ಹಿಂದುಳಿದ ಈಡಿಗ ಸಮುದಾಯವು ಶಿಕ್ಷಣ ಮತ್ತು ಸಂಘಟನೆಗೆ ಆದ್ಯತೆ ನೀಡಿದರೆ ಅಭಿವೃದ್ಧಿ ಸಾಧ್ಯ ಎಂದು ಹೊಸನಗರ ತಾಲೂಕು ನಿಟ್ಟೂರಿನ ಶ್ರೀ ನಾರಾಯಣಗುರು ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ರೇಣುಕಾನಂದ ಸ್ವಾಮೀಜಿ ಹೇಳಿದರು.
ಸಾಗರ ತಾಲೂಕು ಕರೂರು ಹೋಬಳಿಯಲ್ಲಿ ಶುಕ್ರವಾರ ನಡೆದ ಗುರುವಂದನೆ, ಪ್ರತಿಭಾಪುರಸ್ಕಾರ ಹಾಗೂ ಸಭಾಭವನದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿರುವ ಹಿನ್ನೀರು ಪ್ರದೇಶದಲ್ಲಿ ಹೆಚ್ಚಿರುವ ಈಡಿಗ ಸಮುದಾಯದ ಎಲ್ಲಾ ಉಪಪಂಗಡಗಳವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಏಳಿಗೆ ಸಾಧ್ಯ. ನಿಟ್ಟೂರಿನ ಮಠದಲ್ಲಿ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್, ಗೋಶಾಲೆ ಇತ್ಯಾದಿ ಚಟುವಟಿಕೆಗಳು ನಡೆಯುತ್ತಿವೆ. ಕುಲದೇವತೆ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ನಿರ್ಮಿಸಲು ಉದ್ದೇಶಿಸಲಾಗಿದೆ. ಮಠದಲ್ಲಿ ಸಮುದಾಯದ ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಸಮಾಜ ಬಾಂಧವರು ಮಠಕ್ಕೆ ಭೇಟಿ ಕೊಡಬೇಕು ಮತ್ತು ಸಹಕಾರ ನೀಡಬೇಕು ಎಂದು ಶ್ರೀಗಳು ಹೇಳಿದರು.
ಈಡಿಗ ಸಮಾಜದ ಎಲ್ಲಾ ಒಳಪಂಗಡಗಳು ಒಗ್ಗಟ್ಟಾಗಬೇಕು. ಪೈಪೋಟಿಯ ಈ ಯುಗದಲ್ಲಿ ತಾವು ಮಾಡುವ ಕಾಯಕದಲ್ಲಿ ಶ್ರದ್ಧೆ ಇಟ್ಟು ಮುನ್ನಡೆದರೆ ಯಶಸ್ಸು ಸಿಗುತ್ತದೆ. ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರೀಮಠ ಯಾವತ್ತೂ ಕಟಿಬದ್ಧವಾಗಿದೆ. ಸ್ಥಳೀಯ ಪ್ರತಿನಿಧಿಗಳನ್ನು ಕೇರಳದ ಶಿವಗಿರಿಗೆ ಪ್ರವಾಸ ಕರೆದೊಯ್ಯಲಾಗುವುದು ಎಂದು ಸ್ವಾಮೀಜಿ ಹೇಳಿದರು.
ಎಸ್‌ಎಸ್‌ಬೋಗ್ ಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೋಬಳಿಯ ಸಮಾಜ ಬಾಂಧವರು ಗುರುವಂದನೆ ಸಲ್ಲಿಸಿದರು. ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ವಿವಿಧ ಜಾನಪದ ಕಲಾತಂಡಗಳೂ ಭಾಗವಹಿಸಿದ್ದವು.
ಇದೇ ಸಂದರ್ಭ ಶ್ರೀಗಳು ಇಬ್ಬರು ಹಿರಿಯ ನಾಗರಿಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು, ಕ್ರೀಡಾಪಟು, ಗ್ರಾಮಪಂಚಾಯಿತಿ ಪ್ರತಿನಿಧಿಗಳನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಎಸ್ ಎಸ್ ಭೋಗ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜಪ್ಪ. ಸದಸ್ಯ ರಾಮಚಂದ್ರ ಹಾಬಿಗೆ. ವಿಜಯ್ ಆಡಗಳಲೆ. ದೇವೇಂದ್ರ ಸುಳ್ಳಳ್ಳಿ. ರಘುಪತಿ ನೇರಿಗೆ. ನಾಗರಾಜ್ ಆಡಗಳಲೆ. ನಾರಾಯಣಗುರು ಸಹಕಾರಿ ಬ್ಯಾಂಕ್ ಅಧ್ಯಕ್ಷ ಓಂಕಾರ್ ನೆಲ್ಲಿಬೀಡು, ಬ್ರಹ್ಮಶ್ರೀ ನಾರಾಯಣ ಗುರು ಆರ್ಯಈಡಿಗ ಸಂಘದ ಕರೂರು ಹೋಬಳಿ ಘಟಕದ ಕಾರ್ಯದರ್ಶಿ ಲೋಕೇಶ್ ಹಳ್ಳಿ, ಮಹಿಳಾಘಟಕದ ಅಧ್ಯಕ್ಷೆ ಸಂಧ್ಯಾ ಪ್ರಕಾಶ್, ಕಾರ್ಯದರ್ಶಿ ಪದ್ಮಾವತಿ ಸೇರಿದಂತೆ ಯುವಕ ಸಂಘಗಳ ಪ್ರಮುಖರು ಹಾಗೂ ಹಿರಿಯ ಮುಖಂಡರುಗಳು ಭಾಗವಹಿಸಿದ್ದರು.