ಕೋವಿಡ್ ಸೋಂಕು ರಾಜ್ಯದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಮುಂಜಾಗ್ರತೆ, ಸುರಕ್ಷತೆ ಹಾಗೂ ಅದರ ನಿಯಂತ್ರಣ ಕ್ರಮವಾಗಿ ಗ್ರಾಮೀಣ ಕಾರ್ಯಪಡೆ ರಚಿಸಿ, ಸರ್ಕಾರ ಅಧಿಕೃತ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಶಿವಮೊಗ್ಗ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್ ಕುರಿತು ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಲೆಕ್ಕಾಧಿಕಾರಿ, ಬೀಟ್ ಪೊಲೀಸ್, ಗ್ರಾಮದ ಆರೋಗ್ಯ ಸಿಬ್ಬಂಧಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ನೋಂದಾಯಿತ ಸ್ಥಳೀಯ ವೈದ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನೊಳಗೊಂಡಂತೆ ಗ್ರಾಮ ಮಟ್ಟದ ಕಾರ್ಯಪಡೆ ಸಮಿತಿಯನ್ನು ರಚಿಸಲಾಗಿದೆ ಎಂದರು.
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಕಂದಾಯ ಗ್ರಾಮಗಳಲ್ಲಿ ಗ್ರಾಮ ಮಟ್ಟದ ಕಾರ್ಯಪಡೆ ಹಾಗೂ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಗ್ರಾಮಗಳಲ್ಲಿ ಗ್ರಾಮೀಣ ಕಾರ್ಯಪಡೆಯನ್ನು ರಚಿಸಲು ಸೂಚಿಸಲಾಗಿದೆ.ಈ ಸಮಿತಿಯು ಗ್ರಾಮೀಣ ಪ್ರದೇಶದಲ್ಲಿ ೬೫ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರ ಸಮೀಕ್ಷೆಯನ್ನು ಗ್ರಾಮ ಮಟ್ಟದಲಿ ಗುರುತಿಸಿ ನಿಯಮಿತವಾಗಿ ಇವರ ಆರೋಗ್ಯವನ್ನು ಗಮನಿಸಲಿದೆ. ಕೊರೋನ ವೈರಸ್‌ನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ, ಜಿಲ್ಲಾಡಳಿತದಿಂದ ಸೂಕ್ತ ಮಾರ್ಗದರ್ಶನ ಪಡೆಯಲಿದೆ ಎಂದರು.
ಗರ್ಭಿಣಿ, ಬಾಣಂತಿಯರನ್ನು ಮಹಿಳಾ ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಯಮಿತವಾಗಿ ಭೇಟಿ ನೀಡಿ, ಇವರುಗಳ ಆರೋಗ್ಯ ಮೇಲ್ವಿಚಾರಣೆ ಮಾಡಲಿದೆ ಮತ್ತು ಅಂಗನವಾಡಿ ಶಾಲೆಯ ಮಕ್ಕಳ ಆರೈಕೆ ಬಗ್ಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹೆಚ್ಚಿನ ಕಾಳಜಿ ವಹಿಸುವರು. ಮಹಿಳಾ ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ನಿಯಮಿತವಾಗಿ ತಮ್ಮ ವ್ಯಾಪ್ತಿಯಲ್ಲಿ ನಿರಂತರವಾಗಿ ನಿಗಾ ವಹಿಸಲಿದ್ದಾರೆ. ಕೆಮ್ಮು, ನೆಗಡಿ, ತಲೆನೋವು, ಜ್ವರ ಮತ್ತು ಗಂಟಲಲ್ಲಿ ಉರಿತ ಲಕ್ಷಣಗಳು ಕಾಣಿಸುವಂತಹ ಜನರನ್ನು ತಕ್ಷಣ ಗುರುತಿಸಿ, ಸಮೀಪದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕ್ರಮ ವಹಿಸಲು ಸೂಚಿಸಲಾಗಿದೆ ಎಂದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರವು ರಾಜ್ಯಕ್ಕೆ ನೀಡಲಾಗಿದ್ದ ೧೩ಕೋಟಿ ಮಾನವದಿನಗಳನ್ನು ಫೆಬ್ರವರಿ ಮಾಸಾಂತ್ಯಕ್ಕೆ ಪೂರ್ಣಗೊಳಿಸಿದ್ದೇವೆ. ಅಂತೆಯೇ ಹೆಚ್ಚಿನ ಮಾನವದಿನಗಳನ್ನು ಮಂಜೂರು ಮಾಡುವಂತೆ ಮಾಡಿದ ಮನವಿಗೆ ಮಾನ್ಯ ಪ್ರಧಾನ ಮಂತ್ರಿಗಳು ೧೫ಕೋಟಿ ಮಾನವದಿನಗಳನ್ನು ಮಂಜೂರು ಮಾಡಿ ಹೆಚ್ಚಿನ ಜನರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ಒದಗಿಸಿ, ಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದರು.