Malenadu Mitra
ಶಿವಮೊಗ್ಗ

ಕೋವಿಡ್ ನಿಯಮಾನುಸಾರ ಅಭಿವೃದ್ಧಿ ಕಾಮಗಾರಿ: ಡಿ.ಸಿ

ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ತ್ವರಿತಗತಿಯಲ್ಲಿ ಅನುಷ್ಟಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಮೆಗಾ ಯೋಜನೆಗಳ ಅನುಷ್ಟಾನದ ಪ್ರಗತಿ ಪರಿಶೀಲನೆ ನಡೆಸಿದರು.

ಕರೋನಾ ಕಾರಣದಿಂದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಹಿನ್ನಡೆಯಾಗದಂತೆ ಎಚ್ಚರಿಕೆ ವಹಿಸಬೇಕು. ಇದೇ ವೇಳೆ ಕಾಮಗಾರಿಗಳ ನಿರ್ವಹಣೆ ಕುರಿತಾಗಿ ಸರ್ಕಾರ ಹೊರಡಿಸಿರುವ ಕರೋನಾ ಮಾರ್ಗಸೂಚಿಯನ್ನು ಸಹ ಕಟ್ಟುನಿಟ್ಟಿನಿಂದ ಪಾಲಿಸಿ, ನಿಗದಿತ ಅವಧಿಯ ಒಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.

ನಗರದ ಹೊರವಲಯದ ಸೋಗಾನೆಯಲ್ಲಿ ಕೈಗೊಳ್ಳಲಾಗಿರುವ ವಿಮಾನ ನಿಲ್ದಾಣ ಕಾಮಗಾರಿ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು. ರನ್‍ವೇ, ಸಂಪರ್ಕ ರಸ್ತೆ, ಕಂಪೌಂಡ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಕ್ಕಮಹಾದೇವಿಯ ಜನ್ಮಸ್ಥಳವಾದ ಶಿಕಾರಿಪುರ ತಾಲೂಕಿನ ಉಡುಗಣಿಯಲ್ಲಿ 14.80 ಕೋಟಿ ರೂ. ವೆಚ್ಚದಲ್ಲಿ ಬೋಟಿಂಗ್ ಸೇರಿದಂತೆ ಸಿವಿಲ್ ಕ್ರಾಫ್ಟ್ ಕಾಮಗಾರಿಗಳು ನಡೆಯುತ್ತಿವೆ. ಇದೇ ರೀತಿ ಪ್ರವಾಸೋದ್ಯಮ ಮತ್ತು ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಒಟ್ಟು 8 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಆಂಪಿ ಥಿಯೇಟರ್, ಪ್ರವೇಶ ದ್ವಾರ ಇತ್ಯಾದಿ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಲು ಅವರು ಸೂಚಿಸಿದರು.

ಶಿವಮೊಗ್ಗ ನಗರದಲ್ಲಿ ಹೊಸ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ 45 ಕೋಟಿ ರೂ. ಕಾಯ್ದಿರಿಸಲಾಗಿದೆ. ರೈಲ್ವೇ ಕಂಪೌಂಡ್‍ನಲ್ಲಿನ 100 ಅಡಿ ವರ್ತುಲ ರಸ್ತೆ ಕಾಮಗಾರಿ 9 ಕೋಟಿ ರೂ. ವೆಚ್ಚದಲ್ಲಿ ಬಹುತೇಕ ಪೂರ್ಣಗೊಂಡಿದೆ. ತುಮಕೂರು-ಶಿವಮೊಗ್ಗ ಚತುಷ್ಪಥ ರಸ್ತೆ ಕಾಮಗಾರಿ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಈಗಾಗಲೇ 300ಕೋಟಿ ರೂ. ಜಮೀನು ಮಾಲಿಕರಿಗೆ ನೀಡಲಾಗಿದೆ. ಇನ್ನು ಹೆಚ್ಚುವರಿಯಾಗಿ 765 ಕೋಟಿ ರೂ. ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

423 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಿಗಂದೂರು ಸೇತುವೆ ಕಾಮಗಾರಿ 2022ರ ಡಿಸೆಂಬರ್‍ನಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಶಿವಮೊಗ್ಗ ನಗರಕ್ಕೆ 24/7 ನಿರಂತರ ನೀರು ಸರಬರಾಜು ಯೋಜನೆ, ಚಿತ್ರದುರ್ಗ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಬಾಕಿ ಉಳಿಕೆ ಕಾಮಗಾರಿ, ಶಿವಮೊಗ್ಗ ವಿದ್ಯಾನಗರ ಬಳಿ ರೈಲ್ವೇ ಮೇಲ್ಸೇತುವೆ, ಭದ್ರಾವತಿಯಲ್ಲಿ ರೈಲ್ವೇ ಮೇಲ್ಸೇತುವೆ, ಶಿವಮೊಗ್ಗ-ಕುಂಸಿ ರಸ್ತೆ ಮೇಲ್ಸೇತುವೆ, ಶಿವಮೊಗ್ಗ ನಗರದ ಬೈಪಾಸ್ ರಸ್ತೆಯ ತುಂಗಾ ನದಿಯ ಪಕ್ಕದಲ್ಲಿ ಮತ್ತೊಂದು ಸೇತುವೆ ನಿರ್ಮಾಣ, ತೀರ್ಥಹಳ್ಳಿಯಿಂದ ಶೃಂಗೇರಿವರೆಗಿನ 50ಕಿಮೀ ಉದ್ದದ ದ್ವಿಪಥ ರಸ್ತೆ ನಿರ್ಮಾಣ, ತೀರ್ಥಹಳ್ಳಿ ಪಟ್ಟಣದಲ್ಲಿ ಸೇತುವೆ ನಿರ್ಮಾಣ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ ಯೋಜನೆ, ಶಿವಮೊಗ್ಗ ಹಳೆ ಜೈಲು ಆವರಣದಲ್ಲಿ ಫ್ರೀಡಂ ಪಾರ್ಕ್ ಅಭಿವೃದ್ಧಿ, ಸೊರಬ ಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ದಂಡಾವತಿ ಸೇತುವೆವರೆಗೆ ರಸ್ತೆ ಅಗಲೀಕರಣ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆ, ಕೋಟೆ ಗಂಗೂರು ರೈಲ್ವೇ ಟರ್ಮಿನಲ್ ನಿರ್ಮಾಣ ಕಾಮಗಾರಿಗಳ ಅನುಷ್ಟಾನದ ಪ್ರಗತಿಯನ್ನು ಜಿಲ್ಲಾಧಿಕಾರಿ ಅವರು ಪರಿಶೀಲಿಸಿದರು.

ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Ad Widget

Related posts

ಕೊರೋನಾ ಓಡಿಸುವಲ್ಲಿ ಮೋದಿ ಅವರು ಯಶಸ್ವಿಯಾಗಿದ್ದಾರೆ: ಕೆ.ಎಸ್. ಈಶ್ವರಪ್ಪ

Malenadu Mirror Desk

ವೀರಶೈವ ಸಮಾಜಕ್ಕೆ ಕಾಂಗ್ರೆಸ್ ನಿಂದ ದ್ರೋಹ: ಈಶ್ವರಪ್ಪ

Malenadu Mirror Desk

ಸಾಲದಹೊರೆಯಿಂದಾಗಿ ದಂಪತಿ ನೇಣಿಗೆ ಶರಣು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.