‘ನೆರೆ’ ಪರಿಹಾರ..!
ಕೊಡಗಿನಲ್ಲಿ ದಾಯಾದಿಗಳ ಕಲಹಕ್ಕೆ ಅರ್ಧಶತಮಾನವೇ ಸಂದಿತ್ತು.. ಠಾಣೆ, ನ್ಯಾಯಾಲಯ ಎಡತಾಕುತ್ತಿದ್ದ ಜಮೀನು ವ್ಯಾಜ್ಯಗಳಲ್ಲಿ ಜೇಬುಹರಿದು, ಚಪ್ಪಲಿ ಸವೆದು, ನೆತ್ತಿಯ ಕೂದಲು ನೆರೆದವು. ಪರಸ್ಪರರ ಕಾದಾಟ, ಕಾಲೆಳೆದಾಟಗಳಲ್ಲಿ ಮಧ್ಯವರ್ತಿಗಳ ಹೊಟ್ಟೆತುಂಬಿದವು. ಇಬ್ಬರ ಏಳ್ಗತಿಯೂ ಅಷ್ಟರಲ್ಲೇ ಇತ್ತು.. ತನ್ನ ಗೆಲುವಿಗಿಂತ ಅವನ ಸೋಲಿಗೆ ಮೂರುಹೊತ್ತು ಕಾತರಿಸಿತ್ತು ಮನಸು. ದ್ವೇಷದ ಮೋಡ ಹೆಪ್ಪುಗಟ್ಟಿತ್ತು. ಮೈಲಿದೂರದಾಚೆಯ ತೋಟದ ಗಡಿಬೇಲಿ ಇತ್ಯರ್ಥಗೊಳ್ಳುವ ಲಕ್ಷಣಗಳಂತೂ ಕಂಡಿರಲೇ ಇಲ್ಲ.. ಕಳೆದ ಮುಂಗಾರಿನ ಮಹಾಮಳೆ, ನೆರೆಯ ಅರ್ಭಟಕ್ಕೆ ನಿಂತ ನೆಲವೇ ಗಡಗಡ!. ಅವತ್ತು ಬೆಳ್ಳಂಬೆಳಗ್ಗೆ ಎದ್ದು ತೋಟದೆದುರು ಬಂದುನಿಂತ ದಾಯಾದಿಗಳಿಬ್ಬರು ಬಹುಕಾಲದ ನಂತರ ಪರಸ್ಪರ ಮುಖ ನೋಡಿಕೊಂಡರು!!. ಎದುರಿನ ತೋಟದ ದಾರಿ, ಬೇಲಿ, ಗಡಿ, ಗಿಡ, ಕೆರೆಕಟ್ಟೆಗಳನ್ನು ಒಳಗೊಂಡ ಹತ್ತಾರು ಎಕ್ಕರೆ ಜಾಗವು ಗುರುತಿಗೂ ಸಿಗದಹಾಗೆ ಕೊಚ್ಚಿಕೊಂಡು ಹೋಗಿದ್ದವು..!. ಯಾರ ಜಮೀನು ಯಾವ ದಿಕ್ಕು ಎಂಬುದೇ ತೋಚದಂತಾಗಿತ್ತು. ಕಗ್ಗಂಟಾಗಿದ್ದ ಶತಮಾನದ ಗಡಿಗಲಾಟೆಗೆ ನೆರೆಯು ನೀಡಿದ ಅಚ್ಚರಿಯ ಪರಿಹಾರಕ್ಕೆ ತಲೆಬಾಗಲೇಬೇಕಾಯ್ತು!.
ತಕ್ಕಡಿ ನ್ಯಾಯ!
ಅವರಿಗೆಲ್ಲಾ ವಿಶ್ವವಿದ್ಯಾಲಯದಲ್ಲಿ ದೊಡ್ಡದೊಡ್ಡ ಪದವಿ-ಹುದ್ದೆಗಳು ಒಲಿದೊಲಿದು ಬಂದವು.. ಪಾಂಡಿತ್ಯ, ಅನುಭವಗಳಿದ್ದರೂ, ಶಿಷ್ಯಕೋಟಿಯ ಕಣ್ಮಣಿಯಾದರೂ ಇವರು ಇದ್ದಲ್ಲಿಯೇ ಇದ್ದರು.. ತಮಗಿಂತ ಕಡೆಗೆ ಬಂದವರೂ ಯಾವುದೋ ಪ್ರಭಾವ ಬಳಸಿ ಮೇಲೇರುತ್ತಿದ್ದ ಬಗ್ಗೆ ಅವರಿಗೆ ಅರಿವಿತ್ತು. ತಲೆ ಕೆಡಿಸಿಕೊಳ್ಳದೇ ತಮ್ಮಷ್ಟಕ್ಕೆ ತಾವಿದ್ದ ಮೇಷ್ಟ್ರು, ಅವತ್ತು “ಬದುಕಲ್ಲಿ ಮೇಲೇರಲು ಏನು ಮಾಡಬೇಕು..?” ಅಂದಿದ್ದಕ್ಕೆ ತಣ್ಣಗೆ ಉತ್ತರಿಸಿದ್ದು ಹೀಗೆ.. “ಮೇಲೆ ಯಾಕೆ ಏರಬೇಕು.. ಅಲ್ಲೇನಿದೆ.. ಬರೀ ಧೂಳು. ಮನುಷ್ಯ ಆಳಕ್ಕಿಳಿಯಬೇಕು.. ಅಲ್ಲೇ ಇರುವುದು ಚಿನ್ನಬೆಳ್ಳಿ, ವಜ್ರವೈಡೂರ್ಯಗಳು..! ಬದುಕು ಕಾಣುವುದಕ್ಕಿಂತ ಭಿನ್ನ.. ತಕ್ಕಡಿಯಲ್ಲಿ ಹಗುರಾಗಿದ್ದುದು ಮೇಲೇರುತ್ತದೆ!!”.
ಚೆಲ್ಲಿದ ಬೆಳಕಷ್ಟೇ ಶಾಶ್ವತ…
ಅವರಾಗ ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರು. ಅವರಲ್ಲಿ ಮನೆಪಾಠಕ್ಕೆ ಹೋಗುತ್ತಿದ್ದ ಗೆಳೆಯನೊಟ್ಟಿಗೆ, ಅವತ್ತೊಂದಿನ ನಾನೂ ‘ಆಕಾಶ ವೀಕ್ಷಣೆ’ಗಂತ ಅವರ ಮನೆಗೆ ಹೋಗಿದ್ದೆ. ಟೆರೇಸಿನ ಮೇಲೆ ಟೆಲಿಸ್ಕೋಪ್ ಕಣ್ಣಿನಲ್ಲಿ ಸೆರೆಹಿಡಿದಿದ್ದ ಕೆಂಪನೆಯ ನಕ್ಷತ್ರವೊಂದನ್ನು ಹದಿನೆಂಟಿಪ್ಪತ್ತು ಹುಡುಗರೊಟ್ಟಿಗೆ ದೃಷ್ಟಿಸಿನೋಡಿದ್ದೆ. “ಅದು ‘ಸೀರಿಯಸ್-2’ ಹೆಸರಿನ ನಕ್ಷತ್ರ. ಎಲ್ರೂ ಸರಿಯಾಗೇ ನೋಡಿದ್ರಾ..?” ಅಂದ್ರು ಮೇಷ್ಟ್ರು. ನಾವೆಲ್ಲ ತಲೆಯಾಡಿಸಿದ ಮೇಲೆ “ನೀವೆಲ್ಲ ಈಗಷ್ಟೇ ನೋಡಿದ್ದು ಸುಳ್ಳು..!, ನಕ್ಷತ್ರವೇ ಅಲ್ಲಿಲ್ಲ., ಅದು ನಾಶವಾಗಿ ಐನೂರು ವರ್ಷ ಕಳೆದಿವೆ!!. ಅಲ್ಲಿರುವುದು ‘ಖಾಲಿ’ ಅಷ್ಟೇ..” ಅಂತ ಎಲ್ಲರನ್ನೂ ಚಕಿತಗೊಳಿಸಿದ್ರು. ಹುಡುಗನೊಬ್ಬ “ಹಾಗಾದರೆ ಕೆಂಪಗೆ ಕಾಣ್ತಿರೋದು ಏನು..?” ಅಂದಾಗ “..ಅದು ನಕ್ಷತ್ರ ಸಾವಿಗೆಮುನ್ನ ಚೆಲ್ಲಿಹೋದ ಬೆಳಕು!, ಅದು ಭೂಮಿಯಿಂದ ಒಂದು ಸಾವಿರ ಬೆಳಕಿನ ವರ್ಷಗಳಷ್ಟು ದೂರದಲ್ಲಿತ್ತು. ಐನೂರು ವರ್ಷಗಳಷ್ಟು ಹಿಂದೆಯೇ ಅಳಿದುಹೋಗಿದ್ದರೂ, ಆ ಮೊದಲೇ ನಕ್ಷತ್ರವು ಹೊಮ್ಮಿಸಿದ್ದ ಬೆಳಕು ಐನೂರು ವರ್ಷ ಸಾಗಿಬಂದು ಈಗ ಕಾಣುತ್ತಿದೆ.. ಇನ್ನೂ ಐನೂರು ವರ್ಷ ಕಾಣುತ್ತದೆ ಕೂಡ!.”. ಮುಂದುವರೆದು ಹೇಳಿದ್ದು “ನಕ್ಷತ್ರ ಆಗಲೇ ಅಳಿದಿದೆ, ಆದರೆ ಅದು ಚೆಲ್ಲಿಹೋದ ಬೆಳಕು ಈಗಲೂ ಉಳಿದಿದೆ.. ನಾವೂ ಅಷ್ಟೇ.. ಶಾಶ್ವತವಲ್ಲ., ಮಾಡುವ ಕೆಲಸ ಮಾತ್ರ ಶಾಶ್ವತ” ಆಂದ್ರು.. ಮೇಷ್ಟ್ರ ಹೆಸರು ದಾಶರಥಿ. ಇತ್ತೀಚೆಗಷ್ಟೇ ಅವರು ತೀರಿಕೊಂಡಾಗ ಅವರು ಉಳಿಸಿ ಹೋದ ಆ ನೆನಪು ಎದುರಿಗೆ ಬಂತು.
ಪ್ರಾಣಿಗಳೇ ಗುಣದಲಿ ಮೇಲು..
ಕೆಲವು ವರ್ಷಗಳ ಹಿಂದೆ ನಡೆದಿದ್ದು, ಆಶ್ಚರ್ಯವೆನಿಸಿದರೂ ಸತ್ಯಸಂಗತಿ.. ಅವತ್ತು ತೀರ್ಥಹಳ್ಳಿಯಿಂದ ಶಿವಮೊಗ್ಗೆಯನ್ನು ತಲುಪುವ ಧಾವಂತದಲ್ಲಿದ್ದ ಮಿನಿಬಸ್ಸೊಂದು ಹರಕರೆ ಸಮೀಪ ಗಪ್ಪನೆ ನಿಂತಿತ್ತು.. ಕಾರಣ, ಎದುರಲ್ಲಿ ವಿಚಿತ್ರ ವರ್ತನೆ ತೋರುತ್ತಿದ್ದ ದನಗಳ ಹಿಂಡು ಅತ್ತಿಂದತ್ತ ನೆಗೆದಾಡುತ್ತಿದ್ದವು, ರಸ್ತೆಯನ್ನೂ ಅಡ್ಡಗಟ್ಟುತ್ತಿದ್ದವು.. ಜನರೆಲ್ಲಾ ‘ಏನಾಯ್ತು ಅವಕ್ಕೆ..’ ಅಂದುಕೊಳ್ಳುವಷ್ಟರಲ್ಲಿಯೇ ಧಡಾರಂತ ಕಣ್ಣಳತೆ ದೂರದಲ್ಲಿದ್ದ ಧೈತ್ಯ ಮತ್ತೀಮರವೊಂದು ಬುಡಕಳಚಿ ರಸ್ತೆಗೆ ಬಿದ್ದಿತ್ತು!!. ಬಸ್ಸೊಳಗಿನ ಪ್ರಯಾಣಿಕರೆಲ್ಲಾ ಎದೆಮುಟ್ಟಿಕೊಂಡರು.. ನಿಟ್ಟುಸಿರಲ್ಲಿ ಸಂಭಾವ್ಯ ದುರಂತದಿಂದ ತಮ್ಮನ್ನೆಲ್ಲಾ ಪಾರುಮಾಡಿದ ದನಕರುಗಳಿಗೆ ಕೈಜೋಡಿಸಿದರು.. ಅಲ್ಲಿ ಎಲ್ಲಾ ಮುನ್ಸೂಚನೆ-ಮುಂಜಾಗ್ರತೆಗಳನ್ನು ನಿರ್ವಹಿಸಬಲ್ಲ ಸರ್ವಶಕ್ತ, ಆಧುನಿಕ ತಂತ್ರಜ್ಞಾನಿ ಮನುಷ್ಯನನ್ನು ಯಾವ ಓದು-ತರಬೇತಿಗಳಿಲ್ಲದ ಹುಲ್ಲುಮೇಯುವ ಯಕಃಶ್ಚಿತ್ ಪ್ರಾಣಿಗಳು ಕಾಪಾಡಿದ್ದವು..! ಮರಬೀಳುವ ಕೆಲಹೊತ್ತಿನ ಮೊದಲು ಬೇರು ಮುರಿದುಕೊಳ್ಳುವಾಗ, ಸುತ್ತಲೂ ಏರ್ಪಡುವ ನೆಲದ ಕಂಪನವನ್ನು ಗ್ರಹಿಸುವ ಇಂದ್ರಿಯಗಳ ಸೂಕ್ಷ್ಮತೆಗಳು ಜಾನುವಾರುಗಳಿಗೆ ಸಿದ್ಧಿಸಿದ್ದವು. ಮನುಷ್ಯನ ಜ್ಞಾನೇಂದ್ರಿಯಗಳನ್ನು ಮೀರಿದ ವಿವೇಕವದು.
ಸತೀಶ್.ಜಿ.ಕೆ.ತೀರ್ಥಹಳ್ಳಿ
ಉಪನ್ಯಾಸಕರು, ಸ.ಪ.ಪೂ. ಕಾಲೇಜು ಹೆಬ್ರಿ. ಉಡುಪಿ ಜಿಲ್ಲೆ.