Malenadu Mitra
ರಾಜ್ಯ ಶಿವಮೊಗ್ಗ

ಕುವೆಂಪು ವಿವಿ ಕುರ್ಚಿ ಜಗಳ ಪೊಲೀಸ್ ಠಾಣೆಗೆ ಕುಲಪತಿ-ಕುಲಸಚಿವರಲ್ಲಿ ಒಮ್ಮತ ಇಲ್ಲದಿದ್ದರೆ ಹೇಗೆ ?

ವಿದ್ಯಾದೇಗುಲ ಜ್ಞಾನ ಸಹ್ಯಾದ್ರಿಯಲ್ಲಿ ಇದೆಂತಹ ಅಪಸವ್ಯ !. ವಿಶ್ವವಿದ್ಯಾನಿಲಯ ಎಂದರೆ ಅದೊಂದು ಜ್ಞಾನ ದೇಗುಲವೇ ಸರಿ. ಅದರಲ್ಲೂ ವಿಶ್ವಮಾನವ ಕುವೆಂಪು ನಾಮಾಂಕಿತ ವಿವಿಯಲ್ಲಿ ಕುಲಪತಿ ಮತ್ತು ಕುಲಸಚಿವರ ನಡುವಿನ ಒಳಬೇಗುದಿ ಕುಲಸಚಿವರ ಕಚೇರಿಯ ಬೀಗ ಒಡೆಯುವ ತನಕ ಅದನ್ನು ಪ್ರಶ್ನಿಸಿ ಖುದ್ದು ಕುಲಪತಿಗಳು ಪೊಲೀಸ್ ಠಾಣೆಗೆ ದೂರು ನೀಡುವ ಮಟ್ಟಕ್ಕೆ ಹೋಗಿರುವುದು ಸುಸಂಸ್ಕೃತ ನಾಡು ಶಿವಮೊಗ್ಗದ ಮಟ್ಟಿಗೆ ತೀರಾ ತಲೆತಗ್ಗಿಸುವ ಸಂಗತಿಯಾಗಿದೆ.
ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಮತ್ತು ಆಡಳಿತಾಂಗದ ಕುಲಸಚಿವರ ನಡುವಿನ ಭಿನ್ನಮತ ಕುಲಸಚಿವರ ವರ್ಗಾವಣೆ ಮತ್ತು ಮರುದಿನವೇ ಆ ಆದೇಶದ ರದ್ದತಿಯಾಗಿರುವುದು ಗೊತ್ತಿರುವ ಸಂಗತಿ. ಈ ಬೆಳವಣಿಗೆ ಬರೀ ವಿವಿ ಅಧಿಕಾರಿಗಳ ಯಡವಟ್ಟು ಮಾತ್ರವಲ್ಲದೆ, ಅವರಿಗೆ ಬೆಂಗಾವಲಾಗಿ ನಿಂತಿರುವ ಜನಪ್ರತಿನಿಧಿಗಳದ್ದೂ ಆಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಕುಲಸಚಿವ ಹುದ್ದೆಗೆ ಸಿ.ಎನ್.ಶ್ರೀಧರ್ ಅವರನ್ನು ವರ್ಗಾವಣೆ ಮಾಡಿದ್ದ ಆದೇಶವನ್ನು ಸರಕಾರ ರದ್ದು ಮಾಡಿರುವುದರ ಬೆನ್ನಿಗೇ ಬುಧವಾರ ಕಚೇರಿಗೆ ಬಂದಿದ್ದ ಕುಲಸಚಿವ ಪ್ರೊ.ಎಸ್.ಎಸ್. ಪಾಟೀಲ್ ಅವರು ಈಗಾಗಲೇ ಅಧಿಕಾರ ವಹಿಸಿಕೊಂಡಿದ್ದ ಶ್ರೀಧರ್ ಅವರು ಇಲ್ಲದಿರುವಾಗ ಕಚೇರಿಯ ಬೀಗ ಮುರಿದು ಎಂದಿನಂತೆ ಕರ್ತವ್ಯ ನಿರ್ವಹಣೆಗೆ ಮುಂದಾಗಿದ್ದಾರೆ. ಸರಕಾರ ವರ್ಗಾವಣೆ ಆದೇಶ ರದ್ದು ಮಾಡಿದ್ದರಿಂದ ತಾವು ಅಧಿಕಾರ ಹಸ್ತಾಂತರ ಮಾಡಿಲ್ಲದಿದ್ದರೂ, ಶ್ರೀಧರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಇದಕ್ಕೆ ವಿವಿಯಲ್ಲಿನ ಕೆಲವರ ಕುಮ್ಮಕ್ಕು ಇದೆ ಎಂಬ ಆರೋಪ ಮಾಡಿದ್ದಾರೆ.

ಪೊಲೀಸರಿಗೆ ದೂರು

ತಮ್ಮ ಸ್ಥಾನಕ್ಕೆ ಶ್ರೀಧರ್ ಅವರನ್ನು ನೇಮಕ ಮಾಡಿರುವ ಆದೇಶ ರದ್ದಾಗಿದ್ದರಿಂದ ಎಂದಿನಂತೆ ಕಚೇರಿಗೆ ಬಂದಿದ್ದ ಪಾಟಿಲ್ ಅವರು ತಮ್ಮ ಕಚೇರಿಗೆ ಲಾಕ್ ಅಗಿರುವುದನ್ನು ಗಮನಿಸಿ ಸಹಾಯಕರಿಂದ ಬೀಗ ಮುರಿಸಿ ಒಳ ಪ್ರವೇಶಿಸಿದ್ದಾರೆ. ವಿವಿಯಲ್ಲಿ ಈ ರೀತಿಯ ಪ್ರಕರಣ ನಡೆದಿರುವುದು ತರವಲ್ಲ. ಪಾಟೀಲ್ ಅವರು ಕಾನೂನು ಬಾಹಿರವಾಗಿ ಕುರ್ಚಿಯ ಮೇಲೆ ಕೂತಿದ್ದಾರೆ. ಕಚೇರಿ ಬೀಗ ಮುರಿಸಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿಸಿ ಕಚೇರಿಯಿಂದ ಭದ್ರಾವತಿ ಗ್ರಾಮಾಂತರ ಪೊಲೀಸರಿಗೆ ಬುಧವಾರ ದೂರು ಸಲ್ಲಿಸಲಾಗಿದೆ. ಇದಕ್ಕೆ ಪ್ರತಿ ದೂರು ಸಲ್ಲಿಸಿರುವ ಪಾಟೀಲ್ ಅವರು ಅಧಿಕಾರದ ಹೊಣೆಯನ್ನೇ ವಹಿಸಿಕೊಟ್ಟಿಲ್ಲ ಹಾಗಿದ್ದರೂ ಬೇರೊಬ್ಬರಿಗೆ ನನ್ನ ಅನುಪಸ್ಥಿತಿಯಲ್ಲಿ ಕಚೇರಿಗೆ ಪ್ರವೇಶ ಕಲ್ಪಿಸಲಾಗಿದೆ. ಕುಲಪತಿ ವೀರಭದ್ರಪ್ಪ ಅವರು ಕಿರುಕುಳ ನೀಡುತ್ತಿದ್ದಾರೆ ಅವರ ವಿರುದ್ಧವೇ ಕ್ರಮ ಕೈಗೊಳ್ಳಬೇಕೆಂದು ದೂರಿದ್ದಾರೆ.

ಶೈಕ್ಷಣಿಕ ಚಟುವಟಿಕೆ, ಸಂಶೋಧನೆ ಹಾಗೂ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗನ್ನು ತಯಾರು ಮಾಡುವ ದೂರದೃಷ್ಟಿಯುಳ್ಳವರು ಅಧಿಕಾರ ನಡೆಸುವ ಜಾಗದಲ್ಲಿ ನಡೆಯುತ್ತಿರುವ ಕುರ್ಚಿ ಜಗಳ ನಿಜಕ್ಕೂ ಅಸಹ್ಯ ಹುಟ್ಟಿಸುತ್ತಿದೆ. ಎತ್ತು ಏರಿಗೆ,ಕೋಣ ನೀರಿಗೆ ಎಂಬಂತೆ ಒಂದಾಗಿ ವಿವಿಯ ಶ್ರೇಯಸ್ಸಿಗೆ ಮತ್ತು ಉತ್ತಮ ಶ್ರೇಯಾಂಕಕ್ಕೆ ಕೆಲಸ ಮಾಡಬೇಕಾದ ಕುಲಪತಿ ಮತ್ತು ಕುಲಸಚಿವರ ಜಗಳ ಇಲ್ಲಿಗೇ ನಿಲ್ಲಬೇಕಾಗಿದೆ. ತೆರೆಮರೆಯಲ್ಲಿ ನಿಂತು ಈ ಇಬ್ಬರಿಗೂ ಸಾಥ್ ನೀಡುವ ಜನಪ್ರತಿನಿಧಿಗಳು ಈ ಬಗ್ಗೆ ಚಿಂತಿಸಬೇಕಾದ ಅಗತ್ಯವಿದೆ.

Ad Widget

Related posts

ಸಂಶೋಧಕ ಹೆಚ್.ಖಂಡೋಬರಾವ್ ಆತ್ಮೀಯ ಸನ್ಮಾನ

Malenadu Mirror Desk

ಮತ್ತೆ ಕಾಂಗ್ರೆಸ್‌ಗೆ ಬಂದ ಆಯನೂರು ಮಂಜುನಾಥ್, ಇದು ಕೊನೇ ಸ್ಟಾಪ್ ಎಂದ ಮಾಜಿ ಸಂಸದ

Malenadu Mirror Desk

ಈಶ್ವರಪ್ಪ ಬಂಡಾಯದ ಹಿಂದಿನ ಬಯಕೆಯಾದರೂ ಏನು ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.