ರವಿರಾಜ್ ಸಾಗರ್ . ಮಂಡಗಳಲೆ
ಶತಶತಮಾನಗಳಿಂದ ಭೂಮಾಲೀಕತ್ವ ಹೊಂದಿದ್ದ ಆಳುವ ವರ್ಗದ ಮೇಲ್ವರ್ಗದವರು ರೈತರಿಂದ ಸಂಗ್ರಹಿಸುತ್ತಿದ್ದ ಅವೈಜ್ಞಾನಿಕ ಅಮಾನವೀಯ ಗೇಣಿ ಪದ್ಧತಿ ವಿರುದ್ಧ ಶಿವಮೊಗ್ಗದ ಕೆಳದಿ ಸೀಮೆಯ ಕಾಗೋಡು ಪ್ರಾಂತ್ಯ ಭಾಗದಲ್ಲಿ ಆರಂಭವಾದ ಭಾರತದ ಮೊದಲ ಸಂಘಟಿತ ರೈತ ಚಳುವಳಿ ಕಾಗೋಡು ಚಳುವಳಿ.ಹಿರೇನೆಲ್ಲೂರಿನ ಯುವ ಶಿಕ್ಷಕ ಹೆಚ್. ಗಣಪತಿಯಪ್ಪ ಇದರ ಮೊದಲ ರೂವಾರಿ. ಆನಂತರ ರಾಜ್ಯವ್ಯಾಪಿ ರೈತ ಚಳುವಳಿಯಾಗಿ ಯಶಸ್ವಿಯಾಗಿ ಉಳುವವನೇ ಭೂ ಒಡೆಯ ಕಾಯ್ದೆ ಜಾರಿಗೆ ಬಂದು ಎಲ್ಲಾ ತಳಸಮುದಾಯಗಳು ಸೇರಿದಂತೆ ಸಣ್ಣ ಸಣ್ಣ ರೈತ ಕಾರ್ಮಿಕರು ಭೂಮಿಯ ಮಾಲೀಕತ್ವ ದೊರಕಿಸಿಕೊಟ್ಟ ಐತಿಹಾಸಿಕ ಚಳುವಳಿಗೆ ಈಗ 70 ವರ್ಷ ತುಂಬಿದೆ. ಭೂಮಾಲೀಕತ್ವ ಪಡೆದುಕೊಂಡ ಸಣ್ಣ ಸಣ್ಣ ರೈತ ಕಾರ್ಮಿಕರ ಬದುಕು ಇಂದು ಒಂದಿಷ್ಟು ಸುಧಾರಿಸಿದೆ. ರೈತ ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಒಂದಿಷ್ಟು ಶೇಕಡ ರಾಜಕೀಯವಾಗಿ ಶೈಕ್ಷಣಿಕವಾಗಿ ಬೆಳೆದು ವಿವಿಧ ಹಂತದ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ 70 ವರ್ಷಗಳ ಹಿಂದಿನ ಸ್ವಾಭಿಮಾನದ ಹೋರಾಟದ ಫಲವಾಗಿ ಪಡೆದುಕೊಂಡ ಭೂಮಿ ಇಂದು ಮತ್ತೆ ಅಪಾಯದಲ್ಲಿದೆ.
ನಗರಗಳ ಸಮೀಪದ ಭೂಮಿ ಈಗಾಗಲೇ ಬಂಡವಾಳಶಾಹಿಗಳ ರಿಯಲ್ ಎಸ್ಟೇಟ್ ವ್ಯಾಪಾರಕ್ಕೆ ತುತ್ತಾಗಿದೆ. ಒಂದು ಕಡೆ ಕೃಷಿ ಉತ್ಪಾದನೆ ವೆಚ್ಚ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿರುವುದು,ಅದಕ್ಕೆ ತದ್ವಿರುದ್ಧವಾಗಿ ಕೃಷಿ ಬೆಳೆಗಳ ಬೆಲೆ ಕಡಿಮೆಯಾಗುತ್ತಿರುವುದರಿಂದ ಗ್ರಾಮೀಣ ಭಾಗದ ಸಣ್ಣ ಹಿಡುವಳಿದಾರರು ತತ್ತರಿಸಿ ಕೃಷಿಯಿಂದ ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಬಂಡವಾಳಶಾಹಿಗಳಿಗೆ ಭೂಮಿ ಮಾರಿಕೊಳ್ಳುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಹೇಳಿಕೇಳಿ ಇತ್ತೀಚೆಗೆ ಬಂದ ಭೂ ಸುಧಾರಣೆ ಕಾಯ್ದೆ ಸಹ ಬಂಡವಾಳಶಾಹಿಗಳಿಗೆ ಭೂಮಿಯನ್ನು ಮಾರಲು ಮುಕ್ತ ವಾತಾವರಣ ನಿರ್ಮಿಸಿದೆ. ಬಂಡವಾಳಶಾಹಿಗಳು ರೈತರಿಂದ ಖರೀದಿಸಿದ ಭೂಮಿಯ ಮೇಲೆ ಸರ್ಕಾರದ ಅಥವಾ ಮೂಲ ರೈತನ ಯಾವುದೇ ರೀತಿಯ ಭೂಮಿ ಖರೀದಿಸಿದ ಬಂಡವಾಳಶಾಹಿಗಳು ಮತ್ತಷ್ಟು ಬಂಡವಾಳಶಾಹಿಗಳ ಆಗಿ ಬೆಳೆಯುವ ಹಾಗೂ ಭೂಮಿ ಮಾರಿಕೊಂಡ ಸಣ್ಣ ರೈತರು ಮತ್ತೆ ಕೂಲಿಕಾರರಾಗಿ ಉಳಿಯುವ ಸನ್ನಿವೇಶಗಳು ಸೃಷ್ಟಿಯಾಗಲಿವೆ. ಅಲ್ಲದೆ ಪರೋಕ್ಷವಾಗಿ ಮತ್ತೆ ಕೃಷಿ ಭೂಮಿ ಅಂದಿನ ಮೇಲ್ವರ್ಗದ ಭೂಮಾಲೀಕರ ಸ್ವರೂಪದ ಬಂಡವಾಳಶಾಹಿಗಳ ಅಧೀನಕ್ಕೆ ಒಳಪಡುತ್ತದೆ. ಮುಂದಿನ ದಶಕಗಳಲ್ಲಿ ಭೂರಹಿತ ಭೂ ಕಾರ್ಮಿಕರ ಸಂಖ್ಯೆ ಮತ್ತೆ ಹೆಚ್ಚಾಗಿ ಆರ್ಥಿಕ ರಾಜಕೀಯ ಸಾಮಾಜಿಕ ಅಸಮಾನತೆಗಳು ಹೆಚ್ಚಾಗಿ ನೂರುವರ್ಷಗಳ ಹಿಂದೆ ಇದ್ದ ಪರಿಸ್ಥಿತಿಯಲ್ಲಿ ಭಾರತದ ಸಣ್ಣ ರೈತರು ಸಿಲುಕಿಕೊಳ್ಳುವ ಅಪಾಯಗಳಿವೆ. ಹಾಗಾಗಿ ಪ್ರಸಕ್ತ ರೈತ ಸಮುದಾಯ ಹಿಂದಿನ ಕಾಗೋಡು ರೈತ ಹೋರಾಟವನ್ನು ಮತ್ತೆ ಮತ್ತೆ ಸ್ಮರಿಸಬೇಕಾದ ಅಗತ್ಯವಿದೆ.
ಮತ್ತೆ ಮತ್ತೆ ಆತಂಕ
ರಾಜಕೀಯೇತರವಾಗಿ ರೈತ ಸಮುದಾಯ ಒಂದಾಗಿ ಸಂಘಟಿತ ಹೋರಾಟಗಳ ಮೂಲಕವೇ ರೈತರು ತಮ್ಮ ಹಕ್ಕುಗಳನ್ನು ಕಾಯ್ದುಕೊಳ್ಳುವ ಅಗತ್ಯತೆ ಅನಿವಾರ್ಯತೆ ಎಲ್ಲ ಕಾಲಕ್ಕೂ ಇರುತ್ತದೆ.ಅತಿಯಾದ ಬಂಡವಾಳಶಾಹಿತನ, ಖಾಸಗೀಕರಣ ಯಾವತ್ತೂ ಜನಸಾಮಾನ್ಯ ವರ್ಗಗಳಿಗೆ, ಸಣ್ಣ ಸಣ್ಣ ರೈತ ಸಮುದಾಯಕ್ಕೆ ಹಾಗೂ ದೇಶದ ಅರ್ಥವ್ಯವಸ್ಥೆಗೆ ಮಾರಕ. ಅವು ಸೃಷ್ಟಿಸುವ ಬೃಹತ್ ಆರ್ಥಿಕ ಅಸಮಾನತೆ ಬಹುಆಯಾಮದ ಸಂಕಷ್ಟಗಳನ್ನು ತಂದೊಡ್ಡುತ್ತವೆ. ಯಾವುದೇ ಪಕ್ಷವೂ ಎಲ್ಲ ಕ್ಷೇತ್ರಗಳಿಗೂ ಬಂಡವಾಳಶಾಹಿಗಳನ್ನು ಆಹ್ವಾನಿಸುತ್ತದೆ ಎಂದರೆ ಅದು ಜನಸಾಮಾನ್ಯರ ಕ್ಷೇಮವನ್ನು ನಿರ್ಲಕ್ಷಿಸುತ್ತಿದೆ ಅಂತಲೇ ಅರ್ಥ. ಹಾಗಾಗಿ ಎಲ್ಲಾ ಸಣ್ಣ ರೈತ ಸಮೂಹ ಯಾವುದೇ ಪಕ್ಷವನ್ನು ಹೊತ್ತುಕೊಂಡು ಮರೆಯಬಾರದು. ಸದಾ ತಮ್ಮ ಕ್ಷೇಮಾಭಿವೃದ್ಧಿಗೆ ಪೂರಕ ನೀತಿ-ನಿಯಮಗಳನ್ನು ಸರ್ಕಾರಗಳು ರೂಪಿಸುವಂತೆ ಒಗ್ಗಟ್ಟಾಗಿರಬೇಕು. ಅದಕ್ಕಾಗಿ ಹಿಂದಿನ ರೈತ ಹೋರಾಟಗಳನ್ನು ಮತ್ತೆ ಮತ್ತೆ ಸ್ಮರಿಸಬೇಕಾಗಿದೆ. ಇಂದಿನ ಯುವ ಸಮೂಹ ಇತಿಹಾಸವನ್ನು ಮರೆತರೆ ಮುಂದೆ ಸರ್ವೋದಯ ಇತಿಹಾಸವನ್ನು ಕಟ್ಟಲು ಸಾಧ್ಯವಿಲ್ಲ. ದೇಶದ ಬಹುಸಂಖ್ಯಾತ ರೈತ ಸಮೂಹ ಸದಾ ಸ್ಮರಿಸಲೇಬೇಕಾದ ಚಳುವಳಿ ಕಾಗೋಡು ಚಳುವಳಿ. ಅದಕ್ಕೆ ಈಗ ಎಪ್ಪತ್ತು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದು ಯಶಸ್ವಿಗೊಳಿಸಬೇಕಾಗಿ ದೆ. ಹಾಗೂ ಬಂಡವಾಳಶಾಹೀ ಭೂ ಮಾಲೀಕರಿಂದ ಮುಂದೆ ಸೃಷ್ಟಿಯಾಗಲಿರುವ ಅಪಾಯಗಳ ಬಗ್ಗೆ ಎಚ್ಚರಿಸಬೇಕಾಗಿದೆ. ಸಣ್ಣ ಸಣ್ಣ ರೈತ ಸಮೂಹಗಳ ಸುಸ್ಥಿರ ಅಭಿವೃದ್ಧಿ, ಸರ್ವೋದಯಕ್ಕಾಗಿ ಸದಾ ಎಲ್ಲ ಕಾಲಘಟ್ಟದಲ್ಲಿ ಪಕ್ಷೇತರವಾಗಿ ರೈತ ಸಮೂಹಗಳು ಒಂದಾಗಿರದಿದ್ದರೆ ಆಳುವವರ ಬಂಡವಾಳಶಾಹಿ ನೀತಿಯಿಂದ ಬ್ರಿಟಿಷರಿಗಿಂತ , ರಾಜಪ್ರಭುತ್ವದ ಕಾಲಕ್ಕಿಂತ ಅಪಾಯಕಾರಿ ಸನ್ನಿವೇಶಗಳು ಸೃಷ್ಟಿಯಾಗಬಹುದು.
ಏನಿದು ಕಾಗೋಡು ಸತ್ಯಾಗ್ರಹ?
ಮೇಲ್ಜಾತಿ ಜಮೀನ್ದಾರಿ ಭೂಮಾಲೀಕರು ಹಾಗೂ ಅವರ ಪರವಿದ್ದ ಸರ್ಕಾರಿ ವ್ಯವಸ್ಥೆಯ ವಿರುದ್ಧ ತೀರಾ ದುರ್ಬಲ ವರ್ಗದ ಸಾಮಾನ್ಯ ಗೇಣಿದಾರ ರೈತರ ಆ ಸ್ವಾಭಿಮಾನಿ ಹೋರಾಟವೇ ಕಾಗೋಡು ಸತ್ಯಾಗ್ರಹ.
ಮಲೆನಾಡಿನ ಸಾಗರ ಪ್ರಾಂತ್ಯದ ಹಿರೇನಲ್ಲೂರು, ಕಾಗೋಡು , ಮಂಡಗಳಲೆ ಸುತ್ತಲಿನ ಕೆಳದಿ ಸೀಮೆಯಲ್ಲಿ ಆರಂಭವಾಗಿ ಶಿವಮೊಗ್ಗದ ಎಲ್ಲೆಡೆ ವ್ಯಾಪಿಸಿತು. ಅವೈಜ್ಞಾನಿಕ ಅಮಾನವೀಯ ಗೇಣಿ ಪದ್ಧತಿಯಿಂದಾಗಿ ರೈತರು ತಮ್ಮ ಶ್ರಮದಿಂದ ತಮ್ಮ ಹೊಲದಲ್ಲಿ ಬೆಳೆದರೂ ಬಂದ ಫಸಲಿನಲ್ಲಿ ನ್ಯಾಯಯುತ ಪಾಲು ಸಿಗದೆ, ಜೊತೆಗೆ ಭೂಮಿಯ ಒಡೆಯರ ದಬ್ಬಾಳಿಕೆ ಮತ್ತು ದೌರ್ಜನ್ಯದಿಂದ ರೋಸಿ ಹೋದ ಗೇಣಿದಾರರು, ಹಳ್ಳಿಯ ಬಡ ಶಾಲಾ ಮಾಸ್ತರರಾದ ಹೆಚ್ ಗಣಪತಿಯಪ್ಪ ಅವರ ಪ್ರೇರಣೆಯಿಂದ ಸಿಡಿದೆದ್ದು, ಇಡೀ ದೇಶದಲ್ಲೇ ಮೊದಲ ಬಾರಿಗೆ ‘ಉಳುವವನೇ ಹೊಲದೊಡೆಯ’ ಎಂಬ ಸಮಾಜವಾದಿ ಆಶಯದ ಕಾಯ್ದೆ ಜಾರಿಗೆ ಕಾರಣವಾದ ಕಾಗೋಡು ಸತ್ಯಾಗ್ರಹವನ್ನು ಆರಂಭಿಸಿದ್ದು 1951ರ ಏಪ್ರಿಲ್ 8ರಂದು!.
ಶಕ್ತಿನೀಡಿದ ಸಮಾಜವಾದಿ ಹೋರಾಟ
ಕರ್ನಾಟಕದಲ್ಲಿ ರೈತ ಸಂಘ ಎಂಬ ಅಧಿಕೃತ ರೈತ ಸಂಘಟನೆಯನ್ನು ಕಟ್ಟಿದ ಹೆಗ್ಗಳಿಕೆಯ ಎಚ್ ಗಣಪತಿಯಪ್ಪ ಎಂಬ ಅಂದಿನ ಯುವ ಶಿಕ್ಷಕ, ಆ ಸಂಘದ ಮೂಲಕವೇ ಕಾಗೋಡು ಚಳವಳಿಯ ಕ್ರಾಂತಿಯ ಕಹಳೆ ಮೊಳಗಿಸಿದರು. ರೈತರ ಬಂಡಾಯವಾಗಿ ಆರಂಭವಾದ ಜಮೀನ್ದಾರರ ವಿರುದ್ಧದ ಹೋರಾಟಕ್ಕೆ ಸತ್ಯಾಗ್ರಹದ ಆಯಾಮ ನೀಡಿ, ಅಹಿಂಸಾ ಚೌಕಟ್ಟಿನಡಿ ಶಿಸ್ತುಬದ್ಧ ಚಳವಳಿಯಾಗಿ ರೂಪಿಸಿದವರು ಸಮಾಜವಾದಿ ಹೋರಾಟಗಾರ ಮತ್ತು ದೇಶದ ಅಪರೂಪದ ರಾಜಕಾರಣಿ ಶಾಂತವೇರಿ ಗೋಪಾಲಗೌಡರು. ಶಾಂತವೇರಿ ಗೋಪಾಲಗೌಡ, ಎಚ್ ಗಣಪತಿಯಪ್ಪ ಮುಂತಾದ ಹತ್ತಾರು ನಾಯಕರು ಸಮಾಜವಾದಿ ತಳಹದಿಯ ಮೇಲೆ ಚಳವಳಿಗೆ ಒಂದು ತಾತ್ವಿಕ ಚೌಕಟ್ಟು ರೂಪಿಸಿ ವಿಸ್ತರಿಸಿದ ಹೋರಾಟವನ್ನು ರಾಷ್ಟ್ರ ರಾಜಕಾರಣದ ಚರ್ಚೆಯ ವಸ್ತುವಾಗಿ ಪರಿವರ್ತಿಸಿದ್ದು ರಾಮ ಮನೋಹರ ಲೋಹಿಯಾ ಅವರ ಭಾಗವಹಿಸುವಿಕೆ.
ಇಂತಹ ರೈತ ಸ್ವಾಭಿಮಾನದ ಹೋರಾಟದ ಕಿಚ್ಚು ಸದಾ ಜಾಗೃತವಾಗಿರಬೇಕಾದ ಸ್ಥಿತಿ ಇಂದು ನಿರ್ಮಾಣವಾಗಿದೆ. ಶೋಷಿತ ಭಾರತದ ಪರಂಪರೆಗೆ ಮತ್ತೆ ನಾವು ತಳ್ಳಲ್ಪಡುವ ಮುನ್ನ ರೈತ ಸಮುದಾಯಗಳ ಹಕ್ಕಿಗಾಗಿ ಮತ್ತೆ ಮತ್ತೆ ಕಾಗೋಡು ಚಳುವಳಿಯನ್ನು ನಾವೆಲ್ಲ ಸ್ಮರಿಸಬೇಕಾಗಿದೆ.