ಬಿಜೆಪಿ ಸರಕಾರದ ಅವಧಿಯಲ್ಲಿ ರಾಜ್ಯದ ಗ್ರಾಮೀಣ ಭಾಗದಲ್ಲಿ ಒಂದೇ ಒಂದು ಮನೆ ಕಟ್ಟಿಸಿಕೊಟ್ಟಿಲ್ಲ. ನಮ್ಮ ಸರಕಾರ ಇದ್ದಾಗ ಐದು ವರ್ಷದಲ್ಲಿ ಬಡವರಿಗೆ ೧೫ ಲಕ್ಷ ಮನೆ ನಿರ್ಮಾಣ ಮಾಡಿದ್ದೆವು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಶಿವಮೊಗ್ಗದಲ್ಲಿ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈಶ್ವರಪ್ಪರ ಇಲಾಖೆಯಲ್ಲಿ ಎಷ್ಟು ಪರ್ಸೆಂಟೇಜ್ ತಗೋತಾರೆ ಗೊತ್ತಾ ? ಇಲ್ಲಾ ಎಂದು ಹೇಳಿದ್ರೆ ದುಡ್ಡು ಕೊಟ್ಟವರನ್ನ ಎದುರು ನಿಲ್ಲಿಸ್ತೇನೆ. ನನ್ನ ಅವಧಿಯಲ್ಲಿ ಎನ್‌ಒಸಿಗೆ ಕಾಸು ಪಡೆದಿದ್ದರೇ ಸಾಕ್ಷಿ ತೋರಿಸಲಿ ರಾಜಕೀಯ ಸನ್ಯಾಸ ತೆಗೆದುಕೊಳ್ತೀನಿ ಎಂದು ಅವರು ಸಚಿವ ಈಶ್ವರಪ್ಪರಿಗೆ ಟಾಂಗ್ ಕೊಟ್ಟರು.
ಈ ಈಶ್ವರಪ್ಪ ಬಾಯಿಗೆ ಬಂದಂತೆ ಮಾತಾಡುತ್ತಾರೆ ಅದ್ಕೆನೇ ನಾನು ಅವರು ನಾಲಗೆ ಮತ್ತು ಮೆದುಳಿಗೆ ಲಿಂಕ್ ತಪ್ಪೋಗದೆ ಎಂದು ಹಿಂದೆ ಹೇಳಿದ್ದೆ. ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಅವರು ಹಳ್ಳಿಗಳ ಉದ್ದಾರ ಮಾಡಿಲ್ಲ. ಅವರ ಇಲಾಖೆ ಯೋಜನೆಗಳಿಗೆ ಹಿಂದೆ ಯಡಿಯೂರಪ್ಪ ನೇರವಾಗಿ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ. ಈಶ್ವರಪ್ಪರಿಗೆ ಸ್ವಾಭಿಮಾನವೇ ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.
ನಾಚಿಕೆಗೆಟ್ಟ ಸರ್ಕಾರ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಭ್ರಷ್ಟಚಾರ ವ್ಯಾಪಕವಾಗಿ ಆಗಬಿಟ್ಟಿದೆ. ಸರ್ಕಾರದಲ್ಲಿ ಪರ್ಸೆಂಟೇಜ್ ಕೊಟ್ಟರೆ ದುಡ್ಡು ಬಿಡುಗಡೆ ಆಗುತ್ತೆ. ಇದನ್ನ ನಾನು ಹೇಳುತ್ತಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಸರ್ಕಾರದಲ್ಲಿ ೪೦ ಪರ್ಸೆಂಟ್ ಲಂಚ ಕೊಡಬೇಕು. ಮಂತ್ರಿ, ಸಂಸದ, ಶಾಸಕ, ಅಧಿಕಾರಿಗಳಿಗೆ ಲಂಚಕೊಡಬೇಕು ಎಂದು ಪತ್ರ ಬರೆದಿದ್ದಾರೆ. ನಮ್ಮ ಕಾಲದಲ್ಲಿ ಯಾರಾದರೂ ಬರೆದಿದ್ದಾರಾ …ಎಂತ ನಾಚಿಕೆಗೆಟ್ಟ ಸರ್ಕಾರ ಎಂದು ದೂರಿದರು.
ನಾಚಿಕೆ, ಮಾನ ಮರ್ಯಾದೆ ಇಲ್ಲದ ಬಿಜೆಪಿ ಸರ್ಕಾರದ ಅಭ್ಯರ್ಥಿಗೆ ವೋಟ್ ಹಾಕಿದ್ರೆ ಭ್ರಷ್ಟಾಚಾರಕ್ಕೆ ಬೆಂಬಲ ಕೊಟ್ಟಂತೆ ಆಗುತ್ತೆ. ಅವರನ್ನ ಸೋಲಿಸಿದರೇ ಸಂದೇಶ ರವಾನೆಯಾಗುತ್ತದೆ ಎಂದು ಪಕ್ಷದ ಬೆಂಬಲಿಗರಿಗೆ ಕರೆ ನೀಡಿದರು.
ಯಡಿಯೂರಪ್ಪ ರಿಗೆ ಮುಂಬಾಗಿಲ ಅಧಿಕಾರ ಗೊತ್ತಿಲ್ಲ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲಿಂದಲೋ ಹಡಿಬಿಟ್ಟಿ ದುಡ್ಡು ತಂದು ಹಿಂಬಾಗಿಲಿಂದ ಅಧಿಕಾರಕ್ಕೆ ಬಂದರು. ಅವರಿಗೆ ಮುಂಬಾಗಿಲಿಂದ ಅಧಿಕಾರಕ್ಕೆ ಬಂದೇ ಗೊತ್ತಿಲ್ಲ. ಲಜ್ಜೆಗೆಟ್ಟವರು. ಬಿಜೆಪಿಯಂತಹ ಮಾನಗೆಟ್ಟ ಜನ ದೇಶದಲ್ಲಿಯೇ ಎಲ್ಲಿಯು ಸಿಗೋದಿಲ್ಲ. ೧೭ ಜನ ಎಂಎಲ್‌ಎಗಳನ್ನು ಬಿಜೆಪಿಯವರು ಕೋಟಿಗಟ್ಟಲೇ ಕೊಟ್ಟು ಖರೀದಿಸಿದ್ರು.
ಆಪರೇಷನ್ ಕಮಲ ಮಾಡೋದೆ ಒಂದು ದೊಡ್ಡ ಸಾಹಸ ಎಂದುಕೊಂಡಿದ್ದಾರೆ. ಆದರೆ ಬಿಜೆಪಿಯವರು ಮಹಾಭ್ರಷ್ಟರು. ಅವರಿಂದ ಈ ರಾಜ್ಯ ಉಳಿಸಬೇಕಿದೆ ಎಂದರು.
ನರೇಂದ್ರ ಮೋದಿಯಂತಹ ಸುಳ್ಳುಗಾರನನ್ನ ನಾನೆಲ್ಲೂ ನೋಡಿಲ್ಲ
ನರೇಂದ್ರ ಮೋದಿಯವರು ಅಚ್ಛೆದಿನ್ ಆಯೇಂಗೆ ಅಂದರು. ಪೆಟ್ರೋಲ್., ಡಿಸೇಲ್,ಗ್ಯಾಸ್, ಕಬ್ಬಿಣ ಅಡುಗೆ ಎಣ್ಣೆ ದರ ಎಲ್ಲಿಗೆ ಹೋಗಿದೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಸಾಮಾನ್ಯ ಜನರು ಬದುಕೋದಕ್ಕೆ ಸಾದ್ಯವಾಗದ ಸನ್ನಿವೇಶ ನಿರ್ಮಾಣ ಮಾಡಿದ್ರು. ಯುವಕರಿಗೆ ವರ್ಷಕ್ಕೆ ೨ ಕೋಟಿ ಕೆಲಸ ಕೊಡ್ತೀನಿ ಅಂತಾ ಮೋದಿ ಹೇಳಿದ್ರು ಅದಕ್ಕೆ ಎಲ್ಲ ಕಡೆ ಮೋದಿ ..ಮೋದಿ..ಮೋದಿ ಅಂದರು. ಈಗ ೮ ನೇ ವರ್ಷ ಮೋದಿ ಅಧಿಕಾರಕ್ಕೆ ಬಂದು. ವರ್ಷಕ್ಕೆ ೨ ಕೋಟಿ ಅಂದ್ರೂ ೧೬ ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಕೆಲಸ ಕೇಳಿದ್ರೆ ಪಕೋಡ ಮಾರಿ ಎಂದ್ರು. ಯುವ ಜನಾಂಗಕ್ಕೆ ಅವರು ವಂಚನೆ ಮಾಡಿದ್ದಾರೆ ಎಂದರು.
