ವಿಧಾನ ಪರಿಷತ್ ಉಪಸಭಾಪತಿ ಆಯ್ಕೆಗೆ ಜನವರಿ ೨೯ ರಂದು ಚುನಾವಣೆ ನಿಗದಿಯಾಗಿದೆ. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರ ಮೇಲೆ ಆಡಳಿತ ಪಕ್ಷದವರು ಅವಿಶ್ವಾಸ ತೋರಿರುವ ಕಾರಣ ಅವರು ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದಾರೆ. ಆದರೆ ಎರಡೂ ಸಾಂವಿಧಾನಿಕ ಹುದ್ದೆ ಖಾಲಿ ಇರಬಾರದೆಂಬ ಉದ್ದೇಶಕ್ಕೆ ಉಪಸಭಾಪತಿ ಆಯ್ಕೆ ಬಳಿಕ ಅವರು ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ನೂತನ ಉಪಸಭಾಪತಿಯೇನೊ ಆಯ್ಕೆಯಾಗುತ್ತಾರೆ ಆದರೆ ಇಂತಹ ಘನತೆಯ ಹುದ್ದೆಯಲ್ಲಿದ್ದ ಎಸ್.ಎಲ್ ಧರ್ಮೇಗೌಡ ಆತ್ಮಹತ್ಯೆಗೆ ನಿಜವಾದ ಕಾರಣ ಯಾವುದು ಎಂಬುದು ಇಲ್ಲಿರುವ ಪ್ರಶ್ನೆ.
ಧರ್ಮೇಗೌಡ ಅವರು ಬರೆದಿರುವ ಡೆತ್ ನೋಟ್‌ನಲ್ಲಿ ವಿಧಾನ ಪರಿಷತ್‌ನಲ್ಲಿ ಅಂದು ನಡೆದ ಎಳೆದಾಟದ ಘಟನೆ ನನಗೆ ನೋವು ತಂದಿದೆ ಎಂದು ಬರೆದಿದ್ದಾರೆಯೇ ಹೊರತು ಅದರಿಂದಾಗಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿಲ್ಲ ಎನ್ನಲಾಗಿದೆ. ಹಾಗಿದ್ದರೆ ಈ ಹೈ ಪ್ರೊಫೈಲ್ ಸುಸೈಡ್‌ನ ಹಿಂದಿರುವ ಕಾರಣ ಏನು ಎಂಬುದು ಈಗ ಬಹಿರಂಗವಾಗಬೇಕಿದೆ. ದೊಡ್ಡವರ ಮನೆಯ ವಿಷಯ ನಮಗೇಕೆ ಎಂದು ಸುಮ್ಮನಾಗಿಬಿಡಬಹುದು ಆದರೆ ಸಭ್ಯ ರಾಜಕಾರಣಿಯೊಬ್ಬರ ಆತ್ಮಹತ್ಯೆಗೆ ಪ್ರೇರಣೆ ನೀಡಿದವರಿಗೆ ಶಿಕ್ಷೆ ಆಗಬೇಕಲ್ಲವೆ?
ಆಸ್ತಿವಿಚಾರ ಪ್ರಸ್ತಾಪ:
ಧರ್ಮೇಗೌಡರ ಡೆತ್‌ನೋಟ್‌ನಲ್ಲಿ ಪತ್ನಿಗೆ ಕ್ಷಮಿಸು ಎಂದು ಬರೆದಿದ್ದಾರಂತೆ. ಸಹೋದರ ಬೋಜೇಗೌಡರಿಗೆ ಕ್ಷಮಿಸು ಎಂದು ಕೇಳಿಕೊಂಡಿದ್ದಲ್ಲದೆ, ಎಲ್ಲರನ್ನೂ ಚೆನ್ನಾಗಿ ನೋಡಿಕೊಂಡು ಹೋಗು ಎಂದು ಹೇಳಿದ್ದಾರೆನ್ನಲಾಗಿದೆ. ಮಗಳು, ಮಗ ಸೊಸೆ ಅಳಿಯ ಎಲ್ಲರಿಗೂ ಧೈರ್ಯವಾಗಿರಿ ಎಂದು ಹೇಳಿದ್ದಾರೆಂದು ತಿಳಿದು ಬಂದಿದೆ. ತಮಗಿರುವ ಆಸ್ತಿಯಲ್ಲಿ ಯಾವುದು ಯಾರಿಗೆ ಸೇರಬೇಕು. ಯಾವುದನ್ನು ಮಾರಾಟ ಮಾಡಿ ಯಾರಿಗೆ ಹಣ ಕೊಡಬೇಕೆಂಬ ಎಲ್ಲ ವಿಚಾರವನ್ನೂ ಪ್ರಸ್ತಾಪ ಮಾಡಿದ್ದಾರೆ ಎಂದು ಅವರ ಹತ್ತಿರದ ಮೂಲಗಳು ಹೇಳುತ್ತವೆ.
