ದುರ್ಬಲಗೊಂಡಿರುವ ಜೆಡಿಎಸ್‌ಗೆ ಶಿವಮೊಗ್ಗದಲ್ಲಿ ಮರುಜೀವಕೊಡಲು ಪಕ್ಷದ ಶಿವಮೊಗ್ಗ ಜಿಲ್ಲಾಧ್ಯಕ್ಷ ಸ್ಥಾನವನ್ನು ಮತ್ತೆ ಎಂ.ಶ್ರೀಕಾಂತ್ ಹೆಗಲಿಗೆ ಕೊಡಲು ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಬೆಂಗಳೂರಿನಲ್ಲಿ ಶನಿವಾರ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಪಕ್ಷ ಸಂಘಟನೆ ಕುರಿತು ನಡೆದ ಸಭೆಯಲ್ಲಿ ಶಿವಮೊಗ್ಗ ಜಿಲ್ಲೆ ಸಂಘಟನೆ ಜವಾಬ್ದಾರಿಯನ್ನು ಶ್ರೀಕಾಂತ್ ಅವರಿಗೆ ವಹಿಸಲು ಕಾರ್ಯಕರ್ತರು, ಮುಖಂಡರಿಂದ ಒತ್ತಾಯ ಕೇಳಿಬಂದಿತು. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಅಧ್ಯಕ್ಷಗಾದಿ ವಹಿಸಿಕೊಳ್ಳಲು ಶ್ರೀಕಾಂತ್ ಅವರಿಗೆ ಸೂಚಿಸಿದ್ದಾರೆ.
೨ ದಶಕಗಳಿಂದ ಜಿಲ್ಲೆಯಲ್ಲಿ ದುರ್ಬಲವಾಗಿದ್ದ ಪಕ್ಷವನ್ನು ಸಕಲ ಸಂಪನ್ಮೂಲ ತೊಡಗಿಸಿ ಸಂಘಟಿಸಿದ್ದ ಶ್ರೀಕಾಂತ್ ಅವರು ಮಹಾನಗರ ಪಾಲಿಕೆ ಹಾಗೂ ಶಿವಮೊಗ್ಗ ಜಿಲ್ಲಾ ಪಂಚಾಯಿತಿಯಲ್ಲಿಯೂ ಪಕ್ಷ ಅಧಿಕಾರ ಹಂಚಿಕೊಳ್ಳುವಂತೆ ಮಾಡಿದ್ದರು. ಹಿಂದಿನ ಅವಧಿಯಲ್ಲಿ ಜಿಲ್ಲೆಯಲ್ಲಿ ಮೂರು ಶಾಸಕರನ್ನು ಹೊಂದಿದ್ದ ಪಕ್ಷ ಕಳೆದ ಚುನಾವಣೆಯಲ್ಲಿ ಸೋಲು ಕಂಡಿತು. ಅದಾದ ಬಳಿಕ ಕೆಲ ಮುಖಂಡರು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು. ಪ್ರಸ್ತುತ ಎಂ.ಶ್ರೀಕಾಂತ್ ಅವರು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಶಿವಮೊಗ್ಗ ಜಿಲ್ಲಾ ಘಟಕದ ಸಂಘಟನೆಯಲ್ಲಿ ಅಷ್ಟೊಂದು ಆಸ್ಥೆ ವಹಿಸಿರಲಿಲ್ಲ. ಮುಂಬರುವ ವಿಧಾನ ಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಮಾಡುತ್ತಿರುವ ಜೆಡಿಎಸ್ ವರಿಷ್ಠರು ಶಿವಮೊಗ್ಗದಲ್ಲಿ ಪಕ್ಷಕ್ಕೆ ಹೊಸ ಚೇತನ ನೀಡಲು ಶ್ರೀಕಾಂತ್ ಅವರಿಗೇ ಮಣೆ ಹಾಕಿದ್ದಾರೆ. ಶ್ರೀಕಾಂತ್ ಅವರು ಶೀಘ್ರವೇ ಜಿಲ್ಲಾಧ್ಯಕ್ಷರಾಗಿ ಅಧಿಕಾರಿ ಸ್ವೀಕರಿಸಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ರಾಜ್ಯ ನಾಯಕರು ನಡೆಸಿರುವ ಸಭೆಯಲ್ಲಿ ಪಕ್ಷದ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ವರಿಷ್ಠರು ಸೂಚಿಸಿದ್ದಾರೆ. ಜಿಲ್ಲೆಯ ಅನೇಕ ಮುಖಂಡರು ಈ ಬಗ್ಗೆ ನಾಯಕರ ಬಳಿ ಮನವಿ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ನನ್ನೊಬ್ಬನಿಂದ ಆಗುವಂತದಲ್ಲ. ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಎಲ್ಲರೂ ಸೇರಿ ಪಕ್ಷ ಬಲಗೊಳಿಸಬೇಕಿದೆ. ಈ ಹಂತದಲ್ಲಿ ಪಕ್ಷ ಕೊಡುವ ಜವಬ್ದಾರಿಯನ್ನು ನಿಭಾಯಿಸಲು ಸಿದ್ದನಿದ್ದೇನೆ. ಜಿಲ್ಲೆಯಲ್ಲಿ ಸಮಾವೇಶ ನಡೆಸಿ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ವಿಶ್ವಾಸ ತುಂಬುವಂತೆ ನಾಯಕರಲ್ಲಿ ಮನವಿ ಮಾಡಿರುವೆಎಂ.ಶ್ರೀಕಾಂತ್