ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತವರು ಜಿಲ್ಲೆ ಶಿವಮೊಗ್ಗದಲ್ಲಿ ಭಾನುವಾರ ನಾಗರೀಕ ಸನ್ಮಾನ ಕಾರ್ಯಕ್ರಮ “ನಮ್ಮೊಲಮೆ ಭಾವಾಭಿನಂದನೆ ’ಯನ್ನು ಅದ್ದೂರಿಯಿಂದ ನೆರವೇರಿಸಲು ಸಕಲ ಸಿದ್ಧತೆ ನಡೆದಿದೆ. ಹೋರಾಟದ ಮೂಲಕವೇ ರಾಜಕೀಯ ಪ್ರವರ್ಧಮಾನಕ್ಕೆ ಬಂದಿರುವ ಯಡಿಯೂರಪ್ಪ ಅವರು ಶಿವಮೊಗ್ಗ ಜಿಲ್ಲೆಯನ್ನು ಇಂದು ರಾಜ್ಯ ಹಾಗೂ ದೇಶದ ಜನ ನೋಡುವಂತೆ ಮಾಡಿದ್ದಾರೆ. ಕಾಯಕ ತತ್ವದಲ್ಲಿ ನಂಬಿಕೆ ಇಟ್ಟಿರುವ ಯಡಿಯೂರಪ್ಪ ಅವರು ತಮಗೆ ಸಿಕ್ಕ ಅಧಿಕಾರಾವಧಿಯಲ್ಲಿ ತವರು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
ನೆಚ್ಚಿನ ಮುಖ್ಯಮಂತ್ರಿಯ ೭೮ ನೇ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ತವರು ಜಿಲ್ಲೆಯಲ್ಲಿ ನಾಗರಿಕ ಸನ್ಮಾನ ಮಾಡುತ್ತಿರುವುದು ಒಂದು ಸಂಭ್ರಮದ ಕ್ಷಣ. ಜಿಲ್ಲೆಯನ್ನು ರಾಜ್ಯದಲ್ಲಿಯೇ ಮಾದರಿಯಾಗಿ ಮಾಡುವ ಕಾಯಕಯೋಗಿಯನ್ನು ಸನ್ಮಾನಿಸಿ ಗೌರವಿಸುವುದು ಎಲ್ಲರ ಕರ್ತವ್ಯ ಕೂಡಾ ಹೌದು. ಶಿವಮೊಗ್ಗದಲ್ಲಿ ಅಭಿನಂದನಾ ಸಮಿತಿ ರಚಿಸಿಕೊಂಡು ಈ ಕಾರ್ಯಕ್ರಮಕ್ಕಾಗಿ ಅಭಿಮಾನಿಗಳ ದೊಡ್ಡ ದಂಡೇ ಕೆಲಸ ಮಾಡುತ್ತಿದ್ದು, ಅವರ ಕಾರ್ಯ ಅಭಿನಂದನಾರ್ಹವಾದುದು. ಭಾನುವಾರ ಮತ್ತು ಸೋಮವಾರ ಪ್ರೀಡಂ ಪಾರ್ಕ್‌ನಲ್ಲಿ ಯಡಿಯೂರಪ್ಪ ಜನ್ಮದಿನ ನಿಮಿತ್ತ ಆಯೋಜಿಸಿರುವ ಸಂಗೀತ ಸಂಜೆ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಅದ್ದೂರಿಯಾಗಿಯೇ ನಡೆಯಲಿದೆ.
ನಮ್ಮ ಬೆಂಬಲ ಯಾಕೆ ?:
ನಾಡಿನ ಮುಖ್ಯಮಂತ್ರಿ ಹಾಗೂ ತವರು ಜಿಲ್ಲೆಯ ಪ್ರಶ್ನಾತೀತ ನಾಯಕ ಯಡಿಯೂರಪ್ಪ ಅವರನ್ನು ಸನ್ಮಾನಿಸುವುದೆಂದರೆ ಅದೊಂದು ಸಂತೃಪ್ತಭಾವ ಎನ್ನುವಾಗ ಕಳೆದ ಎರಡು ದಿನದಿಂದ ನಮ್ಮೊಲುಮೆಗೆ ನಮ್ಮ ಬೆಂಬಲ ಎಂಬ ಅಭಿಯಾನವೇ ಆರಂಭವಾಗಿರುವುದು ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುತ್ತಿದೆ. ನಾಗರೀಕ ಸನ್ಮಾನ ಎಂದರೆ ಅದು ಇಡೀ ಜಿಲ್ಲೆಯ ಜನರ ಪರವಾಗಿ ಸಲ್ಲಿಸುತ್ತಿರುವ ಗೌರವ ಎಂಬುದು ನಿಜ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಮೇಲೆ ಜಿಲ್ಲೆಯ ಸರ್ವಜಾತಿ, ಸರ್ವಧರ್ಮಗಳಿಗೂ ಸಾಕಷ್ಟು ಕೆಲಸ ಮಾಡಿಕೊಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರತಿಯೊಂದು ಜಾತಿ ಸಂಘಟನೆಗಳನ್ನೂ ಕರೆತಂದು ನಮ್ಮ ಬೆಂಬಲವಿದೆ ಎಂದು ಹೇಳಿಸುವ ಔಚಿತ್ಯವಾದರೂ ಏನಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಹಾಗಾದ್ರೆ ನಮ್ಮ ನಾಯಕನ ಸನ್ಮಾನಕ್ಕೆ ವಿರೋಧವಿದೆಯೇ ಎಂದು ಅಭಿಮಾನಿಗಳೇ ಕೇಳುವಂತ ಸನ್ನಿವೇಶವನ್ನು ಆಯೋಜನಕರು ನಿರ್ಮಾಣ ಮಾಡಿದ್ದಾರೆ. ಮಾಧ್ಯಮಗಳಲ್ಲಿ ನಮ್ಮೊಲುಮೆಗೆ ನಮ್ಮ ಬೆಂಬಲ ಎಂಬ ತಲೆಬರಹದ ಸುದ್ದಿಗಳನ್ನು ನೋಡಿ ಜನರು ಚರ್ಚಿಸುವಂತಾಗಿದೆ.
previous post
next post