Malenadu Mitra
ಬೇಸಾಯ ಮಲೆನಾಡು ಸ್ಪೆಷಲ್ ರಾಜ್ಯ

ವರ್ಷದ ಅನ್ನಕ್ಕೆ ಕನ್ನ ಹಾಕುವ ವನ್ಯಪ್ರಾಣಿಗಳು

ಅಂತೂ ಇಂತೂ ಕುಂತಿಗೆ ಸುಖವಿಲ್ಲ ಎನ್ನುವಂತೆ ಮಲೆನಾಡಿನ ರೈತರಿಗೆ ಒಂದಲ್ಲ ಒಂದು ರೀತಿಯ ಉಪಟಳಕ್ಕೆ ಒಳಗಾಗುತ್ತಲೇ ಇರುತ್ತಾರೆ. ಅತಿವೃಷ್ಟಿಯಿಂದ ಪಾರಾಗಿ ಇನ್ನೇನು ಬೆಳೆ ಕೈಗೆ ಬಂತು ಎನ್ನುವಾಗಲೇ ವನ್ಯಪ್ರಾಣಿಗಳ ಉಪಟಳ ಹೇಳತೀರದಾಗಿದೆ. ಶೆಟ್ಟಿಹಳ್ಳಿ, ಸೋಮೇಶ್ವರ, ಮೂಕಾಂಬಿಕಾ, ಶರಾವತಿ, ಅಘನಾಷಿನಿ ಹೀಗೆ ಎಲ್ಲ ಅಭಯಾರಣ್ಯ ವ್ಯಾಪ್ತಿಯ ಗ್ರಾಮಗಳಲ್ಲಿ ಈಗ ಬೆಳೆ ಉಳಿಸಿಕೊಳ್ಳುವುದೇ ಹರಸಾಹಸವಾಗಿದೆ.
ಆನೆ, ಕಾಡುಕೋಣ,ಕಾಡೆಮ್ಮೆ,ಮಂಗ,ಜಿಂಕೆ,ಮೊಲ,ಕಡವೆ, ಹುಲಿ,ಚಿರತೆ ಮುಂತಾದ ವನ್ಯಜೀವಿಗಳು ರೈತರ ನಿದ್ದೆಗೆಡಿಸಿದೆ. ಅಪಾರ ಪ್ರಮಾಣದ ಬೆಳೆ,ಸಾಕುಪ್ರಾಣಿ ಜೀವಕ್ಕೆ ಹಾನಿಯಾಗುತ್ತಲೇ ಇವೆ. ಪರಿಹಾರ ನೀಡುವಲ್ಲಿ ಸರಕಾರದ ಚೌಕಾಸಿ,ಅರಣ್ಯ ಇಲಾಖೆ ನಿಯಮ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ವನ್ಯಜೀವಿಗಳಿಂದಾಗುವ ಬೆಳೆ ಹಾನಿ ಪರಿಹಾರಧನಕ್ಕೆ ಆನ್‍ಲೈನ್‍ನಲ್ಲಿ ಅರ್ಜಿಸಲ್ಲಿಸಬೇಕೆಂಬ ಕಡ್ಡಾಯ ನಿಯಮ ರೈತರಿಗೆ ಕಿರಿಕಿರಿ ಉಂಟು ಮಾಡಿದೆ. ಸ್ಥಳ ಮಹಜರ್ ಕ್ರಮ ಕೂಡ ಸರಳವಾಗಿಲ್ಲ.


