Malenadu Mitra
ರಾಜ್ಯ ಶಿವಮೊಗ್ಗ

ಗಿರಿರಾಜ್ ನಾಪತ್ತೆ ಹುಟ್ಟು ಹಾಕಿದ ಹಲವು ಪ್ರಶ್ನೆಗಳಿಗೆ ಉತ್ತರಿಸುವರಾರು ?, ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಸಂದೇಶ ಹಾಕಿದ ಡಿಸಿ ಕಚೇರಿ ನೌಕರ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಗಿರಿರಾಜ್ ನಾಪತ್ತೆ ಪ್ರಕರಣ ಅಧಿಕಾರ ವಲಯದಲ್ಲಿ ಸಾಕಷ್ಟು ತಳಮಳಕ್ಕೆ ಕಾರಣವಾಗಿದೆ. ಹಿರಿಯ ಅಧಿಕಾರಿಗಳು ದಬ್ಬಾಳಿಕೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸ್‍ಪ್ ಸಂದೇಶ ಹಾಕಿ ನಾಪತ್ತೆಯಾಗಿರುವ ಗಿರಿರಾಜ್ ಹುಡುಕಾಟ ಸಾಗಿದ್ದು, ಮಂಗಳವಾರ ರಾತ್ರಿಯಾದರು ಅವರ ಸುಳಿವು ಪತ್ತೆಯಾಗಿಲ್ಲ. ಭದ್ರಾವತಿ ತಾಲೂಕು ಕಾರೇಹಳ್ಳಿತನಕ ಅವರ ಮೊಬೈಲ್ ಟವರ್ ಸಿಕ್ಕಿದ್ದು ಆ ಬಳಿಕ ಮೊಬೈಲ್ ಜಾಡೂ ಪತ್ತೆಯಾಗಿಲ್ಲ. ಡಿಸಿ ಕಚೇರಿಯಲ್ಲಿ ಶಿಸ್ತಿನ ಕೆಲಸಗಾರ ಹಾಗೂ ಮಿತಭಾಷಿ ಎಂದೇ ಹೆಸರಾಗಿದ್ದ ಗಿರಿರಾಜ್ ಪ್ರಕರಣ ಅಧಿಕಾರ ಶಾಹಿಯ ಕಾರ್ಯ ವೈಖರಿಯನ್ನೇ ಪ್ರಶ್ನೆ ಮಾಡುವಂತಿದೆ.

ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರ ಹೆಸರನ್ನು ಉಲ್ಲೇಖ ಮಾಡಿರುವ ಗಿರಿರಾಜ್ ತಾವು ಆತ್ಮಹತ್ಯೆ ನಿರ್ಧಾರಕ್ಕೆ ಬರಲು ಶಾಲಿನಿಯವರೂ ಕಾರಣ. ಮೇಲಧಿಕಾರಿಗಳು ಕೆಳಹಂತದ ಅಧಿಕಾರಿಗಳ ಮೇಲೆ ದಬ್ಬಾಳಿಕೆ ತೋರುತ್ತಾರೆ. ಹಗಲು ರಾತ್ರಿ ಕೆಲಸ ಮಾಡಿದರೂ ತೃಪ್ತಿ ಇರುವುದಿಲ್ಲ. ಈ ವ್ಯವಸ್ಥೆಗೆ ಬೇಸತ್ತು ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿರುವೆ ಎಂದು ಸಂದೇಶದಲ್ಲಿ ಗಿರಿರಾಜ್ ಬರೆದಿದ್ದು, ಇದು ಸರಕಾರದ ಮಟ್ಟದಲ್ಲಿ ಚರ್ಚೆಗೊಳಗಾಗುವ ಸಾಧ್ಯತೆ ಇದೆ.
ಸಂಸದರು ಮತ್ತು ಶಾಸಕರ ಅನುದಾನ ಹಂಚಿಕೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಗಿರಿರಾಜ್ ಅನುದಾನ ಹಂಚಿಕೆ, ಕಾಮಗಾರಿ ಅನುಮೋದನೆ ಇತ್ಯಾದಿ ವಿಷಯಗಳ ಬಗ್ಗೆ ತಮ್ಮ ಸಂದೇಶದಲ್ಲಿ ನಮೂದಿಸಿದ್ದು, ಆಡಳಿತ ವ್ಯವಸ್ಥೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಉನ್ನತ ಅಧಿಕಾರಿಗಳಲ್ಲಿ ಲೋಪವನ್ನು ಹೊರಗೆಳೆದಿದ್ದಾರೆ. ಕೆಳಹಂತದ ನೌಕರನಾಗಿ ಕುಟುಂಬದೊಂದಿಗೆ ಕಾಲಕಳೆಯಲು ಆಗಲೇ ಇಲ್ಲ ಎಂಬುದನ್ನೂ ತಿಳಿಸಿರುವ ಗಿರಿರಾಜ್ ತಮ್ಮ ಕುಟುಂಬಸ್ಥರಲ್ಲಿ ಕ್ಷಮೆ ಯಾಚಿಸಿದ್ದಾರೆ. ಸಹೋದ್ಯೋಗಿಗಳ ಸಹಕಾರ, ಹಿಂದಿನ ಜಿಲ್ಲಾಧಿಕಾರಿ ದಯಾನಂದ್ ಹಾಗೂ ಈಗಿನ ಎಡಿಸಿ ಅವರ ಬಗ್ಗೆ ಒಳ್ಳೆ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.


ಅಧಿಕಾರಿಗಳ ಒತ್ತಡ ಮತ್ತು ಅನಾರೋಗ್ಯವನ್ನೂ ಪ್ರಸ್ತಾಪ ಮಾಡಿರುವ ಗಿರಿರಾಜ್ ತಮ್ಮ ಆತ್ಮಹತ್ಯೆಯಿಂದಾಗಿ ಮುಂದೆ ಕೆಳಹಂತದ ನೌಕರರಿಗೆ ಆಗುವ ತೊಂದರೆ ನಿಲ್ಲಲಿ ಎಂಬ ಅಭಿಪ್ರಾಯವನ್ನೂ ದಾಖಲು ಮಾಡಿದ್ದಾರೆ.
ಹುಡುಕಾಟ:
ಗಿರಿರಾಜ್ ಸಂದೇಶ ಬಹಿರಂಗವಾಗುತ್ತಿದ್ದಂತೆ ಕುಟುಂಬ ಸದಸ್ಯರನ್ನೂ ಸಂಪರ್ಕಿಸಿರುವ ಕಂದಾಯ ಇಲಾಖೆ ಸಿಬ್ಬಂದಿ ಗಿರಿರಾಜ್ ಹುಡುಕಾಟ ನಡೆಸಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಎಸ್ಪಿ ಲಕ್ಷ್ಮಿಪ್ರಸಾದ್ ಅವರೇ ಖುದ್ದು ನಿಗಾವಹಿಸಿದ್ದಾರೆ.ಗಿರಿರಾಜ್ ನಾಪತ್ತೆ ಪ್ರಕರಣ ಸರಕಾರಿ ಆಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳ ಒತ್ತಡ ಅದಕ್ಕೆ ಮಣಿಯುವ ಅಧಿಕಾರಶಾಹಿ ವ್ಯವಸ್ಥೆ ಇದೆಲ್ಲದರ ಮಧ್ಯೆ ಹೆಣಗಾಡುವ ಕೆಳಹಂತದ ನೌಕರರ ಕಷ್ಟವನ್ನು ಅನಾವರಣ ಮಾಡಿದೆ.

Ad Widget

Related posts

ಪುರದಾಳು ಸಮೀಪ ಕಾಡಾನೆ ಹಾವಳಿ: ಅಡಕೆ, ತೆಂಗು ಮತ್ತು ಬಾಳೆಬೆಳೆ ನಾಶ

Malenadu Mirror Desk

ಮಧು ಬಂಗಾರಪ್ಪರಿಗೆ ಅದ್ದೂರಿ ಸ್ವಾಗತ, ರಾಜ್ಯಾದ್ಯಂತ ಮಧುರ ಪ್ರಭಾವ ಹೆಚ್ಚಲಿ ಎಂದ ಹೆಚ್.ಎಂ.ರೇವಣ್ಣ

Malenadu Mirror Desk

1804 ಅಡಿ ದಾಟಿದ ಲಿಂಗನಮಕ್ಕಿ ಜಲಾಶಯ, ಮಲೆನಾಡಿನತ್ತ ಪ್ರವಾಸಿಗರ ದಂಡು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.