ಶಿವಮೊಗ್ಗ,ಜ.೧೪: ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಶುಕ್ರವಾರ ವಿವಿಧ ಪೂಜಾವಿಧಿ ವಿಧಾನಗಳು ವಿದ್ಯುಕ್ತವಾಗಿ ನೆರವೇರಿದವು.
ಎರಡು ದಿನಗಳ ಜಾತ್ರೆ ನಡೆಸುವುದಾಗಿ ಪೂರ್ವ ನಿರ್ಧಾರವಾಗಿತ್ತಾದರೂ, ಕೋವಿಡ್ ಮಾರ್ಗಸೂಚಿ ಹಾಗೂ ವಾರಾಂತ್ಯ ಕರ್ಫ್ಯೂ ನಿಮಿತ್ತ ಜಾತ್ರೆ ರದ್ದಾಗಿತ್ತು.
ಈ ಬಾರಿ ಸಂಕ್ರಾಂತಿ ಜಾತ್ರೆ ಅಂಗವಾಗಿ ಸರಳ ಪೂಜೆ ಆಯೋಜಿಸಲಾಗಿತ್ತು. ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪೂರ್ವ ನಿರ್ಧರಿತ ಪ್ರವಾಸದಂತೆ ದೇಗುಲಕ್ಕೆ ಭೇಟಿ ನೀಡಿದ್ದರು.
ಶರಾವತಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಚೌಡೇಶ್ವರಿ ಮೂಲಸ್ಥಳ ಸೀಗೆಕಣಿವೆಯಲ್ಲಿ ಶುಕ್ರವಾರ ಶ್ರೀಗಳ ಸಮ್ಮುಖದಲ್ಲಿ ಧರ್ಮದರ್ಶಿ ರಾಮಪ್ಪ ದಂಪತಿ ಪೂಜೆ ನೆರವೇರಿಸಿದರು. ಮಂಗಳೂರು ಕದ್ರಿಯಿಂದ ಬಂದಿದ್ದ ಪುರೋಹಿತರು ದೇವಿಗೆ ಪೂಜೆ ನೆರವೇರಿಸಿದರು. ಮೂಲಸ್ಥಳದಲ್ಲಿ ಪೂಜೆಯಾದ ಬಳಿಕ ಜ್ಯೋತಿಯನ್ನು ತಂದು ಸಿಗಂದೂರು ದೇವಸ್ಥಾನದಲ್ಲಿ ದೀಪ ಹಚ್ಚುವ ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ರವಿಕುಮಾರ್ ದಂಪತಿ, ಧರ್ಮದರ್ಶಿಗಳ ಕುಟುಂಬಸ್ಥರು ಸ್ಥಳೀಯ ಭಕ್ತರು ಪಾಲ್ಗೊಂಡಿದ್ದರು. ದೇವಾಲಯದಲ್ಲಿಸಂಕ್ರಾಂತಿ ಅಂಗವಾಗಿ ಚಂಡಿಕಾ ಹೋಮ ನಡೆಸಲಾಯಿತು. ಮಧ್ಯಾಹ್ನ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅವರು ದೇವಸ್ಥಾನಕ್ಕೆ ಬಂದು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ವರ್ಷದಂತೆ ಸಂಕ್ರಾಂತಿ ಸಮಯದಲ್ಲಿ ದೇವಿ ದರ್ಶನಕ್ಕೆ ಹೋಗುವ ಜೆಡಿಎಸ್ ಶಿವಮೊಗ್ಗ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಕೂಡಾ ಈ ಸಂದರ್ಭ ಹಾಜರಿದ್ದರು.
ಪ್ರತಿವರ್ಷ ಸಿಗಂದೂರು ಸಂಕ್ರಾಂತಿ ಜಾತ್ರೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತ ಸಾಗರವೇ ಹರಿದುಬರುತಿತ್ತು. ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಜಾತ್ರೆ ನಡೆಯುತ್ತಿಲ್ಲ. ಈ ಸಂದರ್ಭ ನಡೆಯುತ್ತಿದ್ದ ವಿವಿಧ ಪೂಜಾ ಸೇವೆ, ಮೆರವಣಿಗೆ, ಜಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ಬಂದಿಸಲಾಗಿದೆ.
ಜಾತ್ರೆಗೆ ನಿರ್ಬಂಧ ಇದ್ದ ಕಾರಣ ಸಿಗಂದೂರು ಹಾಗೂ ಸೀಗೆಕಣಿವೆಯಲ್ಲಿ ಸರಳ ಪೂಜೆ ನೆರವೇರಿಸಲಾಯಿತು. ಸರಕಾರದ ಮಾರ್ಗಸೂಚಿ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂ ದೇಗುಲಕ್ಕೆ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಸಹಕರಿಸಿದ ಎಲ್ಲ ಭಕ್ತಾದಿಗಳು ಧನ್ಯವಾದಗಳು
- ಹೆಚ್.ಆರ್.ರವಿಕುಮಾರ್, ಕಾರ್ಯದರ್ಶಿ ,ಸಿಗಂದೂರು ದೇವಾಲಯ ಆಡಳಿತ ಮಂಡಳಿ