ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕಚೇರಿಯ ಆವರಣದಲ್ಲಿ ಸಿಬ್ಬಂದಿ ವರ್ಗದವರೊಂದಿಗೆ ಅಧ್ಯಕ್ಷೆ ಶ್ರೀಮತಿ ಪವಿತ್ರ ರಾಮಯ್ಯ ಅವರು ಗಿಡ ನೆಡುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೋವಿಡ್ -19 ಮಹಾಮಾರಿಯ ಎರಡನೇ ಅಲೆಯು ಒಮ್ಮೆಲೇ ತನ್ನ ಭೀಕರತೆಯನ್ನು ತೋರಿದ ಪರಿಣಾಮ ತೀವ್ರ ಆಮ್ಲಜನಕದ ಕೊರತೆಯನ್ನು ಜನ ಸಾಮಾನ್ಯರು ಎದುರಿಸುವಂತಾಗಿದ್ದು ಕಾಣಬಹುದು. ಈ ನಿಟ್ಟಿನಲ್ಲಿ ನಾವೆಲ್ಲರು ಗಂಭೀರವಾಗಿ ಆಲೋಚನೆ ಮಾಡಬೇಕಾದ ಪರಿಸ್ಥಿತಿನಿರ್ಮಾಣವಾಗಿದ್ದು, ಮರ – ಗಿಡ ಮತ್ತು ಕಾಡನ್ನು ನಾಶ ಮಾಡದಂತೆ, ಪ್ರತಿದಿನದ ನಮ್ಮ ಹವ್ಯಾಸಗಳಲ್ಲಿ ಗಿಡ ನೆಡುವ ಕೆಲಸ ಮಾಡುವ ಮೂಲಕ ಪರಿಸರ ಸಂರಕ್ಷಣೆ ಮಾಡೋಣ ಎಂದು ಕರೆ ಕೊಟ್ಟರು.
ರಾಜ್ಯ ಸರ್ಕಾರವು ಪರಿಸರ ನಾಶ ಮಾಡುವವರ ವಿರುದ್ಧ ಈಗಾಗಲೇ ಕಠಿಣ ಕಾನೂನು ಜಾರಿ ಮಾಡಿದ್ದು, ಯಾರಾದರೂ ಕಾಡು ನಾಶ ಮಾಡಲು ಹುನ್ನಾರ ಹೂಡುವ ದುಷ್ಕರ್ಮಿಗಳು ಕಂಡು ಬಂದರೆ ಅಂತಹವರನ್ನು ಸದೆ ಬಡೆಯುವ ಕೆಲಸ ಆಗಬೇಕು,
ಕಾಡಿಗೆ ಬೆಂಕಿ ಹಚ್ಚುವ ಮೂಲಕ ಕಾಡ್ಗಿಚ್ಚು ಹಬ್ಬಿಸುತ್ತಿರುವ ದುರುಳರಿಗೆ ಜೀವಿತಾವಧಿ ಶಿಕ್ಷೆ ವಿಧಿಸಬೇಕು ಇಷ್ಟೆಲ್ಲಾ ಕೆಲಸಗಳು ಆಗಬೇಕೆಂದರೆ ಸರ್ಕಾರದೊಂದಿಗೆ ನಾವುಗಳು ಕೈ ಜೋಡಿಸಿದರೆ ಮಾತ್ರ ಯಶಸ್ಸು ಸಾಧ್ಯ ಎಂದರು.
ಈ ಸಮಯದಲ್ಲಿ ಕಾರ್ಯಪಾಲಕ ಅಭಿಯಂತರರಾದ ಮೂಡಲಗಿರಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗಿರೀಶ್, ಸಹಾಯಕ ಅಭಿಯಂತರರಾದ ರವೀಂದ್ರ, ಲೆಕ್ಕ ಪತ್ರ ಶಾಖೆಯ ಕಾಂತರಾಜ್ ಉಪಸ್ಥಿತರಿದ್ದರು.