ಕೇವಲ ಒಂದು ವಾರ ಕಳೆದಿದ್ದರೆ ಆ ಜೋಡಿ ಹಸೆಮಣೆ ಏರಬೇಕಿತ್ತು. ಆದರೆ ಜವರಾಯನಿಗೆ ಅದು ಇಷ್ಟವಿದ್ದಂತೆ ಕಾಣಲಿಲ್ಲ. ಭೀಕರ ಅಪಘಾತದಲ್ಲಿ ಮದುಮಗನನ್ನೇ ಕ್ರೂರ ವಿದಿಕರೆದೊಯ್ದ.
ಇದು ಗುರುವಾರ ಸಂಜೆ ಶಿವಮೊಗ್ಗ ತಾಲೂಕು ಕುಂಚೇನಹಳ್ಳಿ ಸಮಿಪ ಸಂಭವಿಸಿದ ಭೀಕರ ರಸ್ತೆ ಅಪಘಾತದ ಕರಾಳ ಮುಖ. ಎರಡು ತಿಂಗಳ ಹಿಂದೆ ನಿಶ್ಚಿತಾರ್ಥವಾಗಿತ್ತು. ಮುಂದಿನ ವಾರ ಮದುವೆಯೂ ನಿಕ್ಕಿಯಾಗಿತ್ತು. ಮದುಮಗ ರಾಕೇಶ್ ಮತ್ತು ಜ್ಯೋತಿ ಹಾಗೂ ಚೈತ್ರಾ ಶಿವಮೊಗ್ಗಕ್ಕೆ ಬರುತ್ತಿದ್ದರು. ಕುಂಚೇನಹಳ್ಳಿ ಸಮೀಪ ಬಸ್ ಓವರ್ ಟೇಕ್ ಮಾಡುವಾಗ ರಾಕೇಶ್ ಚಲಾಯಿಸುತ್ತಿದ್ದ ಶಿಫ್ಟ್ ಕಾರು ಬಸ್ಸಿಗೆ ಢಿಕ್ಕಿಯಾಯಿತು. ಬಸ್ ರಸ್ತೆ ಪಕ್ಕದ ಹೊಲಕ್ಕಿಳಿದಿತ್ತು. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದರಿಂದ ರಾಕೇಶ್ ಸ್ಥಳದಲ್ಲೇ ಸಾವು ಕಂಡ. ಮದುಮಗಳು ಜ್ಯೋತಿ ತೀವ್ರಗಾಯಗೊಂಡಿದ್ದಾಳೆ. ಕಾರಿನಲ್ಲಿದ್ದ ಚೈತ್ರಾ ಎಂಬಾಕೆಗೂ ಗಾಯಗಳಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ದೂರು ದಾಖಲಿಸಿಕೊಂಡಿದ್ದಾರೆ.