ಶಿವಮೊಗ್ಗದಲ್ಲಿ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ನಡೆಸುತ್ತಿದ್ದ ಅತೀವೃಷ್ಟಿ ಮತ್ತು ಕೋವಿಡ್ ಕುರಿತಾದ ಸಭೆಯಲ್ಲಿ ಆಯನೂರು ಮಂಜುನಾಥ್ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಆಡಳಿತ ಪಕ್ಷದ ಮೇಲ್ಮನೆ ಸದಸ್ಯ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ ಹಾಗೂ ಕಾಂಗ್ರೆಸ್‍ನ ಆರ್.ಪ್ರಸನ್ನಕುಮಾರ್ ಉಸ್ತುವಾರಿ ಸಚಿವರ ಎದುರೇ ಪ್ರತಿಭಟನೆ ವ್ಯಕ್ತಮಾಡಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ವಿರುದ್ಧ ಹರಿಹಾಯ್ದರು. ಜಿಲ್ಲೆಯಲಿ ನಡೆಯುವ ತಾಲೂಕು, ನಗರ ಹಾಗೂ ಜಿಲ್ಲಾ ಮಟ್ಟದ ಪ್ರಗತಿಪರಿಶೀಲನಾ ಸಭೆಗೆ ತಮ್ಮನ್ನು ಆಹ್ವಾನಿಸುವುದೇ ಇಲ್ಲ. ಯಾರನ್ನೋ ಕೇಳಿಕೊಂಡು ನಾವು ಸಭೆಗೆ ಹೋಗಬೇಕು. ಇದು ಜನಪ್ರತಿನಿಧಿಗಳಿಗೆ ಮಾಡುವ ಅವಮಾನ ಎಂದು ಆಯನೂರು ಮಂಜುನಾಥ್ ಕಿಡಿಕಾರಿದರು.
ವಿಧಾನ ಸಭೆ ಸದಸ್ಯರ ಚೇಲಾಗಿರಿ ಮಾಡುವ ಅಧಿಕಾರಿಗಳು ಪರಿಷತ್ ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ.ಕನಿಷ್ಟ ಪಕ್ಷ ಸಭೆಯ ಮಾಹಿತಿ ನೀಡಿ ಸಭೆಗೆ ಕರೆಯುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು. ಸಚಿವ ಈಶ್ವರಪ್ಪ ಅವರು, ನಿಮ್ಮ ಆಕ್ರೋಶದ ಅರಿವಾಗಿದೆ.ಇನ್ನು ಮುಂದೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಸಮಜಾಯಿಸಿ ನೀಡಿದ ಬಳಿಕ ಮೂವರೂ ಸದಸ್ಯರು ಆಸೀನರಾದರು.
ಕಾಕತಾಳೀಯವೇ ?
ವಿಧಾನ ಪರಿಷತ್ ಸದಸ್ಯರಿಗೆ ಸರಿಯಾದ ಮಾಹಿತಿ ಕೊಡುವುದಿಲ್ಲ ಎಂದು ಈ ಹಿಂದೆಯೇ ಆಯನೂರು ಮಂಜುನಾಥ್ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಸೋಮವಾರ ಈಶ್ವರಪ್ಪರ ಸಮ್ಮುಖದಲ್ಲಿ ರಂಪಾಟ ಮಾಡಲು ಬೇರೆ ಯಾವುದಾದರೂ ಕಾರಣ ಇದೆಯೇ ಎಂಬ ಚರ್ಚೆ ಈಗ ಆರಂಭವಾಗಿದೆ. ಆಯನೂರು ಮಂಜುನಾಥ ಹಾಗೂ ರುದ್ರೇಗೌಡರು ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವವರು. ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಗಾದಿಯಿಂದ ಇಳಿಸುವಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಚಿವ ಈಶ್ವರಪ್ಪ ಕೂಡಾ ಯಡಿಯೂರಪ್ಪ ಅವರಿಗೆ ಪಕ್ಷ ಎಲ್ಲಾ ಅಧಿಕಾರ ಕೊಟ್ಟಿದೆ ಎಂದು ಷಡ್ಯಂತ್ರ ಮಾಡಿದವರ ಪರವಾಗಿಯೇ ಇದ್ದರೆಂಬ ಅನುಮಾನ ಯಡಿಯೂರಪ್ಪ ಬೆಂಬಲಿಗರಲ್ಲಿದೆ.
ಬೊಮ್ಮಾಯಿ ಸಂಪುಟಕ್ಕೆ ಸೇರುವಲ್ಲಿಯೂ ಈಶ್ವರಪ್ಪ ಅವರು, ಯಡಿಯೂರಪ್ಪ ಅವರನ್ನು ಮೀರಿದ ಲಾಬಿ ಮಾಡಿದ್ದರು. ನಾಲ್ಕೂ ಮನೆಯನ್ನು ಪ್ರತಿನಿಧಿಸಿರುವ ಅನುಭವ ಇರುವ ಆಯನೂರು ಮಂಜುನಾಥ್ ಅವರಿಗೆ ಸಂಪುಟಕ್ಕೆ ಸೇರಲು ಆಗಲಿಲ್ಲ. ರುದ್ರೇಗೌಡರು ಕೂಡಾ ಸಚಿವರಾಗುವ ಆಸೆ ಈಡೇರಲಿಲ್ಲ. ಮಡುಗಟ್ಟಿದ್ದ ಈ ಎಲ್ಲಾ ಆಕ್ರೋಶ ಸೋಮವಾರದ ಸಭೆಯಲ್ಲಿ ಹೊರಬಂತೆ ಎಂಬ ಅನುಮಾನ ಸಹಜವಾಗಿಯೇ ಮೂಡಿದೆ.
ದಿಕ್ಸೂಚಿಯೇ ?
ಯಡಿಯೂರಪ್ಪ ಅವರನ್ನು ಓವರ್‍ಟೇಕ್ ಮಾಡಿ ರಾಜಕಾರಣ ಮಾಡುತ್ತಿರುವ ಈಶ್ವರಪ್ಪರಿಗೆ ಮುಂದೆ ಬಿಎಸ್‍ವೈ ಬಣದಿಂದ ಸಹಕಾರ ಸಿಗುವುದಿಲ್ಲ ಎಂಬುದನ್ನು ತೋರಿಸುವ ದಿಕ್ಸೂಚಿಯಂತೆ ಆಯನೂರು ಮಂಜುನಾಥ್ ಮತ್ತು ರುದ್ರೇಗೌಡ ಅವರು ಸಭೆಯಲ್ಲಿ ಡಿಸಿಯನ್ನು ನೆಪವಾಗಿಟ್ಟುಕೊಂಡು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ ಎಂದೇ ಹೇಳಲಾಗುತ್ತಿದೆ.
ನಮ್ಮ ಆಕ್ರೋಶ ಸಚಿವ ಈಶ್ವರಪ್ಪ ವಿರುದ್ಧ ಅಲ್ಲ, ಅಧಿಕಾರಿಗಳು ವಿಧಾನ ಸಭೆ ಸದಸ್ಯರ ಹಿಂದೆ ವರ್ಗಾವಣೆ, ಗುತ್ತಿಗೆ ಕಾಮಗಾರಿ ಇತ್ಯಾದಿ ಕಾರಣಗಳಿಂದ ಚೇಲಾಗಿರಿ ಮಾಡ್ತಾರೆ. ಇದು ಮೂರು ವರ್ಷಗಳಿಂದ ನಮಗಾಗುತ್ತಿರುವ ಅನ್ಯಾಯ. ಆಕ್ರೋಶ ಹೊರಹಾಕದ ಹೊರತೂ ಬೇರೆ ಮಾರ್ಗ ನಮಗಿರಲಿಲ್ಲ
ಆಯನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರು