ಮಕ್ಕಳೊಂದಿಗೆ ಆಡುತ್ತ ಖುಷಿಯಾಗಿದ್ದ ಬಾಲಕನಿಗೆ ಆಡುವ ಜೋಕಾಲಿಯೇ ಕೊರಳ ಕೊಯ್ವ ಕುಣಿಕೆಯಾದ ಹೃದಯ ವಿದ್ರಾವಕ ಘಟನೆ ಶಿವಮೊಗ್ಗ ತಾಲೂಕು ಹಾಡೋನ ಹಳ್ಳಿಯಲ್ಲಿ ನಡೆದಿದೆ.
ಎಂಟನೇ ತರಗತಿ ಓದುತ್ತಿದ್ದ ಕಿಶೋರ್ (13) ಮೃತ ದುರ್ದೈವಿ ಬಾಲಕ. ಹಾಡೋನಹಳ್ಳಿಯ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಅಲ್ಲಿನ ಶ್ರೀ ವೆಂಕಟೇಶ್ವರ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತಿದ್ದ. ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಸೀರೆಯಲ್ಲಿ ಮಾಡಿಕೊಂಡಿದ್ದ ಜೋಕಾಲಿಯಲ್ಲಿ ಆಟ ಆಡುತ್ತಿದ್ದು,ಆಡುವ ರಭಸದಲ್ಲಿ ಸೀರೆ ಕಿಶೋರ್‍ನ ಕುತ್ತಿಗೆಗೆ ಕುಣಿಕೆಯಾಗಿ ಸುತ್ತಿಕೊಂಡಿದೆ. ಪಟ್ಟು ಬಿಗಿಯಾಗಿದ್ದರಿಂದ ಆತ ಕ್ಷಣಾರ್ಧದಲ್ಲಿ ಉಸಿರು ಚೆಲ್ಲಿದ್ದಾನೆ.
ಮೂಲತಃ ಹೊನ್ನಾಳಿ ತಾಲೂಕು ದೊಡ್ಡೇರಿ ಗ್ರಾಮದವನಾದ ಕಿಶೋರ್ ಎರಡು ವರ್ಷಗಳಿಂದ ಹಾಡೋನಹಳ್ಳಿಯಲ್ಲಿಯೇ ಇದ್ದ. ಆಡುವ ಕಂದನ ದುರಂತ ಸಾವಿಗೆ ಗ್ರಾಮಸ್ಥರು, ಬಂಧುಗಳು ಹಾಗೂ ಸಹಪಾಠಿಗಳ ರೋದನೆ ಹೃದಯ ಕಲಕುವಂತಿತ್ತು. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
previous post