Malenadu Mitra
ರಾಜ್ಯ ಶಿವಮೊಗ್ಗ

ಅಕೇಶಿಯಾ ವಿರುದ್ಧ ಭುಗಿಲೆದ್ದ ಆಕ್ರೋಶ

ಅಕೇಶಿಯಾ ಬೆಳೆಗೆ ಮತ್ತೆ ಅರಣ್ಯ ಭೂಮಿ ಪರಭಾರೆ ಮಾಡಿಕೊಟ್ಟಿರುವುದನ್ನು ಖಂಡಿಸಿ ಇಂದು ಮಾಡಿರುವ ಹೋರಾಟ ಆರಂಭ, ಇನ್ನು ಮುಂದೆ ಅಂತ್ಯ ಇದೆ. ಕಾನೂನು ಮೀರಿ ಅರಣ್ಯ ಭೂಮಿ ಅಗ್ರಿಮೆಂಟ್ ಮಾಡಿಕೊಟ್ಟಿರುವ ಆಧಿಕಾರಿಗಳು ಮುಂದೆ ಅನುಭವಿಸುತ್ತೀರಿ, ನಿಮಗೆ ಹೇಳಿದ ರಾಜಕಾರಣಿಗಳು ಚುನಾವಣೆ ಬಂದಾಗ ಬೀದಿಗೆ ಬರ್‍ತಾರೆ ನೀವು ಅನುಭವಿಸುತ್ತೀರಿ ಎಂದು ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಕೆ.ಟಿ.ಗಂಗಾಧರ್ ಜಿಲ್ಲಾಧಿಕಾರಿ ಹಾಗೂ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗುರುವಾರ ಶಿವಮೊಗ್ಗದಲ್ಲಿ ನಡೆದ ಅಕೇಶಿಯಾ ನಮ್ಮೂರಿಗೆ ಬೇಡ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಅವರು ಮಾತನಾಡಿದರು. ೪೦ ವರ್ಷಗಳ ಕಾಲ ಈ ಮಲೆನಾಡನ್ನು ಬರಡು ಮಾಡಿ ಎಂಪಿಎಂ ಕಾರ್ಖಾನೆಯನ್ನು ನಷ್ಟದ ಅಂಚಿಗೆ ತಳ್ಳಲಾಗಿದೆ. ಈಗ ಮತ್ತೆ ೪೬ ಸಾವಿರ ಹೆಕ್ಟೇರ್ ಅರಣ್ಯ ಭೂಮಿ ಮೇಲೆ ಕಣ್ಣು ಬಿದ್ದಿದೆ. ರಾಜ್ಯ ಸರಕಾರ ಕಾರ್ಪೋರೇಟ್ ಸಂಸ್ಥೆಗಳಿಗೆ ಭೂಮಿಯನ್ನು ಗುತ್ತಿಗೆ ನೀಡಿದೆ ಎಂದು ಆರೋಪಿಸಿದರು.
ಪರಿಸರವಾದಿ ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಯಡಿಯೂರಪ್ಪ ಸರಕಾರ ಬಂಡವಾಳ ಶಾಹಿಗಳಿಗೆ ಅರಣ್ಯ ಮಾರಿ ಮಲೆನಾಡನ್ನು ಬರದು ಭೂಮಿಯಾಗಿ ಮಾಡಲು ಹೊರಟಿದೆ ಎಂದು ಹೇಳಿದರು.
ಹೋರಾಟ ಸಮಿತಿಯ ಪ್ರಮುಖರೂ ಹಾಗೂ ಚಿಂತಕ ಕೆ.ಪಿ.ಶ್ರೀಪಾಲ್ ಮಾತನಾಡಿ ಈ ರಾಜ್ಯದಲ್ಲಿ ರೈತರು ಮತ್ತು ಕೃಷಿಕರಿಗೆ ಮೂರು ಕಾಸಿನ ಬೆಲೆ ಇಲ್ಲ. ಸಚಿವ ಸಂಪುಟದಲ್ಲಿ ತೀರ್ಮಾನ ಮಾಡದೆ, ವಿಧಾನ ಸಭೆಯಲ್ಲಿ ಚರ್ಚಿಸದೆ ೪೬ ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಲೀಸ್‌ಗೆ ನೀಡಲಾಗಿದೆ. ಖಾಸಗಿಯವರಿಗೆ ಈ ಭೂಮಿ ಪರಭಾರೆ ಮಾಡುವ ಹುನ್ನಾರ ಜಿಲ್ಲಾ ಉಸ್ತುವಾರಿ ಸಚಿವರಿಗೂ ಗೊತ್ತಿಲ್ಲ. ಇದನ್ನು ಖಂಡಿಸಿ ರಾಜ್ಯಾದ್ಯಂತ ದೊಡ್ಡ ಹೋರಾಟ ನಡೆಯಲಿದೆ. ಸರಕಾರ ಈ ನಾಡಿನ ನೆಲ-ಜಲ ರಕ್ಷಣೆ ಮಾಡುವ ಬದಲು ಲೂಟಿಗೆ ಮುಂದಾಗಿರುವುದು ಸರಿಯಲ್ಲ ಎಂದರು.,
ಹೋರಾಟಗಾರರು ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಅವರನ್ನು ತಡೆದರು. ಈ ಸಮಯದಲ್ಲಿ ಪೊಲೀಸರು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.ನಮ್ಮೂರಿಗೆ ಅಕೇಶಿಯಾ ಬೇಡ ಆಂದೋಲನದ ಅಡಿಯಲ್ಲಿ ನಡೆಯುತ್ತಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದ ಪರಿಸರ ಹೋರಟಗಾರರು, ವಿವಿಧ ಸಂಘಟನೆಗಳು ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಮಲೆನಾಡಿನ ನೆಲ,ಜಲ ಪ್ರೀತಿಸುವ ಎಲ್ಲರೂ ಭಾಗವಹಿಸಿ ಯಾವುದೇ ಕಾರಣಕ್ಕೂ ಭೂಮಿಯನ್ನು ಪರಬಾರೆ ಮಾಡಬಾರದು. ಮಲೆನಾಡಿನ ಜೀವ ವೈವಿದ್ಯತೆಗೆ ಕಂಟಕವಾಗಿರುವ ಅಕೇಶಿಯಾ ಮರ ನಮಗೆ ಬೇಡ ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮೇಲೆ ಒತ್ತಡ ಹಾಕಿ, ಅರಣ್ಯ ಸಂರಕ್ಷಣಾಧಿಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು

ಹೊಳೆ ಬಸ್ ನಿಲ್ದಾಣದಿಂದ ಆರಂಭವಾದ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಾಗಿ ಮಲೆನಾಡು ಮಾರಾಟಕ್ಕಿಕ್ಕ ಎಂಬ ಸಂದೇಶವನ್ನು ಆಳುವ ಸರಕಾರಗಳಿಗೆ ನೀಡಿತು. ಪ್ರತಿಭಟನೆಯಲ್ಲಿ ಕೆ.ಪಿ.ಶ್ರೀಪಾಲ್, ಎಂ.ಗುರುಮೂರ್ತಿ, ಕೆ.ಟಿ.ಗಂಗಾಧರ್, ಪ್ರೊ.ರಾಜೇಂದ್ರ ಚೆನ್ನಿ, ಶಶಿಸಂಪಳ್ಳಿ, ರಮೇಶ್ ಹೆಗ್ಡೆ, ಬಿ.ಎಂ.ಕುಮಾರಸಾಮಿ, ಶೇಖರ್ ಗೌಳೇರ್ , ಜಿ.ಡಿ.ಮಂಜುನಾಥ್, ಡಿ.ಮಂಜುನಾಥ್, ಕೃಷ್ಣಮೂರ್ತಿ ಹಿಳ್ಳೋಡಿ, ಎಚ್.ಬಿ.ರಾಘವೇಂದ್ರ ಸೇರಿದಂತೆ ಅನೇಕ ಪರಿಸರ ಪರ ಚಿಂತಕರು ಭಾಗವಹಿಸಿದ್ದರು.

ಇದನ್ನೂ ಓದಿ

ವಿರೋಧ ಯಾಕೆ?

ಸುಮಾರು ೪೦ ವರ್ಷಗಳ ಹಿಂದೆ ಮೈಸೂರು ಪೇಪರ್ ಮಿಲ್ಸ್(ಎಂಪಿಎಂ) ಕಾಗದ ಕಾರ್ಖಾನೆಯನ್ನು ಸರ್ಕಾರ ಆರಂಭಿಸಿದಾಗ ಅದಕ್ಕೆ ಕಚ್ಛಾವಸ್ತು ಸರಬರಾಜಿಗಾಗಿ ಮಲೆನಾಡಿನ ದಟ್ಟ ಕಾಡಿನ ೩೨,೦೦೦ ಹೆಕ್ಟೇರ್(ಅಂದಾಜು ೮೦ ಸಾವಿರ ಎಕರೆ) ಅರಣ್ಯ ಭೂಮಿಯನ್ನು ೪೦ ವರ್ಷದ ಲೀಸ್(ಗುತ್ತಿಗೆ) ಆಧಾರದ ಮೇಲೆ ನೀಡಲಾಗಿತ್ತು. ಲೀಸ್ ಅವಧಿ ಮುಗಿದ ಮೇಲೆ ಒಂದು ವೇಳೆ, ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಿಕೊಟ್ಟರೂ ಈ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿಕೊಡಬೇಕು ಎಂದು ಲೀಸ್‌ನಲ್ಲಿ ಸರ್ಕಾರವೇ ಷರತ್ತು ಹಾಕಿತ್ತು.

ಆ ಭೂಮಿಯಲ್ಲಿ ಬೆಳೆದುನಿಂತಿದ್ದ ಸಹಜ ಕಾಡನ್ನು ನಾಶಮಾಡಿದ ಕಂಪನಿ, ಅಲ್ಲಿ ಮಲೆನಾಡಿನ ಅಂತರ್ಜಲ ಮತ್ತು ಒಟ್ಟಾರೆ ಪರಿಸರಕ್ಕೆ ಮಾರಕವಾದ ಅಕೇಶಿಯಾ ಹಾಗೂ ನೀಲಗಿರಿ ಬೆಳೆದಿದೆ. ಸಾವಿರಾರು ಎಕರೆ ಪ್ರದೇಶದ ಕಾಡಿನ ಜಾಗದಲ್ಲಿ ಈ ವಿದೇಶಿ ತಳಿ ಮರಗಳನ್ನು ಬೆಳೆದ ಕಾರಣ ಮಲೆನಾಡಿನ ಪರಿಸರ, ವನ್ಯಜೀವಿ, ಜನಜೀವನ, ಹವಾಮಾನ ಮತ್ತು ನದಿ ಕಣಿವೆಯ ಜೊತೆ ಅಂತರ್ಜಲ ಮಟ್ಟದ ಮೇಲೆಯೂ ಸಾಕಷ್ಟು ಪರಿಣಾಮಗಳಾಗಿವೆ. ಈ ನಡುವೆ ನಷ್ಟದ ಸುಳಿಗೆ ಸಿಲುಕಿ ಎಂಪಿಎಂ ಕಂಪನಿ ಮುಚ್ಚಿಹೋಗಿ ವರ್ಷಗಳೇ ಉರುಳಿವೆ. ಈಗ, ಭೂಮಿಯ ಲೀಸ್ ಅವಧಿ ಮುದಿಗಿದೆ. ಆದರೆ ಸರ್ಕಾರ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿ ಪಡೆಯುವ ಬದಲು, ಮತ್ತೆ ಲೀಸ್ ನವೀಕರಣದ ಮೂಲಕ ಆ ಭೂಮಿಯನ್ನು ಮುಚ್ಚಿಹೋಗಿರುವ ಕಂಪನಿಗೆ ಪರಭಾರೆ ಮಾಡಿದೆ!

ಏಕೆಂದರೆ;
ಈ ಅಪಾರ ಪ್ರಮಾಣದ ಅಮೂಲ್ಯ ಭೂಮಿಯ ಮೇಲೆ ಸರ್ಕಾರದ ಆಯಕಟ್ಟಿನ ಜಾಗದಲ್ಲಿರುವವರ ಕಣ್ಣು ಬಿದ್ದಿದೆ. ಕಾರ್ಖಾನೆಯನ್ನು ಪುನರಾರಂಭಿಸುವ ನೆಪದಲ್ಲಿ ಮಲೆನಾಡಿನ ಈ ಭೂಮಿಯನ್ನು ತಮ್ಮ ವಶಕ್ಕೆ ಪಡೆದು ಅಲ್ಲಿ ವಾಣಿಜ್ಯ ಅರಣ್ಯಬೆಳೆ ಬೆಳೆಯುವ ದಂಧೆ ನಡೆಸಲು ಅವರು ಸಂಚು ಹೂಡಿದ್ದಾರೆ. ಅದಕ್ಕೆ ತಕ್ಕಂತೆ ಅರಣ್ಯ ಇಲಾಖೆ, ಸರ್ಕಾರ ಮತ್ತು ಸರ್ಕಾರದ ಚುಕ್ಕಾಣಿ ಹಿಡಿದವರೂ ಅವರಿಗೆ ಸಾಥ್ ನೀಡುತ್ತಿದ್ದಾರೆ.

