Malenadu Mitra
ರಾಜ್ಯ ಶಿವಮೊಗ್ಗ ಸಾಗರ ಸೊರಬ

ಪುನೀತ ದರ್ಶನಕ್ಕೆ ಜನಸಾಗರ, ಮಲೆನಾಡಿನೊಂದಿಗೆ ಮಧುರ ಬಾಂಧವ್ಯ ಹೊಂದಿದ್ದ ಅಪ್ಪು

ಅಕಾಲಿಕವಾಗಿ ನಿಧನರಾದ ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ಅಭಿಮಾನಿಗಳ ಸಾಗರವೇ ಹರಿದುಬರುತ್ತಿದೆ.
ಸದಾಶಿವನಗರದ ಪುನೀತ್ ಮನೆಯಿಂದ ಸಂಜೆ ಹೊತ್ತಿಗೆ ಕಂಠೀರವ ಸ್ಟೇಡಿಯಂಗೆ ಪಾರ್ಥೀವ ಶರೀರ ಕೊಂಡೊಯ್ದಿದ್ದು, ಅಲ್ಲಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಸೇರಿದಂತೆ ಅವರ ಸಂಪುಟ ಸದಸ್ಯರು ದೇಶದ ಭಾವುಟ ಹೊದಿಸುವ ಮೂಲಕ ಸರಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭ ಸಚಿವರಾದ ಅಶ್ವತ್ಥನಾರಾಯಣ, ಆರ್.ಅಶೋಕ್, ಆರಗಜ್ಞಾನೇಂದ್ರ, ಬಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಎಸ್.ಟಿ.ಸೋಮಶೇಖರ್, ಎಂ.ಟಿ.ಬಿ.ನಾಗರಾಜ್, ಬೈರತಿ ಬಸವರಾಜ್ ಸೇರಿದಂತೆ ಅನೇಕರಿದ್ದರು.
ತಮ್ಮ ಅಭಿನಯ, ಸರಳ, ಸಜ್ಜನಿಕೆ ಹಾಗೂ ಮಾದರಿ ವ್ಯಕ್ತಿತ್ವದಿಂದಾಗಿ ಯುವಕರ ಕಣ್ಮಣಿಯಾದ ಪುನೀತ್‌ರಾಜ್‌ಕುಮಾರ್ ಅವರು ರಾಜ್ಯಾದ್ಯಂತ ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಕಾರಣದಿಂದ ಸಾರ್ವಜನಿಕರಿಗೆ ಅಂತಿಮ ದರ್ಶನ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸರಕಾರ ಮುತುವರ್ಜಿ ವಹಿಸಿದ್ದು, ಸಿಎಂ ಸೇರಿದಂತೆ ಸಂಪುಟದ ಸದಸ್ಯರು ನಿಗಾವಹಿಸಿದ್ದಾರೆ. ಡಾ.ರಾಜ್ ಕುಟುಂಬವೂ ಕೂಡಾ ಅಪ್ಪಾಜಿ ಅಂತಿಮಯಾತ್ರೆಯಲ್ಲಾದಂತೆ ಆಗುವುದು ಬೇಡ ಪುನೀತ್ ಅವರನ್ನು ಪ್ರೀತಿಯಿಂದ ಕಳಿಸಿಕೊಡೋಣ ಎಂದು ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತಮ್ಮ ನೆಚ್ಚಿನ ನಟನ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

ಕಲಾವಿದರಿಂದ ನಮನ:

ಪುನೀತ್ ನಿಧನಕ್ಕೆ ದೇಶದ ಬಹುತೇಕ ಎಲ್ಲಾ ಭಾಷೆಯ ಮೇರು ನಟರು ಕಂಬನಿ ಮಿಡಿದಿದ್ದಾರೆ. ಕನ್ನಡ ಚಲನಚಿತ್ರ ರಂಗದ ಬಹುತೇಕ ಕಲಾವಿದರು, ನಿರ್ದೇಶಕ, ನಿರ್ಮಾಕರು ಸ್ಟೇಡಿಯಂನಲ್ಲಿಯೇ ಮೊಕ್ಕಾಂ ಹೂಡಿದ್ದು, ಪುನೀತ್ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ. ಹಿರಿ-ಕಿರಿಯ ಕಲಾವಿದರು ಪುನೀತ್ ಅವರ ಒಡನಾಟವನ್ನು ಸ್ಮರಿಸುತ್ತಿದ್ದಾರೆ.
ಭಾನುವಾರ ಅಂತ್ಯಕ್ರಿಯೆ:
ಕಂಠೀರವ ಸ್ಟುಡಿಯೊದಲ್ಲಿ ಡಾ.ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಸಮಾದಿಗಳ ಪಕ್ಕದಲ್ಲಿಯೇ ಪುನೀತ್ ಅಂತ್ಯಕ್ರಿಯೆ ನೆರವೇರಿಸಲು ಸರಕಾರ ಹಾಗೂ ರಾಜ್ ಕುಟುಂಬ ವರ್ಗ ನಿರ್ಧರಿಸಿದೆ. ಪುನೀತ್ ಪುತ್ರಿ ಅಮೇರಿಕಾದಿಂದ ಹೊರಟಿದ್ದು, ಆಕೆ ಬಂದ ಬಳಿಕ ಭಾನುವಾರ ಅಂತ್ಯಕ್ರಿಯೆ ನೆರವೇರಲಿದೆ. ಶುಕ್ರವಾರ ರಾತ್ರಿ ಹಾಗೂ ಶನಿವಾರ ಪೂರ್ಣ ದಿನ ಸಾರ್ವಜನಿಕರು ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಪುನೀತ್ ಶಿವಮೊಗ್ಗ ನಂಟು:

