ಜನಸಾಮಾನ್ಯರ ಹಾಗೂ ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಹಿರಿಯ ರಾಜಕಾರಣಿ ಹಾಗೂ ಜೆಡಿಎಸ್ ಮುಖಂಡ ಬಾಸೂರು ಚಂದ್ರೇಗೌಡ ಆರೋಪಿಸಿದರು.
ಸೊರಬ ಪಟ್ಟಣದ ರಂಗನಾಥ ಪೆಟ್ರೋಲ್ ಬಂಕ್ ಎದುರು ಜೆಡಿಎಸ್ ವತಿಯಿಂದ ಶುಕ್ರವಾರ ಕೇಂದ್ರ ಸರಕಾರದ ಅನಿಯಮಿತ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿ ನಂತರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆ ಇದ್ದರೂ ಕೂಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಿನನಿತ್ಯ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ವಿದ್ಯುತ್ ಬೆಲೆ ಹೆಚ್ಚಿಸುತ್ತಿದ್ದು ಇದರಿಂದ ಜನಸಾಮಾನ್ಯರ ಜೀವನ ದುಸ್ತರವಾಗಿದೆ. ಕೊರೊನಾದ ಹೆಸರಲ್ಲಿ ಸರ್ಕಾರಗಳು ಬೊಕ್ಕಸವನ್ನು ಲೂಟಿ ಮಾಡುತ್ತಿದ್ದು ತುಘಲಕ್ ದರ್ಬಾರನ್ನು ಮಾಡುತ್ತಿವೆ. ಭಾರತ ಕೃಷಿ ಅವಲಂಬಿತ ರಾಷ್ಟ್ರವಾಗಿದ್ದು ಕೂಡ ರೈತರು ದೇಹಲಿಯಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಸ್ಪಂದಿಸದಿರುವುದು ಖಂಡನೀಯ. ದೇಶಕ್ಕೆ ಅನ್ನ ನೀಡುವ ರೈತನ ಮೇಲೆ ಕೇಂದ್ರ ಸರ್ಕಾರ ತೆರಿಗೆಯ ಬರೆ ಹಾಕಿದ್ದು ಸರಿಯಲ್ಲ.
ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಕೆ.ಅಜ್ಜಪ್ಪ ಮಾತನಾಡಿ ರಸಗೊಬ್ಬರಗಳ ಬೆಲೆಯನ್ನು ಸರ್ಕಾರ ಹೆಚ್ಚಿಸಿದ್ದು ಖಂಡನೀಯವಾಗಿದೆ. ಅಧಿಕಾರಕ್ಕೆ ಬರುವಾಗ ಸರ್ಕಾರಗಳು ನೀಡಿದ ಭರವಸೆಗಳು ಹುಸಿಯಾಗಿದ್ದು ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಬಸವನಗೌಡ ಪಾಟೀಲ್ ಮಲ್ಲಾಪುರ, ಸುನೀಲ್ ಹಂಚಿನ ಮನೆ, ಪುಂಡಲೀಕಪ್ಪ, ಈಶ್ವರಪ್ಪ, ಮಹಾಂತೇಶ, ಹುಚ್ಚಪ್ಪ ಚಿಮಣೂರ್, ತಿಮ್ಮಣ್ಣ, ಮಂಜಪ್ಪ, ದಾನಪ್ಪ ನಾಯಕ, ಸಂದೀಪ ಇತರರಿದ್ದರು.
previous post