ಕಾರ್ಪೊರೇಟ್ ಕಂಪನಿಗಳೊಂದಿಗೆ ರಾಜಕಾರಣಿಗಳೂ, ಅಧಿಕಾರಿಗಳು ಕೈಜೋಡಿಸಿದ್ದಾರೆ. ಈ ನಾಡದ್ರೋಹಿ, ಜನದ್ರೋಹಿ ವಿಷವರ್ತುಲ, ಇಡೀ ಮಲೆನಾಡಿನ ಅರಣ್ಯ ಪ್ರದೇಶವನ್ನೇ ತಮ್ಮ ಕಬ್ಜಕ್ಕೆ ಪಡೆದು, ಮಲೆನಾಡು ಮಾತ್ರವಲ್ಲದೆ, ಇಡೀ ರಾಜ್ಯಕ್ಕೇ ಶುದ್ಧ ಗಾಳಿ, ನೀರು, ಅಪಾರ ಮೂಲಿಕೆಗಳನ್ನು ನೀಡುವ ಕಾಡನ್ನೇ ಸರ್ವನಾಶ ಮಾಡುವ ಹೊಂಚು ಹೂಡಿದೆ. ಜಗತ್ತಿನ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಒಂದಾದ ಪಶ್ಚಿಮಘಟ್ಟದ ಸಹ್ಯಾದ್ರಿ ಶ್ರೇಣಿಯನ್ನೇ ತಮ್ಮ ಜಹಗೀರು ಮಾಡಿಕೊಳ್ಳಲು ಹೊರಟಿದ್ದಾರೆ.

ವಿರೋಧ ಯಾಕೆ?
ಈ ೮೦ ಸಾವಿರ ಎಕರೆಯಷ್ಟು ಭಾರೀ ಭೂ ಪ್ರದೇಶವನ್ನು, ಸಹಜ ಕಾಡು ಬೆಳೆಯಬೇಕಾದ ಜಾಗವನ್ನು ಯಾರೋ ಒಬ್ಬ ವ್ಯಕ್ತಿ ಅಥವಾ ಒಂದು ಕಂಪನಿಯ ಲಾಭಕ್ಕಾಗಿ, ದಂಧೆಗಾಗಿ ಮತ್ತೆ ಬಿಟ್ಟುಕೊಟ್ಟರೆ ಅದು ಈಗಾಗಲೇ ವಿವಿಧ ಕಾರಣಗಳಿಂದಾಗಿ ಕರಗುತ್ತಿರುವ ಕಾಡಿಗೆ, ಬತ್ತಿ ಹೋಗಿರುವ ಅಂತರ್ಜಲಕ್ಕೆ, ಮಾಯವಾಗುತ್ತಿರುವ ವನ್ಯಜೀವಿಗಳಿಗೆ ಮತ್ತು ಅಂತಿಮವಾಗಿ ಸಾಕಷ್ಟು ಸಂಕಷ್ಟದಲ್ಲಿರುವ ಮಲೆನಾಡಿನ ನಮ್ಮ-ನಿಮ್ಮಲ್ಲರ ಬದುಕಿನ ಅಂತ್ಯವೇ ಆಗಲಿದೆ.

ಕಾಡಿನ ನಡುವಿನ, ನಮ್ಮ ಮನೆ, ಹೊಲ, ಗದ್ದೆಗಳಿಗೆ ಹೋಗಲೂ ಅವಕಾಶವಾಗದಂತೆ ಖಾಸಗೀ ಕಂಪನಿಗಳ ಬಲಿಷ್ಠ ಬೇಲಿಗಳು ಸುತ್ತುವರಿಯಲಿವೆ. ಅವರ ಅನುಮತಿ ಇಲ್ಲದೆ ನಮ್ಮ ಮನೆಗೆ ನಾವೇ ಹೋಗುವುದು ಕೂಡ ದುಸ್ತರವಾಗಲಿದೆ! ಹಾಗಾಗಿ ವಿರೋಧ. ನಮ್ಮ ಬದುಕಿನ ಮೇಲೆ ಮತ್ತೊಬ್ಬರ ಬೀಗ ಬೀಳುವುದಕ್ಕಾಗಿ ವಿರೋಧ, ನಮ್ಮ ಕಾಡಿನ ಮೇಲೆ, ಕಾಡಿನ ಜೀವಿಗಳ ಮೇಲೆ, ನಮ್ಮ ಹೊಳೆ-ಹಳ್ಳ-ನದಿ-ಕಣಿವೆಗಳ ಮೇಲೆ ದೊಣ್ಣೆ ನಾಯಕನ ಅಪ್ಪಣೆಯ ತೂಗುಗತ್ತಿ ಬೇಡ ಎಂದು ವಿರೋಧ!

Ad Widget

Related posts

ಸಿಎಂ,ಮಾಜಿ ಸಿಎಂ ಕೈ ಕೊಟ್ಟಿದ್ದರಿಂದ ದೇವರ ಮೊರೆಹೋದ ಹಾಲಪ್ಪ
ಶರಾವತಿ ಸಂತ್ರಸ್ತರ ಸಮಸ್ಯೆಗೆ ಸರಕಾರ ಬೆನ್ನುತೋರಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ

Malenadu Mirror Desk

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ 15-20 ದಿನಗಳಲ್ಲಿ ಪರಿಹಾರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

Malenadu Mirror Desk

ಪ್ರತಿ ತಾಲೂಕಲ್ಲೂ ಆಮ್ಲಜನಕ ಘಟಕ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.