ಖಿನ್ನತೆ ಇತ್ತು :
ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸದೃಢರಾಗಿದ್ದ ಧರ್ಮೇಗೌಡರು ಇತ್ತೀಚೆಗೆ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ. ಹಾಗಿಲ್ಲದಿದ್ದರೆ ಚಲಿಸುವ ರೈಲಿನ ಎದುರು ನಿಲ್ಲುವ ಪ್ರಶ್ನೆಯೇ ಬರುತ್ತಿರಲಿಲ್ಲ. ಅವರ ಆ ಖಿನ್ನತೆಗೆ ವೈಯಕ್ತಿಕ ಸಂಗತಿಗಳೇ ಕಾರಣ ಎನ್ನಲಾಗಿದೆ. ಪತ್ನಿ ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಧರ್ಮೇಗೌಡರು ಅನ್ಯ ವ್ಯಕ್ತಿಗಳೊಂದಿಗೆ ಹೊಂದಿದ್ದ ಸಂಬಂಧವೇ ಖಿನ್ನತೆಗೆ ಒಳಗಾಗುವಂತೆ ಮಾಡಿತ್ತಾ ಎಂಬ ಅನುಮಾನ ಕಾಡುತ್ತಿದೆ. ಈ ಕಾರಣದಿಂದ ಕಾಫಿಸೀಮೆ ಚಿಕ್ಕಮಗಳೂರಲ್ಲಿ ವದಂತಿಗಳ ಮೇಲೆ ವದಂತಿಗಳ ಸಂತೆಯೇ ನಡೆದಿದೆ.
ಬ್ಲ್ಯಾಕ್ ಮೇಲ್ ಗೆ ಒಳಗಾಗಿದ್ದರೆ ?
ಮಾತಾಡುವವರ ಬಾಯಿಗೆ ಬೀಗ ಹಾಕಲು ಬರುವುದಿಲ್ಲ ಮತ್ತು ಹಾಗಂತ ಅವರ ಮಾತುಗಳು ಸತ್ಯ ಅಂತಲೂ ಅಲ್ಲ. ಸಾಯುವ ಹಿಂದಿನ ದಿನದ ತನಕವೂ ಅವರು ಲವಲವಿಕೆಯಿಂದಲೇ ಇದ್ದರು. ವಾರದ ಹಿಂದಷ್ಟೇ ಚಿಕ್ಕಮಗಳೂರು ಬೈ ಪಾಸ್‌ನಲ್ಲಿ ಆಸ್ತಿಯೊಂದನ್ನು ಖರೀದಿಸಿದ್ದರು ಎನ್ನಲಾಗಿದೆ. ಆದರೆ ಏಕಾಏಕಿ ರೈಲಿಗೆ ಎದುರಾಗುವ ಗಂಡಾಂತರ ಏನಾಗಿತ್ತು ಎಂಬುದು ಮಾತ್ರ ಎಲ್ಲರಿಗೂ ಕಾಡುವ ಸಂಗತಿ. ಪಾಪ ಅವರ ಒಡಲಲ್ಲಿ ಅಂತಹ ಯಾವ ದುಗುಢವಿತ್ತೊ ಯಾರಿಗೆ ಗೊತ್ತು. ಈ ನಡುವೆ ಯಾವುದೊ ವ್ಯಕ್ತಿ ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿತ್ತು ಎಂದು ಸುಳಿದಾಡಿದ್ದ ಮಾತುಗಳು ಇನ್ನೂ ನಿಂತಿಲ್ಲ.
ಕೆರೆ ನೀರಿಗೇ ಪ್ಯೂರಿಫೈಯರ್:
ಧರ್ಮೇಗೌಡರಿಗೆ ಒಮ್ಮೆ ವಾಟರ್ ಇನ್ಫೆಕ್ಷನ್ ಆಗಿತ್ತಂತೆ ಆಗ ತುಂಬಾ ಬಳಲಿದ್ದ ಅವರು ತಮ್ಮ ಮನೆಗೆ ನೀರು ಪೂರೈಸುವ ಕೆರೆಗೇ ಫ್ಯೂರಿಫೈಯರ್ ಅಳವಡಿಸಿದ್ದರು. ಸ್ನಾನಕ್ಕೂ ಶುಚೀಕೃತ ನೀರನ್ನೇ ಬಳಸುತ್ತಿದ್ದರು. ತಮ್ ಬಗ್ಗೆ ಇಷ್ಟೆಲ್ಲ ಕಾಳಜಿ ಇಟ್ಟುಕೊಂಡಿದ್ದ ಧರ್ಮೇಗೌಡರು ಯಾರೊಂದಿಗೂ ದ್ವೇಷ ಕಟ್ಟಿಕೊಂಡಿದ್ದು ಕಡಿಮೆ. ಇಂತಹ ರಾಜಕಾರಣಿಯೊಬ್ಬರು ಸಾವಿಗೇ ಮುಖಾಮುಖಿಯಾಗುವಂತಹ ಸನ್ನಿವೇಶ ತಂದಿಟ್ಟ ಆ ಶಕ್ತಿ ಯಾವುದು ಎಂಬುದರ ತನಿಖೆಯಾಗಬೇಕು. ಆತ್ಮಹತ್ಯೆ ಪ್ರಕರಣವನ್ನು ರೈಲ್ವೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಆದರೆ ಆತ್ಮಹತ್ಯೆಗೆ ಇರುವ ಕಾರಣವೂ ಬಹಿರಂಗವಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಹೀಗಾದಲ್ಲಿ ದೊಡ್ಡ ಜನರ ಸಾವಿನ ಹಿಂದೆ ಇದ್ದಿರಬಹುದಾದ ಬ್ಲ್ಯಾಕ್ ಮೇಲರ್‌ಗಳಿಗೂ ಶಿಕ್ಷೆ ಸಾಧ್ಯವಾಗುತ್ತದೆ ಅಲ್ಲವೆ ?
previous post
next post