ಯಡಿಯೂರಪ್ಪ ಮುಟ್ಟಿದರೆ ಹುಷಾರ್ ಎಂದ ಸ್ವಾಮೀಜಿಗಳು, ಶಾಸಕರ ದೂರು : ಸುಂಕದವರ ಮುಂದೆ ಸಂಕಟ
ನಾಗರಾಜ್ ನೇರಿಗೆ, ಶಿವಮೊಗ್ಗ
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಡೆಯುತಿದ್ದ ಒಳಗುದಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಕಿದ ಒಂದೇ ಘರ್ಜನೆಗೆ ತಣ್ಣಗಾದಂತೆ ಕಾಣುತ್ತಿದೆ. ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದಂತೆ”ಮದುವೆಗಂಡು’ ಆಗುವ ಬಯಕೆ ಬಿಜೆಪಿಯ ಹಲವರಲ್ಲಿದೆ. ಆದರೆ ಕಂಕಣ ಕಟ್ಟುವವರಿಲ್ಲದೆ ಬರೀ ಪ್ರಸ್ತದ ಕನಸು ಕಾಣುವುದರಲ್ಲಿಯೇ ಅವರು ತೃಪ್ತಿ ಕಾಣುತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಏನೂ ಸುಮ್ಮನೇ ಬಂದದ್ದಲ್ಲ. ದೇಶವೇ ನರೇಂದ್ರ ಮೋದಿ ಮೇನಿಯಾದಲ್ಲಿ ತೇಲಿದರೂ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ನಿಚ್ಚಳ ಬಹುಮತವೇನೂ ಬಂದಿರಲಿಲ್ಲ. ಬಂದ ಸೀಟುಗಳೂ ಯಡಿಯೂರಪ್ಪ ಅವರ ನಾಯಕತ್ವಕ್ಕೆ ಸಂದ ಜಯವಾಗಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬಾರದಿದ್ದಾಗ ಯಡಿಯೂರಪ್ಪ ಅವರ ಕುಟುಂಬ ಸಾಕಷ್ಟು “ಶ್ರಮ’ಹಾಕಿಯೇ ಮೈತ್ರಿ ಸರಕಾರ ಕಿತ್ತುಹಾಕಿ ಬಿಜೆಪಿ ಸರಕಾರ ರಚಿಸಿದೆ. ಸರಕಾರ ರಚನೆಯ ಹಿಂದಿನ ಯಡಿಯೂರಪ್ಪರ ಬಳಗದ “ಕಸರತ್ತು ’ಗೊತ್ತಿರುವ ಬಿಜೆಪಿ ಹೈಕಮಾಂಡ್ ಅಷ್ಟು ಸುಲಭವಾಗಿ ನಾಯಕತ್ವ ಬದಲಾವಣೆಗೆ ಕೈ ಹಾಕುವುದಿಲ್ಲ ಎಂಬುದು ರಾಜಕೀಯ ಮರ್ಮ ಗೊತ್ತಿರುವ ಎಲ್ಲರಿಗೂ ತಿಳಿದ ಸಂಗತಿ.
ಮೂಲ ಬಿಜೆಪಿಗರು ಸಾಥ್ ನೀಡಲಿಲ್ಲ