ಪುನೀತ್ ರಾಜ್‌ಕುಮಾರ್ ಅವರು ಮಲೆನಾಡು ಜಿಲ್ಲೆ ಶಿವಮೊಗ್ಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ನಟ ಶಿವರಾಜ್‌ಕುಮಾರ್ ಅವರ ಪತ್ನಿ ಸೊರಬದವರಾಗಿದ್ದರಿಂದ ಜಿಲ್ಲೆಯೊಂದಿಗೆ ಸಂಬಂಧವನ್ನು ಹೊಂದಿದ್ದರು. ಸೊರಬ,ತೀರ್ಥಹಳ್ಳಿ ಮತ್ತು ಸಾಗರದಲ್ಲಿ ಬಂಧುಗಳನ್ನು ಹೊಂದಿದ್ದ ಪುನೀತ್ ಇತ್ತೀಚೆಗೆ ನಡೆದ ಶಾಸಕ ಹಾಲಪ್ಪ ಅವರ ಪುತ್ರಿಯ ವಿವಾಹದಲ್ಲಿ ಪಾಲ್ಗೊಂಡಿದ್ದರು. ಹಾಲಪ್ಪ ಅವರ ಮಗಳನ್ನು ಪುನೀತ್ ಸಂಬಂಧಿ ಹುಡುಗನಿಗೆ ಮದುವೆ ಮಾಡಿಕೊಟ್ಟಿದ್ದರಿಂದ ಈ ಮದುವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇತ್ತಿಚೆಗೆ ಸಕ್ರೆಬೈಲ್‌ನಲ್ಲಿ ನಡೆದ ದಾಕ್ಯುಮೆಂಟರಿ ಚಿತ್ರೀಕರಣಕ್ಕೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.


ಚಿಕ್ಕಮಗಳೂರಿನ ಅಳಿಯ:

ಪುನೀತ್‌ರಾಜ್ ಕುಮಾರ್ ಪತ್ನಿ ಅಶ್ವಿನಿ ಅವರ ತವರೂರು ಚಿಕ್ಕಮಗಳೂರು ಜಿಲ್ಲೆ ಬಾಗಮನೆಯಾಗಿತ್ತು. ಕಾಫಿನಾಡಿನ ಅಳಿಯನಾಗಿದ್ದ ಪುನೀತ್ ಚಿಕ್ಕಮಗಳೂರಿಗೂ ಆಗಾಗ ಬರುತಿದ್ದರು. ಅಲ್ಲದೆ ಅವರ ಹಲವು ಸಿನೆಮಾಗಳ ಚಿತ್ರೀಕರಣ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿಯೂ ನಡೆದಿತ್ತು
ಜನಸಾಗರ:
ಪುನೀತ್ ಅವರ ಅಂತಿಮ ದರ್ಶನಕ್ಕೆ ರಾಜ್ಯದ ಹಲವು ಕಡೆಯಿಂದ ಜನರು ಹೋಗುತ್ತಿದ್ದು, ಶುಕ್ರವಾರ ನಡೆದ ನೂಕುನುಗ್ಗಲಿನಲ್ಲಿ ಪೊಲೀಸ್ ಪೇದೆಯೊಬ್ಬರ ಕಾಲಿಗೆ ಪೆಟ್ಟಾಗಿದೆ. ಹೀಗಿದ್ದರೂ ರಾತ್ರಿಯಿಡೀ ಅಭಿಮಾನಿಗಳು ಬರುತ್ತಲೇ ಇದ್ದರು. ಈ ನಡುವೆ ಚಾಮರಾಜನಗರ ಜಿಲ್ಲೆಯಲ್ಲಿ ಪುನೀತ್ ಸಾವಿನ ಸುದ್ದಿ ಕೇಳಿದ ಅಭಿಮಾನಿಯೊಬ್ಬರು ಹೃದಯಾಘಾತಕ್ಕೊಳಗಾಗಿ ಸಾವಿಗೀಡಾಗಿದ್ದಾರೆ.

