ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಕೊರೊನದಿಂದ ಮೃತರಾದವರ ಮಾಹಿತಿಯನ್ನು ಮುಚ್ಚಿಡಲಾಗುತ್ತದೆಯೇ ?, ಹೌದು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕೋವಿಡ್ ಅಂಕಿಸಂಖ್ಯೆ ಸುಳ್ಳು ಕೊಡುತ್ತಾರೆ ಎಂಬ ಹೇಳಿಕೆ ಬೆನ್ನಲ್ಲೇ ಶಿವಮೊಗ್ಗದಲ್ಲೂ ಹೀಗೆಯೇ ಆಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ.
ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಬುಧವಾರ 21 ಹಾಗೂ ಗುರುವಾರ 20 ಕೋವಿಡ್ ಸೋಂಕಿತರು ಅಸುನೀಗಿದ್ದಾರೆ. ಆದರೆ ಜಿಲ್ಲೆಯ ದಾಖಲಾತಿಯಲ್ಲಿ ಒಟ್ಟು 8 ಸಾವು ಎಂದು ತೋರಿಸಲಾಗಿದೆ ಎನ್ನಲಾಗಿದೆ. ಈ ಮಾಹಿತಿ ಆತಂಕಕಾರಿಯಾಗಿದ್ದು, ಇದಕ್ಕೆ ಪೂರಕವೆಂಬಂತೆ ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಬುಧವಾರ ಶಿವಮೊಗ್ಗಜಿಲ್ಲೆಯಲ್ಲಿ 457 ಸೋಂಕು ಪತ್ತೆಯಾಗಿದ್ದರೆ ಗುರುವಾರ 755 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಹೊರಜಿಲ್ಲೆಯವರ ಒತ್ತಡ
ಶಿವಮೊಗ್ಗ ಜಿಲ್ಲೆಗೆ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಹಾವೇರಿ ಜಿಲ್ಲೆಯಿಂದಲೂ ಹೆಚ್ಚು ಕೊರೊನ ರೋಗಿಗಳು ದಾಖಲಾಗುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ಚಿಕಿತ್ಸಾ ಸೌಲಭ್ಯ ದುರ್ಲಭವಾಗುವ ಸಾಧ್ಯತೆಗಳು ಬರಬಹುದು ಎಂಬ ಆತಂಕ ಮೂಡುತ್ತಿದೆ. ಅನ್ಯ ಜಿಲ್ಲೆಯವರು ಸ್ಥಳೀಯ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಮೂಲಕ ಶಿಫಾರಸು ಮಾಡಿಸುವ ಚಟುವಟಿಕೆಗಳೂ ನಡೆಯುತ್ತಿವೆ. ಪ್ರಭಾವ ಇದ್ದರೆ ತಕ್ಷಣ ಕೊರೊನ ಪರೀಕ್ಷೆ, ರೆಮಿಡಿಸಿವರ್ ಚುಚ್ಚುಮದ್ದು ದೊರೆಯುತ್ತದೆ. ಇತ್ತೀಚೆಗೆ ಪಕ್ಷವೊಂದರ ಅಧ್ಯಕ್ಷರಿಗೆ ಆಸ್ಪತ್ರೆ ಮೆಟ್ಟಿಲು ಹತ್ತಿದ ದಿನವೇ ಎಲ್ಲವೂ ಸಿಕ್ಕಿದೆ ಎನ್ನಲಾಗಿದೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡ್‍ಗೆ ಪ್ರಸ್ತುತ 30 ಐಸಿಯು ಬೆಡ್‍ಗಳು ಮಾತ್ರ ಲಭ್ಯಇದೆ. ಅಧಿಕಾರಿಗಳು 56 ಬೆಡ್‍ಗಳಿವೆ ಎಂದು ಹೇಳುತ್ತಿದ್ದಾರೂ, ತಕ್ಷಣಕ್ಕೆ ಆ ಸೌಲಭ್ಯ ಇಲ್ಲವಾಗಿದೆ. ಈ ನಡುವೆ ಸಿಬ್ಬಂದಿಗಳು ಕೊರತೆಯಿಂದ ಕೋವಿಡ್ ರೋಗಿಗಳನ್ನು ನೋಡಿಕೊಳ್ಳಲು ಕುಟುಂಬದವರಿಗೇ ಅವಕಾಶ ನೀಡುತ್ತಿದ್ದು, ಇದು ಸೋಂಕು ಹೆಚ್ಚಾಗಲು ಕಾರಣವಾಗುತ್ತಿದೆ ಎನ್ನಲಾಗಿದೆ. ನೆರೆ ಜಿಲ್ಲೆಯ ರೋಗಿಗಳಿಗೆ ಚಿಕಿತ್ಸೆ ಕೊಡಬಾರದು ಎಂದೇನೂ ಇಲ್ಲ ಆದರೆ ಸ್ಥಳೀಯ ಸಾಮಾನ್ಯ ಜನರಿಗೂ ಅದು ಧಕ್ಕಬೇಕಲ್ಲವೆ ?
ಶಿವಮೊಗ್ಗ ಜಿಲ್ಲೆಯಲ್ಲಿಕೋವಿಡ್‍ಗೆ ಗುಣಮಟ್ಟದ ಚಿಕಿತ್ಸೆ ಸಿಗುತ್ತಿದೆ. ಇಲ್ಲಿನ ಸಿಬ್ಬಂದಿ ಹಾಗೂ ಮೂಲಸೌಕರ್ಯಗಳಿಂದ ಅದು ಸಾಧ್ಯವಾಗುತ್ತಿದೆ. ಇಲ್ಲಿ ಗುಣಮುಖವಾಗುತ್ತಿರುವ ಪ್ರಕರಣಗಳು ಹೆಚ್ಚಿವೆ. ಈ ಕಾರಣದಿಂದ ಹೊರ ಜಿಲ್ಲೆಗಳಿಂದ ಸೋಂಕಿತರು ಬರುತ್ತಾರೆ. ಅವರನ್ನು ನಿರಾಕರಿಸಲು ಸಾಧ್ಯವಿಲ್ಲ. ಎಲ್ಲರ ಆರೋಗ್ಯವೂ ಇಲಾಖೆಗೆ ಮುಖ್ಯ. ಸ್ಥಳೀಯರಿಗೂ ತಾಲೂಕು ಕೇಂದ್ರ ಸೇರಿದಂತೆ ಎಲ್ಲೆಡೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.
ಡಾ.ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ,ಶಿವಮೊಗ್ಗ