ಕಾಂಗ್ರೆಸ್ ,ಜೆಡಿಎಸ್ ನಿಂದ ವಲಸೆ ಬಂದು ಸರಕಾರ ರಚನೆಗೆ ಹೆಗಲುಕೊಟ್ಟವರಿಗೆ ಸ್ಥಾನ-ಮಾನ ಕೊಡುವುದನ್ನು ನೋಡಿ, ಉದರ “ಅಗ್ನಿಕುಂಡ’ವಾದರೂ ಪಕ್ಷದ ಮೂಲನಿವಾಸಿಗಳು ಸಹಿಸಿಕೊಂಡೇ ಇದ್ದಾರೆ. ಪರಿವಾರದ ಬಲವಿದ್ದರೂ ಯಡಿಯೂರಪ್ಪ ಅವರನ್ನು ಇಳಿಸುವುದು ಸುಲಭವಲ್ಲ ಮತ್ತು ಕೆಳಗಿಳಿಸಿದರೆ ತಮ್ಮ ರಾಜಕೀಯ ಭವಿಷ್ಯ ಮಸುಕಾಗುವ ಸಾಧ್ಯತೆ ಅರಿತು ಬಿಜೆಪಿಯ ಹಿರಿಯ ಧುರೀಣರು ಇದೊಂದು ಅವಧಿ ಮುಗಿದುಬಿಡಲಿ ಎಂದು ತಣ್ಣಗಿದ್ದಾರೆ. ಹೀಗಿರುವಾಗ ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಆಗಾಗ ಬಹಿರಂಗ ಹೇಳಿಕೆ ನೀಡುತ್ತಿದ್ದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಅವರು ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯವನ್ನು ಎತ್ತಿಕಟ್ಟುವ ಪ್ರಯತ್ನ ನಡೆಸಿದ್ದರೂ ಯಾವುದೇ ಪ್ರಯೋಜನ ಆಗಲಿಲ್ಲ. ಈ ನಡುವೆ ಅರವಿಂದ ಬೆಲ್ಲದ ಹಾಗೂ ಸಿ.ಪಿ.ಯೋಗೀಶ್ವರ್ ಅವರು ದೆಹಲಿಯಲ್ಲಿ ನಾಯಕತ್ವ ಬದಲಾವಣೆಗೆ ಒತ್ತಡ ಹಾಕುತ್ತಿದ್ದಾರೆ ಎಂಬ ಹುಯಿಲೆಬ್ಬಿಸಲಾಯಿತು. ಇದರಲ್ಲಿ ಬೆಲ್ಲದ ಅವರಿಗೆ ಕ್ಲೀನ್ ಇಮೇಜಿನ ಮೂಲ ಬಿಜೆಪಿಗ ಮತ್ತು ಲಿಂಗಾಯತ ಸಮುದಾಯದ ಯುವಮುಖಂಡ ಎಂಬ ಕ್ವಾಲಿಫಿಕೇಷನ್ ಹೊರತಾಗಿ ಬೇರೇನೂ ಇಲ್ಲ. ಇನ್ನು ರಾಜಕೀಯವಾಗಿ ಚನ್ನಪಟ್ಟಣದಾಚೆ ಯಾವ ಪ್ರಭಾವವನ್ನೂ ಹೊಂದಿರದ ಸಿ.ಪಿ.ಯೋಗೀಶ್ವರ್ ಅವರು ಬಿಜೆಪಿಯ ಮಟ್ಟಿಗೆ ಹೊರಗಿನವರೇ ಆಗಿದ್ದಾರೆ. ಯಡಿಯೂರಪ್ಪ ಸರಕಾರ ರಚನೆ ಪ್ರಕ್ರಿಯೆಯಲ್ಲಿ ಮಧ್ಯವರ್ತಿಯಾಗಿ ಸಾಕಷ್ಟು ಕೆಲಸ ಮಾಡಿದ್ದರು. ಆ ಸಂದರ್ಭ ಅವರಿಗಿದ್ದದ್ದು, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಪ್ರಭಾವಳಿ ತಗ್ಗಿಸುವುದು. ಸಮ್ಮಿಶ್ರ ಸರಕಾರದಲ್ಲಿ ಡಿಕೆಶಿ ಮತ್ತು ಎಚ್‌ಡಿಕೆ ಒಂದಾಗಿದ್ದರಿಂದ ತಮ್ಮ ರಾಜಕೀಯ ಭವಿಷ್ಯ ಮುಗಿಯಿತು ಎಂದರಿತ ಯೋಗೀಶ್ವರ್, ಯಡಿಯೂರಪ್ಪ ಅವರ ಕುಟುಂಬದೊಂದಿಗೆ ಕೈಜೋಡಿಸಿ ಸಮ್ಮಿಶ್ರ ಸರಕಾರಕ್ಕೆ ಮುಹೂರ್ತವಿಡುವಲ್ಲಿ ಕೆಲಸ ಮಾಡಿದರು. ಆದರೆ ಯಡಿಯೂರಪ್ಪ ಸಿಎಂ ಆದ ಮೇಲೆ ಕಾಡಿಬೇಡಿ ಸಚಿವರಾದರೂ, ಚನ್ನಪಟ್ಟಣ ಕ್ಷೇತ್ರ ಮತ್ತು ರಾಮನಗರ ಜಿಲ್ಲೆಯಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇವರು ಸಚಿವರಾದರೂ ಆ ಜಿಲ್ಲೆಯಲ್ಲಿ ಡಿಕೆಶಿ ಮತ್ತು ಎಚ್‌ಡಿಕೆ ಮಾತಿಗೇ ಯಡಿಯೂರಪ್ಪ ಮನ್ನಣೆ ಕೊಡಲಾರಂಭಿಸಿದರು. ಹೀಗೆ ತಮ್ಮ ರಾಜಕೀಯ ಅಸ್ತಿತ್ವದ ಪ್ರಶ್ನೆ ಮುಂದಿಟ್ಟುಕೊಂಡು ಯೋಗೀಶ್ವರ್ ದೆಹಲಿಯಲ್ಲಿ ಯಡಿಯೂರಪ್ಪ ವಿರೋಧಿ ಪಾಳಯದ ನಾಯಕರನ್ನು ಭೇಟಿ ಮಾಡಿದ್ದಾರೆ. ಆದರೆ ಇವರಿಗೆ ತಮ್ಮ ಬೇಡಿಕೆ ಹೇಳಿಕೊಳ್ಳುವ ಸಾಮರ್ಥ್ಯದ ಹೊರತಾಗಿ ಪಕ್ಷದ ನಾಯಕರ ಮೇಲೆ ಪ್ರಭಾವ ಬೀರುವ ಹಿರಿತನ, ಬದ್ಧತೆ ಮತ್ತು ಪಕ್ಷನಿಷ್ಠೆ ಯಾವುದೂ ಇಲ್ಲ. ಈ ಕಾರಣದಿಂದಲೇ ಮೂಲ ಬಿಜೆಪಿಗರು ಸ್ವಾರ್ಥ ಸಾದನೆಯ ಭಿನ್ನಮತಕ್ಕೆ ಸಾಥ್ ನೀಡಲಿಲ್ಲ.
ಪ್ರಬಲ ಹೈಕಮಾಂಡ್ ವೀಕ್ ಮಾಡಿದ ಬಿಎಸ್‌ವೈ
ದೆಹಲಿಯಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಪಿತೂರಿಯ ವಾಸನೆ ಸಿಗುತ್ತಿದ್ದಂತೆ ಎಚ್ಚೆತ್ತ ಸಿಎಂ ಯಡಿಯೂರಪ್ಪ ಅವರು, ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರನ್ನು ಹೈಕಮಾಂಡ್ ನಾಯಕರ ಬಳಿ ಕಳಿಸಿ ಪರಿಸ್ಥಿತಿಯ “ಮನವರಿಕೆ’ ಮಾಡಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ದಿಲ್ಲಿಯಿಂದ ಬಂದ ವಿಜಯೇಂದ್ರ ನೇರವಾಗಿ ರಾಜ್ಯದ ಪ್ರಭಾವಿ ಲಿಂಗಾಯತ ಮಠಾಧೀಶರನ್ನು ಭೇಟಿ ಮಾಡಲು ಶುರುವಿಟ್ಟುಕೊಂಡಿದ್ದಾರೆ. ಇದರ ಬೆನ್ನಲ್ಲೇ ಸ್ವಯಂಪ್ರೇರಿತ ಹೇಳಿಕೆ ನೀಡಿರುವ ಯಡಿಯೂರಪ್ಪ ಅವರು, ಹೈಕಮಾಂಡ್ ಇರಿ ಎನ್ನುವ ತನಕ ಮುಖ್ಯಮಂತ್ರಿಯಾಗಿರುತ್ತೇನೆ ಎಂಬ ಹೇಳಿಕೆ ನೀಡಿದರು. ಈ ಹೇಳಿಕೆ ಬೆನ್ನಲ್ಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದು ಹೇಳುವ ಮೂಲಕ ಬಿಎಸ್‌ವೈ ಬೆನ್ನಿಗೆ ನಿಂತರು. ಖುದ್ದು