ಮಲೆನಾಡಿನಲ್ಲಿ ಶೋಕ”


ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ತೀವ್ರ ಶೋಕ ವ್ಯಕ್ತವಾಗಿದೆ. ಜಿಲ್ಲೆಯಾದ್ಯಂತ ನಗರ ಮತ್ತು ಹಳ್ಳಿಗಳಲ್ಲಿ ಪುನೀತ್ ಕಟೌಟ್ ಹಾಗೂ ಫೋಟೊಗಳಿಗೆ ಮಾಲಾರ್ಪಣೆ ಮಾಡಿರುವ ಅಭಿಮಾನಿಗಳು ಅಗಲಿದ ನಟನಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
ಶಾಸಕ ಹರತಾಳು ಹಾಲಪ್ಪ ಅವರು ಕಂಠೀರವ ಸ್ಟೇಡಿಯಂಗೆ ತೆರಳಿ ಅಂತಿಮ ನಮನ ಸಲ್ಲಿಸಿದ್ದಾರೆ.

ಅಪ್ಪಟ ಕಲಾವಿದ, ಜನಪ್ರೀತಿಗಳಿಸಿದ್ದ ಪುನೀತ್ ಇಷ್ಟು ಬೇಗ ಅಗಲಿರುವುದು ಆಘಾತ ನೀಡಿದೆ. ಅವರ ವಿನೀತ ಭಾವ ಹಾಗೂ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿ. ನನ್ನ ಮಗಳ ಮದುವೆಯಲ್ಲಿ ಮೂರು ದಿನಗಳ ಕಾಲ ನಮ್ಮೊಂದಿಗೆ ಇದ್ದರು. ಅವರ ಅಗಲಿಕೆ ಕರುನಾಡಿಗೆ ದೊಡ್ಡ ನಷ್ಟವಾಗಿದೆ
ಹರತಾಳು ಹಾಲಪ್ಪ, ಶಾಸಕರು, ಸಾಗರ,

ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಆದರೆ ನಿಮ್ಮ ಅಕಾಲಿಕ ಮರಣ ಆಘಾತ ನೀಡಿದೆ. ನಿಮ್ಮಂತೆ ಬಾಳುವುದು ಎಲ್ಲರಿಗೂ ಸಾಧ್ಯವಿಲ್ಲ. ನಿಮ್ಮ ನಿಧನದಿಂದ ಕಲಾಜಗತ್ತು ಮತ್ತು ಕರುನಾಡು ಬಡವಾಗಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಶ್ರೀದೇವಿ ಚೌಡೇಶ್ವರಿ ನೀಡಲಿ
ಡಾ.ಎಸ್.ರಾಮಪ್ಪ, ಧರ್ಮದರ್ಶಿಗಳು,

ಶ್ರೀಕ್ಷೇತ್ರ ಸಿಗಂದೂರು.

ಅಪ್ಪು ಎರಡು ಬಾರಿ ನನ್ನನ್ನು ಉಳಿಸಿಕೊಂಡಿದ್ದ. ಆದರೆ ನಮಗೆ ಅವನನ್ನು ಉಳಿಸಿಕೊಳ್ಳುವ ಅವಕಾಶವನ್ನು ಭಗವಂತ ಕೊಡಲಿಲ್ಲ. ಎಲ್ಲರನ್ನೂ ನೋಡಿಕೊ ಎಂದು ನನ್ನ ಮೇಲೆ ಜವಾಬ್ದಾರಿ ಹಾಕಿದ್ದಾನೆ. ನಮಗೆ ಎಲ್ಲವೂ ಅಭಿಮಾನಿಗಳೇ ಆಗಿದ್ದಾರೆ. ಅವನನ್ನು ಶಾಂತರೀತಿಯಿಂದ ಮತ್ತುಪ್ರೀತಿಯಿಂದ ಕಳಿಸಿಕೊಡೋಣ
-ರಾಘವೇಂದ್ರ ರಾಜ್‌ಕುಮಾರ್, ಪುನೀತ್ ಸಹೋದರ

Ad Widget

Related posts

ಭಾನುಮತಿಗೆ ಹೆಣ್ಣು ಮರಿ, ಸಕ್ರೆಬೈಲಿಗೆ ಹೊಸ ಅತಿಥಿ

Malenadu Mirror Desk

ಸಿಗಂದೂರಲ್ಲಿ ಶರನ್ನವರಾತ್ರಿ ಉತ್ಸವ ಆರಂಭ

Malenadu Mirror Desk

ಈ ಬಾರಿ ಕಿಮ್ಮನೆ, ಬೇರೆಲ್ಲ ಸುಮ್ಮನೆ ಎಂದ ಮಂಜುನಾಥ್‌ಗೌಡ     19ಕ್ಕೆ ನಾಮಪತ್ರ  ಉಭಯ ನಾಯಕರಿಂದಜಂಟಿ ಪತ್ರಿಕಾಗೋಷ್ಠಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.