ಪಶ್ಚಿಮಘಟ್ಟದಲ್ಲಿ ಕಾಳಿಂಗ ಸರ್ಪದ ಸಂತತಿ ಕಡಿಮೆಯಾಗುತ್ತಿದೆ ಎಂದು ಕಾಳಿಂಗ ಸರ್ಪಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಗೌರಿಶಂಕರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಳಿಂಗ ಸರ್ಪಗಳ ಕುರಿತು ವಿವರಣೆ ನೀಡಿದ ಅವರು, ಇಡೀ ಜಗತ್ತಿನಲ್ಲಿ ನಾಲ್ಕು ಪ್ರಭೇದಗಳ ಕಾಳಿಂಗ ಸರ್ಪಗಳನ್ನು ಮೊದಲ ಬಾರಿ ತಾವು ಅಧ್ಯಯನ ಮಾಡಿ ಗುರುತಿಸಿರುವುದಾಗಿ ತಿಳಿಸಿದ ಅವರು. ಪಶ್ಚಿಮಘಟ್ಟಗಳು, ಆಂಧ್ರಪ್ರದೇಶ, ಉತ್ತರಾಖಂಡ್, ಫಿಲಿಫೈನ್ಸ್ ದೇಶ ಹೀಗೆ ಹಲವು ಕಡೆ ಈ ಕಾಳಿಂಗ ಸರ್ಪಗಳು ಕಂಡು ಬರುತ್ತವೆ. ಆದರೆ, ಪಶ್ಚಿಮಘಟ್ಟದಲ್ಲಿ ಮಾತ್ರ ಇದರ ವೈವಿಧ್ಯತೆ ಇದೆ. ಈ ಪ್ರಭೇದಗಳನ್ನು ಸರ್ಪದ ಮೇಲಿನ ಪಟ್ಟಿಗಳ ಆಧಾರದ ಮೇಲೆ ವಿಂಗಡಿಸಬಹುದಾಗಿದೆ ಎಂದರು.
ತಮ್ಮ ಅಧ್ಯಯನದ ಪ್ರಕಾರ, ಸಾಮಾನ್ಯವಾಗಿ ಆಗುಂಬೆ ಹಾಗೂ ಪಶ್ಚಿಮ ಘಟ್ಟದಲ್ಲಿರುವ ಕಾಳಿಂಗ ಸರ್ಪಗಳಿಗೆ ಸುಮಾರು 45 ಪಟ್ಟಿಗಳು ಇದ್ದರೆ, ಆಂಧ್ರಪ್ರದೇಶ ಮತ್ತು ಉತ್ತರಾಖಂಡ್ ಗಳಲ್ಲಿ ಈ ಪಟ್ಟಿಗಳ ಸಂಖ್ಯೆ60.ಇರುತ್ತದೆ. ಹಾಗೆಯೇ ಫಿಲಿಫೈನ್ಸ್ ಮುಂತಾದ ದೇಶಗಳಲ್ಲಿ ಇದರ ಸಂಖ್ಯೆ 70 ಕ್ಕೆ ಏರಿರುತ್ತದೆ. ಭಾರತದಲ್ಲಿ ಸಾಮಾನ್ಯವಾಗಿ ಕಾಳಿಂಗ ಸರ್ಪಗಳು 15 ಅಡಿ ಉದ್ದವಿರುತ್ತವೆ. ಆದರೆ, ವಿದೇಶಗಳಲ್ಲಿ 18 ಅಡಿಗೂ ಹೆಚ್ಚು ಉದ್ದವಿರುವ ಕಾಳಿಂಗ ಸರ್ಪಗಳಿವೆ ಎಂದು ತಿಳಿಸಿದರು.