ಅರುಣ್ ಸಿಂಗ್ ಹೇಳಿಕೆ ಹೊರಬೀಳುತ್ತಿದ್ದಂತೆ, ಹಾಸನ ಪ್ರವಾಸದಲ್ಲಿದ್ದ ಯಡಿಯೂರ್‍ಪಪ್ಪ, ಉಳಿದ ಅವಧಿಗೂ ನಾನೇ ಸಿಎಂ ಎಂಬ ಗುಟುರು ಹಾಕಿದರು. ಕೇವಲ ಎರಡು ದಿನದ ಅವಧಿಯಲ್ಲಿ ವಿಭಿನ್ನ ಹೇಳಿಕೆ ನೀಡುವ ಮೂಲಕ ಬಲಿಷ್ಠ ಎನ್ನುತ್ತಿದ್ದ ಬಿಜೆಪಿ ಹೈಕಮಾಂಡ್ ಅನ್ನು ಯಡಿಯೂರಪ್ಪ ಅವರು ದುರ್ಬಲಗೊಳಿಸಿದರು. ಈ ಬೆಳವಣಿಗೆಗಳ ಬೆನ್ನಲ್ಲೇ ಮುಖ್ಯಮಂತ್ರಿಗಾದಿಯ ಮೇಲೆ ಕಣ್ಣಿಟ್ಟ ಹಲವು ನಾಯಕರು ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಬಹಿರಂಗ ಹೇಳಿಕೆ ನೀಡಲಾರಂಭಿಸಿದರು. ಇನ್ನು ಯಡಿಯೂರಪ್ಪ ಅವರ ತವರು ಜಿಲ್ಲೆಯ ಪ್ರಬಲ ಎದುರಾಳಿ ಈಶ್ವರಪ್ಪ ಅವರು, ಹಿಂದೆಯೇ ರಾಜ್ಯಪಾಲರಿಗೊಂದು ಪತ್ರ ಬರೆದು ತಮ್ಮ ಖಾತೆಗೆ “ಕೈ’ ಹಾಕದಿದ್ದರೆ ಸಾಕು ಎಂದು ಕೇವಿಟ್ ಪಡೆದು ಸುಮ್ಮನಾಗಿಬಿಟ್ಟರು. ಬಿಎಸ್‌ವೈ ನೀಲಿಗಣ್ಣಿನ ಹುಡುಗ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಥೇಟ್ “ತೋಳು ಮಡಿಯುವ’ ಶೈಲಿಯಲ್ಲಿ ಬಿಎಸ್‌ವೈ ಬೆಂಬಲಿತ ಶಾಸಕರು ಸಹಿ ಮಾಡಿರುವ ಪಟ್ಟಿ ನನ್ನ ಬಳಿ ಇದೆ ಎಂದು ಕಾಲುಕೆರೆದು ರೊಂಟಿ ಹೊಡೆದರು.
ಶಾಸಕರ ದೂರು-ದುಮ್ಮಾನ ಹೇಳಲು ಅವಕಾಶ
ಶಾಸಕಾಂಗ ಪಕ್ಷದ ಸಭೆ ಕರೆಯಬೇಕೆಂಬ ಬೇಡಿಕೆ ಮುಂದಿಟ್ಟಿದ್ದ ಭಿನ್ನ ಶಾಸಕರನ್ನು ತಣ್ಣಗೆ ಮಾಡಿರುವ ಬಿಜೆಪಿ ಹೈಕಮಾಂಡ್, ಶಾಸಕರ ಮೊರೆಕೇಳಲು ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಬೆಂಗಳೂರಿಗೆ ಕಳುಹಿಸಿದೆ. ಮೂರು ದಿನಗಳ ರಾಜ್ಯ ಭೇಟಿಯಲ್ಲಿ ಕ್ರಮವಾಗಿ ಸಚಿವರು, ಶಾಸಕರು ಹಾಗೂ ಕೋರ್ ಕಮಿಟಿ ಸಭೆಯನ್ನು ಅರುಣ್ ಸಿಂಗ್ ನಡೆಸಲಿದ್ದಾರೆ. ಪಂಚಾಯ್ತಿಗೆ ಬರುವ ಮುನ್ನವೇ ನಿರ್ಧಾರ ಪ್ರಕಟಿಸಿರುವ ಸಿಂಗ್ ಭೇಟಿ “ಸುಂಕ’ದವರ ಮುಂದೆ ಸಂಕಟ ಹೇಳಿಕೊಳ್ಳುವಷ್ಟಕ್ಕೇ ಸೀಮಿತವಾಗಲಿದೆ ಎನ್ನಲಾಗಿದೆ.