ಯಡಿಯೂರಪ್ಪ ಉತ್ತರ ಕೊಡಲಿಲ್ಲ, ಸುಧಾಕರ್? ಉತ್ತರ ಕೊಡಲಿಲ್ಲ
ಅಲ್ಲದೆ ಕೊರೊನಾ ನಿರ್ವಹಣೆಗೆ ಬೇಕಿದ್ದ ವಸ್ತುಗಳ ಖರೀದಿಯಲ್ಲಿಯು ಲಂಚ ಹೊಡೆಯಿತು ಬಿಜೆಪಿ ಸರ್ಕಾರ. ಶಾಸನ ಸಭೆಯಲ್ಲಿ ದಾಖಲೆ ಸಮೇತ ಇದನ್ನ ಪ್ರಸ್ತಾಪ ಮಾಡಿದೆ.
ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್,ಪಿಪಿಇ ಕಿಟ್‌ನಲ್ಲಿ ಎಷ್ಟೆಷ್ಟು ಲಂಚ ಹೊಡೆದಿದ್ದಾರೆ ಎಂದು ಹೇಳಿದೆ. ಆದರೆ ಯಡಿಯೂರಪ್ಪ ಇದಕ್ಕೆ ಉತ್ತರ ಕೊಡಲೇ ಇಲ್ಲ. ಯಡಿಯೂರಪ್ಪ ಬದಲಾಗಿ ಸುಧಾಕರ್ ಉತ್ತರ ಕೊಟ್ರು.ಇಂತಹವರನ್ನು ದೂರ ಇಡಲು ನಮ್ಮ ಪಕ್ಷದ ಅಭ್ಯರ್ಥಿ ಪ್ರಸನ್ನಕುಮಾರ್ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ಕೊಡಿ
ಸಿದ್ದರಾಮಯ್ಯ
ಶಿವಮೊಗ್ಗದಿಂದಲೇ ರಣರಂಗದ ರಾಜಕಾರಣ : ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಸಿದ್ದರಾಮಯ್ಯರ ಬಗ್ಗೆ ಬಾಯಿಗೆ ಬಂದಹಾಗೆ ಮಾತನಾಡುತ್ತೀರಾ ಎಂದು ಈಶ್ವರಪ್ಪನವರ ವಿರುದ್ಧ ಹರಿಹಾಯ್ದರು. ಈಶ್ವರಪ್ಪನವರೇ ೪೦ ಪರ್ಸೆಂಟ್ ಸರ್ಕಾರ ಎಂದು ಜನರೇ ಹೇಳುತ್ತಿದ್ದಾರೆ. ನಿಮಗೆ ಸ್ವಾಭಿಮಾನ ಇಲ್ಲ. ಇದ್ದರೇ ರಾಜೀನಾಮೆ ನೀಡಲಿ. ಅಥವಾ ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಿಂದ ಈಶ್ವರಪ್ಪನವರನ್ನ ಸಂಪುಟದಿಂದ ತೆಗೆದುಹಾಕಲಿ ಎಂದು ಸವಾಲು ಹಾಕಿದರು.
ಹಾನಗಲ್ ಉಪ ಚುನಾವಣೆ ನಂತರ ಹೊಸ ಅಲೆ ಆರಂಭವಾಗಿದೆ. ತೀರ್ಥಹಳ್ಳಿ ಹಾಗೂ ಭದ್ರಾವತಿಯ ಸ್ಥಳೀಯ ಸಂಸ್ಥೆಯಲ್ಲಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇಲ್ಲೂ ಅದೇ ರೀತಿ ಆಗಲಿದೆ. ಬಹಳಷ್ಟು ಜನರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಮ್ಮ ಪಕ್ಷ ಅಧಿಕಾರದಲ್ಲಿ ಇರದಿದ್ದರೂ ಜೆಡಿಎಸ್ ನ ಮಧು ಬಂಗಾರಪ್ಪ ಮತ್ತಿತರರು ಕಾಂಗ್ರೆಸ್ ಸೇರಿದ್ದಾರೆ. ಶಿವಮೊಗ್ಗದಿಂದಲೇ ನಾವು ರಣರಂಗದ ರಾಜಕಾರಣ ಆರಂಭಿಸುತ್ತೇವೆ ಎಂದು ಗುಡುಗಿದರು.
ಕೊರೊನಾ ವೇಳೆ ಘೋಷಿಸಿದ ೨೦ ಲಕ್ಷ ಕೋಟಿ ಪರಿಹಾರದ ಪ್ಯಾಕೇಜ್ ಏನಾಯ್ತು , ಜನರ ಜೇಬಿನ ಪಿಕ್ ಪಾಕೇಟ್ ನಡೆಯುತ್ತಿದೆ. ರೈತರ, ಜನರ ಆದಾಯ ಡಬಲ್ ಆಗಲಿಲ್ಲ ಎಂದು ವ್ಯಂಗ್ಯವಾಡಿದ್ರು. ದಿಲ್ಲಿ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಇದೆ. ಆಪರೇಷನ್ ಕಮಲದ ಮೂಲಕ ಸರ್ಕಾರ ಮಾಡಿದ್ದಾರೆ. ಆದರೂ ಯಡಿಯೂರಪ್ಪ ಕಣ್ಣೀರು ಹಾಕಿ ಅಧಿಕಾರ ತ್ಯಾಗ ಮಾಡಿದರು. ಇದು ಬಿಜೆಪಿಯ ಕಥೆ ಅಂತಾ ದೂರಿದರು.
ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಏಕೆ ನಡೆಸುತ್ತಿಲ್ಲ, ಚುನಾವಣೆ ನಡೆಸಲು, ಕಾನೂನಿನಲ್ಲಿ ಅವಕಾಶ ಇಲ್ಲವೇ ಎಂದು ಪ್ರಶ್ನಿಸಿದ ಡಿಕೆ ಶಿವಕುಮಾರ್ ಸೋಲಿನ ಭಯದಿಂದ ಚುನಾವಣೆ ನಡೆಸುತ್ತಿಲ್ಲ , ಗ್ರಾಮೀಣಾಭಿವೃದ್ಧಿ ಸಚಿವರಿಗೆ ಇದರ ಅರಿವಿಲ್ಲವೇ ಅಂತಾ ಪ್ರಶ್ನಿಸಿದರು .
ವೇದಿಕೆಯಲ್ಲಿ ಅಭ್ಯರ್ಥಿ ಆರ್.ಪ್ರಸನ್ನಕುಮಾರ್ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಬಿ.ಕೆ.ಸಂಗಮೇಶ್, ಮಾಜಿ ಶಾಸಕರಾದ ಮಧುಬಂಗಾರಪ್ಪ, ಶಾಂತನಗೌಡ, ಹೆಚ್.ಎಂ. ಚಂದ್ರಶೇಖರಪ್ಪ, ವಡ್ನಾಳ್ ರಾಜಣ್ಣ, ಬೇಳೂರು ಗೋಪಾಲಕೃಷ್ಣ, ಕೆ.ಬಿ.ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್,ಕಲಗೋಡು ರತ್ನಾಕರ್, ಎನ್.ರಮೇಶ್, ಹೆಚ್.ಸಿ.ಯೋಗಿಶ್,ಎಸ್.ಪಿ.ದಿನೇಶ್, ಬಿ.ಜಿ.ನಾಗರಾಜ್, ಎಸ್.ರವಿಕುಮಾರ್, ವಿಶ್ವನಾಥ ಕಾಶಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು