Malenadu Mitra
ರಾಜ್ಯಶಿವಮೊಗ್ಗ

ಅಂದಗಾತಿಯ ಸಾವಿನ ಹಿಂದಿನ ಕರಾಳ ಮುಖ ಗೊತ್ತೆ ? ಆನೆಗದ್ದೆಯ ಮನೆಯೊಂದರಲಿ ಒಂದು ತಿಂಗಳಲ್ಲಿ ಎರಡು ಆತ್ಮಹತ್ಯೆನಡೆದದ್ದಾದರೂ ಯಾಕೆ ?

ಅಂದಗಾತಿ ಆನೆಗದ್ದೆ ಮಂಜುಳಾ ಆತ್ಮಹತ್ಯೆ ಮತ್ತು ಆಕೆಯ ಮನೆಯಲ್ಲಿ ನಡೆದಿದ್ದ ಯುವಕನೊಬ್ಬನ ಸಾವಿನ ಪ್ರಕರಣ ಈಗ ಮಲೆನಾಡಿನಲ್ಲಿ ಬಹುಚರ್ಚೆಯ ವಿಷಯವಾಗಿದೆ. ಯುವತಿಯೊಬ್ಬಳು ಕುಗ್ರಾಮಕ್ಕೆ ಬಂದು ನಡೆಸುತ್ತಿದ್ದ ರಾಯಲ್ ಲೈಫ್ ಮತ್ತು ಆ ಆಡಂಬರದ ಹಿಂದಿನ ನಿಗೂಢಗಳೇ ತಿಂಗಳ ಅವಧಿಯಲ್ಲಿ ಎರಡು ದುರಂತ ಸಾವುಗಳಿಗೆ ಕಾರಣವಾಗಿದೆ.

ಪೊಲೀಸರು ಹೇಳುವಂತೆ ಎರಡು ಪ್ರಕರಣಗಳೂ ಮೇಲ್ನೋಟಕ್ಕೆ ಆತ್ಮಹತ್ಯೆಗಳೇ ಆಗಿವೆ. ಆದರೆ ಈ ಪ್ರಕರಣಗಳ ಹಿಂದಿರುವ ವಿಲಕ್ಷಣ ಕಹಾನಿ ಮಾತ್ರ ಹೆಣ್ಣು ಹೆತ್ತ ಎಲ್ಲರೂ ಒಮ್ಮೆ ಯೋಚಿಸಬೇಕಾದ ಸಂಗತಿಯಾಗಿದೆ. ಹೆಣ್ಣುಮಗಳೊಬ್ಬಳ ಶವದ ಸಂಸ್ಕಾರವನ್ನೂ ಊರಿನಲ್ಲಿ ಮಾಡಬೇಡಿ ಎಂದು ಅಲ್ಲಿನ ಜನ ಹೇಳುತ್ತಾರೆಂದರೆ ಅದ ಹಿಂದಿದ್ದ ತಾತ್ಸಾರ ಮತ್ತು ಈರ್ಷೆ ಪ್ರಶ್ನಾರ್ಹವಾಗಿದೆ.

ಸೌಂದರ್ಯವೇ ಮುಳ್ಳಾಯಿತೆ ?

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಂಚ ಹೋಬಳಿಯ ಆನೆಗದ್ದೆ ಗ್ರಾಮದ ಗಿರಿಜಾ ಅವರ ಕುಟುಂಬ ಮೊದಲು ವಾಸವಿದ್ದದ್ದು ಮುಂಬೈನಲ್ಲಿ. ಮೂಲತಃ ದಕ್ಷಿಣಕನ್ನಡದವರಾದ ಇವರು ಮಕ್ಕಳು ದೊಡ್ಡವರಾಗುತ್ತಿದ್ದಂತೆ ಆನೆಗದ್ದೆಗೆ ಬಂದು ನೆಲೆಸಿದ್ದರು. ಮೃತ ಮಂಜುಳಾ ಕೆಲ ವರ್ಷಗಳ ಹಿಂದೆ ಬಾಂಬೆಯಲ್ಲಿ ಬಾರ್‍ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿರುವಾಗಲೇ ಹೈಲೆವೆಲ್ ಕಾಂಟ್ಯಾಕ್ಟ್ ಹೊಂದಿದ್ದ ಮಂಜುಳಾ ಉದ್ಯಮಿ ರುದ್ರಬಾಬು ಎನ್ನುವಾತನ ಸಂಪರ್ಕಕ್ಕೆ ಬಂದಿದ್ದರು.

ಬಾಂಬೇ ಟು ಮಲೇಶಿಯಾ

ರುದ್ರಬಾಬು ಮಲೇಶಿಯಾದಲ್ಲಿ ಉದ್ಯಮ ನಡೆಸುತ್ತಿದ್ದು, ಮಂಜುಳಾ ಕೂಡಾ ಅಲ್ಲಿಗೆ ಹೋಗಿದ್ದರು. ಅಲ್ಲಿ ಕಾಲಕ್ರಮೇಣ ಇಬ್ಬರ ನಡುವೆ ಮುನಿಸುಂಟಾಗಿತ್ತು. ಇದೇ ವೇಳೆ ಬಾರ್‍ಗಳಲ್ಲಿ ಕೆಲಸ ಮಾಡುತ್ತಿದ್ದ ಮಂಜುಳಾ ವಿಪರೀತ ಕುಡಿತವನ್ನು ಕಲಿತಿದ್ದಳು. ಕುಡಿದರೆ ಮೈ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದ ಮಂಜುಳಾ ಮಾಡದ ರಂಪಾಟ ಇನ್ನಿಲ್ಲ. ಇದನ್ನು ಸಹಿಸದ ರುದ್ರಬಾಬು ಅಲ್ಲಿಂದ ಆಕೆಯನ್ನು ಹಿಂದಕ್ಕೆ ಕಳಿಸಿದ್ದ ಎನ್ನಲಾಗಿದೆ. ರುದ್ರಬಾಬು ತಿರಸ್ಕಾರದಿಂದಾಗಿ ಚಿಕ್ಕ ಮಗು ಕಟ್ಟಿಕೊಂಡು ಮಂಜುಳಾ ಬೆಂಗಳೂರಿಗೆ ಬಂದಿದ್ದರು.

ಮಗುವಿಗಾಗಿ ನೆರವು

ಮಂಜುಳಾ ಸಂಪರ್ಕ ಕಡಿದುಕೊಂಡಿದ್ದ ಮಲೇಶಿಯಾ ಉದ್ಯಮಿ ಮಗಳ ಲಾಲನೆ ಪಾಲನೆಗೆ ನಿರಂತರ ಸಹಕಾರ ಮಾಡುತ್ತಿದ್ದ ಎನ್ನಲಾಗಿದೆ. ಬೆಂಗಳೂರಿನಲ್ಲಿರುವಾಗ ದೊಡ್ಡ ದೊಡ್ಡ ಜನಗಳ ಸಂಪರ್ಕಹೊಂದಿದ್ದ ಮಂಜುಳಾ, ಕೊರೊನ ಮೊದಲ ಅಲೆ ಬಂದಾಗಿನಿಂದ ಆನೆಗದ್ದೆಗೆ ಬಂದು ನೆಲೆಸಿದ್ದರು. ಆನೆಗದ್ದೆಯಲ್ಲಿ ದೊಡ್ಡ ಮನೆ ನಿರ್ಮಿಸಿಕೊಂಡಿದ್ದ ಇವರ ವ್ಯವಹಾರ ಹಾಗೂ ಹೈಟೆಕ್ ವರ್ತನೆಗಳು ಸ್ಥಳೀಯರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದವು.

ಉದಯ್‍ಕುಮಾರ್ ಆತ್ಮಹತ್ಯೆ

ಬೆಂಗಳೂರು, ಬಾಂಬೆ ಮಲೇಶಿಯಾ ಹೀಗೆ ಬರೀ ಹೈಟೆಕ್ ಜೀವನ ಕಂಡಿದ್ದ ಮಂಜುಳಾ ಊರು ಸೇರಿದ ಮೇಲೆ ರಿಪ್ಪನ್‍ಪೇಟೆ ಸಮೀಪದ ನೇರಲೆಮನೆ ಗ್ರಾಮದ ಉದಯ ಕುಮಾರ ಎಂಬ ಯುವಕನೊಂದಿಗೆ ಸ್ನೇಹ ಬೆಳಸಿಕೊಂಡಿದ್ದರು. ವಯಸ್ಸಿನಲ್ಲಿ ತನಗಿಂತ ಎರಡ್ಮೂರು ವರ್ಷ ಚಿಕ್ಕವನಾದ ಆತನೊಂದಿಗೂ ವಿಲಕ್ಷಣವಾಗಿಯೇ ವರ್ತಿಸುತ್ತಿದ್ದಳಾದರೂ ಪ್ರತಿ ದಿನ ಆತ ಜೊತೆಗಿರಬೇಕೆಂದು ಹಠ ಮಾಡುತ್ತಿದ್ದಳು ಆ ಕಾರಣದಿಂದಲೇ ಆತನನ್ನು ತಾಯಿಯ ವಿರೋಧದ ನಡುವೆಯೂ ತನ್ನ ಮನೆಯಲ್ಲಿಯೇ ಬಿಟ್ಟುಕೊಂಡಿದ್ದಳು. ಆದರೆ ಅದೇನಾಯಿತೋ ಏನೂ ತಿಂಗಳ ಹಿಂದಷ್ಟೇ ಉದಯ ಕುಮಾರ ಮಂಜುಳಾರ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಗೆಳೆಯನ ಹಾದಿ ಹಿಡಿದಳು
ಉದಯ್‍ಕುಮಾರ್ ಸಾವಿನ ನಂತರ ಮಾನಸಿಕ ಖಿನ್ನತೆಗೊಳಗಾಗಿ ಮತ್ತಷ್ಟು ಕುಡಿಯಲಾರಂಭಿಸಿದ ಮಂಜುಳಾ ತಾಯಿ ಹಾಗೂ ತಂಗಿಯೊಂದಿಗೂ ಜಗಳವಾಡಲಾರಂಭಿಸಿದ್ದರು. ಅಲ್ಲದೆ ನಾನು ಬದುಕುವುದಿಲ್ಲ. ಸಾಯುತ್ತೇನೆ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಬಡಬಡಿಸುತ್ತಿದ್ದರು. ಬಹಳಷ್ಟು ಸಲ ಮಂಜುಳಾರ ವರ್ತನೆ ವಿಕೋಪಕ್ಕೂ ಹೋಗಿತ್ತು. ಜೂನ್ 3 ರಂದು ವಿಪರೀತ ಮದ್ಯ ಸೇವಿಸಿದ್ದ ಮಂಜುಳಾ ಎಂದಿನಂತೆ ತಾಯಿ ಮತ್ತು ತಂಗಿಯೊಂದಿಗೆ ಜಗಳವಾಡಿದ್ದರು. ಜೊತೆಗೆ ನೀವು ಮನೆ ಬಿಟ್ಟು ಹೋಗಿ ಎಂದು ಕೂಗಾಡಿದ್ದರು. ಇದು ಮಾಮೂಲಿ ಎಂದು ಭಾವಿಸಿದ್ದ ತಾಯಿ ಹಾಗೂ ತಂಗಿ ಮನೆಯ ಮಹಡಿಗೆ ತೆರಳಿ ಮಲಗಿದ್ದರು. ರಾತ್ರಿ 1.30ರ ತನಕ ಚೀರಾಡುತ್ತಿದ್ದ ಮಂಜುಳಾ ನಂತರ ತಣ್ಣಗಾಗಿದ್ದರು. ಮರುದಿನ ಬೆಳಗ್ಗೆ ಮಹಡಿಯ ಕೊಠಡಿಯಿಂದ ಕೆಳಗಿಳಿದು ಬಂದು ನೋಡಿದಾಗ ಮಂಜುಳಾ ಅವರು ಹಾಲ್‍ನಲ್ಲಿರುವ ಫ್ಯಾನ್‍ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಆನೆಗದ್ದೆಯಲ್ಲಿನ ಮಂಜುಳ ಮನೆ

ಹಲವು ಅಕೌಂಟ್
ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನ ಹೆಸರುಗಳಲ್ಲಿ ಅಕೌಂಟ್ ಹೊಂದಿದ್ದ ಮಂಜುಳಾ, ಸಿರಿ ಪೂಜಾರಿ, ಸಿರಿ ರೈ, ಸಿರಿ ಗೌಡ ಇತ್ಯಾದಿ ಹೆಸರುಗಳಲ್ಲಿ ಫೇಸ್‍ಬುಕ್ ಅಕೌಂಟ್ ಹೊಂದಿದ್ದರು. ಈ ನಡೆಯೂ ಆಕೆಯ ಮೇಲೆ ಹಲವು ಅನುಮಾನ ಹುಟ್ಟಿಕೊಳ್ಳಲು ಕಾರಣವಾಗಿತ್ತು.

ಶವಸಂಸ್ಕಾರಕ್ಕೆ ಬಿಡಲಿಲ್ಲ


ಆನೆಗದ್ದೆ ಗ್ರಾಮದಲ್ಲಿ ಗಿರಿಜಾ ಕುಟುಂಬದೊಂದಿಗೆ ಜನರು ಹೆಚ್ಚಿನ ಸಂಪರ್ಕ ಹೊಂದಿರಲಿಲ್ಲ. ಇವರ ಹೈಟೆಕ್ ನಡೆನುಡಿಗಳು ಅವರಿಗೆ ಹಿಡಿಸುತ್ತಿರಲಿಲ್ಲವೊ ಗೊತ್ತಿಲ್ಲ. ಆದರೆ ಊರಿನ ಹೆಣ್ಣು ಮಗಳೊಬ್ಬಳು ಸತ್ತಾಗ ಊರಿನಲಿ ಶವಸಂಸ್ಕಾರಕ್ಕೂ ಊರಿನ ಜನ ಬಿಡದಿರುವುದು ಮಾತ್ರ ಅನ್ಯಾಯವೇ ಸರಿ. ಮಲೆನಾಡಿನಲ್ಲಿ ಅಕಾಲಿಕ ಮರಣ ಹೊಂದಿದವರನ್ನ್ನು ಅರಣ್ಯದಲ್ಲಿಯೇ ಚಿತೆಗೇರಿಸುವ ರೂಢಿಯಿದೆ. ಅದರಂತೆ ಕಟ್ಟಿಗೆ ಒಟ್ಟಲು ಯಾರೂ ಬಾರದ ಕಾರಣ ಮಂಜುಳಾ ಮೃತದೇಹವನ್ನು ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.
ಗೌರವಯುತವಾದ ಬದುಕು ಸಾಗಿಸುವ ಎಲ್ಲ ಅವಕಾಶ ಇದ್ದರೂ ತನ್ನ ದುರಭ್ಯಾಸಗಳಿಂದಾಗಿ ಅಮ್ಮ ಅಕಾಲಿಕವಾಗಿ ಸಾವಿಗೀಡಾದಳು ಆದರೆ ಇದ್ಯಾವುದರ ಪರಿವೇ ಇಲ್ಲದ ಪುಟ್ಟ ಕಂದಮ್ಮ ಏಕಾಂಗಿಯಾಗಿರುವುದು ಮಾತ್ರ ನೋವು ತರುವ ಸಂಗತಿಯಾಗಿದೆ.

Ad Widget

Related posts

ಬಿಜೆಪಿ ಗೆದ್ದಿದ್ದು ಎಷ್ಟು ಗೊತ್ತಾ ?

Malenadu Mirror Desk

ಶಿವಮೊಗ್ಗದಲ್ಲಿ 9 ಸಾವು, 494 ಸೋಂಕು

Malenadu Mirror Desk

ಕರುಳು ಕುಡಿ ರಕ್ಷಿಸಿ ಜೀವತೆತ್ತ ತಂದೆ, ಭೂಪಾಳಂ ಕುಟುಂಬಕ್ಕೆ ಸೇರಿದ ಬಂಗಲೆಯಲ್ಲಿ ಬೆಂಕಿ ಆಕಸ್ಮಿಕ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.