ಮಠಮಾನ್ಯಗಳ ಬ್ಯಾಟಿಂಗ್
ರಾಜ್ಯದಲ್ಲಿ ಯಡಿಯೂರಪ್ಪರಿಗೆ ಸಂಕಷ್ಟ ಬಂದಾಗಲೆಲ್ಲಾ ರಾಜ್ಯದ ಮಠಮಾನ್ಯಗಳು ಅವರ ಬೆನ್ನಿಗೆ ನಿಂತಿವೆ. ವೀರಶೈವ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಯಡಿಯೂರಪ್ಪರಿಗೆ ಆ ಸಮುದಾಯದ ಮಠಗಳು ಮಾತ್ರವಲ್ಲದೆ ಉಳಿದ ಸಮುದಾಯಗಳು ಬೆಂಬಲಿಸಿವೆ. ರಾಜ್ಯದ ಉದ್ದಗಲಕ್ಕೂ ಪ್ರಭಾವ ಹೊಂದಿರುವ ವೀರಶೈವ ಲಿಂಗಾಯತ ಮಠಾಧೀಶರು ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ “ಹುಷಾರ್’ ಎಂಬ ಸಂದೇಶವನ್ನು ಈಗಾಗಲೇ ರವಾನಿಸಿವೆ. ತಮ್ಮ ಇಳಿವಯಸ್ಸಿನಲ್ಲಿಯೂ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಯಡಿಯೂರಪ್ಪ ಅವರು ಅವಿರತ ಶ್ರಮ ಹಾಕಿದ್ದಾರೆ. ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ತರವಲ್ಲ ಎಂಬ ವ್ಯಾಖ್ಯಾನ ಮಠಾಧೀಶರುಗಳದ್ದಾಗಿದೆ. ವಿಜಯೇಂದ್ರ ಅವರ ಮಠಗಳ ಪ್ರವಾಸದ ವೇಳೆ ಡಜನ್‌ಗಟ್ಟಲೆ ಸ್ವಾಮೀಜಿಗಳು ಆಶೀರ್ವಾದ ಮಾಡಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಬದಲು ಮಾಡಿದರೆ, ಪಕ್ಷಕ್ಕೆ ಸಮರ್ಥ ನಾಯಕತ್ವ ಕೊಟ್ಟು ಎಲ್ಲ ಸಮುದಾಯವನ್ನು ಬೆನ್ನಿಗೆ ಕಟ್ಟಿಕೊಂಡು ಹೋಗುವ ಮತ್ತೊಬ್ಬ ನಾಯಕ ಬಿಜೆಪಿ ಹೈಕಮಾಂಡ್‌ಗೆ ಕಾಣುತ್ತಿಲ್ಲ. ಈ ಕಾರಣದಿಂದ ರಾಜಾಹುಲಿ ನಡೆದದ್ದೇ ದಾರಿ……ಎಂಬಂತೆ ನಾಯಕತ್ವ ಬದಲಾವಣೆ ಕೂಗು ಶಾಸಕರ ಅಹವಾಲು ಕೇಳುವಷ್ಟಕ್ಕೇ ಸೀಮಿತಗೊಳಿಸಲು ದಿಲ್ಲಿ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿಯಲ್ಲಿ ಮತ್ತೊಬ್ಬ ಮಾಸ್ ಲೀಡರ್ ಇಲ್ಲ
ಬಿಜೆಪಿಯಲ್ಲಿ ಸಧ್ಯಕ್ಕಿರುವ ಮಾಸ್‌ಲೀಡರ್ ಯಡಿಯೂರಪ್ಪ ಒಬ್ಬರೇ. ಮಾಜಿ ಸಿಎಂಗಳಾದ ಜಗದೀಶ್ ಶೆಟ್ಟರ್, ಸದಾನಂದ ಗೌಡ, ಮಾಜಿ ಡಿಸಿಎಂಗಳಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಿ ಟಿ ರವಿ, ಬಸನಗೌಡಪಾಟೀಲ್ ಯತ್ನಾಳ್, ಹಾಲಿ ಡಿಸಿಎಂಗಳು ಸೇರಿದಂತೆ ಹಲವು ಲೀಡರ್‌ಗಳಿದ್ದರೂ ತಾವೂ ಗೆದ್ದು ಹತ್ತಾರು ಶಾಸಕರನ್ನು ಗೆಲ್ಲಿಸಿಕೊಂಡು ಬರುವ ತಾಕತ್ತು ಮತ್ತು ವರ್ಚಸ್ಸು ಈ ಯಾರಿಗೂ ಇಲ್ಲವಾಗಿದೆ. ಬಿ.ಶ್ರೀರಾಮುಲು ತಮ್ಮ ಜಾತಿ ಪ್ರಾಬಲ್ಯ ಇರುವ ಜಿಲ್ಲೆಗಳಲ್ಲಿ ಒಂದಷ್ಟು ಪ್ರಭಾವ ಬೀರಬಲ್ಲರೇ ಹೊರತಾಗಿ ಉಳಿದ ಯಾರಿಗೂ ಇದು ಸಾಧ್ಯವಿಲ್ಲ. ಈ ಕಾರಣದಿಂದಲೇ ಯಡಿಯೂರಪ್ಪ ಅವರನ್ನು ಮುಟ್ಟಲು ಹೈಕಮಾಂಡ್ ಕೂಡಾ ಹೆದರುತ್ತಿದೆ ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ.