ಶಿವಮೊಗ್ಗದಲ್ಲಿ ಡಿ.ಆರ್.ಡಿ.ಒ. ಸಂಶೋಧನಾ ಘಟಕವನ್ನು ಸ್ಥಾಪಿಸುವ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಬೇಟಿ ನೀಡಿದ್ದ ತನಿಖಾ ತಂಡವು ಈಗಾಗಲೇ ವರದಿ ಸಲ್ಲಿಸಿದ್ದು, ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ತಿಳಿಸಿದ್ದಾರೆ.
ಅವರು ಬುಧವಾರ ಕುವೆಂಪು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ಡಿ.ಆರ್.ಡಿ.ಒ ತಂಡದ ವಿಜ್ಞಾನಿಗಳು ಹಾಗೂ ತಂತ್ರಜ್ಞರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು. ಜನವರಿ ೦೫ರಂದು ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಅವರನ್ನು ಭೇಟಿ ಮಾಡಿ, ಸಂಶೋಧನಾ ಘಟಕದ ಜೊತೆಯಲ್ಲಿ ಡಿ.ಆರ್.ಡಿ.ಒ. ಪ್ರಯೋಗಾಲಯ ಸ್ಥಾಪಿಸುವಂತೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಡಿ.ಆರ್.ಡಿ.ಒ.ದ ಸೈಂಟಿಸ್ಟ್ ಮತ್ತು ಡೈರೆಕ್ಟರ್ ಜನರಲ್-ಲೈಫ್ ಸೈನ್ಸ್ ಡಾ. ಎ.ಕೆ. ಸಿಂಗ್ ನೇತೃತ್ವದ ತಂಡ ಕುವೆಂಪು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ, ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ಪ್ರಸ್ತುತಪಡಿಸಿದ ಡಾಕ್ಯುಮೆಂಟರಿಯನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ಭೇಟಿ ಸಂದರ್ಭದಲ್ಲಿ ಡಿ.ಆರ್.ಡಿ.ಒ.ದ ನಿರ್ದೇಶಕ ದೇವಕಾಂತ ಪಹಾಡ್‌ಸಿಂಗ್‌ರವರು ಡಿ.ಆರ್.ಡಿ.ಒ.ದ ಸಾಕ್ಷ್ಯಚಿತ್ರವನ್ನು ಪ್ರಸ್ತುತಪಡಿಸಿ ಮಾಹಿತಿ ನೀಡಿದರು ಎಂದವರು ತಿಳಿಸಿದರು.
ಶಿವಮೊಗ್ಗದಲ್ಲಿ ಡಿ.ಆರ್.ಡಿ.ಒ. ಸ್ಥಾಪನೆಗೆ ಇರುವ ಪರಿಸರ, ಸಾರಿಗೆ, ರೈಲ್ವೆ, ವೈಮಾನಿಕ ಸಂಪರ್ಕ, ಪಶ್ಚಿಮ ಘಟ್ಟಗಳಲ್ಲಿ ದೊರೆಯುವ ನೈಸರ್ಗಿಕ ಗಿಡಮೂಲಿಕೆಗಳು, ಸಾಂಪ್ರದಾಯಿಕ ವೈದ್ಯಕೀಯ ಚಿಕಿತ್ಸಾ ಪದ್ದತಿ, ಲಭ್ಯವಿರುವ ಕಾಲೇಜುಗಳು ಹೀಗೆ ಎಲ್ಲಾ ಅನುಕೂಲಗಳ ಬಗ್ಗೆ ಮತ್ತು ಡಿ.ಆರ್.ಡಿ.ಒ. ಸ್ಥಾಪನೆಯಿಂದಾಗಿ ಜಿಲ್ಲೆಗೆ ಆಗುವ ಅನುಕೂಲಗಳ ಕುರಿತು ತನಿಖಾ ತಂಡಕ್ಕೆ ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ ನೀಡಿದರು.
ಈ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆ ಬಗ್ಗೆ ಚರ್ಚಿಸಿದ ಅವರು, ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ಘಟಕ ಸ್ಥಾಪಿಸಲು ಡಿ.ಆರ್.ಡಿ.ಒ.ದ ತಾಂತ್ರಿಕ ತಂಡವು ಈ ಹಿಂದೆ ಒಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆದರೆ ಏರೋನಾಟಿಕ್ಸ್, ಶಸ್ತ್ರಾಸ್ತ್ರಗಳು, ಎಲೆಕ್ಟ್ರಾನಿಕ್ಸ್, ಯುದ್ದ ವಾಹನಗಳು, ಇಂಜಿನಿಯರಿಂಗ್ ವ್ಯವಸ್ಥೆಗಳು, ಸಲಕರಣೆಗಳು, ಕ್ಷಿಪಣಿಗಳು, ಸುಧಾರಿತ ಕಂಪ್ಯೂಟಿಂಗ್ ಮತ್ತು ಸಿಮ್ಯುಲೇಶನ್, ವಿಶೇಷ ವಸ್ತುಗಳು, ನಾಕಾ ವ್ಯವಸ್ಥೆಗಳಂತ ವಿವಿಧ ವಿಭಾಗಗಳನ್ನು ಒಳಗೊಂಡ ರಕ್ಷಣಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಂತಹ ಹಲವಾರು ಕಾರ್ಯಗಳನ್ನು ಡಿ.ಆರ್.ಡಿ.ಒ. ಘಟಕವು ನಿರ್ವಹಿಸುತ್ತದೆ. ಆದ್ದರಿಂದ ಶಿವಮೊಗ್ಗದಲ್ಲಿ ಉದ್ದೇಶಿತ ಡಿ.ಆರ್.ಡಿ.ಓ. ಸಂಶೋಧನಾ ಕೇಂದ್ರದ ಬದಲಾಗಿ ಸುಸಜ್ಜಿತ ಮತ್ತು sಸ್ವತಂತ್ರವಾಗಿರುವ ಡಿ.ಆರ್.ಡಿ.ಒ. ಪ್ರಯೋಗಾಲಯವನ್ನು ಸ್ಥಾಪಿಸುವಂತೆ ಒತ್ತಾಯಿಸಿದರು.
ಡಿ.ಆರ್.ಡಿ.ಒ. ಡೈರಕ್ಟರ್ ಜನರಲ್ ಎ.ಕೆ.ಸಿಂಗ್‌ರವರು ಮಾತನಾಡಿ, ಕುವೆಂಪು ವಿಶ್ವವಿದ್ಯಾಲಯವೂ ಸೇರಿದಂತೆ ಎಲ್ಲಾ ವಿಶ್ವವಿದ್ಯಾಲಯಗಳು ಜ್ಞಾನ ಉತ್ಪಾದನಾ ಕೇಂದ್ರಗಳು. ಪ್ರಸ್ತುತ ಕೇಂದ್ರ ರಕ್ಷಣಾ ಸಚಿವರ ನಿರ್ದೇಶನದ ಮೇರೆಗೆ ಇಲ್ಲಿಗೆ ಬೇಟಿ ನೀಡಿದ್ದು, ಸಂಸದರು ಹಾಗೂ ಮುಖ್ಯಮಂತ್ರಿಗಳು ಜಿಲ್ಲೆಯ ಅಭಿವೃದ್ಧಿಗೆ ಮಾಡಿರುವ ಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಡಿ.ಆರ್.ಡಿ.ಒ. ಸ್ಥಾಪನೆಯಿಂದಾಗಿ ಶಿವಮೊಗ್ಗ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.
ಕೇಂದ್ರ ಕಚೇರಿಯ ನಿರ್ದೇಶಕ ಕೆ.ಕೆ. ಪಾಟಕ್ ರವರು ಮಾತನಾಡಿ, ಡಿ.ಆರ್.ಡಿ.ಒ.ಘಟಕಗಳು ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಸೈನಿಕರ ಶ್ರೆಯೋಭಿವೃದ್ಧಿಗೆ ಕಂಕಣಬದ್ದವಾಗಿವೆ. ಅತೀ ಚಳಿಯಲ್ಲಿ, ಅತೀ ಹಿಮದ ಮಳೆಯಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗೆ ಒದಗಿಸಬಹುದಾದ ಸೌಲತ್ತುಗಳ ಬಗ್ಗೆ, ಅವರ ಆಹಾರದ ಬಗ್ಗೆ, ಅವರ ಉಡುಗೆ-ತೊಡುಗೆ, ಆಯುಧಗಳ ನಿರ್ವಹಣೆ, ಗಡಿ ಪ್ರದೇಶದ ಜನರ ಬದುಕು, ಕೃಷಿ ಚಟುವಟಿಕೆಗಳು, ರಕ್ಷಣಾ ಇಲಾಖೆಯ ತಾಂತ್ರಿಕ ಅಭಿವೃದ್ಧಿ, ನೀರಿನಾಳದಲ್ಲಿ ನಿರ್ವಹಿಸುವ ರಕ್ಷಣಾ ಪಡೆಗಳು, ಸಬ್‌ಮೆರಿನ್‌ಗಳ ಅಭಿವೃದ್ಧಿ, ದೇಶದಲ್ಲಿನ ಸ್ವಚ್ಛತೆ, ಸ್ವಾಸ್ತ್ಯ ಭಾರತ (ಆರೋಗ್ಯ), ಬಯೋ ಟಾಯ್ಲೆಟ್ ಅಭಿವೃದ್ಧಿ, ಸ್ಕಿಲ್ ಇಂಡಿಯಾ ಮೂಲಕ ಸ್ವಯಂ ಉದ್ಯೋಗ ತರಬೇತಿ, ಮೇಕ್ ಇನ್ ಇಂಡಿಯಾ ಮೂಲಕ ಸ್ಥಳೀಯ ಉತ್ಪಾದನಾ ಅಭಿವೃದ್ಧಿ, ಪ್ರಕೃತಿ ವಿಕೋಪದಂತಹ ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದಂತಹ ಎಚ್ಚರಿಕೆ ಕ್ರಮಗಳು, ಹೀಗೆ ಪ್ರತಿಯೊಂದು ಕ್ಷೇತ್ರಗಳ ಕುರಿತು ಸಂಶೋಧನೆ ನಡೆಸುವಂತಹ ಕಾರ್ಯವನ್ನು ಡಿ.ಆರ್.ಡಿ.ಒ. ಮಾಡುತ್ತಿದ್ದು, ಇದಕ್ಕೆ ಸಹಕಾರಿಯಾಗುವಂತಹ ಪೂರಕ ವಾತಾವರಣ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಲಭ್ಯತೆ ಇರುವುದನ್ನು ಗಮನಿಸಿರುವುದಾಗಿ ತಿಳಿಸಿದರು.
ಶ್ರೀಮತಿ ಡಾ. ಮಣಿಮೋಜಿ ತಿಯೋದರೆ, ನಿರ್ದೇಶಕರು, ಡಿ.ಇ.ಬಿ.ಇ.ಎಲ್., ಬೆಂಗಳೂರು, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಡಾ. ಚೌಹಾಣ್-ನಿರ್ದೇಶಕರು, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್, ಜಿ.ಪಂ. ಸದಸ್ಯರಾದ ವೀರಭದ್ರಪ್ಪ ಪೂಜಾರ್, ಪ್ರೊಫೆಸರುಗಳಾದ ಡಾ. ಕೃಷ್ಣಪ್ಪ, ಡಾ. ರಾಜೇಶ್ವರ, ಡಾ. ಪ್ರಭಾಕರ್, ಡಾ. ತಿಪ್ಪೇಸ್ವಾಮಿ ಮತ್ತಿತರು ಹಾಜರಿದ್ದರು.