ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ವ್ಯಾಪ್ತಿ ಶಾಲೆಗಳಿಗೆ ಮೂರು ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ರಜೆ ನೀಡಲು ನಿರ್ಧಾರ ಮಾಡಲಾಗಿದೆ.
ಸಭೆಯ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ,ಜಿಲ್ಲೆಯಲ್ಲಿ ಸೋಂಕಿನ ದರ ೧೧ ರಷ್ಟಿದೆ.ನಗರದಲ್ಲಿ ಈ ಸೋಂಕು ಹೆಚ್ಚಾಗಿದೆ. 45ಶಾಲಾ ಕಾಲೇಜುಗಳ 208ಜನ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಶಾಲಾ ಮಕ್ಕಳು ಹಾಗೂ ಶಿಕ್ಷಕರಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿದೆ. ಸೋಂಕು ಇನ್ನಷ್ಟು ಹೆಚ್ಚಬಾರದು ಎಂಬ ದೃಷ್ಟಿಯಿಂದ 1ರಿಂದ 9ನೇ ತರಗತಿ ಮಕ್ಕಳಿಗೆ ರಜೆ ನೀಡಲಾಗುತ್ತಿದೆ. ಬುಧವಾರದಿಂದ ಸೋಮವಾರದವರೆಗೆ ನಗರ ವ್ಯಾಪ್ತಿಯ ಶಾಲೆಗಳಿಗೆ ರಜೆ ನೀಡಲಾಗಿದೆ. ಈವರೆಗೆ 45 ಶಾಲೆಯ 208ಮಕ್ಕಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಈಗಾಗಲೇ ಕೋವಿಡ್ ನಿಯಂತ್ರಣಕ್ಕೆ ಟಾಸ್ಕ್ ಪೋರ್ಸ್ ರಚಿಸಲಾಗಿದೆ. ಭಾನುವಾರ ಮತ್ತೆ ಸಭೆ ಸೇರಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಜಿಲ್ಲೆಯಲ್ಲಿ 60 ವಯೋಮಾನದ ಸುಮಾರು 2ಲಕ್ಷ ನಾಗರೀಕರಿದ್ದು, ಅವರೆಲ್ಲರೂ ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆಯಬೇಕು. ಲಸಿಕೆ ಪಡೆಯುವಲ್ಲಿ ಉದಾಸೀನ ಮಾಡದಂತೆ ಮನವಿ ಮಾಡಿರುವ ಸಚಿವರು ಜನಜಾಗೃತಿಗಾಗಿ ಲಸಿಕಾ ಅಭಿಯಾನ ನಡೆಸಲು ಕ್ರಮವಹಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಮಹಾನಗರಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಚನ್ನಬಸಪ್ಪ, ಜ್ಞಾನೇಶ್ವರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್‌ಸುರಗೀಹಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ.ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾರ್ಚ್ ೨೨-೨೩ರಂದು ಮಾರಿಕಾಂಬಾ ಜಾತ್ರೆಗೆ ನಿರ್ಧಾರ
ಫೆಬ್ರವರಿ ತಿಂಗಳಿನಲ್ಲಿ ನಡೆಯಬೇಕಾಗಿದ್ದ ಶಿವಮೊಗ್ಗ ನಗರದ ಸುಪ್ರಸಿದ್ದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೋತ್ಸವವು ಕೊರೋನ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಅವಧಿಗೆ ಮುಂದೂಡಲಾಗಿದ್ದು, ಮಾರ್ಚ್ 22 ಮತ್ತು 23ರಂದು ನಡೆಸಲು ಜಾತ್ರಾ ಸಮಿತಿಯು ನಿರ್ಧರಿಸಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಸೋಂಕಿನ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಅಂದಿನ ಸ್ಥಿತಿಗಳನ್ನಾಧರಿಸಿ ಜಾತ್ರೆ ನಡೆಸಲು ಕ್ರಮ ವಹಿಸಲಾಗುವುದು. ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೆ ಹೊರಗಿನ ಊರುಗಳಿಂದ ಭಕ್ತಾಧಿಗಳ ಆಗಮಿಸದಂತೆ ನಿಯಂತ್ರಿಸಿ, ಸಮಿತಿಯವರು ಮಾತ್ರ ಸಾಂಕೇತಿಕವಾಗಿ ಆಚರಿಸಲು, ನಿಯಂತ್ರಣದಲ್ಲಿದ್ದರೆ ಅಂಗಡಿ, ಮುಂಗಟ್ಟು, ಸ್ಟಾಲ್ ಮತ್ತು ಎಕ್ಸಿಬಿಷನ್‌ಗಳಿಗೆ ಅವಕಾಶವಿಲ್ಲದಂತೆ ಹಾಗೂ ಕಡಿಮೆಯಾಗಿದ್ದರೆ ಸಹಜವಾಗಿ ಜಾತ್ರೆ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಳ್ಳುವ ಈ ನಿರ್ಣಯಕ್ಕೆ ಸಮಿತಿಯು ಒಪ್ಪಿಗೆ ಸೂಚಿಸಿದೆ ಎಂದರು.
ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಬೀದಿದೀಪ ವ್ಯವಸ್ಥೆಯಲ್ಲಿ ದೋಷವಿದ್ದು, ಮುಂದಿನ ಒಂದು ವಾರದೊಳಗಾಗಿ ಸರಿಪಡಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ ಸಚಿವರು, ಬೆಳಕಿಗೆ ಅಡಚಣೆ ಮಾಡುವ ಮರದ ರೆಂಬೆಗಳನ್ನು ತೆರವುಗೊಳಿಸುವಂತೆ ಸೂಚಿಸಿದ ಅವರು, ನಗರದಲ್ಲಿ ಅವ್ಯಾಹತವಾಗಿರುವ ಮಾದಕ ದ್ರವ್ಯ ಗಾಂಜಾ ನಿಯಂತ್ರಣಗೊಳಿಸುವಲ್ಲಿ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು.
previous post