Malenadu Mitra
ಗ್ರಾಮಾಯಣ ರಾಜಕೀಯ ರಾಜ್ಯ ಶಿಕಾರಿಪುರ

ಮುಗಿದ ಪ್ರತಿಷ್ಠೆ ,ಇನ್ನು ಬಲಾಬಲ

ಶಿವಮೊಗ್ಗ: ಗ್ರಾಮರಾಜ್ಯದ ಚುನಾವಣೆ ಹಬ್ಬ ಸಮಾಪನಗೊಂಡಿದ್ದು,ಬುಧವಾರ ನಡೆದ ಮತ ಎಣಿಕೆಯಲ್ಲಿ ಗೆದ್ದವರ ಮೊಗದಲ್ಲಿ ಸಂಭ್ರಮ ಕಂಡುಬಂದರೆ, ಸೋತವರು ತಮ್ಮ ಹಿನ್ನಡೆಗೆ ಕಾರಣ ಏನು ಎಂಬ ಅವಲೋಕನ ಮಾಡಿಕೊಳ್ಳುತ್ತಾ ಮನೆಯತ್ತ ಸಾಗಿದರು.
ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ ೮ ರಿಂದಲೇ ಮತ ಎಣಿಕೆ ಆರಂಭವಾಯಿತು. ಹಳೆ ಕೊರೊನ ಹೊಸಕೊರೊನ ಎಂಬ ಸುದ್ದಿ ಬಿರುಗಾಳಿಯಂತೆ ಹರಡಿದ್ದರೂ ಯಾವುದನ್ನೂ ಲೆಕ್ಕಿಸದ ಗ್ರಾಮವಾಸಿಗಳು ತಮ್ಮ ಹುರಿಯಾಳುಗಳ ಗೆಲುವಿಗಾಗಿ ಕಾತುರದಿಂದ ಕಾಯುತಿದ್ದರು.
ರಾತ್ರಿ ತನಕ ಎಣಿಕೆ:
ಸಾರ್ವಜನಿಕ ಚುನಾವಣೆಗಳಲ್ಲಿ ಇವಿಎಂ ಮೂಲಕ ಮಧ್ಯಾಹ್ನದೊಳಗೆ ಫಲಿತಾಂಶ ಪಡೆಯುವ ಜನರು ಈಗಿನ ಬ್ಯಾಲೆಟ್ ಪೇಪರ್ ಚುನಾವಣೆಯಲ್ಲಿ ಫಲಿತಾಂಶಕ್ಕಾಗಿ ರಾತ್ರಿ ತನಕ ಕಾಯಬೇಕಾಯಿತು.ಜಿಲ್ಲೆಯ ೨೪೪ ಗ್ರಾಮಪಂಚಾಯಿತಿಗಳಿಗೆ ಮತದಾನ ನಡೆದಿದ್ದು, ಸಂಜೆತನಕ ಅರ್ಧದಷ್ಟೂ ಗ್ರಾಮಪಂಚಾಯಿತಿಗಳ ಮತ ಎಣಿಕೆ ಮುಗಿದಿರಲಿಲ್ಲ.ಇದರಿಂದ ಎಣಿಕೆ ಕೇಂದ್ರದ ಬಳಿ ಬೆಳಗ್ಗೆಯಿಂದ ರಾತ್ರಿ ತನಕ ಜನರು ಮತ್ತು ಅಭ್ಯರ್ಥಿಗಳು ಕಾದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪ್ರತಿಷ್ಠೆಯಾಗಿದ್ದ ಚುನಾವಣೆ:
ಶಿವಮೊಗ್ಗ ಜಿಲ್ಲೆಯಲ್ಲಿ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದವು ಎಂಬುದಕ್ಕೆ ಗ್ರಾಮಗಳಲ್ಲಿ ಹರಿದ ಸಂಪನ್ಮೂಲವೇ ಸಾಕ್ಷಿಯಾಗಿತ್ತು. ಸಿಎಂ ಜಿಲ್ಲೆ ಹಾಗೂ ಎಲ್ಲ ಅಧಿಕಾರವನ್ನು ತನ್ನ ಬಳಿಯೇ ಇಟ್ಟುಕೊಂಡಿರುವ ಬಿಜೆಪಿಗೆ ಈ ಫಲಿತಾಂಶ ಪ್ರತಿಷ್ಠೆಯಾಗಿತ್ತು.ಆದರೆ ಸತತ ಸೋಲು ಕಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳಿಗೆ ಅಸ್ತಿತ್ವದ ಈ ಗ್ರಾಮಸಮರ ಅಸ್ತಿತ್ವದ ಪ್ರಶ್ನೆಯಾಗಿತ್ತು. ಪ್ರತಿಪಕ್ಷ ಕಾಂಗ್ರೆಸ್‌ನ ಮಾಜಿ ಶಾಸಕರು ತಮ್ಮ ಕ್ಷೇತ್ರದಲ್ಲಿ ನೆಲೆಗಟ್ಟಿಮಾಡಿಕೊಳ್ಳುವ ನಿಟ್ಟಿನಲ್ಲಿ ತಮ್ಮ ನೆಲೆಯಲ್ಲಿ ಪ್ರಯತ್ನ ನಡೆಸಿದ್ದರು.

