ನಾನು ಮಂತ್ರಿಯಾಗಿರುವವರೆಗೂ ನನ್ನ ಮಗ ಕಾಂತೇಶ್ ಶಾಸಕನಾಗುವುದು ಬೇಡ ಎಂಬ ವೈಯಕ್ತಿಕ ತೀರ್ಮಾನ ನನ್ನದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಂತ್ರಿಯಾಗಿರುವವರೆಗೆ ನನ್ನ ಪುತ್ರ ಕಾಂತೇಶ್ ಅವರನ್ನು ಎಂಎಲ್ಸಿಯಾಗಲಿ ಅಥವಾ ಎಂಎಲ್‌ಎಗಾಗಲಿ ಸ್ಪರ್ಧಿಸಬಾರದೆಂದು ನಿರ್ಧಾರ ಕೈಗೊಂಡಿದ್ದೇನೆ. ಕಾಂತೇಶ್ ಈ ಬಾರಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಈ ವಿಷಯವನ್ನು ನಾನು ದೆಹಲಿಯಿಂದ ಬಂದ ಪಕ್ಷದ ನಿಯೋಗ ಹಾಗೂ ರಾಜ್ಯ ಬಿಜೆಪಿ ಕೋರ್ ಕಮಿಟಿಗೆ ತಿಳಿಸಿದ್ದೇನೆ ಎಂದರು.
ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಕೋರ್ ಕಮಿಟಿಗೆ ನೀಡಿದ್ದಾರೆ. ಈ ಪಟ್ಟಿ ಕೇಂದ್ರ ನಾಯಕರ ಕೈ ಸೇರಲಿದ್ದು, ಇನ್ನೆರಡು ದಿನಗಳಲ್ಲಿ ಅಂತಿಮ ಹೆಸರನ್ನು ಪ್ರಕಟಿಸುವ ನಿರೀಕ್ಷೆ ಇದೆ ಎಂದರು.
ದಾಖಲೆ ತೋರಿಸಲಿ:
ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿಯ ನಾಯಕ,ಸಚಿವನೋ,ಮುಖ್ಯಮಂತ್ರಿನೋ,ಪದಾಧಿಕಾರಿಗಳೋ,ಯಾರಾದ್ರೂ ಒಬ್ಬರು ಇದ್ದಾರೆ ಎನ್ನುವ ಬಗ್ಗೆ ಒಂದು ಪೀಸ್ ದಾಖಲೆ ತೋರಿಸಿದರೆ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ. ಕಾಂಗ್ರೆಸ್‌ನವರಿಗೆ ಏನು ಉದ್ಯೋಗವಿಲ್ಲ. ಉದ್ಯೋಗ ಇಲ್ಲದಿರುವುದಕ್ಕೆ ಬಿಟ್ ಕಾಯಿನ್ ಪ್ರಕರಣ ಎತ್ತಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್,ಸಿದ್ದರಾಮಯ್ಯ,ಪ್ರಿಯಾಂಕ್ ಖರ್ಗೆ ಅವರು ಬಾಯಿ ಚಪಲಕ್ಕೆ ಬೇಕಾದದ್ದನ್ನು ಹೇಳುತ್ತಿದ್ದಾರೆ. ಈ ಬಗ್ಗೆ ಒಂದು ದಾಖಲೆ ತೋರಿಸಿದರೆ ನಾವು ನಿಮ್ಮನ್ನು ಮೆಚ್ಚುತ್ತೇವೆ ಎಂದು ಹೇಳಿದರು.
previous post
next post