ಸೊರಬದ ಇತಿಹಾಸ ಪ್ರಸಿದ್ಧ ಚಂದ್ರಗುತ್ತಿ ರೇಣಕಾಂಬ ಬ್ರಹ್ಮ ರಥೋತ್ಸವವು ಸೋಮವಾರ ಧಾರ್ಮಿಕ ವಿಧಿ-ವಿಧಾನಗಳಿಂದ ಸರಳವಾಗಿ ಜರುಗಿತು.
ಬ್ರಹ್ಮ ರಥೋತ್ಸವಕ್ಕೆ ಪುರೋಹಿತರ ಸಮ್ಮುಖದಲ್ಲಿ ಪರಿಹಾರ ದೇವತೆಗಳಿಗೆ ಅನ್ನ ಮತ್ತು ಸೊಪ್ಪಿನಿಂದ ಮಿಶ್ರಣ ಮಾಡಿದ ಆಹಾರವನ್ನು ಬಲಿ ಕೊಡುವುದರ ಮೂಲಕ ದೇವಿಯ ಪುರ ಮೆರವಣಿಗೆ ನಡೆಯಿತು. ಚಂದ್ರಗುತ್ತಿ ಸೇರಿದಂತೆ ಅಕ್ಕ-ಪಕ್ಕದ ಗ್ರಾಮದ ಸಾವಿರದಷ್ಟು ಭಕ್ತರು ಆಗಮಿಸಿ ಹರಕೆ ಸಲ್ಲಿಸಿದರು.
ಶಿವರಾತ್ರಿ ಕಳೆದು ಒಂಬತ್ತು ದಿನಕ್ಕೆ ಮಹಾರಥೋತ್ಸವ ಜರುಗುವುದು ವಿಶೇಷ. ಇಲ್ಲಿರುವ ಪರಶುರಾಮ, ಮಾತಂಗಿ ಅಮ್ಮ, ಕಾಲಭೈರವ, ಶೂಲದ ಭೀರಪ್ಪ, ದುರ್ಗಮ್ಮ, ಬನಶಂಕರಿ ಅಮ್ಮ ಸೇರಿದಂತೆ ಗ್ರಾಮ ದೇವರುಗಳನ್ನು ಅಲಂಕರಿಸಲಾಗಿತ್ತು.
ಪ್ರತೀ ವರುಷ ಶಿವಮೊಗ್ಗ, ಹಾವೇರಿ, ದಾವಣಗೆರಿ, ಚಿತ್ರದುರ್ಗ, ಚಿಕ್ಕಮಗಳೂರು, ಜಿಲ್ಲೆಯ ಲಕ್ಷಾಂತರ ಭಕ್ತರು ಆಗಮಿಸುವ ಮೂಲಕ ವಾರಗಟ್ಟಲೆ ವಿಜೃಂಭಣೆಯಿಂದ ಜಾತ್ರೆ ಜರುಗುತ್ತಿತ್ತು. ಕೋವಿಡ್ ನಿಯಂತ್ರಿಸುವ ಸಲುವಾಗಿ ಈ ವರುಷ ಹೆಚ್ಚು ಭಕ್ತರು ಸೇರಬಾರದು ಎಂದು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕು ಸೇರಿದಂತೆ ಹೊರ ಭಾಗದ ಭಕ್ತಾದಿಗಳಿಗೆ ಜಾತ್ರೆಗೆ ಆಗಮಿಸದಂತೆ ಸೊರಬ ರಸ್ತೆ, ಹರೀಶಿ ರಸ್ತೆ, ಸಿದ್ದಾಪುರ ರಸ್ತೆ, ತವನಂದಿ ರಸ್ತೆಗಳಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದ್ದು, ಆಗಮಿಸಿದ ಭಕ್ತರನ್ನು ವಾಪಾಸ್ ಕಳುಹಿಸಲಾಯಿತು. ಹಾಗೆಯೇ ಭಕ್ತರ ಆಗನವೂ ಕಡಿಮೆ ಇತ್ತು.
ರಥೋತ್ಸವಕ್ಕೆ ಸಾಗರ ಉಪವಿಭಾಗಾಧಿಕಾರಿ ಡಾ.ಎಲ್.ನಾಗರಾಜ ಹಾಗೂ ತಹಶೀಲ್ದಾರ್ ಶಿವಾನಂದ ಪಿ.ರಾಣೆ ಚಾಲನೆ ನೀಡಿದರು. ಜಿ.ಪಂ ಸದಸ್ಯೆ ರಾಜೇಶ್ವರಿ ಗಣಪತಿ, ತಾ.ಪಂ ಸದಸ್ಯ ನಾಗರಾಜ, ಗ್ರಾ.ಪಂ ಅಧ್ಯಕ್ಷ ರತ್ನಾಕರ್, ಸದಸ್ಯರಾದ ಪ್ರಸಾದ್, ಶ್ರೀಮತಿ ಚಂದ್ರಕಾಂತ್, ರಾಜಶೇಖರ್, ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಜಿ.ಪಂ ಮಾಜಿ ಸದಸ್ಯೆ ದೇವಕಿ ಪಾಣಿ ಸೇರಿದಂತೆ ಗ್ರಾಮಸ್ಥರು ಹಾಗೂ ಭಕ್ತರು ಪಾಲ್ಗೊಂಡಿದ್ದರು.
ಚಂದ್ರಗುತ್ತಿ ರೇಣುಕಾಂಬ ದೇವಿ ಜಾತ್ರೆಗೆ ತಾಲೂಕಿನ ಭಕ್ತ ಸಮೂಹಕ್ಕಾದರೂ ಅವಕಾಶ ಕಲ್ಪಿಸಬೇಕಿತ್ತು. ಕೋವಿಡ್ ನಿಯಂತ್ರಿಸುವ ನಿಮಿತ್ತ ಜನ ಸೇರಬಾರದು ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರಿಂದ ಪ್ರತೀ ವರುಷಕ್ಕೆ ಹೋಲಿಸಿಕೊಂಡರೆ ಈ ವರುಷದ ಚಂದ್ರಗುತ್ತಿ ರೇಣುಕಾಂಬ ಮಹಾ ರಥೋತ್ಸವ ನೀರಸವಾಗಿ ನಡೆಯಿತು. ದೇವಿಯ ದರ್ಶನಕ್ಕೆ ಅವಕಾಶವಿಲ್ಲದಿರುವುದರಿಂದ ಅಸಂಖ್ಯಾತ ಭಕ್ತರ ಭಾವನೆಗೆ ನಿರಾಶೆಯಾಯಿತು
ನಾಗರಾಜ್ ಚಂದ್ರಗುತ್ತಿ, ತಾ.ಪಂ ಸದಸ್ಯರು. ಚಂದ್ರಗುತ್ತಿ ಕ್ಷೇತ್ರ.