ಒಲಿಂಪಿಕ್ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ತಮ್ಮ ಮಾಜಿ ಕೋಚ್ ಕಾಶೀನಾಥ್‍ನಾಯ್ಕ್ ಅವರ ಪುಣೆಯಲ್ಲಿರುವ ಮನೆಗೆ ಭೇಟಿ ನೀಡಿ ಸಂತಸ ಹಂಚಿಕೊಂಡಿದ್ದಾರೆ.
ಜಾವೆಲಿನ್‍ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿರುವ ತಮ್ಮ ಕೋಚ್ ಕನ್ನಡಿಗ ಕಾಶೀನಾಥ್ ಅವರನ್ನು ಭೇಟಿ ಮಾಡಿರುವ ನೀರಜ್ ಈ ಬಗ್ಗೆ ಎದ್ದ ವಿವಾದಗಳಿಗೆ ತೆರೆ ಎಳೆದಿದ್ದಾರೆ.
ನೀರಜ್ ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಎರಡು ವರ್ಷಗಳ ಕಾಲ ಅವರಿಗೆ ತರಬೇತಿ ನೀಡಿದ್ದ ಉತ್ತರಕನ್ನಡ ಶಿರಸಿಯ ಕಾಶೀನಾಥ್ ನಾಯ್ಕ್ ಹೆಸರು ಮುನ್ನೆಲೆಗೆ ಬಂದಿತ್ತು. ಇದಕ್ಕೆ ಪೂರಕ ಎಂಬಂತೆ ಕರ್ನಾಟಕ ಸರಕಾರ ಕೋಚ್ ಕಾಶೀನಾಥ್‍ಗೆ ಹತ್ತು ಲಕ್ಷ ಬಹುಮಾನ ಘೋಷಣೆ ಮಾಡಿತ್ತು.
ಸರಕಾರ ಬಹುಮಾನ ಘೋಷಣೆ ಮಾಡುತ್ತಿದ್ದಂತೆ ತಗಾದೆ ತೆಗೆದಿದ್ದ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಕಾಶೀನಾಥ್ ನಾಯ್ಕ್ ಹೆಸರಿನ ಯಾವುದೇ ವ್ಯಕ್ತಿ ನೀರಜ್‍ಗೆ ತರಬೇತಿ ನೀಡಿಲ್ಲ ಎಂದು ಹೇಳಿಕೊಂಡಿದ್ದರು. ಈ ವಿಚಾರ ವೈರಲ್ ಆಗಿದ್ದು, ಕೆಲವು ವಿಘ್ನಸಂತೋಷಿಗಳು ಕಾಮನ್‍ವೆಲ್ತ್ ಕೂಟದಲ್ಲಿ ದೇಶಕ್ಕೆ ಪದಕ ತಂದುಕೊಟ್ಟಿದ್ದ ಕಾಶೀನಾಥ್ ಅವರ ಮನಸಿಗೆ ನೋವಾಗುವಂತೆ ಸಾಮಾಜಿಕ ಮಾಧ್ಯಮದಲ್ಲಿ ಬೇಡದ್ದು ಕಾರಿಕೊಂಡಿದ್ದರು.
ಎಲ್ಲಕ್ಕೂ ಉತ್ತರ ಕೊಟ್ಟ ನೀರಜ್:
ಉತ್ತರ ಕನ್ನಡದ ಶಿರಸಿ ಮೂಲದವರಾದ ಕಾಶಿನಾಥ್ ನಾಯ್ಕ್ 2015-17ರವರೆಗೆ ಪಟಿಯಾಲದ ಸೇನಾ ಕ್ರೀಡಾ ಸಂಕೀರ್ಣದಲ್ಲಿ ನೀರಜ್ ಚೋಪ್ರಾಗೆ ತರಬೇತಿ ನೀಡಿದ್ದರು. ಮಾಧ್ಯಮಗಳಲ್ಲಿ ಟೀಕೆ ಮಾಡಿದವರಿಗೆ ಮುಂದೆ ನೀರಜ್ ಉತ್ತರ ಕೊಡಲಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು. ಇದೀಗ ಗುರುವಿನ ನಿರೀಕ್ಷೆ ನಿಜವಾಗಿದೆ. ಕಾಶಿನಾಥ್ ಭೇಟಿ ವೇಳೆ ತೆಗೆದುಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಯಾವುದೇ ಅಹಂಕಾರವಿಲ್ಲದೆ, ಸಾಮಾನ್ಯನಂತೆ ಕಾಣಿಸಿಕೊಂಡಿರುವ ನೀರಜ್ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಕೋಚ್ ಕಾಶೀನಾಥ್ ನಾಯ್ಕ್ ವಿರುದ್ದ ಕೇಳಿ ಬಂದ ಆರೋಪ, ಆಕ್ಷೇಪ ಮತ್ತು ಸುಳ್ಳುಸುದ್ದಿಗಳಿಗೆ ನೀರಜ್ ತಕ್ಕ ಉತ್ತರ ನೀಡಿದ್ದಾರೆ. ಈಗ ತಮ್ಮ ಮುಖಕ್ಕೆ ಸುಮಾರಾಗಿರುವ ಸುಮರಿವಾಲ್ಲಾ ಏನಂತಾರೆ ನೋಡಬೇಕಿದೆ.