ವ್ಯಕ್ತಿಕೇಂದ್ರಿತವಾಗಿದ್ದ ಜೆಡಿಎಸ್:
ಹಿಂದಿನ ಅವಧಿಯಲ್ಲಿ ಮೂವರು ಶಾಸಕರನ್ನು ಹೊಂದಿದ್ದ ಜೆಡಿಎಸ್ ಈ ಬಾರಿಯ ಗ್ರಾಮಪಂಚಾಯಿತಿ ಚುನಾವಣೆಯನ್ನು ನಿರಾಶದಾಯಕವಾಗಿಯೇ ಎದುರಿಸಿದೆ ಎನ್ನಬಹುದು. ಆ ಪಕ್ಷದ ಜಿಲ್ಲಾಧ್ಯಕ್ಷರೂ ಸೇರಿದಂತೆ ಪ್ರಮುಖ ಮುಖಂಡರು ಕಾಂಗ್ರೆಸ್‌ನತ್ತ ಮುಖಮಾಡಿದ್ದಾರೆ. ತೀರ್ಥಹಳ್ಳಿಯಲ್ಲಿ ಆರ್.ಎಂ.ಮಂಜುನಾಥ ಗೌಡರು ತಮ್ಮ ಇತ್ತೀಚಿನ ಹೋರಾಟಗಳನ್ನು ವಯಕ್ತಿಕ ನೆಲೆಯಲ್ಲಿ ಮಾಡುವ ಮೂಲಕ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ.

ಸೊರಬದಲ್ಲಿ ಮಾಜಿ ಶಾಸಕ ಮಧುಬಂಗಾರಪ್ಪ ಕಾಂಗ್ರೆಸ್‌ಗೆ ಅಧಿಕೃತವಾಗಿ ಹೋಗಿಲ್ಲ ಆದರೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಕಾಂಗ್ರೆಸ್‌ನಾಯಕರೊಡಗೂಡಿಯೇ ಮಾಡಿದ್ದಾರೆ.

ಇನ್ನು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಾರದಾಪೂರ್ಯನಾಯ್ಕ ಅವರು ಪಕ್ಷ ಕಾರ್ಯಕರ್ತರಿಗೆ ಚುನಾವಣೆಗೆ ಸ್ಪರ್ಧಿಸುವಂತೆ ಪ್ರೋತ್ಸಾಹ ನೀಡಿದ್ದರು.

