ದೊಡಮ…ದೊಡ್ಡಪ್ಪ ಗನಾಗೈದನೇ..?, ಚಿಕ್ಕವ್ವ… ಮಕ್ಕಳು ಚೆನಾಗೋದ್ತವರಾ…ಅಯ್ಯೋ ಅಜ್ಜವ್ವ…ಏಟ್ ದಿನಾ ಆತು ನಿನ್ನೋಡದೇ.. ಹಿಂಗಂದ ಬಸಪ್ಪ ಎಲ್ಲರ ಕೈ ..ಕಾಲು ಮುಗಿದು… ಗೇಟು ದಾಟಿ ಹೋಗುತ್ತಿದ್ದಂತೆ ಇತ್ತ ಅಜ್ಜಿಯ ವರಾತ ಶುರುವಾತು,….ಅಯ್ಯಯ್ಯ ನಾಟಕ್‍ಕಾರ್ ನನಮಗನ ಬಣ್ಣ ನೋಡವ್ವಿ…. ಇಂಕತಂಕ ನಾ ಎಲೆಡಕೆ ತಿನ್ನುಲೇ ಇಲ್ಲ….ಈ ಮುಕ್ಕ ಕೊಟ್ಟಿದ್ದೇ ನಂಗೆ… ಬಂದ್ವಿಟ್ಟಾ… ಯ್ಯಾಸ್ಗಾರ… ಎಲಕ್ಷನ್… ಅಂತೆ… ಎಲಕ್ಷನ್ ಈಸ್ ದಿನ ಎಲ್ಹೋಗಿದ್ನೊ..ನನ್……., ಇದು ಪ್ರಸ್ತುತ ರಾಜ್ಯದ ಪ್ರತಿ ಹಳ್ಳಿಯ ಮನೆಮನೆಯ ಜಗುಲಿ ಕಟ್ಟೆಗಳಲ್ಲಿ ಕಂಡು ಬರುತ್ತಿರುವ ಪ್ರಹಸನ. ಅಳೆದೂ ಸುರಿದು ಸರಕಾರ ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ನಿಗದಿ ಮಾಡಿದೆ. ಡಿ.22 ಮತ್ತು 27 ರಂದು ಎರಡು ಹಂತದಲ್ಲಿ ನಡೆಯುವ ಹಳ್ಳಿಫೈಟ್‍ನ ವೇದಿಕೆ ದಿನದಿಂದ ದಿನಕ್ಕೆ ಕಾವೇರುತ್ತಿದೆ.
ಸುಗ್ಗಿ ಕಾಲದ ಈ ಬಿಡುವಿಲ್ಲದ ಸಮಯದಲ್ಲಿಯೂ ಗ್ರಾಮವೀರರು ತಮ್ಮ “ಮತಕೊಯ್ಲು’ ಸಲೀಸುಗೊಳಿಸಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಕಷ್ಟ ಕಾಲದಲ್ಲಿ ತಿರುಗಿಯೂ ನೋಡದ ಕಳ್ಳು-ಬಳ್ಳಿ ಸಂಬಂಧಿಗಳ ಕಕ್ಕುಲಾತಿ ಮೇರೆ ಮೀರಿದೆ. ದೂರದ ಸಂಬಂಧಗಳೂ ಹತ್ತಿರವಾಗುತ್ತಿವೆ. ಶತ್ರುವಿನ ಶತ್ರು ಮಿತ್ರನಾಗುತ್ತಿದ್ದಾನೆ. ಹಗಲಿಡೀ ಹೊಲದಲ್ಲಿ ದುಡಿದು ಬರುವ ಕೃಷಿಕರ ನಡುವೆ ಗೋಧೂಳಿ ಹೊತ್ತಲ್ಲಿ ಸಮ್ಮೇಳನಗಳೇ ನಡೆಯುತ್ತಿವೆ.
ಪಕ್ಷಗಳದೇ ಪಾರಮ್ಯ:
ಗ್ರಾಮ ಪಂಚಾಯಿತಿ ಚುನಾವಣೆಗೆ ಪಕ್ಷ ಪಾರ್ಟಿ ಇಲ್ಲ ಎಂದು ಸುಮ್ಮನೇ ಹೇಳಲಾಗುತ್ತದೆ. ಆದರೆ ಈ ಚುನಾವಣೆಯೂ ಪಕ್ಷಗಳ ಚೌಕಟ್ಟಿನಲ್ಲಿಯೇ ನಡೆಯುತ್ತವೆ ಎಂಬುದು ಅಂಗೈ ಹುಣ್ಣಿನಷ್ಟೇ ಸತ್ಯ. ಎಲ್ಲಾ ಪ್ರತಿಪಕ್ಷಗಳ ಗ್ರಾಮ ಘಟಕಗಳು ಸಕ್ರಿಯವಾಗಿರುವ ಕಾರಣ ಅವರವರ ನೆಲೆಯಲ್ಲಿ ಪಕ್ಷದ ಉಮೇದುವಾರಿಕೆ ನಿಕ್ಕಿಯಾಗುತ್ತದೆ. ಹಳ್ಳಿಗಳಲ್ಲಿ ವಿದ್ಯಾವಂತರು ಹೆಚ್ಚಿರುವಂತೆ ನಿರುದ್ಯೋಗವೂ ಹೆಚ್ಚಿರುವ ಕಾರಣದಿಂದ ಒಂದೇ ಸೀಟಿಗೆ ಹಲವು ಆಕಾಂಕ್ಷಿಗಳಿದ್ದಾರೆ. ಯಾರು ಗೆಲ್ಲುತ್ತಾನೊ ಅವನನ್ನೇ “ನಮ್ಮವ’ ಎಂದು ರಾಜಕೀಯ ಪಕ್ಷಗಳು ಕೊನೆಗೆ ಹಣೆಪಟ್ಟಿ ಹಚ್ಚುತ್ತವೆ.
ಕಣಕಣದಲ್ಲೂ ರಾಜಕಾರಣ:
ಡಿಸೆಂಬರ್ ಬಂತೆಂದರೆ ನಮ್ಮ ರೈತಾಪಿ ಜನ ಸುಗ್ಗಿ ಸಂಭ್ರಮದಲ್ಲಿರುತ್ತಾರೆ. ಹೆಣ್ಣು-ಗಂಡೆಂಬ ಬೇಧವಿಲ್ಲದ ಒಕ್ಕಲುತನದಲ್ಲಿ ಬ್ಯುಸಿಯಾಗಿರುತ್ತಾರೆ. ಭತ್ತ ಒಕ್ಕುಲು ಮಾಡುವಲ್ಲಿ, ಅಡಕೆ ಸುಲಿಯುವಲ್ಲಿ, ಜೋಳ, ರಾಗಿ ಒಪ್ಪ ಮಾಡುವ ಎಲ್ಲ ಕಣಗಳಲ್ಲೂ ಈಗ ಗ್ರಾಮ ರಾಜಕಾರಣದ್ದೇ ಮಾತುಕತೆ. ಯಾರ ಹಿನ್ನೆಲೆ ಏನು… ಯಾರು ಯಾವಾಗ ಊರಿಗೆ ಮೋಸ ಮಾಡಿದ್ದ.ಯಾರು ಎಷ್ಟು ಗಟ್ಟಿಕುಳ… ಮತದಾರರ ಆಕಾಂಕ್ಷೆ ಪೂರೈಕೆ ಮಾಡುವಲ್ಲಿ ಯಾರು ನಿಸ್ಸೀಮ ? ಹೀಗೆ ತರಾವರಿ ಚರ್ಚೆಗಳು ನಡಯುತ್ತಿವೆ. ಎಲ್ಲಾ ಮಾತುಕತೆ ನಡುವೆ ಓ.. ಅಂವನ್ನ ಗೆಲ್ಲುಸುದ್ರೆ.. ಊರ್ನೆ ಮಾರಿ ಬಿಡುವಾ…. ಎಂಬ ಕುಹಕಗಳೂ ಕೇಳುವ ಹಳ್ಳಿಯ ಕಟ್ಟಪಂಚಾಯಿತಿಗಳು ಮಜಬೂತಾಗಿರುತ್ತವೆ.
ಹೆಣ್ಣು ಗಂಡು ಸಂಬಂಧ:
ಹಳ್ಳಿಗಳಲ್ಲಿ ಸೀಮಿತ ಸಂಖ್ಯೆಯ ಮತದಾರರ ನಡುವೆಯೇ ಚುನಾವಣೆ ನಡೆಯುವುದರಿಂದ ರಾಜಕೀಯ ಆಕಾಂಕ್ಷೆಯಿಂದಲೇ ದೊಡ್ಡ ಕುಟುಂಬ ನೋಡಿ ಹೆಣ್ಣು-ಗಂಡು ಸಂಬಂಧ ಮಾಡಿಕೊಳ್ಳುವ ಪ್ರಕರಣಗಳೂ ಸಾಕಷ್ಟು ನಡೆಯುತ್ತವೆ. ಕಳ್ಳು-ಬಳ್ಳಿ ಹೆಚ್ಚಿರುವವರು ಬೀಗರಾದರೆ ‘ಮತಶಿಕಾರಿ’ ಅನುಕೂಲ ಎಂಬ ದೂರಾಲೋಚನೆ ಇಂತಹ ನೆಂಟಸ್ಥನದ ಹಿಂದೆ ಅಡಗಿರುತ್ತದೆ.