ಅಭಿವೃದ್ಧಿ ಹೆಸರಲ್ಲಿ ಕಾಡುಗಳ ವಿನಾಶದಿಂದ ಕಾಳಿಂಗ ಸರ್ಪಗಳ ಸಂತತಿ ಕೂಡ ಕಡಿಮೆಯಾಗುತ್ತಿದೆ. ಇದು ವಿಷಾದದ ಸಂಗತಿಯಾಗಿದೆ. ಕಾಳಿಂಗ ಸರ್ಪಗಳು ಇತರೆ ಹಾವುಗಳನ್ನು ನುಂಗುವುದರಿಂದ ಈ ಹಾವುಗಳ ಸಂತತಿ ಕಡಿಮೆಯಾಗಿ ಅದರಿಂದ ಮಾನವರು ಮರಣ ಹೊಂದುವ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ ಕಾಳಿಂಗ ಸರ್ಪಗಳು ಒಂದು ದೃಷ್ಠಿಯಲ್ಲಿ ಮಾನವನಿಗೆ ಸಹಕಾರಿಯಾಗಿವೆ. ಈ ಸಂತತಿ ಉಳಿಯಬೇಕೆನ್ನುವುದು ನನ್ನ ಅಭಿಪ್ರಾಯ ಎಂದರು.
ಸುಮಾರು 25-30ವರ್ಷಗಳ ಕಾಲ ಬದುಕುವ ಈ ಜೀವಿಗಳು ಮನುಷ್ಯನಿಗೆ ವಿನಾಕಾರಣ ತೊಂದರೆ ಕೊಡುವುದಿಲ್ಲ. ನಾನು ಕಾಳಿಂಗ ಸರ್ಪಗಳ ಬಗ್ಗೆ ಕಳೆದ 7 ವರ್ಷಗಳಿಂದ ಪಿ.ಹೆಚ್.ಡಿ. ಗಾಗಿ ಅಧ್ಯಯನ ನಡೆಸುತ್ತಿದ್ದು, ಇದೀಗ ಅಧ್ಯಯನ ಮುಗಿದಿದ್ದು ಇಷ್ಟರಲ್ಲಿಯೇ ಸಂಶೋಧನಾ ಪ್ರಬಂಧ ಮಂಡಿಸುವುದಾಗಿ ತಿಳಿಸಿದರು.
ಕಳೆದ 7 ವರ್ಷಗಳಿಂದ ಹಲವು ಕೋನದಲ್ಲಿ ಕಾಳಿಂಗ ಸರ್ಪಗಳ ಬಗ್ಗೆ ತಾವು ಅಧ್ಯಯನ ಮಾಡಿದ್ದು ಇದರ ಡಿಎನ್‌ಎ ಸ್ಯಾಂಪಲ್ ಗಳನ್ನು ತೆಗೆದುಕೊಂಡಿದ್ದೇನೆ. ಕಾಳಿಂಗ ಸರ್ಪ ಸಾಮಾನ್ಯವಾಗಿ ಕಚ್ಚುವುದಿಲ್ಲ. ಅದು ನುಂಗುತ್ತದೆ. ಯಾವುದೇ ಪ್ರಾಣಿಯನ್ನು ಇಡಿಯಾಗಿ ನುಂಗುತ್ತದೆ ಹೊರತು ಜಗಿಯುವುದಿಲ್ಲ. ಕಾಳಿಂಗ ಸರ್ಪಗಳು ಮೊಟ್ಟೆಯನ್ನು ಇಡುತ್ತವೆಯಾದರೂ ಶೇಕಡ 2 ರಷ್ಟು ಮಾತ್ರ ಇವು ಮರಿಯಾಗಿ ಬದುಕುತ್ತವೆ ಅಷ್ಟೇ ಎಂದು ತಿಳಿಸಿದರು.
ಭಾರತದಲ್ಲಿ ಕಾಳಿಂಗಸರ್ಪಗಳನ್ನು ಕೊಲ್ಲುವುದಿಲ್ಲ. ಹಾಗಾಗಿ ಇವುಗಳ ಸಂಖ್ಯೆ ಇಲ್ಲಿ ಹೆಚ್ಚಾಗಿದೆ. ಆದರೆ, ಪಿಲಿಫೈನ್ಸ್ ಮುಂತಾದ ಕಡೆಗಳಲ್ಲಿ ಈ ಹಾವುಗಳನ್ನು ಕೊಲ್ಲುವುದರಿಂದ ಅಲ್ಲಿ ಸಂಖ್ಯೆ ಕಡಿಮೆಯಾಗಿದೆ. ಇದು ಅತ್ಯಂತ ವಿಷಕಾರಿ ಹಾವಾಗಿದೆ ಎಂದರು.
