ಮಲೆನಾಡಲ್ಲೀಗ ಮಳೆ…ಮಳೆ… ಮತ್ತು ಮಳೆ. ಪುನರ್ವಸು ಆರ್ಭಟಕ್ಕೆ ಎಲ್ಲೆಂದರಲ್ಲಿ ನೀರು, ನೀರು ಮತ್ತು ನೀರೇ ತುಂಬಿದೆ. ಕೆರೆ ಕಟ್ಟೆಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದರೆ, ಇಡೀ ಮಲೆಸೀಮೆ ಹಸಿರು ಹೊದ್ದು ನೋಡುಗರನ್ನು ಕೈಬೀಸಿ ಕರೆಯುತ್ತಿದೆ.
ಲಾಕ್‍ಡೌನ್ ತೆರವಾಗುತ್ತಿದ್ದಂತ ಮಳೆನಾಡಿನ ಪ್ರವಾಸಕ್ಕೆ ತಹತಹಿಸುತಿದ್ದ ಪ್ರವಾಸಿಗರಿಗೆ ಈಗ ಸಮೃದ್ಧ “ಮಳೆಹಬ್ಬ’. ಕಳೆದ ವಾರದಿಂದ ಸುರಿಯುತ್ತಿರುವ ವರ್ಷ ವೈಭವಕ್ಕೆ ಮಲೆನಾಡಿನ ಗಿರಿಶ್ರೇಣಿಗಳಲ್ಲಿ ಎಲ್ಲೆಂದರಲ್ಲಿ ಜಲಪಾತಗಳು ಒಡಮೂಡಿವೆ. ಘಟ್ಟ ಪ್ರದೇಶಗಳಲ್ಲಿ ಹಾದಿಯುದ್ದಕ್ಕೂ ಎದುರಾಗುವ ಹಾಲ್ನೊರೆ ಚಿಮ್ಮುವ ಜಲಧಾರೆಗಳ ನೋಡುವುದೇ ಕಣ್ಣಿಗೊಂದು ಸಂಭ್ರಮ.
ಜೋಗದ ಸಿರಿ
ಕರ್ನಾಟಕದ ಚಿರಾಪುಂಜಿ ಎಂಬ ಬಿರುದನ್ನು ಆಗುಂಬೆಯಿಂದ ಕಿತ್ತುಕೊಂಡ ಹೊಸನಗರ ತಾಲೂಕಿನ ಹುಲಿಕಲ್ ಸುತ್ತಮುತ್ತ ಈ ಭಾರಿಯೂ ದಾಖಲೆಯ ಮಳೆಯಾಗಿದೆ. ಹೊಸನಗರ ತಾಲೂಕಿನಲ್ಲಿ ಸುರಿದ ವ್ಯಾಪಕ ಮಳೆಗೆ ಶಕ್ತಿನದಿ ಶರಾವತಿ ಮೈದುಂಬಿ ಹರಿಯುತ್ತಿವೆ. ಶರಾವತಿ ಕಣಿವೆಯುದ್ದಕ್ಕೂ ಸುರಿಯುತ್ತಿರುವ ವರ್ಷಧಾರೆಗೆ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಜೀವಕಳೆ ಬಂದಿದೆ. ರಾಜಾ,ರಾಣಿ ರೋರರ್,ರಾಕೇಟ್ ನಾಲ್ಕೂ ಜಲಫಿರಂಗಿಗಳು ಒಂದಕ್ಕೊಂದು ಪೈಪೋಟಿಯಲ್ಲಿ ಧುಮುಕುತ್ತಿವೆ. ಆದರೆ ಮಂಜು ಮುಸುಕಿದ ಕಾರಣ ನೋಡುಗರಿಗೆ ನಿರಾಸೆಯಾಗುತ್ತಿದೆ. ನೀಲಾಗಸದಲ್ಲಿ ಮೋಡಗಳು ಸಮ್ಮೇಳನವನ್ನೇ ನಡೆಸುತ್ತಿರುವುದರಿಂದ ಈ ಚಕ್ರವ್ಯೂಹ ಬೇಧಿಸುವಲ್ಲಿ ಸೂರ್ಯಕಿರಣಗಳು ವಿಫಲವಾಗುತ್ತಿವೆ. ಈ ಕಾರಣದಿಂದ ಜೋಗ್ ಫಾಲ್ಸ್ ನೋಡಲು ವೀಕೆಂಡ್‍ನಲ್ಲಿ ಬಂದಿದ್ದ ಪ್ರವಾಸಿಗರ ಕಣ್ತಣಿಯಲಿಲ್ಲ. ಶನಿವಾರ ಒಂದೆರಡು ಬಾರಿ ಮಂಜು-ಬೆಳಕಿನ ಜುಗಲ್‍ಬಂಧಿ ನಡೆಯಿತಾದರೂ ಜನರ ಕಣ್ಣಿಗೆ ಜಲವೈಭವದ ದರ್ಶನ ಆಗಲಿಲ್ಲ. ಭಾನುವಾರ ಇಡೀ ದಿನ ವರ್ಷಧಾರೆಯೇ ಇದ್ದುದರಿಂದ ಜಲಪಾತ ದರ್ಶನ ದೂರದ ಮಾತಾಗಿತ್ತು.
ಕಿರು ಜಲಪಾತಗಳದ್ದೇ ಸಡಗರ
ಆಗುಂಬೆ ಮತ್ತು ಹುಲಿಕಲ್ ಘಾಟಿಯಲ್ಲಿ ಹಾದಿಯುದ್ದಕ್ಕೂ ಕಿರುಜಲಪಾತಗಳು ಸೃಷ್ಟಿಯಾಗಿದ್ದು, ಪ್ರವಾಸಿಗರಿಗೆ ಮುದ ನೀಡಿವೆ. ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಹಾಗೂ ತೀರ್ಥಹಳ್ಳಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಇಡೀ ಗಿರಿಶ್ರೇಣಿಗಳಲ್ಲಿ ಜರಿ-ತೊರೆಗಳದ್ದೇ ಸಡಗರವಾಗಿದೆ. ತುಂಗೆ ಹಾಗೂ ಭದ್ರೆ ನದಿಗಳೆರಡೂ ಮೈದುಂಬಿವೆ.
ಏರಿದ ಜಲಾಶಯಗಳ ಮಟ್ಟ:
ಲಿಂನಮಕ್ಕಿ ಜಲಾಶಯಕ್ಕೆ 1791.20 ಅಡಿ ನೀರು ಬಂದಿದ್ದು, 22950 ಕ್ಯೂಸೆಕ್ ನೀರಿನ ಒಳಹರಿವಿದೆ. ಕಳೆದ ವರ್ಷ ಇದೇ ದಿನಕ್ಕೆ1769 ಅಡಿ ನೀರಿತ್ತು. ಅದೇ ರೀತಿ ಭದ್ರಾನದಿಯಲ್ಲಿ 163 ಅಡಿ ನೀರಿದ್ದು, ಕಳೆದ ವರ್ಷ ಇದೇ ಹೊತ್ತಿನಲ್ಲಿ 150 ಅಡಿ ನೀರು ಸಂಗ್ರಹವಾಗಿತ್ತು. 11 ಸಾವಿರ ಕ್ಯೂಸೆಕ್‍ಗೂ ಅಧಿಕ ಒಳಹರಿವಿದೆ. ಗಾಜನೂರು ತುಂಗಾ ಡ್ಯಾಂ ಈಗಾಗಲೇ ತುಂಬಿದ್ದು, 20 ಸಾವಿರ ಕ್ಯೂಸೆಕ್‍ಗೂ ಅಧಿಕ ಒಳಹರಿವಿದೆ.
ಕಳೆದ 24 ತಾಸುಗಳಲ್ಲಿ ಹೊಸನಗರದಲ್ಲಿ 119.2 ಮಿಲಿಮೀಟರ್ ಮಳೆಯಾದರೆ, ತೀರ್ಥಹಳ್ಳಿಯಲ್ಲಿ 33.6,ಭದ್ರಾವತಿಯಲ್ಲಿ 33.4,ಶಿಕಾರಿಪುರದಲ್ಲಿ 30.4, ಶಿವಮೊಗ್ಗದಲ್ಲಿ 30ಸಾಗರದಲ್ಲಿ 18.2 ಹಾಗೂ ಸೊರಬದಲ್ಲಿ 10.2 ಮಿಲಿಮೀಟರ್ ಮಳೆಯಾಗಿದೆ.
ಕೃಷಿಗೆ ತೊಡಕು
ಮಳೆಯ ಕಾರಣದಿಂದ ಮಲೆನಾಡಿನ ತಗ್ಗು ಪ್ರದೇಶದಲ್ಲಿ ಹಾಕಿದ ಸಸಿಮಡಿಗಳು ನೀರು ಪಾಲಾಗಿವೆ.ತೋಟಗಳಿಗೆ ನೀರು ನುಗ್ಗಿದ್ದು, ಭತ್ತ ಶುಂಠಿಹೊಲಗಳಿಗೂ ತೊಂದರೆಯಾಗಿದೆ. ಅತಿಯಾದ ಮಳೆಯಿಂದ ಎಲ್ಲ ಬೆಳೆಗಳಿಗೆ ಕೊಳೆರೋಗದ ಬಾಧೆ ಉಲ್ಪಣಿಸುವ ಸಾಧ್ಯತೆಯಿದೆ.