ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸದ ಮುಂದೆ ಕುಮಾರ ಬಂಗಾರಪ್ಪ ಮತ್ತು ಮಧುಬಂಗಾರಪ್ಪ ಎದುರು ಬದರಾದರೂ ಪರಸ್ಪರ ಮಾತನಾಡದೆ ಹೊರಬಂದರು. ಕಳೆದ ಒಂದೂವರೆ ದಶಕದಿಂದ ರಾಜಕೀಯ ಎದುರಾಳಿಗಳಾಗಿರುವ ಕುಮಾರ್ ಬಂಗಾರಪ್ಪ ಹಾಗೂ ಮಧುಬಂಗಾರಪ್ಪ ಕಾಕತಾಳೀಯವೆಂಬಂತೆ ಶುಕ್ರವಾರ ಬೆಂಗಳೂರಿನ ಸಿದ್ದರಾಮಯ್ಯ ನಿವಾಸದ ಬಳಿ ಮುಖಾಮುಖಿಯಾದರು. ವಿಜಯದಶಮಿ ದಿನವಾದ ಕಾರಣ ಕನಿಷ್ಟ ಪಕ್ಷ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೇನೊ ಎಂಬ ನಿರೀಕ್ಷೆಯಿತ್ತು. ಆದರೆ ಈ ಇಬ್ಬರೂ ಸೋದರರು ಪರಸ್ಪರರಿಗೆ ಸಂಬಂಧವೇ ಇಲ್ಲವೇನೊ ಎಂಬಂತೆ ನಡೆದುಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕುಮಾರಬಂಗಾರಪ್ಪ ಅವರು ಮಗಳ ಮದುವೆ ಆಹ್ವಾನ ಪತ್ರಿಕೆ ನೀಡಲು ಸಿದ್ದರಾಮಯ್ಯ ಅವರ ಮನೆಗೆ ತೆರಳಿದ್ದರು. ಈ ಸಂದರ್ಭ ಸಿದ್ದರಾಮಯ್ಯ ಅವರ ನಿವಾಸದಿಂದ ಮಧುಬಂಗಾರಪ್ಪ ಹೊರಬಂದರು. ಅಣ್ಣ ಕಾರಿಂದ ಇಳಿಯುತ್ತಿದ್ದಾಗ ಎದುರಿನಿಂದ ಬಂದ ತಮ್ಮ ಯಾವುದೇ ಪ್ರತಿಕ್ರಿಯೆ ನೀಡದೆ ವಾಪಸ್ ಬಂದರು. ರಾಜಕೀಯವಾಗಿ ಪರಸ್ಪರ ವಿರುದ್ಧ ಧಿಕ್ಕಿನಲ್ಲಿರುವ ಸೋದರರು ಒಂದೇ ಕಡೆ ಸಿಕ್ಕಿದ್ದರಿಂದ ಅಲ್ಲಿ ನೆರೆದಿದ್ದ ಟಿವಿ ಕ್ಯಾಮೆರಾಗಳು ಇಬ್ಬರತ್ತಲೂ ಫೋಕಸ್ ಆದವು. ಆದರೆ ಸೋದರರು ಪರಸ್ಪರ ಮುಖವನ್ನೂ ನೋಡಿಕೊಳ್ಳದ ಕಾರಣ ನಿರಾಶರಾಗಬೇಕಾದ ಸರದಿ ಮಾಧ್ಯಮಗಳದ್ದಾಯಿತು.
ತಮ್ಮನ ನೋಡಿ ಸಂತೋಷವಾಯಿತು
ಈ ಸಂದರ್ಭ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಾಸಕ ಕುಮಾರ ಬಂಗಾರಪ್ಪ, ಮಗಳ ಮದುವೆ ನಿಮಿತ್ತ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲು ಬಂದಿದ್ದೆ. ಈ ಸಂದರ್ಭ ಎದುರಾದ ಸೋದರನ ನೋಡಿ ಸಂತೋಷವಾಯಿತು. ಇದೊಂದು ಆಕಸ್ಮಿಕ ಸನ್ನಿವೇಶ. ಅವರು ಅವರ ಪಕ್ಷದ ರಾಜಕೀಯ ಚರ್ಚೆಗೆ ಬಂದಿರಬಹುದು. ಅದಕ್ಕೂ ನನಗೂ ಸಂಬಂಧ ಇಲ್ಲ ಎಂದು ಹೇಳಿದರು. ಕಾಂಗ್ರೆಸ್ ಸೇರುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕುಮಾರ್, ನಾನು ಬಿಜೆಪಿ ಶಾಸಕ ಅಲ್ಲಿಯೇ ಇದ್ದೇನೆ. ಮುಂದೆಯೂ ಇರುತ್ತೇನೆ. ಕಾಂಗ್ರೆಸ್ ಸೇರುತ್ತೇನೆ ಎಂಬ ನಿಮ್ಮ ಮಾಹಿತಿ ಸಂಪೂರ್ಣ ಸುಳ್ಳು ಎಂದು ಹೇಳಿದರು.
ಬೈಎಲೆಕ್ಷನ್ ಚರ್ಚೆ
ನಮ್ಮ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಮಯ ನೀಡಿದ್ದರಿಂದ ಹಾನಗಲ್ ಉಪಚುನಾವಣೆಯ ಬಗ್ಗೆ ಚರ್ಚೆ ಮಾಡಲು ಹೋಗಿದ್ದೆ. ನನ್ನ ಭೇಟಿ ಪೂರ್ವ ನಿರ್ಧರಿತವಾಗಿತ್ತು. ಸೊರಬ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಹಾನಗಲ್‌ನಲ್ಲಿ ಉಪಚುನಾವಣೆ ನಡೆಯುತ್ತಿದೆ. ಅದ್ದರಿಂದ ನನಗೆ ಹೆಚ್ಚಿನ ಜವಾಬ್ದಾರಿಯಿದೆ. ಆ ನಿಮಿತ್ತ ನಮ್ಮ ನಾಯಕರನ್ನು ಭೇಟಿ ಮಾಡಿದ್ದೆ. ಸೊರಬ ಬಿಜೆಪಿ ಶಾಸಕರು ಬರುವ ಮಾಹಿತಿ ಇರಲಿಲ್ಲ. ಅವರು ಬಂದದ್ದೂ ನನ್ನ ಅರಿವಿಗೆ ಬರಲಿಲ್ಲ. ಸಿದ್ದರಾಮಯ್ಯ ಅವರ ನಿವಾಸದಿಂದ ನಾನು ಹೊರಬಂದ ಮೇಲೆ ಅವರು ಬಂದಿರಬಹುದು ನಾನು ಗಮನಿಸಲಿಲ್ಲ ಎಂದು ಮಾಜಿ ಶಾಸಕ ಮಧುಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