ಭದ್ರಾವತಿ ನಗರ ಸಭೆ ಚುನಾವಣೆ ಕಾವೇರಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಇದು ಅಪ್ಪಾಜಿಗೌಡರಿಲ್ಲದ ಮೊದಲ ಪಕ್ಷಾಧಾರಿತ ಚುನಾವಣೆ. ಕಳೆದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಪಕ್ಷಗಳ ಚಿನ್ಹೆ ಇಲ್ಲದೆ ಚುನಾವಡೆ ನಡೆದಿತ್ತು. ಶಿವಮೊಗ್ಗ ಜಿಲ್ಲೆಯ ಮಟ್ಟಿಗೆ ದಶಕಗಳ ಕಾಲ ಜೆಡಿಎಸ್ ಭದ್ರಕೋಟೆಯಾಗಿದ್ದ ಭದ್ರಾವತಿಯಲ್ಲಿ ಅದರ ಸಾರಥಿ ಅಪ್ಪಾಜಿಗೌಡರ ಅಕಾಲಿಕ ಮರಣದಿಂದಾಗಿ ಪಕ್ಷಕ್ಕೆ ಒಂದು ರೀತಿಯಲ್ಲಿ ನಿರ್ವಾತ ಸ್ಥಿತಿ ಇದೆ. ಇಂತಹ ಹೊತ್ತಿನಲ್ಲಿ ಬಂದಿರುವ ನಗರಸಭೆ ಚುನಾವಣೆ ಭದ್ರಾವತಿ ಜೆಡಿಎಸ್‌ಗೆ ಮರುಹುಟ್ಟಿನ ಪ್ರಶ್ನೆಯಾಗಿದೆ.
ಮೂರು ಬಾರಿ ಶಾಸಕರಾಗಿದ್ದ ಅಪ್ಪಾಜಿ ಗೌಡರು ವೈಯಕ್ತಿಕ ವರ್ಚಸ್ಸಿನಲ್ಲಿಯೇ ಭದ್ರಾವತಿಯಲ್ಲಿ ಜೆಡಿಎಸ್ ಬಲಗೊಳಿಸಿದ್ದರು. ಭದ್ರಾವತಿ ಕ್ಷೇತ್ರದಲ್ಲಿ ಇತ್ತೀಚಿನ ಹಲವು ಚುನಾವಣೆಗಳಲ್ಲಿ ಪಕ್ಷಕ್ಕಿಂತ ವ್ಯಕ್ತಿ ಆಧರಿತ ಚುನಾವಣೆ ನಡೆದಿದ್ದೇ ಹೆಚ್ಚು. ಹಾಲಿ ಶಾಸಕ ಕಾಂಗ್ರೆಸ್‌ನ ಬಿ.ಕೆ.ಸಂಗಮೇಶ್ ಕ್ಷೇತ್ರದಲ್ಲಿ ಬಿಗಿಹಿಡಿತ ಹೊಂದಿದ್ದಾರೆ. ಇತ್ತ ಬಿಜೆಪಿಯು ಅಪ್ಪಾಜಿಗೌಡರಿಲ್ಲದ ಭದ್ರಾವತಿ ಕ್ಷೇತ್ರದಲ್ಲಿ ತನ್ನ ಪಾರುಪತ್ಯ ಸ್ಥಾಪಿಸುವ ಹವಣಿಕೆಯಲ್ಲಿದೆ.
ಘಟಾನುಘಟಿ ನಾಯಕರನ್ನು ಕರೆಸಿ ಯಾವುದೇ ಜಾತಿ ಸಮೀಕರಣ ಮಾಡಿದ್ದರೂ ಪದೇ ಪದೇ ವೈಫಲ್ಯಕಂಡಿದ್ದ ಬಿಜೆಪಿ ಭದ್ರಾವತಿಯಲ್ಲಿ ನಗರ ಸಭೆ ಚುನಾವಣೆ ಮೂಲಕ ಅಸ್ತಿತ್ವ ಗಟ್ಟಿಮಾಡಿಕೊಳ್ಳಲು ಈ ಅವಕಾಶ ಬಳಸಿಕೊಳ್ಳಲು ಮುಂದಾಗಿದೆ. ಗ್ರಾಮೀಣ ಭಾಗದಲ್ಲಿ ಅಪ್ಪಾಜಿ ಗೌಡರು ಮತ್ತು ಸಂಗಮೇಶ್ ಅವರ ಹವಾ ಹೆಚ್ಚಾಗಿದ್ದರಿಂದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಹೇಳಿಕೊಳ್ಳುವಂತಹ ಲಾಭ ಆಗಿರಲಿಲ್ಲ. ಈಗ ನಗರ ಪ್ರದೇಶದಲ್ಲಿ ಗೆದ್ದು ಬಳಿಕ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಉದ್ದೇಶದಿಂದ ನಗರ ಸಭೆ ಚುನಾವಣೆಯನ್ನು ಅದು ಗಂಭೀರವಾಗಿ ತೆಗೆದುಕೊಂಡಿದೆ.
ಇನ್ನು ಜೆಡಿಎಸ್ ಸ್ಥಳೀಯ ನಾಯಕರು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆಸಿದ್ದಾರೆ. ಅಪಾರ ಸಂಖ್ಯೆಯಲ್ಲಿರುವ ಅಪ್ಪಾಜಿ ಗೌಡರ ಶಿಷ್ಯವರ್ಗ ತಮ್ಮ ನಾಯಕನ ಹೆಸರನ್ನು ಉಳಿಸಿಕೊಳ್ಳಲು ಇದೊಂದು ಅವಕಾಶ ಎಂದೇ ಕಣಕ್ಕಿಳಿದಿದ್ದಾರೆ.
ಅಪ್ಪಾಜಿಗೌಡರ ಪತ್ನಿಯೇ ಮುಂಚೂಣಿಯಲ್ಲಿದ್ದುಕೊಂಡು ಜೆಡಿಎಸ್ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ. ಶಾಸಕ ಸಂಗಮೇಶ್ ಈ ಚುನಾವಣೆಯಲ್ಲಿ ಕಾಂಗ್ರೆಸ್ ಗಟ್ಟಿಗೊಳಿಸಿ ಅಪ್ಪಾಜಿಗೌಡರಿಲ್ಲದ ಜೆಡಿಎಸ್ ಬಲ ಹೀನ ಎಂದು ಸಾಬೀತು ಮಾಡಬೇಕೆಂಬ ಉದ್ದೇಶದಿಂದ ತರಾವರಿ ತಂತ್ರಗಾರಿಕೆಗೆ ಮುಂದಾಗಿದ್ದಾರೆ.
ಒಟ್ಟಿನಲ್ಲಿ ಭದ್ರಾವತಿ ನಗರ ಸಭೆ ಚುನಾವಣೆ ಈ ಬಾರಿ ಜೆಡಿಎಸ್ ,ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ, ಅಪ್ಪಾಜಿ ಗೌಡರಿಲ್ಲದ ಈ ಚುನಾವಣೆಯಲ್ಲಿ ಭದ್ರಾವತಿಯ ಮತದಾರರು ಯಾವ ರೀತಿ ಪ್ರತಕ್ರಿಯಿಸಲಿದ್ದಾರೆ ಎಂಬುದೂ ಇಲ್ಲ್ಲಿ ಕದನ ಕೌತಕವನಂತೂ ಸೃಷ್ಟಿಸಿದೆ