ಪರಿಹಾರ ಸಿಕ್ಕರೆ ಪುಣ್ಯ
ಬೆಳೆ ನಾಶಕ್ಕೆ ಅರಣ್ಯ ಇಲಾಖೆಯಿಂದ ಬಿಡಿಗಾಸು ಪರಿಹಾರಧನ ಸಿಗುತ್ತಿದ್ದು ಅದು ಸಿಕ್ಕರೆ ಪುಣ್ಯಎಂಬಂತಿದೆ. ಆಗುಂಬೆ, ನಗರ ವಲಯಾರಣ್ಯ,ಸೋಮೇಶ್ವರ,ಮೂಕಾಂಬಿಕಾ, ಶೆಟ್ಟಿಹಳ್ಳಿ ಅಭಯಾರಣ್ಯವ್ಯಾಪ್ತಿ ವನ್ಯಜೀವಿ ಕಾಟವಿಪರೀತವಾಗಿದೆ.ಲಕ್ಷಾಂತರ ರೂ ಮೌಲ್ಯದ ಅಡಕೆ, ಭತ್ತ, ಏಲಕ್ಕಿ, ಕಾಳುಮೆಣಸು,ಕೋಕೋ ಬೆಳೆ ವನ್ಯಜೀವಿದಾಳಿಗೆ ಸಿಕ್ಕಿ ನಾಶವಾಗಿದೆ. ರೈತರು ಪರಿಹಾರ ಕೋರಿ ಅರಣ್ಯ ಇಲಾಖೆ ಅರ್ಜಿಸಲ್ಲಿಸಿದರೆ ಭತ್ತ ಬೆಳೆ ಹಾನಿಗೆ ಮಾತ್ರ ಬಿಡಿಗಾಸು ಪರಿಹಾರಧನ ಸಿಗುತ್ತಿದೆ.ಅಡಕೆ,ಕಾಳುಮೆಣಸು,ಕೋಕೋ,ಏಲಕ್ಕಿ, ಲವಂಗ ಮುಂತಾದ ಬೆಳೆ ನಾಶಕ್ಕೆ ಪರಿಹಾರಧನ ಕೊಡುತ್ತಿಲ್ಲ.5ವರ್ಷದ ಮೇಲಿನ ಅಡಕೆ ಮರ ನಾಶಕ್ಕೆ ಪರಿಹಾರಧನ ಮಾತ್ರ ಲಭ್ಯವಿದ್ದು 5ವರ್ಷದೊಳಗಿನ ಅಡಕೆ ಸಸಿಗೆ ಪರಿಹಾರ ಧನ ಸಿಗುತ್ತಿಲ್ಲ.


ವನ್ಯಜೀವಿಗಳ ಸಂಖ್ಯೆ ಹೆಚ್ಚಳ
ಮಂಗನಿಂದ, ವನ್ಯಜೀವಿ ಅಭಯಾರಣ್ಯವ್ಯಾಪ್ತಿಪ್ರದೇಶದಲ್ಲಿಬೆಳೆ ಹಾನಿಗೊಂಡರೆ ಯಾವುದೇ ಪರಿಹಾರ ಸಿಗುವುದಿಲ್ಲ. ಅರಣ್ಯಸಂರಕ್ಷಣೆ ನಿಯಮವೂ ಇದಕ್ಕೆ ತೊಡಕಾಗಿದೆ. ವನ್ಯಜೀವಿ ಬೆಳೆ ನಾಶದ ಜತೆಗೆ ಕೃಷಿ ಆಧಾರಸ್ತಂಭ ಜಾನುವಾರು, ಸಾಕುನಾಯಿಗಳನ್ನು ಹುಲಿ,ಚಿರತೆ ಹೊತ್ತೊಯ್ಯುತ್ತಿವೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಒಂದರಲ್ಲಿಯೇ 2020-21 ನೇಸಾಲಿನಲ್ಲಿಈವರೆಗೆ ವನ್ಯಜೀವಿಯಿಂದ ಸಾಕು ಪ್ರಾಣಿಗಳ ಹತ್ಯೆಯ 16 ಪ್ರಕರಣಕ್ಕೆ 1,60,000 ರೂಪಾಯಿ ಪರಿಹಾರಧನ ವಿತರಣೆ ಮಾಡಲಾಗಿದೆ.

ಅಡಕೆ ಸಸಿ ಹಾನಿಗೆ ಪರಿಹಾರಧನ ಕೊಡದ ಇಲಾಖೆ..!
5 ವರ್ಷದೊಳಗಿನ ಕಿತ್ತಲೆ 1 ಗಿಡಕ್ಕೆ 200 ರೂ, 5 ವರ್ಷ ಮೇಲಿನ 1 ಗಿಡಕ್ಕೆ 320 ರೂ, 5 ವರ್ಷದ ಒಳಗಿನ ಅಡಕೆ, ತೆಂಗು 1 ಮರಕ್ಕೆ 400 ರೂ, 7ರಿಂದ 9 ವರ್ಷದ 1 ಮರಕ್ಕೆ 800 ರೂ ,10ರಿಂದ ಮೇಲ್ಪಟ್ಟ ವರ್ಷದ 1 ಮರಕ್ಕೆ 2000 ರೂ ಪರಿಹಾರಧನ ಲಭ್ಯ. ಬಾಳೆ 1ಗಿಡಕ್ಕೆ 160, ನಿಂಬೆ 1 ಗಿಡಕ್ಕೆ 10, ಗಜ ನಿಂಬೆ 1 ಗಿಡಕ್ಕೆ 24, ಮೆಂತ್ಯ ಸೊಪ್ಪು 1 ಕಟ್ಟಿಗೆ 4 ರೂ ಪರಿಹಾರಧನ ಸಿಗಲಿದೆ. 2016 ಸೆಪ್ಟಂಬರ್19ರಂದುಪರಿಷ್ಕøತಆದೇಶ ಪ್ರಕಟಗೊಂಡಿದೆ. ಆದರೆ, 5 ವರ್ಷದೊಳಗಿನ ಅಡಕೆ ಗಿಡ ಹಾನಿಗೆ ಅರಣ್ಯ ಇಲಾಖೆ ಪರಿಹಾರಧನ ಕೊಡುತ್ತಿಲ್ಲ ಎಂಬ ದೂರು ರೈತರಿಂದ ಕೇಳಿಬಂದಿದೆ.

ಮುಗ್ಧಪ್ರಾಣಿ ಮೊಲದ ಹಾವಳಿ:
ಮೊಲ ನೋಡಲು ಎಷ್ಟು ಮುಗ್ಧ ಪ್ರಾಣಿಯಲ್ಲವೆ?, ಆದರೆ ಇದು ಮಲೆನಾಡಿನಲ್ಲಿ ಅಡಕೆ ಗಿಡಗಳಿಗೆ ದೊಡ್ಡ ಸಂಚಕಾರ ತರುತ್ತಿದೆ. ಚಿಕ್ಕ ಗಿಡಗಳ ಸುಳಿ ಹಾಗೂ ಗರಿಗಳನ್ನು ಕಡಿಯುವ ಇದು ಅದರಲ್ಲಿನ ರಸ ಹೀರುವ ಮೂಲಕ ಮತ್ತಿನ ಮೋಜು ಅನುಭವಿಸುತ್ತದೆ. ಸೂಕ್ತ ರಕ್ಷಣೆ ಇಲ್ಲದ ಅಡಕೆ ಗಿಡ ಮೇಲೇಳಲು ಇದು ಬಿಡುವುದೇ ಇಲ್ಲ.

ಕಾಡುಕೋಣ,ಕಾಡೆಮ್ಮೆ ರಸ್ತೆ ಸಂಚಾರ..!
ಕಾಡುಕೋಣ,ಕಾಡೆಮ್ಮೆ ಕಾಟವಂತೂ ರೈತರಿಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ತೀರ್ಥಹಳ್ಳಿ ಪಟ್ಟಣ ಸಮೀಪದ ಹಳ್ಳಿಗಳಲ್ಲಿ ಕಾಡುಕೋಣ,ಕಾಡೆಮ್ಮೆ ಸಾಗುವಳಿಪ್ರದೇಶ, ರಸ್ತೆಯಲ್ಲಿ ಸಂಚರಿಸುವ ಜನರ ಮೇಲೆ ದಾಳಿಮಾಡುತ್ತಿವೆ. ಕಾಡುಕೋಣ,ಕಾಡೆಮ್ಮೆ ಗುಂಪಿನ ಹಾವಳಿ ತಡೆಗೆ ರೈತರ ಉಪಾಯಗಳು ಯಾವ ಪ್ರಯೋಜನಕ್ಕೆ ಬರುತ್ತಿಲ್ಲ. ಸಾರ್ವಜನಿಕ ಸಂಚಾರದ ಪ್ರಮುಖ ರಸ್ತೆ ಮಾರ್ಗದಲ್ಲಿಕಾಡುಕೋಣ, ಕಾಡೆಮ್ಮೆ ಹಗಲಿನಲ್ಲಿ ಸ್ವಚ್ಚಂದವಾಗಿ ಸಂಚರಿಸುತ್ತಿವೆ.

Ad Widget

Related posts

ಜಿಲ್ಕಾಡಳಿತದ ಭರವಸೆ , ಕಾರ್ಗಲ್ ಧರಣಿ ತಾತ್ಕಾಲಿಕ ವಾಪಸ್

Malenadu Mirror Desk

ಯುವ ಜನರಲ್ಲಿ ರಾಷ್ಟ್ರೀಯತೆ ಸ್ಫೂರ್ತಿಯನ್ನು ತುಂಬಲು ಪ್ರೇರಕ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

Malenadu Mirror Desk

ಶಿಕಾರಿಪುರದಲ್ಲಿ ಕುರುಬ ಸಮಾಜದ ಸಮಾವೇಶ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.