ಮೂರು ಕ್ಷೇತ್ರಗಳಲ್ಲಿ ಬಿಜೆಪಿಗೆ ಸವಾಲು
ಶಿವಮೊಗ್ಗ ಗ್ರಾಮಾಂತರ,ಶಿಕಾರಿಪುರದಲ್ಲಿ ಆಡಳಿತ ಪಕ್ಷದವರ ಚುನಾವಣೆ ಹವಾ ಜೋರಾಗಿಯೇ ಇತ್ತು. ಈ ಎರಡೂ ಕ್ಷೇತ್ರಗಳಲ್ಲಿ ಪ್ರಬಲ ಎದುರಾಳಿಗಳು ಇಲ್ಲದಿರುವ ಕಾರಣ ಎಲ್ಲವೂ ಸರಾಗವಾಗಿಯೇ ನಡೆದಿದೆ. ಆದರೆ ಸೊರಬ, ಸಾಗರ ಹಾಗೂ ತೀರ್ಥಹಳ್ಳಿ ಕ್ಷೇತ್ರಗಳಲ್ಲಿ ಆಡಳಿತ ಪಕ್ಷದ ಶಾಸಕರಿಗೆ ಈ ಚುನಾವಣೆ ಸವಾಲಿನದೇ ಆಗಿತ್ತು. ಸಾಗರದಲ್ಲಿ ಶಾಸಕ ಹರತಾಳು ಹಾಲಪ್ಪ ಅವರು, ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರಗಳಿಗೂ ಭೇಟಿ ನೀಡಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದರು. ಸೊರಬದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿ ಚುನಾವಣೆ ನಡೆಸಿದ್ದ ಶಾಸಕ ಕುಮಾರ ಬಂಗಾರಪ್ಪ ಅವರಿಗೆ ಸವಾಲೊಡ್ಡಿದ್ದವು. ಶಾಸಕ ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲಿನ ಒಳಜಗಳವನ್ನೂ ನಿಭಾಯಿಸಿಕೊಂಡು ಗ್ರಾಮ ಕಲಿಗಳನ್ನು ಉತ್ತೇಜಿಸುವಲ್ಲಿ ಸಾಕಷ್ಟು ಶ್ರಮ ಹಾಕಿದ್ದಾರೆ. ತೀರ್ಥಹಳ್ಳಿ ಕ್ಷೇತ್ರವಂತೂ ಕಿಮ್ಮನೆ ರತ್ನಾಕರ್ ಅವರ ಪ್ರಬಲ ಪ್ರತಿರೋಧ ಹಾಗೂ ಆರ್.ಎಂ.ಮಂಜುನಾಥಗೌಡರ ಒಳಹೊಡೆತದಿಂದಾಗಿ ಜಿದ್ದಾಜಿದ್ದಿನಿಂದ ಕೂಡಿತ್ತು. ಶಾಸಕ ಆರಗ ಜ್ಞಾನೇಂದ್ರ ಅವರು ಆಡಳಿತಯಂತ್ರವನ್ನು ಚುನಾವಣೆಗೆ ಪೂರಕವಾಗಿ ಬಳಸಿಕೊಂಡರು ಎಂಬ ಆರೋಪವನ್ನೂ ಎದುರಿಸುವಂತಾಗಿತ್ತು. ಒಟ್ಟಿನಲ್ಲಿ ಈ ಮೂರು ಕ್ಷೇತ್ರಗಳಲ್ಲಿ ಬಿರುಸಿನ ಚುನಾವಣೆ ನಡೆದಿದೆ.ಶಿಕಾರಿಪುರದಲ್ಲಿ ಸಂಸದ ರಾಘವೇಂದ್ರ ಅವರು ಮತ ಎಣಿಕೆ ಕೇಂದ್ರದಲ್ಲಿ ಹಾಜರಿದ್ದು ಬಿಜೆಪಿ ಬೆಂಬಲಿತ ಆಭ್ಯರ್ಥಿಗಳನ್ನು ಅಭಿನಂದಿಸಿದರು


Ad Widget

Related posts

ಫೆ.8,9: ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ

Malenadu Mirror Desk

ಕಂಟೈನ್ ಮೆಂಟ್ ಜೋನ್ ನಲ್ಲಿ ಕಟ್ಟುನಿಟ್ಟಿನ ನಿರ್ವಹಣೆ

Malenadu Mirror Desk

ಆಯುಷ್ಮಾನ್ ಅಡಿ ಕೋವಿಡ್ ಚಿಕಿತ್ಸೆ. ಯಾವುದಕ್ಕೆ ಎಷ್ಟು ಹಣ ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.