Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಸಿಗಂದೂರು ದೇಗುಲ ಮುಜರಾಯಿಗೆ ಬೇಡ: ಈಡಿಗರ ಸಂಘದಿಂದ ಕೋಟ ಶ್ರೀನಿವಾಸ ಪೂಜಾರಿಗೆ ಮನವಿ

ರಾಜ್ಯದ ಪ್ರಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರ ಸಿಗಂದೂರು ಚೌಡೇಶ್ವರಿ ದೇಗುಲವನ್ನು ಯಾವುದೇ ಕಾರಣಕ್ಕೂ ಮುಜರಾಯಿ ಇಲಾಖೆಗೆ ಸೇರಿಸಬಾರದೆಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಂಘ ಮನವಿ ಮಾಡಿದೆ.
ಶಿವಮೊಗ್ಗದಲ್ಲಿ ಸಚಿವರನ್ನು ಭೇಟಿ ಮಾಡಿದ ಸಂಘದ ಪ್ರಮುಖರು, ಹಿಂದುಳಿದವರು ಹಾಗೂ ಈಡಿಗರ ಆರಾಧ್ಯದೇವಿಯಾದ ಚೌಡೇಶ್ವರಿ ದೇಗುಲವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕೆಂಬ ಹುನ್ನಾರ ನಡೆಯುತ್ತಿದ್ದು, ಇದನ್ನು ಈಡಿಗ ಸಮುದಾಯ ಖಂಡಿಸುತ್ತದೆ. ನಮ್ಮ ಸಮುದಾಯದ ಧಾರ್ಮಿಕ ಅಸ್ಮಿತೆಯಾದ ದೇಗುಲದ ಆಡಳಿತವು ಧರ್ಮದರ್ಶಿ ಡಾ.ರಾಮಪ್ಪ ಅವರ ನೇತೃತ್ವದಲ್ಲಿ ಉತ್ತಮವಾಗಿ ನಡೆಯುತ್ತಿದೆ. ಈಡಿಗರ ಕುಲದೇವತೆಯಾದ ದೇವಸ್ಥಾನದ ಜಾಗಕ್ಕೆ ಸಂಬಂಧಪಟ್ಟ ವಿವಾದ ನ್ಯಾಯಾಲಯದಲ್ಲಿದೆ.ಈ ಪ್ರಕರಣದಲ್ಲಿ ಮುಜರಾಯಿ ಇಲಾಖೆಯೂ ಒಂದು ಪಾರ್ಟಿಯಾಗಿರುತ್ತದೆ. ಆದರೆ ಈ ಹಂತದಲ್ಲಿ ಮುಜರಾಯಿ ಇಲಾಖೆ ಮೇಲೆ ಕೆಲವರು ಒತ್ತಡ ಹೇರಿ ಮುಜರಾಯಿ ಆಯುಕ್ತರ ಮೂಲಕ ದೇವಸ್ಥಾನವನ್ನು ಸರಕಾರದ ವಶಕ್ಕೆ ಪಡೆಯುವ ಯತ್ನ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ.
ಸಮಾಜವನ್ನು ಪ್ರತಿನಿಧಿಸುವ ಶ್ರೀನಿವಾಸ ಪೂಜಾರಿ ಅವರು ಸಚಿವರಾಗಿರುವ ಇಲಾಖೆಯಲ್ಲಿಯೇ ದೇವಸ್ಥಾನದ ವಿಚಾರದಲ್ಲಿ ಈಡಿಗ ಸಮುದಾಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆಯಾದ ಶಿವಮೊಗ್ಗದಲ್ಲಿ ಬಹುಸಂಖ್ಯಾತರಾದ ಈಡಿಗರಿಗೆ ಅನ್ಯಾಯವಾಗುವುತ್ತಿರುವುದು ಸರಿಯಲ್ಲ. ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳು ಸರಿಯಾಗಿ ನಿರ್ವಹಣೆ ಆಗದ ಇಂತಹ ಸಮಯದಲ್ಲಿ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಸರಕಾರ ಹಸ್ತಕ್ಷೇಪ ಮಾಡಬಾರದು ಎಂದು ಸಚಿವರಿಗೆ ಮನವಿ ಮಾಡಲಾಯಿತು.
ಮನವಿ ಸ್ವೀಕರಿಸಿದ ಪೂಜಾರಿ ಅವರು, ಪ್ರಕರಣ ನ್ಯಾಯಾಲಯದಲ್ಲಿದೆ. ಈ ಹಂತದಲ್ಲಿ ಇಲಾಖೆ ನ್ಯಾಯಾಲಯದ ಆದೇಶದಂತೆ ನಡೆಯಬೇಕಾಗುತ್ತದೆ. ದೇವಸ್ಥಾನ ಸಮುದಾಯದ ಆಡಳಿತದಲ್ಲಿಯೇ ಇರಬೇಕೆಂಬ ಬಯಕೆ ನನ್ನದು. ಸಮಾಜದ ಪ್ರಮುಖರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ವಿಷಯದ ಬಗ್ಗೆ ಮನವಿ ಸಲ್ಲಿಸಿ ಮತ್ತು ನ್ಯಾಯಾಲಯಕ್ಕೆ ಅಗತ್ಯವಿರುವ ದಾಖಲೆ ನೀಡಿ, ದೇವಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ಮಾಡಿ ಎಂದು ಸಲಹೆ ನೀಡಿದರು.
ಈ ಸಂದರ್ಭ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಆರ್.ಶ್ರೀಧರ್ ಹುಲ್ತಿಕೊಪ್ಪ, ಕಾರ್ಯದರ್ಶಿ ಎಸ್.ಸಿ.ರಾಮಚಂದ್ರ, ಪದಾಧಿಕಾರಿಗಳಾದ ಜಿ.ಡಿ.ಮಂಜುನಾಥ್, ಸುರೇಶ್ ಕೆ.ಬಾಳೇಗುಂಡಿ, ಮಹೇಶ್, ಸುಧಾಕರ್ ಶೆಟ್ಟಿಹಳ್ಳಿ, ಬಸವರಾಜ್ ಮತ್ತಿತರರಿದ್ದರು.

Ad Widget

Related posts

ಕಿಮ್ಮನೆ ಜಯರಾಂ ಮನೆ ಮೇಲೆ ಐಟಿ ದಾಳಿ

Malenadu Mirror Desk

ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿಂದ 3 ಹೊಸ ಶಾಖೆ ಆರಂಭ

Malenadu Mirror Desk

ಶಿವಮೊಗ್ಗದಲ್ಲಿ ಉಪನ್ಯಾಸಕರ ಸಂಘದಿಂದ ಶೈಕ್ಷಣಿಕ ಸಮ್ಮೇಳನ
ರಾಷ್ಟ್ರೀಯ ಶಿಕ್ಷಣ ನೀತಿ, ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಚರ್ಚೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.