ಸೀಟು ಹರಾಜು:
ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಹಳ್ಳಿಯಲ್ಲಿ ಅನಧಿಕೃತ ಹರಾಜು ನಡೆಯುವುದನ್ನು ನಾವು ಕೇಳಿದ್ದೇವೆ. ಈಗ “ಅವಿರೋಧ ಆಯ್ಕೆ’ ಹೆಸರಲ್ಲಿ ಪಂಚಾಯಿತಿ ಸೀಟನ್ನು ಹರಾಜಿನ ಮೂಲಕ ಗೆದ್ದುಕೊಳ್ಳುವ ಕಾನೂನು ಬಾಹಿರ ಕೃತ್ಯಗಳೂ ನಡೆಯುತ್ತಿವೆ. ಗ್ರಾಮ ಪಂಚಾಯಿತಿಯನ್ನು ಸಶಕ್ತಗೊಳಿಸುವ ಉದ್ದೇಶದಿಂದ ಸರಕಾರಗಳು ಹಲವು ಯೋಜನೆಗಳನ್ನು ಪಂಚಾಯಿತಿಗೆ ಕೊಡುತ್ತಿವೆ. ಇದರಿಂದ ತಾಲೂಕು ಪಂಚಾಯಿತಿಗಿಂತ ಗ್ರಾಮ ಪಂಚಾಯಿತಿಯೇ ಈಗ ಅಭ್ಯರ್ಥಿಗಳಿಗೆ “ಹುಲ್ಲುಗಾವಲು’ಎಂಬ ಸತ್ಯ ಅರಿವಾಗಿದೆ. ಅದರಲ್ಲೂ ಆದಾಯ ಹೆಚ್ಚಿರುವ ಪಂಚಾಯಿತಿಗಳ ಮೇಲೆ ಬಂಡವಾಳಸ್ಥರ ಕಣ್ಣು ಬೀಳುತ್ತಿವೆ. ಈ ಕಾರಣದಿಂದ ಊರಿನ ಅಭಿವೃದ್ಧಿಗೆ ನಾನು ಇಷ್ಟು ಹಣ ಕೊಡುತ್ತೇನೆ ನನ್ನನ್ನು ಅವಿರೋಧ ಆಯ್ಕೆ ಮಾಡಿ ಎಂಬ ಒಪ್ಪಂದಗಳು ಹಲವು ಕಡೆ ನಡೀತಿವೆ. ರಾಜ್ಯದ ಕೆಲವೆಡೆ ಈಗಾಗಲೇ ಈ ಪ್ರಕ್ರಿಯೆಗಳು ವರದಿಯಾಗಿವೆ. ಅಲ್ಲೊಬ್ಬ ಭೂಪ ಹೆಂಡತಿ ಗೆಲ್ಲಿಸಲು 25 ಲಕ್ಷ ಕೊಡಲು ತಯಾರಿದ್ದಾನೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ.
ಒಳ್ಳೆ ವ್ಯಕ್ತಿ ಆಯ್ಕೆಯಾಗಲಿ:
ರಾಜಕಾರಣ ಎಂದ ಮೇಲೆ ಅಪಸ್ವರ ಇದ್ದೇ ಇದೆ. ಆದರೆ ಗ್ರಾಮ ಮಟ್ಟದಲ್ಲಿ ನಮ್ಮನ್ನು ಪ್ರತಿನಿಧಿಸುವ ವ್ಯಕ್ತಿ ಪ್ರಾಮಾಣಿಕನಾಗಿದ್ದರೆ ಅದು ಮೊದಲ ಗೆಲುವಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಜಾತಿ, ಆಮಿಷಗಳಿಗೆ ಒಳಗಾಗದೆ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ರಾಜಕಾರಣ ಸ್ವಚ್ಛಗೊಳಿಸುವ ಕೆಲಸ ತಳಮಟ್ಟದಿಂದಲೇ ಆಗಬೇಕಿದೆ. ಹೀಗಾದಲ್ಲಿ ಮಹಾತ್ಮ ಗಾಂಧೀಜಿ ಕಂಡ ಗ್ರಾಮಸ್ವರಾಜ್ಯದ ಕಲ್ಪನೆ ಈಡೇಲಿದೆ ಅಲ್ಲವೆ ?