ಮಲೆನಾಡೀಗ ಸಂಪೂರ್ಣ ಮಳೆನಾಡಾಗಿದ್ದು, ನಿರಂತರ ವರ್ಷಧಾರೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತಿದ್ದು, ನದಿಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ. ಶಕ್ತಿನದಿ ಶರಾವತಿ ಕಣಿವೆ ಪ್ರದೇಶದಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯಕ್ಕೆ 1800 ಅಡಿ ನೀರು ಬಂದಿದ್ದು, 242000 ಕ್ಯೂಸೆಕ್‍ಗೂ ಅಧಿಕ ಒಳಹರಿವಿದೆ.
ಜಲಾಶಯದ ಗರಿಷ್ಠ ಮಟ್ಟ 1819 ಅಡಿಯಾಗಿದ್ದು, ಕಳೆದ 24 ತಾಸುಗಳಲ್ಲಿ ಜಲಾನಯನ ಪ್ರದೇಶದಲ್ಲಿ 140 ಮಿಲಿಮೀಟರ್ ಮಳೆಯಾಗಿದೆ.
ಭದ್ರಾನದಿ ಮೈದುಂಬಿ ಹರಿಯುತ್ತಿದ್ದು, ಭದ್ರಾ ಡ್ಯಾಂಗೆ 39286 ಕ್ಯೂಸೆಕ್ ಒಳಹರಿವಿದ್ದು, ಒಂದೇ ದಿನದಲ್ಲಿ 3 ಅಡಿ ನೀರು ತುಂಬಿದ್ದು, ಡ್ಯಾಮಿನ ನೀರಿನ ಮಟ್ಟ 171.1 ಅಡಿಗೆ ತಲುಪಿದೆ. ಭದ್ರಾ ನದಿ ನಾಲೆಗಳಿಗೆ ನೀರು ಹರಿಸುವ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ನಾಲಾ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಇರುವ ಕಾರಣ ಕಾಡಾ ಈ ನಿರ್ಧಾರ ಕೈಗೊಂಡಿದೆ.
ಚಿಕ್ಕಮಗಳೂರು ಜಿಲ್ಲೆ ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ತುಂಗಾ ಜಲಾಶಯಕ್ಕೆ 65000 ಕ್ಯೂಸೆಕ್ ಒಳಹರಿವಿದ್ದು, ಡ್ಯಾಮಿನ ಎಲ್ಲ ಗೇಟ್‍ಗಳನ್ನು ತೆರೆದಿರುವುದರಿಂದ ಬಂದ ನೀರು ಹಾಗೆಯೇ ಹೊಳೆಗೆ ಹರಿಯುತ್ತಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಆಸ್ತಿಪಾಸ್ತಿ ಹಾನಿ
ಮಲೆನಾಡಿನಾದ್ಯಂತ ನಿರಂತರ ವರ್ಷಧಾರೆಯಿಂದ ಕೃಷಿ ಮೇಲೆ ಹಲವೆಡೆ ಪ್ರತಿಕೂಲ ಪರಿಣಾಮಗಳಾಗಿವೆ. ಸಾಗರ, ಸೊರಬ, ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನಾದ್ಯಂತ ತಗ್ಗು ಪ್ರದೇಶದಲ್ಲಿರುವ ಕೃಷಿ ಭೂಮಿ ಜಲಾವೃತವಾಗಿದ್ದು, ಸಸಿಮಡಿಗಳು ಹಾಗೂ ಬಿತ್ತನೆಮಾಡಿದ ಗದ್ದೆಗಳು ನೀರಿನಿಂದ ತುಂಬಿಹೋಗಿದ್ದು, ಕೆಲ ಭಾಗಗಳಲ್ಲಿ ಕೊಚ್ಚಿ ಹೋಗಿವೆ. ಅದೇ ರೀತಿ ಅಡಕೆ ತೋಟ ಮತ್ತು ಶುಂಠಿ ಹೊಲಗಳಿಗೆ ಕೆಲವೆಡೆ ನೀರು ತುಂಬಿಹೋಗಿವೆ. ಸಾಗರ ತಾಲೂಕು ಬೀಸನಗದ್ದೆಯಲ್ಲಿ ವರ್ಷದಂತೆ ಈ ವರ್ಷವೂ ಕೃಷಿ ಭೂಮಿ ಜಲಾವೃತವಾಗಿದೆ.
ಈ ನಡುವೆ ಹೊಸನಗರ ತಾಲೂಕು ಪುಣಜೆಮನೆ ಗ್ರಾಮದಲ್ಲಿ ಮನೆಯೊಂದು ಮಳೆಯಿಂದ ಕುಸಿದುಬಿದ್ದ ವರದಿಯಾಗಿದೆ.