ಇದರ ವಿಷವನ್ನು ಡ್ರಗ್ಸ್ ಆಗಿ ಬಳಸಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಳಸಿಕೊಳ್ಳಬಹುದು. ಆದರೆ, ಸಾಮಾನ್ಯವಾಗಿ ಸಾರ್ವಜನಿಕರಿಗೆ ಇದು ಲೀಟರ್ ಗಟ್ಟಲೇ ಇರುತ್ತದೆ. ಇದನ್ನು ಫ್ರಿಜ್ ನಲ್ಲಿ ಇಡುತ್ತಾರೆ. ಲಕ್ಷಾಂತರ ರೂ. ಬೆಲೆ ಇದೆ. ಮುಂತಾದ ವಿಷಯಗಳಿಗೆ ಸಾಕಷ್ಟು ಆಧಾರಗಳಿಲ್ಲ. ಏಕೆಂದರೆ ಒಂದು ಲೀಟರ್ ವಿಷವನ್ನು ತೆಗೆಯಬೇಕು ಎಂದರೆ ಸಾವಿರಾರು ಹಾವುಗಳಿಂದ ಸಂಗ್ರಹಿಸಬೇಕಾಗುತ್ತದೆ. ಹಾಗಾಗಿ ಲೀಟರ್ ಗಟ್ಟಲೇ ಎನ್ನುವುದು ಸುಳ್ಳಾಗುತ್ತದೆ ಎಂದರು.
ಸ್ಪಷ್ಟನೆ ನೀಡಿದ ಗೌರಿಶಂಕರ್
ಕಾಳಿಂಗ ಸರ್ಪದ ಮೊಟ್ಟೆಗಳ ಅಪಹರಿಸಿದ ಬಗ್ಗೆ ನಿಮ್ಮ ಮೇಲೆ ಆಪಾದನೆ ಇದೆ. ಈ ಮೊಟ್ಟೆಗಳನ್ನು ತಾವು ಕದ್ದಿರುವಿರಿ, ಅಥವಾ ಕೃತಕವಾಗಿ ಮರಿ ಮಾಡಿಸಲು ಹೊರಟಿದ್ದೀರಿ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ತಮ್ಮ ವಿರುದ್ಧ ತಪ್ಪು ಕಲ್ಪನೆಯನ್ನು ಸೃಷ್ಠಿಸಲಾಗಿದೆ. ಹಾವಿನ ಮೊಟ್ಟೆಯ ಗೂಡು ನಾಶವಾಗಿತ್ತು. ಸುಮಾರು 33 ಮೊಟ್ಟೆಗಳು ಅಲ್ಲಿದ್ದವು. ಮೊಟ್ಟೆಗಳಿಗೆ ಒಂದು ಹನಿ ನೀರು ಬಿದ್ದರೂ ಸಾಕು, ಅವು ಹಾಳಾಗುತ್ತವೆ. ಪ್ರಕೃತಿಯಲ್ಲಿರುವ ಮೊಟ್ಟೆ ಗೂಡಿನಂತೆಯೇ ಕೃತಕವಾಗಿ ಗೂಡನ್ನು ತಯಾರಿಸಬೇಕಾಗಿತ್ತು. ತಾವು ಈ ಕೃತಕ ಗೂಡನ್ನು ತಯಾರಿಸಿ ಮೊಟ್ಟೆಯನ್ನು ಸಂರಕ್ಷಿಸಿದ್ದು ನಿಜ. ಈ ಮೊದಲು ಹೇಳಿದಂತೆ ಎಲ್ಲ ಮೊಟ್ಟೆಗಳು ಮರಿಯಾಗುವುದಿಲ್ಲ. 33 ಮೊಟ್ಟೆಗಳಲ್ಲಿ ಒಂದೆರಡು ಮೊಟ್ಟೆಗಳು ಮಾತ್ರ ಮರಿಯಾಗುತ್ತವೆ ಅಷ್ಟೇ. ಈ ವಿಷಯವನ್ನು ನಾನು ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದರು.