ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ದಕ್ಷಿಣ ಭಾರತದಲ್ಲಿ ವಿಸ್ತರಿಸಲು ಮಾ.20 ರಂದು ಶಿವಮೊಗ್ಗದಲ್ಲಿ ರೈತ ಮಹಾ ಪಂಚಾಯತ್ ಆಯೋಜಿಸಲಾಗಿದ್ದು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಜಿ ಶಾಸಕ ಮಧು ಬಂಗಾರಪ್ಪ ಕರೆ ನೀಡಿದರು.
ಸೊರಬ ಪಟ್ಟಣದ ಬಂಗಾರಧಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ದೇಶಕ್ಕೆ ಅನ್ನ ನೀಡುವ ರೈತ ಸಮೂಹದ ವಿರುದ್ಧ ಕರಾಳ ಮಸೂದೆ ಜಾರಿಗೊಳಿಸಿ ಕೃಷಿ ಉದ್ಯಮವನ್ನು ಬಂಡವಾಳಶಾಹಿಗಳಿಗೆ ಹಸ್ತಾಂತರಿಸಲು ಹುನ್ನಾರ ನಡೆಸಿದೆ. ರೈತರ ಹೆಸರಿನಲ್ಲಿ ಹಸಿರು ಶಾಲು ಹೊತ್ತು ಪ್ರಮಾಣ ವಚನ ಸ್ವೀಕರಿಸಿದ ಸರ್ಕಾರಗಳು ಅದೇ ರೈತ ವರ್ಗವನ್ನು ಶೋಷಣೆ ಮಾಡುತ್ತಿದೆ. ಕಾರ್ಮಿಕ, ಎಪಿಎಂಸಿ ಸೇರಿದಂತೆ ವಿವಿಧ ಮಸೂದೆಗಳನ್ನು ವಾಪಸು ಪಡೆಯುವಂತೆ ದೆಹಲಿಯಲ್ಲಿ 3 ತಿಂಗಳಿನಿಂದ ನಿರಂತರ ಹೋರಾಟ ಮಾಡುತ್ತಿರುವ ರೈತರ ಬಗ್ಗೆ ಕನಿಷ್ಠ ಸೌಜನ್ಯ ತೋರದೆ ಮಾತನಾಡಿಸುವ ಪ್ರಯತ್ನ ಮಾಡಿಲ್ಲ. ಇಂತಹ ರೈತ ಹಾಗೂ ಜನ ವಿರೋಧಿ ಸರ್ಕಾರದ ವಿರುದ್ದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ಸಮಾಜವಾದಿ ಹೋರಾಟದ ಶಕ್ತಿ ಕೇಂದ್ರವಾಗಿದ್ದು, ಶಾಂತವೇರಿ ಗೋಪಾಲಗೌಡ, ಕಡಿದಾಳು ಮಂಜಪ್ಪ, ಎಸ್.ಬಂಗಾರಪ್ಪ, ಜೆ.ಎಚ್.ಪಟೀಲ್, ಕಾಗೋಡು ತಿಮ್ಮಪ್ಪ, ರೈತ ಮುಖಂಡ ಸುಂದರೇಶ್ ಅವರಂತಹ ಧೀಮಂತ ನಾಯಕರ ಚಿಂತನೆಗೆ ನೀರೆರೆದು ಪೆÇೀಷಿಸಿದೆ. ರೈತರ ಪರವಾದ ಹೋರಾಟವನ್ನು ದಕ್ಷಿಣ ರಾಜ್ಯಗಳಲ್ಲಿ ತೀವ್ರಗೊಳಿಸಲು ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ವಿವಿಧ ಸಂಘ ಸಂಸ್ಥೆಗಳು, ನಾಯಕರುಗಳು ಪಕ್ಷಾತೀತವಾಗಿ ಬೆಂಬಲ ನೀಡಲಿದ್ದಾರೆ ಎಂದು ತಿಳಿಸಿದರು.
ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಲು ಪಕ್ಷಾತೀತವಾಗಿ ಹಮ್ಮಿಕೊಂಡಿರುವ ರೈತ ಮಹಾ ಪಂಚಾಯತ್ ದೆಹಲಿಯಲ್ಲಿ ಹೋರಾಟದ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕರಾದ ರಾಕೇಶ್ ಟಿಕಾಯತ್, ಡಾ.ದರ್ಶನ್ ಪಾಲ್, ಯದುವೀರ್ ಸಿಂಗ್ ಹಾಗೂ ಕಾಂಗ್ರೆಸ್ ವರಿಷ್ಠರು ಸೇರಿದಂತೆ ವಿವಿಧ ರಾಜ್ಯದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಜೆಡಿಎಸ್ ತೊರೆದು ಅಧಿಕೃತವಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರಿದ್ದೇನೆ. ತಂದೆ ಬಂಗಾರಪ್ಪ ಅವರಂತೆ ಬಡವರ ಪರ ಚಿಂತನೆ ಹೊಂದಿರುವ ನೀವು ಹೋರಾಟದ ಮನೋಭಾವವನ್ನು ಮುಂದುವರೆಸಿಕೊಂಡು ಹೋಗಿ ಎಂದು ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದಾರೆ. ಅದರಂತೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಬಡವರ ಪರವಾಗಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಸೊರಬ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಡಿ.ಬಿ.ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಆರ್.ಸಿ.ಪಾಟೀಲ್, ಜಿ.ಪಂ ಸದಸ್ಯರಾದ ತಾರಾ ಶಿವಾನಂದಪ್ಪ, ಶಿವಲಿಂಗೇಗೌಡ, ವಿರೇಶ್ ಕೊಟಗಿ, ಎಚ್.ಗಣಪತಿ, ಕೆ.ಪಿ.ರುದ್ರಗೌಡ, ಎಪಿಎಂಸಿ ಅಧ್ಯಕ್ಷ ಜೈಶೀಲಪ್ಪ, ನಿರ್ದೇಶಕ ರಾಜಶೇಖರ್ ಕುಪ್ಪಗಡ್ಡೆ, ತಾ.ಪಂ ಉಪಾಧ್ಯಕ್ಷ ಸುರೇಶ್ ಹಾವಣ್ಣವರ್, ಸದಸ್ಯ ನಾಗರಾಜ್ ಚಂದ್ರಗುತ್ತಿ, ಶಿಗ್ಗಾ ಗ್ರಾ.ಪಂ ಅಧ್ಯಕ್ಷ ಪ್ರಭಾಕರ್, ವಕ್ತಾರ ಎಂ.ಡಿ.ಶೇಖರ್ ಇತರರಿದ್ದರು.