಮಲೆನಾಡಿನ ಜನರ ಸಮಸ್ಯೆಗಳೂ ಧ್ವನಿಸಲಿ ಎಂಬುದು ಇಲ್ಲಿನ ಜನರ ನಿರೀಕ್ಷೆಯಾಗಿದೆ.

ಬಿಜೆಪಿ ತಾಲೂಕು ಘಟಕಗಳ ಮುಖಂಡರುಗಳು ಇತ್ತೀಚೆಗೆ ವಿಶೇಷ ಸಭೆಯಲ್ಲಿ ಸ್ಥಳೀಯ ವಿಚಾರಗಳ ಚರ್ಚೆಯಾಗಲಿದೆ ಎಂದು ಪತ್ರಿಕಾಗೋಷ್ಠಿಗಳನ್ನೂ ಮಾಡಿದ್ದರು. ಆದರೆ ಬಿಜೆಪಿಯ ಉನ್ನತ ಮಟ್ಟದ ಈ ಸಭೆಯ ಅಜೆಂಡಾಗಳೇ ಬೇರೆ. ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಲವ್ ಜಿಹಾದ್, ಗೋಹತ್ಯೆ ನಿಷೇಧ ವಿಷಯಗಳು ಪ್ರಮುಖವಾಗಿದ್ದವು. ಈಗ ಗೋಹತ್ಯೆ ನಿಷೇಧ ಕಾಯಿದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಲವ್‌ಜಿಹಾದ್‌ಗೆ ನಿರ್ಬಂಧ ಹೇರುವ ಕಾಯಿದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡುವುದಾಗಿ ಖುದ್ದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಅದೇ ರೀತಿ ಶಿವಮೊಗ್ಗದ ಸಭೆಯಲ್ಲಿಯೂ ಸೈದ್ಧಾಂತಿಕ ನೆಲೆಯಲ್ಲಿಯೇ ಪಕ್ಷದ ನಿರ್ಣಯಗಳು ಚರ್ಚೆಯಾಗುತ್ತವೆ. ಪಕ್ಷ ಸಂಘಟನೆ, ಚುನಾವಣೆ ತಂತ್ರ, ಪಕ್ಷದ ಯಶಸ್ಸಿಗೆ ಸಿಗಬಹುದಾದ ಅಸ್ತ್ರಗಳ ಬಗ್ಗೆ ಬಹುತೇಕ ಚರ್ಚೆ ಸೀಮಿತ ಎನ್ನಲಾಗಿದೆ.
ಮಲೆನಾಡಿನ ಗೋವು ರಕ್ಷಿಸಿ:
ಬಿಜೆಪಿ ಸಭೆಯು ರಾಮ,ರೈತ ಮತ್ತು ಗೋವಿನ ಮೇಲೆ ಕೇಂದ್ರೀಕೃತವಾಗಿದೆ. ಶಿವಮೊಗ್ಗ ಜಿಲ್ಲೆ ಉಳುವವನೆ ಹೊಲದೊಡೆಯ ಎಂಬ ಐತಿಹಾಸಿಕ ಹೋರಾಟ ಕಟ್ಟಿದ ಊರು. ಆದರೂ ಇಲ್ಲಿನ ರೈತರಿಗೆ ಇನ್ನೂ ತಾವು ಉಳುವ ಭೂಮಿಗೆ ಸಂಪೂರ್ಣ ಹಕ್ಕು ಸಿಕ್ಕಿಲ್ಲ. ನೀರಾವರಿ ಯೋಜನೆಗಳು, ರಾಷ್ಟ್ರೀಯ ಉದ್ಯಾನವನ,ಅಭಯಾರಣ್ಯ ಹಾಗೂ ಅರಣ್ಯ ಸಂಬಂಧಿತ ಕಠಿಣ ಕಾನೂನುಗಳಿಂದ ರೈತರಿಗೆ ಅನೇಕ ತಾಂತ್ರಿಕ ತೊಂದರೆಗಳಿವೆ ಸಭೆಯ ಅಜೆಂಡಾದಲ್ಲಿಯೇ ಇವುಗಳ ಚರ್ಚೆಗೆ ಅವಕಾಶವಿದೆ. ಅದೇ ರೀತಿ ಮಲೆನಾಡು ಗಿಡ್ಡ ತಳಿಯ ಹಸುಗಳು ಗೋಮಾತೆಯ ಶ್ರೇಷ್ಠ ಸಂತತಿ. ಈ ಪಾರಂಪರಿಕ ತಳಿಯ ಹಸುಗಳು ನಶಿಸಿಹೋಗುತ್ತಿವೆ. ರಾಜಕೀಯದುದ್ದಕ್ಕೂ ಗೋವನ್ನೇ ಉಸಿರಾಡುವ ಬಿಜೆಪಿಯ ವಿಶೇಷ ಸಭೆ ಈ ದಿಸೆಯಲ್ಲಿ ಏನು ಪ್ರಯತ್ನ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.

Ad Widget

Related posts

ಸಂವಿಧಾನವನ್ನು ಅರ್ಥ ಮಾಡಿಕೊಂಡು ಗೌರವಿಸಬೇಕು : ನ್ಯಾ.ಮುಸ್ತಫಾ ಹುಸೇನ್

Malenadu Mirror Desk

ಈಡಿಗ ಸಮಾಜದ ಉಪಪಂಗಡಗಳ ಸಂಘಟನೆ

Malenadu Mirror Desk

ಟಾಟಾ ಸುಮೊ ಪಲ್ಟಿ ಇಬ್ಬರು ಸಾವು, ಇಬ್ಬರು ಗಂಭೀರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.