ಶಿವಮೊಗ್ಗದ ಅದ್ದೂರಿ ಸಮಾರಂಭದಲ್ಲಿ ಯಡಿಯೂರಪ್ಪ ಅವರಿಗೆ ನಾಗರೀಕ ಸನ್ಮಾನ
ರಾಜಕೀಯ ಶಕ್ತಿ ಮತ್ತು ಅಧಿಕಾರ ನೀಡಿದ ಶಿವಮೊಗ್ಗ ಜಿಲ್ಲೆಯ ಋಣ ತೀರಿಸುತ್ತೇನೆ. ಮುಖ್ಯಮಂತ್ರಿಯಾಗಿ ಉಳಿದ ಅವಧಿಯಲ್ಲಿಯೂ ಈ ನೆಲಕ್ಕೆ ಮತ್ತಷ್ಟು ಕೆಲಸ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ತವರು ಜಿಲ್ಲೆ ಶಿವಮೊಗ್ಗದಲ್ಲಿ ಭಾನುವಾರ ನಡೆದ ನಮ್ಮೊಲುಮೆ ಭಾವಾಭಿನಂದನೆ ಕಾರ್ಯಕ್ರಮದಲ್ಲಿ ನಾಗರೀಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನನ್ನೆಲ್ಲ ಸಾಧನೆ ಹಿಂದೆ ಇರುವುದು ರಾಷ್ಟ್ರೀಯ ಸ್ವಯಂಸೇವಕ ಸಂಘ. ಇಂದು ನಾನೇನಾದರೂ ಆಗಿದ್ದರೆ, ಅದು ಸಂಘದ ಬಲದಿಂದ. ಸಂಘದ ಕೆಲಸಕ್ಕಾಗಿಯೇ ನಾನು ಶಿಕಾರಿಪುರಕ್ಕೆ ಬಂದವನು. ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋದಾಗಲೂ ಖೈದಿಗಳಿಗೆ ಸೌಲಭ್ಯ ಸಿಗುತ್ತಿಲ್ಲ ಎಂದು ಧರಣಿ ಮಾಡಿದ್ದೆ. ನನ್ನ ಜೀವನವೇ ಒಂದು ಹೋರಾಟ. ಕುಟುಂಬಕ್ಕಿಂತ ಸಮಾಜಕ್ಕಾಗಿಯೇ ನನ್ನನ್ನು ಸಮರ್ಪಿಸಿಕೊಂಡಿದ್ದೇನೆ. ಜನರು ಕೊಟ್ಟ ಅಧಿಕಾರದಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಮತ್ತು ಮುಂದೆಯೂ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.
ಶಿವಮೊಗ್ಗದ ಜಿಲ್ಲೆಯ ಜನರ ಸಹಕಾರದ ಬಗ್ಗೆ ಭಾವನಾತ್ಮಕವಾಗಿಯೇ ಮಾತನಾಡಿದ ಯಡಿಯೂರಪ್ಪ ಅವರು, ಮುಂದೆ ಶಿವಮೊಗ್ಗಕ್ಕಾಗಿ ಬೇಡಿಕೆ ಸಲ್ಲಿಸಲು ಏನೂ ಇರಬಾರದು. ಅಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿಯೂ ರಾಜ್ಯ ಸುತ್ತಿ ೧೫೦ ಸೀಟುಗಳನ್ನು ಪಕ್ಷಕ್ಕೆ ತಂದುಕೊಡುತ್ತೇನೆ. ಇಲ್ಲಿನ ಜನರು ಹಾಗೂ ಅಭಿಮಾನಿಗಳು ಮಾಡುತ್ತಿರುವ ಸನ್ಮಾನದಿಂದ ಅತೀವ ಸಂತೋಷವಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಅಭಿನಂದನಾ ಭಾಷಣ ಮಾಡಿದ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು, ಯಡಿಯೂರಪ್ಪ ತಮ್ಮ ಹೋರಾಟದಿಂದ ಒಬ್ಬ ರೈತನಾಯಕ ಆದರು. ಅವರ ಜೀವನ ಎಂದರೆ ಹೋರಾಟ, ಹೋರಾಟ ಮತ್ತು ಹೋರಾಟ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅವರ ಸದೃಢ ನಾಯಕತ್ವವೇ ಕಾರಣ ಎಂದು ಹೇಳಿದರು.
ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಯಡಿಯೂರಪ್ಪ ರೈತ ಪರ ಕಾಳಜಿಯಿಂದ ಇಂದು ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಶೂನ್ಯದಿಂದ ಪಕ್ಷ ಸಂಘಟನೆ ಮಾಡಿದವರು. ಅನಂತಕುಮಾರ್, ಯಡಿಯೂರಪ್ಪ ಮತ್ತು ನಾನು ಇಡೀ ರಾಜ್ಯವನ್ನು ಕಾಲಿಗೆ ಚಕ್ರಕಟ್ಟಿಕೊಂಡಂತೆ ತಿರುಗಿದ್ದೇವೆ. ಅವರು ನೂರನೇ ವರ್ಷದ ಜನ್ಮದಿನವನ್ನೂ ಶಿವಮೊಗ್ಗದಲ್ಲಿ ಆಚರಿಸಿಕೊಳ್ಳಬೇಕೆಂಬುದು ನನ್ನ ಹಾರೈಕೆ ಎಂದು ಹೇಳಿದರು.
ಆರ್.ಎಸ್.ಎಸ್. ಪ್ರಮುಖರಾದ ಪಟ್ಟಾಬಿರಾಮ್, ಸಚಿವ ಬೈರತಿ ಬಸವರಾಜ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಆರಗಜ್ಞೇನೇಂದ್ರ, ಆಯನೂರು ಮಂಜುನಾಥ್, ಹರತಾಳು ಹಾಲಪ್ಪ, ಅಶೋಕ್ ನಾಯ್ಕ, ಭಾರತೀ ಶೆಟ್ಟಿ, ಪ್ರಮುಖರಾದ ತಾರಾ ಅನುರಾಧ, ಜಗ್ಗೇಶ್, ಕೋಮಲ್, ಬಿ.ವೈ.ವಿಜಯೇಂದ್ರ, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಮೇಯರ್ ಸುವರ್ಣಶಂಕರ್, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್ ಸೇರಿದಂತೆ ಹಲವು ಸ್ಥಳೀಯ ಮುಖಂಡರು ವೇದಿಕೆಯಲ್ಲಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ನಿರ್ವಹಿಸಿದರು. ವಿಧಾನ ಪರಿಷತ್ ಸದಸ್ಯ ರುದ್ರೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಕಾರ್ಯಕ್ರಮದ ನಂತರ ಖ್ಯಾತ ಗಾಯಕರಾದ ವಿಜಯಪ್ರಕಾಶ್, ರಾಜೇಶ್ ಕೃಷ್ಣನ್ ತಂಡದಿಂದ ಭಾವಾಭಿನಂದನೆ ಸಂಗೀತ ಕಾರ್ಯಕ್ರಮ ನಡೆಯಿತು. ಖ್ಯಾತ ನಿರೂಪಕಿ ಅನುಶ್ರೀ ಅವರು ಒಟ್ಟು ಕಾರ್ಯಕ್ರಮವನ್ನು ನಿರೂಪಿಸಿದರು.