ಕುವೆಂಪು ವಿಶ್ವವಿದ್ಯಾಲಯದ ಸಧ್ಯದ ಪರಿಸ್ಥಿತಿ ಮನೆಯೊಂದು ಬಾಗೆಲೆರಡು ಎನ್ನುವಂತಾಗಿದೆ. ಕುಲಪತಿ ಮತ್ತು ಆಡಳಿತಾಂಗದ ಕುಲಸಚಿವರ ನಡುವಿನ ಜಗಳ ಮುಂದುವರಿದಿದ್ದು, ದೂರ ಶಿಕ್ಷಣ ವಿಭಾಗಕ್ಕೆ ಪರೀಕ್ಷೆ ನಡೆಸುವ ವಿಚಾರದಲ್ಲಿ ಇಬ್ಬರ ನಡುವಿನ ಜಗಳ ಮತ್ತೆ ಬಹಿರಂಗವಾಗಿದೆ. ಕುವೆಂಪು ವಿವಿಯ ದೂರ ಶಿಕ್ಷಣ ವಿಭಾಗ ಎಂದರೆ ಕತ್ತಲೆ ವ್ಯವಹಾರಗಳಿಗೆ ಹಿಂದೆಯೇ ಹೆಸರಾಗಿತ್ತು. ಈಗ ಮತ್ತೆ ಕುಲಪತಿಗಳ ಆದೇಶದಂತೆ ಪರೀಕ್ಷಾಂಗ ಕುಲಸಚಿವರು ದೂರ ಶಿಕ್ಷಣ ವಿಭಾಗಕ್ಕೆ ತೆರೆದ ಪುಸ್ತಕ ಮಾದರಿ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಆಡಳಿತಾಂಗದ ಮುಖ್ಯಸ್ಥರು ತಮ್ಮ ಗಮನಕ್ಕೆ ತಾರದೆ ಕಾನೂನು ಸಮ್ಮತವಲ್ಲದ ರೀತಿಯಲ್ಲಿ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಕುಲಸಚಿವ ಎಸ್.ಎಸ್.ಪಾಟೀಲ್ ಪತ್ರ ಬರೆದಿದ್ದಾರೆ.
ಪರೀಕ್ಷಾಂಗ ಕುಲಸಚಿವರು ವಿವಿಯ ದೂರಶಿಕ್ಷಣ ಅಧ್ಯಯನ ಕೇಂದ್ರಗಳ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ೨೦೧೯೦-೨೦ ನೇ ಸಾಲಿನಲ್ಲಿ ದಾಖಲು ಮಾಡಿಕೊಂಡಿರುವ ಪ್ರಥಮ ಮತ್ತು ದ್ವಿತೀಯ ವರ್ಷದ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಒಂದು ಅವಧಿಗೆ ಸೀಮಿತವಾಗಿ ತೆರೆದ ಪುಸ್ತಕ ಮಾದರಿಯ ಪರೀಕ್ಷೆಯನ್ನು ಜೂನ್.೧೦ ರಿಂದ ನಡೆಸಬೇಕು. ಪರೀಕ್ಷೆಗೆ ಸಂಬಂಧಪಟ್ಟದ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ವಿವಿಯಿಂದ ಖುದ್ದಾಗಿ ಪಡೆದುಕೊಂಡು ಹೋಗಬೇಕು. ಈಗ ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಮುಂದಿನ ಅವಧಿಯಲ್ಲಿ ವಿವಿಯಿಂದ ನಡೆಸುವ ರೆಗ್ಯುಲರ್ ಪರೀಕ್ಷೆಗಳಿಗೆ ಅವಕಾಶ ನೀಡಲಾಗುವುದು. ಪ್ರಸ್ತುತ ಪರೀಕ್ಷೆ ನಡೆಸುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಸುತ್ತೋಲೆ ಹೊರಡಿಸಿದ್ದಾರೆ.
ಈ ಸುತ್ತೋಲೆಗೆ ವಿರೋಧ ವ್ಯಕ್ತಪಡಿಸಿರುವ ಕುಲಸಚಿವ ಪ್ರೊ.ಎಸ್. ಎಸ್ ಪಾಟೀಲ್ ಅವರು, ತೆರೆದ ಪುಸ್ತಕ ಪರೀಕ್ಷೆ ನಡೆಸಲು ಅದರದ್ದೇ ಆದ ಮಾರ್ಗಸೂಚಿಗಳಿವೆ. ಕುಲಾಧಿಪತಿಗಳ ಅನುಮೋದನೆ ಅಗತ್ಯವಿದೆ. ಶಿಕ್ಷಣ ಪ್ರಾಧಿಕಾರಗಳಲ್ಲಿ ಚರ್ಚೆಯಾಗುವ ಅವಶ್ಯಕತೆಯಿದೆ. ಆಡಳಿತಾಂಗದ ಮುಖ್ಯಸ್ಥರಾಗಿರುವ ತಮ್ಮ ಗಮನಕ್ಕೇ ತಾರದೆ ಅಧ್ಯಯನ ಕೇಂದ್ರಗಳಿಗೆ ಪತ್ರ ಬರೆಯಲಾಗಿದೆ. ಈ ರೀತಿಯ ತೆರೆದ ಪುಸ್ತಕ ಪರೀಕ್ಷಾ ಮಾದರಿಯಲ್ಲಿ ಪಡೆದ ಪದವಿಯು ಮುಂದೆ ಅಮಾನ್ಯವಾಗುವ ಸಾಧ್ಯತೆಗಳು ಇದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು ಎಂದು ಪರೀಕ್ಷಾಂಗ ಕುಲಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಒಂದೇ ಕಟ್ಟಡದಲ್ಲಿರುವ ಕುಲಪತಿ ಮತ್ತು ಕುಲಸಚಿವರ ಕಚೇರಿಗಳ ನಡುವೆ ಸಂವಹನದ ಕೊರತೆ ಇರುವುದು ಅಲ್ಲಿನ ಆಡಳಿತದಲ್ಲಿನ ಗುಂಪುಗಾರಿಕೆ ಮತ್ತು ಗುಣಮಟ್ಟದ ಶಿಕ್ಷಣದ ಮೇಲಿರುವ ಬದ್ಧತೆಯ ಕೊರತೆಯನ್ನು ಇಲ್ಲಿ ತೋರಿಸುತ್ತಿದೆ. ಮೊದಲು ಒಂದೇ ಗೂಡಿನ ಹಕ್ಕಿಗಳಂತಿದ್ದ ಕುಲಪತಿ ಮತ್ತು ಕುಲಸಚಿವರ ನಡುವಿನ ಮುನಿಸಿಗೆ ಇರುವ ಕಾರಣ ಯಾವುದು ಎಂಬುದು ವಿವಿ ಕ್ಯಾಂಪಸ್‌ನಲ್ಲಿ ಚರ್ಚಿತ ವಿಷಯವಾಗಿದೆ.
ಸೇರಿಗೆ ಸವ್ವಾಸೇರು
ಕುಲಪತಿ ಮತ್ತವರ ಬಳಗವು ಮಾಡಿಸಿದ್ದ ವರ್ಗಾವಣೆಯನ್ನು ಒಂದೇ ದಿನದಲ್ಲಿ ಬದಲಾಯಿಸಿಕೊಂಡು ಕೊಂಡು ಬಂದಿದ್ದ ಪ್ರೊ.ಎಸ್.ಎಸ್.ಪಾಟೀಲ್ ಅವರು, ಅದಕ್ಕೆ ಪ್ರತಿಕಾರವೆಂಬಂತೆ ಕುಲಪತಿಗಳ ಆಪ್ತವಲಯದ ಹಲವರನ್ನು ಸ್ಥಾನಪಲ್ಲಟ ಮಾಡಿದ್ದಾರೆ.
ಮೊದಲು ಕುಲಪತಿಗಳ ಕಚೇರಿಗೇ ಕೈ ಹಾಕಿದ್ದ ಪಾಟೀಲ್ ಅವರು, ಕುಲಪತಿ ಪ್ರೊ.ವೀರಭದ್ರಪ್ಪ ಅವರ ವಿಶೇಷಾಧಿಕಾರಿಯಾಗಿದ್ದ ಡಾ.ಶಿವಯೋಗೀಶ್ವರ ನೀಲಗುಂದ ಅವರನ್ನು ಬಿಡುಗಡೆಗೊಳಿಸಿ ಮೂಲ ಸ್ಥಳಕ್ಕೆ ಕಳುಹಿಸಿದ್ದರು. ಇದಾದ ಬಳಿಕ ಜ್ಞಾನ ಸಹ್ಯಾದ್ರಿಯಲ್ಲಿನ ಕೆಲವರನ್ನೂ ಸೇರಿಸಿ ೮ ಮಂದಿ ಬೋಧಕೇತರ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿದ್ದಾರೆ. ಒಟ್ಟಿನಲ್ಲಿ ಕುವೆಂಪು ನಾಮಾಂಕಿತ ವಿಶ್ವವಿದ್ಯಾಲಯದ ಶ್ರೇಯಸ್ಸಿಗೆ ಜೋಡೆತ್ತಿನಂತೆ ದುಡಿಯಬೇಕಾಗಿದ್ದ ಕುಲಪತಿ ಮತ್ತು ಕುಲಸಚಿವರು ಗುಂಪುಗಾರಿಕೆ ಮಾಡುತ್ತಾ ಶಿಕ್ಷಣೇತರ ಸಂಗತಿಗಳಿಗೇ ಸುದ್ದಿಯಾಗುತ್ತಿರುವುದು ಮಾತ್ರ ದುರಂತವೇ ಸರಿ.