ಶಿವಮೊಗ್ಗ ಸಮೀಪದ ಹುಣಸೋಡು ಮಹಾಸ್ಫೋಟ ದುರಂತಕ್ಕೆ ಸಂಬಂಧಿಸಿದಂತೆ ಸ್ಫೋಟಕ ಪೂರೈಕೆ ದಾರರು ಸೇರಿದಂತೆ ಮತ್ತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೇರಿದೆ.
ತನಿಖೆಗೆ ಆರು ತಂಡಗಳನ್ನು ರಚನೆ ಮಾಡಲಾಗಿದ್ದು, ಎಲ್ಲಾ ತಂಡಗಳು ವಿವಿಧ ಹಂತದಲ್ಲಿ ತನಿಖೆ ಮುಂದುವರಿಸಿವೆ. ಈ ಸ್ಫೋಟಕ್ಕೆ ಆಂಧ್ರಪ್ರದೇಶದಿಂದ ಸಿಡಿಮದ್ದು ಪೂರೈಕೆ ಆಗುತಿತ್ತು ಎಂಬ ಮಾಹಿತ ಆಧರಿಸಿ ತನಿಖೆ ಮಾಡಿದಾಗ ಸ್ಫೋಟಕ ಮಾಹಿತಿಗಳು ಲಭ್ಯವಾಗಿವೆ. ಆಂಧ್ರದ ಅನಂತಪುರ ಜಿಲ್ಲೆಯ ರಾಯದುರ್ಗದ ಪಿ.ಶ್ರೀರಾಮುಲು ಮತ್ತವನ ಮಗ ಮಂಜುನಾಥ ಸಾಯಿ ಆಂಧ್ರದಲ್ಲಿ ಸ್ಫೋಟಕ ಸಂಗ್ರಹಿಸುವ ಪರವಾನಗಿ ಹೊಂದಿದ್ದಾರೆ. ಆದರೆ ಅವರ ಬಳಿ ಸಾಗಣೆಗೆ ಪರವಾನಗಿ ಇರದಿದ್ದರೂ, ನಿರಂತರವಾಗಿ ಶಿವಮೊಗ್ಗಕ್ಕೆ ಸ್ಫೋಟಕ ಪೂರೈಕೆ ಆಗುತಿತ್ತು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ತನಿಖಾ ತಂಡ ರಾಯದುರ್ಗದಲ್ಲಿ ಶೋಧನೆ ಮಾಡಿದಾಗ ಆರೋಪಿಗಳು ಸಿಗಲಿಲ್ಲ. ತುಂಗಾನಗರ ಸಿಪಿಐ ದೀಪಕ್ ಹೆಗ್ಡೆ, ಸೊರಬ ಸಿಪಿಐ ಮರುಳಸಿದ್ಧಪ್ಪ ಅವರ ತಂಡ ಈ ಬಗ್ಗೆ ಮಾಹಿತಿ ಕಲೆ ಹಾಕಿತ್ತು. ಈ ಮಾಹಿತಿ ಆಧಾರದ ಮೇಲೆ ಶಿವಮೊಗ್ಗ ಮಹಿಳಾ ಠಾಣೆ ಸಿಪಿಐ ಅಭಯಪ್ರಕಾಶ್, ಗ್ರಾಮಾಂತರ ಸಿಪಿಐ ಸಂಜೀವ್‌ಕುಮಾರ್, ಪಿಎಸೈ ವಿಜಯ್ ,ಕಿರಣ್ ಮೋರೆ ತಂಡಗಳು ರಾಮುಲು ಮತ್ತವರ ಮಗ ಮಂಜುನಾಥ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶಿವಮೊಗ್ಗ ಎಸ್ಪಿ ಕೆ.ಎಂ.ಶಾಂತಕುಮಾರ್ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಜಮೀನು ಮಾಲೀಕರೂ ಆರೋಪಿಗಳಾಗಿದ್ದು, ಮಾಲೀಕರಾದ ಶಂಕರಗೌಡ ಕುಲಕರ್ಣಿ ಹಾಗೂ ಅವಿನಾಶ್ ಕುಲಕರ್ಣಿ ಅವರನ್ನು ಬಂಧಿಸಲಾಗಿದೆ. ಭದ್ರಾವತಿ ಸಿಪಿಐ ರಾಘವೇಂದ್ರ ಕಾಂಡಿಕೆ, ಶಿವಮೊಗ್ಗ ವಿನೋಬನಗರ ಠಾಣೆಯ ಉಮೇಶ್ ಮತ್ತು ಸಿಬ್ಬಂದಿಗಳಾದ ನಾಗರಾಜ್, ಸಂದೀಪ್ ದಾವಣಗೆರೆ, ಚನ್ನಗಿರಿ ಸೇರಿದಂತೆ ವಿವಿಧ ಕಡೆ ಮಾಹಿತಿ ಕಲೆಹಾಕಿ ಜಮೀನು ಮಾಲೀಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಸ್ಫೋಟಕವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮತ್ತು ಸಂಗ್ರಹಿಸುತ್ತಿದ್ದ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಶಾಂತರಾಜ್ ವಿವರಿಸಿದರು.
ಪ್ರಕರಣದಲ್ಲಿ ಈ ಹಿಂದೆ ಸುಧಾಕರ್, ನರಸಿಂಹ ,ರಶೀದ್ ಹಾಗೂ ಅಹಮದ್ ಎಂಬುವರನ್ನು ಬಂಧಿಸಲಾಗಿದೆ. ಜನವರಿ ೨೧ ರಂದು ನಡೆದಿದ್ದ ಈ ಭೀಕರ ಸ್ಫೋಟದಲ್ಲಿ ಆರು ಮಂದಿ ಸಾವಿಗೀಡಾಗಿದ್ದು, ಎರಡು ವಾಹನಗಳು ಸುಟ್ಟು ಕರಕಲಾಗಿದ್ದವು. ಈ ಪ್ರಕರಣ ದೇಶದ ಗಮನ ಸೆಳೆದಿದ್ದು, ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.